Skip to content

bible passage

ಬಾಬೆಲ್ ಗೋಪುರ ಮತ್ತು ಭಾಷಾಬೇಧ

ಆಗ ಭೂಲೋಕದವರೆಲ್ಲರಿಗೂ ಒಂದೇ ಭಾಷೆ; ಒಂದೇ ಮಾತು ಇತ್ತು. ಭಾಷಾಭೇದಗಳೇನೂ ಇರಲಿಲ್ಲ.2 ಜನರು ಪೂರ್ವ ದಿಕ್ಕಿಗೆ ಪ್ರಯಾಣಮಾಡುತ್ತಿರುವಾಗ ಶಿನಾರ್ ದೇಶದ ಬಯಲು ಸೀಮೆಯನ್ನು ಕಂಡು ಅಲ್ಲೇ ನೆಲೆಸಿದರು.3 “ಅವರೆಲ್ಲರೂ ಬನ್ನಿ, ನಾವು ಇಟ್ಟಿಗೆಗಳನ್ನು ಮಾಡಿ, ಚೆನ್ನಾಗಿ ಸುಡೋಣ,” ಎಂದು ಅವರು ಒಬ್ಬರಿಗೊಬ್ಬರು ಮಾತನಾಡಿಕೊಂಡರು. ಅವರು ಕಲ್ಲಿಗೆ ಬದಲಾಗಿ ಇಟ್ಟಿಗೆಯನ್ನು, ಸುಣ್ಣಕ್ಕೆ ಬದಲಾಗಿ ಜೇಡಿಮಣ್ಣನ್ನು ಉಪಯೋಗಿಸಿದರು.4 ಅವರು, “ಬನ್ನಿರಿ, ಒಂದು ಪಟ್ಟಣವನ್ನು ಕಟ್ಟೋಣ, ಆಕಾಶವನ್ನು ಮುಟ್ಟುವ ಒಂದು ಗೋಪುರವನ್ನೂ ಕಟ್ಟಿ ದೊಡ್ಡ ಹೆಸರನ್ನು ಸಂಪಾದಿಸಿಕೊಳ್ಳೋಣ; ಹೀಗೆ ಮಾಡಿದರೆ ಭೂಮಿಯ ಮೇಲೆಲ್ಲಾ ಚದರಿಹೋಗುವುದಕ್ಕೆ ಆಸ್ಪದವಾಗುವುದಿಲ್ಲ” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.5 ಮನುಷ್ಯರು ಕಟ್ಟುತ್ತಿದ್ದ ಆ ಪಟ್ಟಣವನ್ನೂ, ಗೋಪುರವನ್ನೂ ನೋಡುವುದಕ್ಕೆ ಯೆಹೋವನು ಇಳಿದು ಬಂದನು.6 ನೋಡಿದ ಮೇಲೆ ಯೆಹೋವನು, “ಇವರು ಒಂದೇ ಜನಾಂಗ; ಇವರೆಲ್ಲರಿಗೂ ಒಂದೇ ಭಾಷೆ. ಪ್ರಾರಂಭದಲ್ಲೇ ಇವರು ಇಷ್ಟು ದೊಡ್ಡ ಯೋಜನೆಯೊಂದಿಗೆ ಒಟ್ಟಾಗಿ ಕೆಲಸ ಮಾಡಲಾರಂಭಿಸಿದ್ದಾರೆ. ಇನ್ನು ಮುಂದೆ ಇವರು ಏನು ಮಾಡಲು ಉದ್ದೇಶಿಸಿದರೂ ಇವರಿಗೆ ಯಾವುದೂ ಅಸಾಧ್ಯವಾಗುವುದಿಲ್ಲ.7 ಇವರಲ್ಲಿ ಒಬ್ಬರ ಮಾತು ಒಬ್ಬರಿಗೆ ತಿಳಿಯದಂತೆ ಇವರ ಭಾಷೆಯನ್ನು ಗಲಿಬಿಲಿ ಮಾಡೋಣ ಬನ್ನಿ” ಎಂದನು.8 ಯೆಹೋವನು ಅದೇ ಪ್ರಕಾರ ಅವರನ್ನು ಭೂಲೋಕದಲ್ಲೆಲ್ಲಾ ಚದರಿಸಿ ಬಿಟ್ಟನು. ಅವರು ಆ ಪಟ್ಟಣ ಕಟ್ಟುವುದನ್ನು ನಿಲ್ಲಿಸಿಬಿಟ್ಟರು.9 ಸಮಸ್ತ ಲೋಕದ ಭಾಷೆಯನ್ನು ಯೆಹೋವನು ಅಲ್ಲಿ ಗಲಿಬಿಲಿ ಮಾಡಿ, ಅವರನ್ನು ಭೂಲೋಕದಲ್ಲೆಲ್ಲಾ ಚದರಿಸಿದ್ದರಿಂದ ಆ ಪಟ್ಟಣಕ್ಕೆ ಬಾಬೆಲ್ (ದೇವರ ಬಾಗಿಲು) ಎಂಬ ಹೆಸರಾಯಿತು.

ಜೆನೆಸಿಸ್11

ನೋಹನ ಮಕ್ಕಳ ಸಂತಾನ

 ನೋಹನ ಮಕ್ಕಳಾದ ಶೇಮ್, ಹಾಮ್, ಯೆಫೆತ್ ಎಂಬುವವರ ಸಂತಾನದವರ ಚರಿತ್ರೆ: ಜಲಪ್ರಳಯದ ನಂತರ ಅವರಿಗೆ ಮಕ್ಕಳು ಹುಟ್ಟಿದರು.2 ಯೆಫೆತನ ಸಂತಾನದವರು ಯಾರೆಂದರೆ – ಗೋಮೆರ್, ಮಾಗೋಗ್, ಮಾದಯ್, ಯಾವಾನ್, ತೂಬಲ್, ಮೆಷೆಕ್, ತೀರಾಸ್ ಎಂಬವರು.3 ಗೋಮೆರನ ಸಂತಾನದವರು – ಅಷ್ಕೆನಸ್, ರೀಫತ್, ತೋಗರ್ಮ ಎಂಬವರು.4 ಯಾವಾನನ ಸಂತಾನದವರು – ಎಲೀಷಾ, ತಾರ್ಷೀಷ್, ಕಿತ್ತೀಮ್, ದೋದಾ ಎಂಬ ಸ್ಥಳದವರು. ಇವರು ಸಮುದ್ರದ ರೇವು ಪ್ರದೇಶಗಳಲ್ಲಿ ಹರಡಿಕೊಂಡರು.5 ದೇಶ, ಭಾಷೆ, ಕುಲ, ಜನಾಂಗಗಳ ಪ್ರಕಾರ ಇವರೇ ಯೆಫೆತನ ವಂಶದವರು.6 ಹಾಮನ ಸಂತಾನದವರು ಯಾರೆಂದರೆ – ಕೂಷ್, ಮಿಚ್ರಯಿಮ್, ಪೂತ್, ಕಾನಾನ್ ಎಂಬುವವರು.7 ಕೂಷನ ಸಂತಾನದವರು ಯಾರೆಂದರೆ – ಸೆಬಾ, ಹವೀಲ, ಸಬ್ತಾ, ರಗ್ಮ, ಸಬ್ತಕಾ ಎಂಬವರು. ರಗ್ಮ ಸಂತಾನದವರು – ಶೆಬಾ, ದೆದಾನ್ ಎಂಬುವವರು.8 ಕೂಷನು ನಿಮ್ರೋದನನ್ನು ಪಡೆದನು. ಅವನು ಭೂಮಿಯ ಮೇಲಿನ ಮೊದಲನೆಯ ಪರಾಕ್ರಮಶಾಲಿಯಾಗಿದ್ದನು.9 ಯೆಹೋವನ ದೃಷ್ಟಿಯಲ್ಲಿ ನಿಮ್ರೋದನು ದಿಟ್ಟ ಬೇಟೆಗಾರನಾಗಿದ್ದನು. ಆದುದರಿಂದ “ಯೆಹೋವನು ನಿನ್ನನ್ನು ದಿಟ್ಟ ಬೇಟೆಗಾರನಾಗಿಸಲಿ” ಎಂಬ ಗಾದೆ ಇಂದಿನವರೆಗೂ ಹೇಳುವುದುಂಟು.10 ಶಿನಾರ್ ದೇಶದಲ್ಲಿರುವ ಬಾಬೆಲ್, ಯೆರೆಕ್, ಅಕ್ಕದ್, ಕಲ್ನೇ ಎಂಬ ಪಟ್ಟಣಗಳೇ ಅವನ ರಾಜ್ಯದ ಮೂಲ ಪಟ್ಟಣಗಳು.11 ಅವನು ಆ ದೇಶದಿಂದ ಹೊರಟು ಅಶ್ಶೂರ್ ದೇಶಕ್ಕೆ ಬಂದು ನಿನೆವೆ, ರೆಹೋಬೋತೀರ್, ಕೆಲಹ ಎಂಬ ಪಟ್ಟಣಗಳನ್ನೂ,12 ನಿನೆವೆಗೂ ಕೆಲಹಕ್ಕೂ ಮಧ್ಯದಲ್ಲಿ ಇರುವ ರೆಸೆನ್ ಪಟ್ಟಣವನ್ನೂ ಕಟ್ಟಿಸಿದನು. ರೆಸೆನ್ ಮಹಾಪಟ್ಟಣವೆಂದು ಪ್ರಸಿದ್ಧವಾಗಿದೆ.13 ಮಿಚ್ರಯಿಮ್ಯರಿಂದ ಲೂದ್ಯರು, ಅನಾಮ್ಯರು, ಲೆಹಾಬ್ಯರು, ನಫ್ತುಹ್ಯರು, ಹುಟ್ಟಿದರು.14 ಪತ್ರುಸ್ಯರು, ಕಸ್ಲುಹ್ಯರು, ಕಫ್ತೋರ್ಯರು ಫಿಲಿಷ್ಟಿಯರಿಂದ ಹುಟ್ಟಿದರು.15 ಕಾನಾನ್ ವಂಶದಲ್ಲಿ ಮೊದಲು ಹುಟ್ಟಿದವನು ಸೀದೋನ್; ಆ ಮೇಲೆ ಹೇತ್ ಹುಟ್ಟಿದನು.16 ಇದಲ್ಲದೆ ಯೆಬೂಸಿಯರು, ಅಮೋರಿಯರು, ಗಿರ್ಗಾಷಿಯರು,17 ಹಿವ್ವಿಯರು, ಅರ್ಕಿಯರು, ಸೀನಿಯರು ಕಾನಾನನಿಂದ ಹುಟ್ಟಿದರು.18 ಕಾಲ ಕ್ರಮೇಣವಾಗಿ ಈ ಕಾನಾನ್ಯರ ವಂಶಸ್ಥರಾದ ಸೀನಿಯರು, ಅರ್ವಾದಿಯರು, ಚೆಮಾರಿಯರು, ಹದೋರಾಮರು, ಹಮಾತಿಯರು ಹರಡಿ ಕಾನಾನನಿಂದ ಹುಟ್ಟಿದರು.19 ಕಾನಾನ್ಯರ ಸೀಮೆಯು ಸೀದೋನ್ ಪಟ್ಟಣದಿಂದ ಗೆರಾರಿಗೆ ಹೋಗುವ ದಾರಿಯಲ್ಲಿರುವ ಗಾಜಾ ಪಟ್ಟಣದ ವರೆಗೂ ಮತ್ತು ಸೊದೋಮ್, ಗೊಮೋರ, ಅದ್ಮಾ, ಚೆಬೋಯಿಮ್ ಎಂಬ ಪಟ್ಟಣಗಳಿಗೆ ಹೋಗುವ ದಾರಿಯಲ್ಲಿರುವ ಲೆಷಾ ಊರಿನವರೆಗೂ ಇರುತ್ತದೆ.20 ಕುಲ, ಭಾಷೆ, ದೇಶ, ಜನಾಂಗಗಳ ಪ್ರಕಾರ ಇವರೇ ಹಾಮನ ವಂಶದವರು.21 ಇಬ್ರಿಯರೆಲ್ಲರಿಗೆ ಮೂಲಪುರುಷನನೂ, ಯೆಫೆತನ ಅಣ್ಣನೂ ಆಗಿದ್ದ ಶೇಮನಿಗೂ ಮಕ್ಕಳು ಹುಟ್ಟಿದರು.22 ಶೇಮನ ಮಕ್ಕಳು – ಏಲಾಮ್, ಅಶ್ಶೂರ್, ಅರ್ಪಕ್ಷದ್, ಲೂದ್, ಅರಾಮ್ ಎಂಬವರು.23 ಅರಾಮ್ ಸಂತಾನದವರು – ಊಸ್, ಹೂಲ್, ಗೆತೆರ್, ಮಷ್ ಎಂಬವರು.24 ಅರ್ಪಕ್ಷದನಿಂದ ಶೆಲಹನೂ, ಶೆಲಹನಿಂದ ಎಬರನೂ ಹುಟ್ಟಿದನು.25 ಎಬರನಿಗೆ ಇಬ್ಬರು ಮಕ್ಕಳು ಹುಟ್ಟಿದರು. ಒಬ್ಬನಿಗೆ ಪೆಲೆಗೆಂಬ ಹೆಸರು; ಅವನ ಕಾಲದಲ್ಲಿ ಭೂಮಿಯು ವಿಭಾಗಿಸಲ್ಪಟ್ಟಿತ್ತು. ಅವನ ತಮ್ಮನ ಹೆಸರು ಯೊಕ್ತಾನ್.26 ಯೊಕ್ತಾನನ ಸಂತಾನದವರು – ಅಲ್ಮೋದಾದ್, ಶೆಲೆಪ್, ಹಚರ್ಮಾವೆತ್, ಯೆರಹ,27 ಹದೋರಾಮ್, ಊಜಾಲ್, ದಿಕ್ಲಾ,28 ಓಬಾಲ್, ಅಬೀಮಯೇಲ್, ಶೆಬಾ, ಓಫೀರ್, ಹವೀಲ, ಯೋಬಾಬ್ ಎಂಬವರು.29 ಹದೋರಾಮ್, ಊಜಾಲ್, ದಿಕ್ಲಾ, ಓಬಾಲ್, ಅಬೀಮಯೇಲ್, ಶೆಬಾ, ಓಫೀರ್, ಹವೀಲ, ಯೋಬಾಬ್ ಈ ಕುಲಗಳೆಲ್ಲಾ ಯೊಕ್ತಾನನಿಂದ ಹುಟ್ಟಿದವು.30 ಇವರ ನಿವಾಸವು ಮೇಶಾ ಸೀಮೆ ಮೊದಲುಗೊಂಡು ಪೂರ್ವ ದಿಕ್ಕಿನಲ್ಲಿರುವ ಸೆಫಾರ್ ಎಂಬ ಬೆಟ್ಟದ ವರೆಗೂ ಇತ್ತು.31 ಕುಲ, ಭಾಷೆ, ಜನಾಂಗಗಳ ಪ್ರಕಾರ ಇವರೇ ಶೇಮನ ವಂಶದವರು.32 ಜನಾಂಗಗಳ ಸಂತತಿಯ ಪ್ರಕಾರ ಇವರೇ ನೋಹನ ವಂಶದವರು. ಜಲಪ್ರಳಯವಾದ ನಂತರ ಭೂಮಿಯ ಮೇಲೆ ಹರಡಿಕೊಂಡ ಜನಾಂಗಗಳು ಇವರೇ.

ಜೆನೆಸಿಸ್ 10

ಯೇಸು ಪರ್ವತದ ಮೇಲೆ ಮಾಡಿದ ಪ್ರಸಂಗ

 ಯೇಸು ದೊಡ್ಡ ಗುಂಪನ್ನು ಕಂಡು ಬೆಟ್ಟದ ಮೇಲೇರಿ ಕುಳಿತ ತರುವಾಯ ಆತನ ಶಿಷ್ಯರು ಆತನ ಬಳಿಗೆ ಬಂದರು.2 ಆತನು ಅವರಿಗೆ ಉಪದೇಶ ಮಾಡಿ ಹೇಳಿದ್ದೇನೆಂದರೆ,3 “ಆತ್ಮದಲ್ಲಿ ಬಡವರಾಗಿರುವವರು ಧನ್ಯರು; ಪರಲೋಕ ರಾಜ್ಯವು ಅವರದು.4 ದುಃಖಪಡುವವರು ಧನ್ಯರು; ಅವರು ದೇವರಿಂದ ಸಮಾಧಾನ ಹೊಂದುವರು.5 ವಿನಯವುಳ್ಳವರು ಧನ್ಯರು; ಅವರು ಭೂಮಿಗೆ ಬಾಧ್ಯರಾಗುವರು.6 ನೀತಿಗೆ ಹಸಿದು ಬಾಯಾರಿದವರು ಧನ್ಯರು; ಅವರು ತೃಪ್ತರಾಗುವರು.7 ಕರುಣೆಯುಳ್ಳವರು ಧನ್ಯರು; ಅವರು ಕರುಣೆ ಹೊಂದುವರು.8 ಶುದ್ಧ ಹೃದಯದವರು ಧನ್ಯರು; ಅವರು ದೇವರನ್ನು ನೋಡುವರು.9 ಶಾಂತಿಗಾಗಿ ಶ್ರಮಿಸುವವರು ಧನ್ಯರು; ಅವರು ದೇವರ ಮಕ್ಕಳು ಎಂದೆನಿಸಿಕೊಳ್ಳುವರು.10 ನೀತಿಯ ನಿಮಿತ್ತವಾಗಿ ಹಿಂಸಿಸಲ್ಪಡುವವರು ಧನ್ಯರು; ಪರಲೋಕ ರಾಜ್ಯವು ಅವರದು.11 “ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು.12 ಸಂತೋಷಪಡಿರಿ, ಉಲ್ಲಾಸಪಡಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವುದು; ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನೂ ಅವರು ಹೀಗೆಯೇ ಹಿಂಸೆಪಡಿಸಿದರಲ್ಲಾ.13 “ನೀವು ಭೂಮಿಗೆ ಉಪ್ಪಾಗಿದ್ದೀರಿ. ಉಪ್ಪು ಸಪ್ಪಗಾದರೆ ಅದಕ್ಕೆ ಬೇರೆ ಯಾವುದರಿಂದ ಉಪ್ಪಿನ ರುಚಿಯನ್ನು ಕೊಡಲು ಸಾಧ್ಯ? ಜನರು ಅದನ್ನು ಹೊರಗೆಹಾಕಿ ದಾರಿಹೋಕರು ತುಳಿಯುವುದಕ್ಕೆ ಅದು ಯೋಗ್ಯವೇ ಹೊರತು ಮತ್ತ್ಯಾವ ಕೆಲಸಕ್ಕೂ ಬರುವುದಿಲ್ಲ.14 ನೀವು ಲೋಕಕ್ಕೆ ಬೆಳಕಾಗಿದ್ದೀರಿ. ಬೆಟ್ಟದ ಮೇಲೆ ಕಟ್ಟಲ್ಪಟ್ಟಿರುವ ಊರು ಮರೆಯಾಗಿರಲಾರದು.15 ಮತ್ತು ಯಾರೂ ದೀಪವನ್ನು ಹತ್ತಿಸಿ ಕೊಳಗದೊಳಗೆ ಇಡುವುದಿಲ್ಲ; ದೀಪಸ್ತಂಭದ ಮೇಲೆಯೇ ಇಡುತ್ತಾರೆ. ಆಗ ಅದು ಮನೆಯಲ್ಲಿರುವವರೆಲ್ಲರಿಗೆ ಬೆಳಕು ಕೊಡುವುದು.16 ಅದರಂತೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಆಗ ಅವರು ನಿಮ್ಮ ಒಳ್ಳೆಯ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು.17 “ಮೋಶೆಯ ಧರ್ಮನಿಯಮವನ್ನಾಗಲಿ ಪ್ರವಾದಿಗಳ ಪ್ರವಾದನೆಗಳನ್ನಾಗಲಿ ನಿರರ್ಥಕಪಡಿಸುವುದಕ್ಕೆ ನಾನು ಬಂದೆನೆಂದು ನೆನಸಬೇಡಿರಿ; ನಿರರ್ಥಕಪಡಿಸಲು ಬಂದಿಲ್ಲ; ಬದಲಾಗಿ ನೆರವೇರಿಸುವುದಕ್ಕೆ ಬಂದಿದ್ದೇನೆ.18 ನಿಮಗೆ ಸತ್ಯವಾಗಿ ಹೇಳುತ್ತೇನೆ, ಆಕಾಶವೂ ಭೂಮಿಯೂ ಅಳಿದುಹೋಗುವ ತನಕ ಧರ್ಮನಿಯಮವೆಲ್ಲಾ ನೆರವೇರಿದ ಹೊರತು ಅದರೊಳಗಿಂದ ಒಂದು ಚುಕ್ಕೆಯಾಗಲಿ, ಒಂದು ಅಕ್ಷರವಾಗಲಿ ಅಳಿದುಹೋಗುವುದಿಲ್ಲ.19 ಆದುದರಿಂದ ಈ ಸಣ್ಣ ಆಜ್ಞೆಗಳಲ್ಲಿ ಒಂದನ್ನು ಮೀರಿ ನಡೆದು ಜನರಿಗೂ ಹಾಗೆ ಮಾಡುವುದಕ್ಕೆ ಬೋಧಿಸುವವನು ಪರಲೋಕ ರಾಜ್ಯದಲ್ಲಿ ಬಹಳ ಕನಿಷ್ಠನೆನ್ನಿಸಿಕೊಳ್ಳುವನು; ಆದರೆ ತಾನೇ ಸ್ವತಃ ಆ ಆಜ್ಞೆಗಳಂತೆ ನಡೆದುಕೊಂಡು ಜನರಿಗೂ ಹಾಗೆ ನಡೆಯಬೇಕೆಂದು ಬೋಧಿಸುವವನು ಪರಲೋಕ ರಾಜ್ಯದಲ್ಲಿ ಶ್ರೇಷ್ಠನೆನಿಸಿಕೊಳ್ಳುವನು.20 ನಿಮ್ಮ ನೀತಿಯು ಶಾಸ್ತ್ರಿಗಳ ಮತ್ತು ಫರಿಸಾಯರ ನೀತಿಗಿಂತಲೂ ಉತ್ತಮವಾಗಿರದಿದ್ದರೆ ನೀವು ಪರಲೋಕ ರಾಜ್ಯಕ್ಕೆ ಸೇರಲಾರಿರಿ ಎಂದು ನಿಮಗೆ ಹೇಳುತ್ತೇನೆ.21 “‘ನರಹತ್ಯ ಮಾಡಬಾರದು; ನರಹತ್ಯ ಮಾಡುವವನು ನ್ಯಾಯತೀರ್ಪಿಗೆ ಗುರಿಯಾಗುವನೆಂದು’ ಹಿರಿಯರಿಗೆ ಹೇಳಿಯದೆ ಎಂದು ಕೇಳಿದ್ದೀರಿ.22 ಆದರೆ ನಾನು ನಿಮಗೆ ಹೇಳುವುದೇನಂದರೆ, ತನ್ನ ಸಹೋದರನ ಮೇಲೆ ಸಿಟ್ಟುಗೊಳ್ಳುವ ಪ್ರತಿಯೊಬ್ಬ ಮನುಷ್ಯನು ನ್ಯಾಯತೀರ್ಪಿಗೆ ಗುರಿಯಾಗುವನು; ತನ್ನ ಸಹೋದರನನ್ನು ನೋಡಿ, ‘ಎಲೈ ಮೂರ್ಖನೇ’ ಎಂದು ಅನ್ನುವವನು ನ್ಯಾಯ ಸಭೆಯ ವಿಚಾರಣೆಗೆ ಒಳಗಾಗುವನು; ‘ಎಲೈ ನೀಚನೇ’ ಎಂದು ಅನ್ನುವವನು, ಅಗ್ನಿ ನರಕಕ್ಕೆ ಗುರಿಯಾಗುವನು.23 ಆದಕಾರಣ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಹತ್ತಿರಕ್ಕೆ ತಂದಾಗ ನಿನ್ನ ಸಹೋದರನ ಮನಸ್ಸಿನಲ್ಲಿ ನಿನ್ನ ಮೇಲೆ ಏನೋ ವಿರೋಧವಿದೆ ಎಂಬುದು ನಿನ್ನ ನೆನಪಿಗೆ ಬಂದರೆ,24 ನಿನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟು ಹೋಗಿ ಮೊದಲು ನಿನ್ನ ಸಹೋದರನ ಸಂಗಡ ಒಂದಾಗು; ಆ ಮೇಲೆ ಬಂದು ನಿನ್ನ ಕಾಣಿಕೆಯನ್ನು ಕೊಡು.25 “ಇನ್ನೂ ದಾರಿಯಲ್ಲಿರುವಾಗಲೇ ನಿನ್ನ ಪ್ರತಿವಾದಿಯೊಂದಿಗೆ ಬೇಗ ಸಂಧಾನ ಮಾಡಿಕೋ; ಇಲ್ಲದಿದ್ದರೆ ಆ ಆಪಾದಕನು ನಿನ್ನನ್ನು ನ್ಯಾಯಾಧಿಪತಿಗೆ ಒಪ್ಪಿಸಾನು ನ್ಯಾಯಾಧಿಪತಿಯು ನಿನ್ನನ್ನು ಸೆರೆಮನೆ ಅಧಿಕಾರಿಯ ಕೈಗೆ ಒಪ್ಪಿಸಿಕೊಟ್ಟಾನು. ಆಗ ನೀನು ಸೆರೆಯಲ್ಲಿ ಎಸೆಯಲ್ಪಡುವಿ.26 ನೀನು ಒಂದು ಕಾಸನ್ನಾದರೂ ಉಳಿಸಿಕೊಳ್ಳದೆ ಎಲ್ಲವನ್ನು ಸಲ್ಲಿಸುವ ತನಕ ಅಲ್ಲಿಂದ ಬರುವುದಕ್ಕಾಗುವುದೇ ಇಲ್ಲ ಎಂದು ನಿನಗೆ ಸತ್ಯವಾಗಿ ಹೇಳುತ್ತೇನೆ.27 “‘ವ್ಯಭಿಚಾರ ಮಾಡಬಾರದೆಂದು’ ಹೇಳಿಯದೆ ಎಂಬುದಾಗಿ ನೀವು ಕೇಳಿದ್ದೀರಿ.28 ಆದರೆ ನಾನು ನಿಮಗೆ ಹೇಳುವುದೇನಂದರೆ, ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿಯೊಬ್ಬ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾಗಿದ್ದಾನೆ.29 ನಿನ್ನ ಬಲಗಣ್ಣು ನಿನ್ನನ್ನು ಪಾಪದಲ್ಲಿ ಸಿಕ್ಕಿಸುವುದಾದರೆ ಅದನ್ನು ಕಿತ್ತು ಎಸೆದುಬಿಡು, ನಿನ್ನ ದೇಹವೆಲ್ಲಾ ನರಕದಲ್ಲಿ ಬೀಳುವುದಕ್ಕಿಂತ ದೇಹದ ಭಾಗಗಳಲ್ಲಿ ಒಂದು ಹೋಗುವುದು ನಿನಗೆ ಹಿತವಲ್ಲವೇ.30 ನಿನ್ನ ಬಲಗೈ ನಿನ್ನನ್ನು ಪಾಪದಲ್ಲಿ ಸಿಕ್ಕಿಸುವುದಾದರೆ ಅದನ್ನು ಕಡಿದು ಎಸೆದುಬಿಡು, ನಿನ್ನ ದೇಹವೆಲ್ಲಾ ನರಕದಲ್ಲಿ ಬೀಳುವುದಕ್ಕಿಂತ ದೇಹದ ಭಾಗಗಳಲ್ಲಿ ಒಂದು ಹೋಗುವುದು ನಿನಗೆ ಹಿತವಲ್ಲವೇ.31 ಇದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟುಬಿಡುವವನು ಆಕೆಗೆ ವಿಚ್ಛೇದನ ಪತ್ರವನ್ನು ಕೊಡತಕ್ಕದ್ದೆಂದು ಹೇಳಿಯದೆಯಷ್ಟೆ.32 ಆದರೆ ನಾನು ನಿಮಗೆ ಹೇಳುವುದೇನಂದರೆ, ವ್ಯಭಿಚಾರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟುಬಿಡುವವನು ಅವಳು ವ್ಯಭಿಚಾರ ಮಾಡುವುದಕ್ಕೆ ಕಾರಣನಾಗುತ್ತಾನೆ ಮತ್ತು ಗಂಡಬಿಟ್ಟವಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರಮಾಡುವವನಾಗಿದ್ದಾನೆ.33 “ಮತ್ತು, ನೀನು ಸುಳ್ಳಾಣೆಯಿಡಬಾರದು; ‘ನೀನು ಇಟ್ಟುಕೊಂಡ ಆಣೆಗಳನ್ನು ಕರ್ತನಿಗೆ ಸಲ್ಲಿಸಬೇಕೆಂದು ಹಿರಿಯರ ಕಾಲದಲ್ಲಿ’ ಹೇಳಿದೆ ಎಂದು ಕೇಳಿದ್ದೀರಷ್ಟೆ.34 ಆದರೆ ನಾನು ನಿಮಗೆ ಹೇಳುವುದೇನಂದರೆ, ಆಣೆಯನ್ನೇ ಇಡಬೇಡಿರಿ. ಆಕಾಶದ ಮೇಲೆ ಆಣೆ ಇಡಬೇಡಿರಿ; ಅದು ದೇವರ ಸಿಂಹಾಸನವು.35 ಭೂಮಿಯ ಮೇಲೆ ಆಣೆ ಇಡಬೇಡಿ ಅದು ಆತನ ಪಾದಪೀಠ. ಯೆರೂಸಲೇಮಿನ ಮೇಲೆ ಆಣೆ ಇಡಬೇಡಿ; ಅದು ಆ ಮಹಾ ರಾಜನ ಪಟ್ಟಣವಾಗಿದೆ.36 ನಿನ್ನ ತಲೆಯ ಮೇಲೆ ಕೂಡ ಆಣೆ ಇಡಬೇಡ; ನೀನು ಒಂದು ಕೂದಲನ್ನಾದರೂ ಬೆಳ್ಳಗೆ ಅಥವಾ ಕಪ್ಪಗೆ ಮಾಡಲಾರೆ.37 ಆದರೆ ನಿಮ್ಮ ಮಾತು ‘ಹೌದಾದರೆ ಹೌದು ಅಲ್ಲವಾದರೆ ಅಲ್ಲ’ ಎಂದಿರಲಿ. ಇದಕ್ಕಿಂತ ಹೆಚ್ಚಾದದ್ದು ಸೈತಾನನಿಂದ ಬರುವಂತಹದ್ದಾಗಿದೆ.38 “‘ಕಣ್ಣಿಗೆ ಪ್ರತಿಯಾಗಿ ಕಣ್ಣನ್ನು ಹಲ್ಲಿಗೆ ಪ್ರತಿಯಾಗಿ ಹಲ್ಲನ್ನು ತೆಗೆಯಿಸು’ ಎಂದು ಹೇಳಿರುವುದು ಕೇಳಿದ್ದೀರಷ್ಟೆ.39 ಆದರೆ ನಾನು ನಿಮಗೆ ಹೇಳುವುದೇನಂದರೆ, ಕೆಡುಕನನ್ನು ವಿರೋಧಿಸಬೇಡ. ಒಬ್ಬನು ನಿನ್ನ ಬಲಗೆನ್ನೆಯ ಮೇಲೆ ಹೊಡೆದರೆ ಅವನಿಗೆ ನಿನ್ನ ಮತ್ತೊಂದು ಕೆನ್ನೆಯನ್ನು ಸಹ ತಿರುಗಿಸು.40 ನಿನ್ನ ಸಂಗಡ ವ್ಯಾಜ್ಯವಾಡಿ ನಿನ್ನ ಒಳಂಗಿಯನ್ನು ತೆಗೆದುಕೊಳ್ಳಬೇಕೆಂದಿರುವವನಿಗೆ ಮೇಲಂಗಿಯನ್ನೂ ಬಿಟ್ಟುಕೊಡು.41 ಒಬ್ಬನು ಒಂದು ಮೈಲು ದೂರ ಬಾ ಎಂದು ನಿನ್ನನ್ನು ಒತ್ತಾಯಿಸಿದರೆ ಅವನ ಸಂಗಡ ಎರಡು ಮೈಲು ದೂರ ಹೋಗು.42 ನಿನ್ನನ್ನು ಕೇಳುವವನಿಗೆ ಕೊಡು; ನಿನ್ನಲ್ಲಿ ಬೇಡಲು ಬಂದವನಿಗೆ ಮುಖ ತಿರುಗಿಸಿಕೊಳ್ಳಬೇಡ.43 “‘ನಿನ್ನ ನೆರೆಯವನನ್ನು ಪ್ರೀತಿಸಿ ನಿನ್ನ ವೈರಿಯನ್ನು ದ್ವೇಷಿಸಬೇಕೆಂದು’ ಹೇಳಿಯದೆ ಎಂಬುದಾಗಿ ಕೇಳಿದ್ದೀರಷ್ಟೆ.44 ಆದರೆ ನಾನು ನಿಮಗೆ ಹೇಳುವುದೇನಂದರೆ, ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಿಂಸೆಪಡಿಸುವವರಿಗೊಸ್ಕರ ದೇವರನ್ನು ಪ್ರಾರ್ಥಿಸಿರಿ.45 ಹೀಗೆ ಮಾಡಿದರೆ, ನೀವು ಪರಲೋಕದಲ್ಲಿರುವ ನಿಮ್ಮ ತಂದೆಗೆ ಮಕ್ಕಳಾಗುವಿರಿ. ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಉದಯಿಸುವಂತೆ ಮಾಡುತ್ತಾನೆ. ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆ ಸುರಿಸುತ್ತಾನೆ.46 ನಿಮಗೆ ಪ್ರೀತಿ ತೋರಿಸುವವರನ್ನೇ ನೀವು ಪ್ರೀತಿಸಿದರೆ ಫಲವೇನು? ಸುಂಕದವರು ಹಾಗೆ ಮಾಡುವುದಿಲ್ಲವೇ.47 ನಿಮ್ಮ ಸಹೋದರರಿಗೆ ಮಾತ್ರ ನೀವು ಮರ್ಯಾದೆ ಕೊಟ್ಟರೆ ಏನು ಹೆಚ್ಚು ಮಾಡಿದ ಹಾಗಾಯಿತು? ಅನ್ಯಜನರು ಸಹ ಹಾಗೆ ಮಾಡುತ್ತಾರಲ್ಲವೇ.48 ಆದುದರಿಂದ ಪರಲೋಕದಲ್ಲಿರುವ ನಿಮ್ಮ ತಂದೆಯು ಪರಿಪೂರ್ಣನಾಗಿರುವ ಹಾಗೆಯೇ ನೀವೂ ಪರಿಪೂರ್ಣರಾಗಿರಿ.

ಮ್ಯಾಥ್ಯೂ 5

ದಾನಧರ್ಮದ ವಿಧಾನ

 “ಜನರು ನೋಡಲಿ ಎಂದು ನಿಮ್ಮ ‘ಧರ್ಮಕಾರ್ಯಗಳನ್ನು’ ಅವರ ಮುಂದೆ ಮಾಡಬಾರದು; ಹಾಗೆ ಮಾಡಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯ ಹತ್ತಿರ ನಿಮಗೆ ಫಲದೊರೆಯುವುದಿಲ್ಲ.2 “ಆದುದರಿಂದ ನೀನು ದಾನಕೊಡುವಾಗ ಅದನ್ನು ಪ್ರಚಾರಪಡಿಸಬೇಡ; ಜನರಿಂದ ಹೊಗಳಿಸಿಕೊಳ್ಳಬೇಕೆಂದು ಕಪಟಿಗಳು ಸಭಾಮಂದಿರಗಳಲ್ಲಿಯೂ ಬೀದಿಗಳಲ್ಲಿಯೂ ಹಾಗೆ ಮಾಡುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.3 ಆದರೆ ನೀನು ದಾನ ಕೊಡುವಾಗ ನಿನ್ನ ಬಲಗೈ ದಾನಕೊಟ್ಟದ್ದು ಎಡಗೈಗೂ ತಿಳಿಯದಿರಲಿ.4 ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು.ಪ್ರಾರ್ಥನೆಯ ವಿಧಾನ5 “ನೀವು ಪ್ರಾರ್ಥನೆಮಾಡುವಾಗ ಕಪಟಿಗಳ ಹಾಗೆ ಮಾಡಬೇಡಿರಿ. ಜನರು ನೋಡಬೇಕೆಂದು ಅವರು ಸಭಾಮಂದಿರಗಳಲ್ಲಿಯೂ ಬೀದಿಚೌಕಗಳಲ್ಲಿಯೂ ನಿಂತುಕೊಂಡು ಪ್ರಾರ್ಥನೆಮಾಡುವುದಕ್ಕೆ ಇಷ್ಟಪಡುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.6 ನೀನು ಪ್ರಾರ್ಥನೆಮಾಡುವಾಗ ನಿನ್ನ ಕೋಣೆಯೊಳಗೆ ಹೋಗಿ ಬಾಗಿಲನ್ನು ಮುಚ್ಚಿಕೊಂಡು ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆಮಾಡು. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು.7 ಆದರೆ ಪ್ರಾರ್ಥನೆಮಾಡುವಾಗ ಅನ್ಯಜನಗಳ ಹಾಗೆ ಹೇಳಿದ್ದನ್ನೇ ಸುಮ್ಮನೆ ಮತ್ತೆ ಮತ್ತೆ ಹೇಳಬೇಡ; ಅವರು ಬಹಳ ಮಾತುಗಳನ್ನಾಡಿದರೆ ತಮ್ಮ ಪ್ರಾರ್ಥನೆಯನ್ನು ದೇವರು ಕೇಳುತ್ತಾನೆಂದು ಭಾವಿಸುತ್ತಾರೆ.8 ಆದುದರಿಂದ ನೀವು ಅವರ ಹಾಗೆ ಆಗಬೇಡಿರಿ. ನೀವು ನಿಮ್ಮ ತಂದೆಯನ್ನು ಬೇಡಿಕೊಳ್ಳುವುದಕ್ಕಿಂತ ಮೊದಲೇ ನಿಮಗೆ ಏನೇನು ಅಗತ್ಯವೆಂಬುದು ಆತನಿಗೆ ತಿಳಿದಿದೆ.9 ಆದುದರಿಂದ ನೀವು ಹೀಗೆ ಪ್ರಾರ್ಥನೆಮಾಡಬೇಕು,10 “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.11 ನಮ್ಮ ಅನುದಿನದ ಆಹಾರವನ್ನು ಈ ಹೊತ್ತು ನಮಗೆ ದಯಪಾಲಿಸು.12 ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿದಂತೆ ನಮ್ಮ ತಪ್ಪುಗಳನ್ನು ಕ್ಷಮಿಸು.13 ನಮ್ಮನ್ನು ಶೋಧನೆಯೊಳಗೆ ಸೇರಿಸದೆ ಕೆಡುಕನಿಂದ; ನಮ್ಮನ್ನು ತಪ್ಪಿಸು14 ನೀವು ಜನರ ತಪ್ಪುಗಳನ್ನು ಕ್ಷಮಿಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನೂ ಕ್ಷಮಿಸುವನು.15 ಆದರೆ ನೀವು ಜನರ ತಪ್ಪುಗಳನ್ನು ಕ್ಷಮಿಸದೇ ಹೋದರೆ ನಿಮ್ಮ ತಂದೆ ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವುದಿಲ್ಲ.16 “ಇದಲ್ಲದೆ ನೀವು ಉಪವಾಸಮಾಡುವಾಗ ಕಪಟಿಗಳಂತೆ ಮುಖವನ್ನು ಸಪ್ಪಗೆ ಮಾಡಿಕೊಳ್ಳಬೇಡಿರಿ. ಅವರು ತಾವು ಉಪವಾಸಿಗಳೆಂದು ಜನರಿಗೆ ತೋರಿಬರುವಂತೆ ತಮ್ಮ ಮುಖವನ್ನು ವಿಕಾರಮಾಡಿಕೊಳ್ಳುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.17 ಆದರೆ ನೀನು ಉಪವಾಸಮಾಡುವಾಗ ತಲೆಗೆ ಎಣ್ಣೆ ಹಚ್ಚಿಕೊಂಡು ಮುಖವನ್ನು ತೊಳೆದುಕೋ.18 ಹೀಗೆ ಮಾಡಿದರೆ ನೀನು ಉಪವಾಸಿಯೆಂದು ಜನರಿಗೆ ಕಾಣದೆ ಹೋದಾಗ್ಯೂ ಅಂತರಂಗದಲ್ಲಿರುವ ನಿನ್ನ ತಂದೆಗೆ ಉಪವಾಸಿಯೆಂದು ಕಾಣಿಸಿಕೊಳ್ಳುವಿ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆಯು ನಿನಗೆ ಪ್ರತಿಫಲಕೊಡುವನು.ಶಾಶ್ವತ ಸಂಪತ್ತು19 “ಭೂಲೋಕದಲ್ಲಿ ಸಂಪತ್ತು ಮಾಡಿ ಇಟ್ಟುಕೊಳ್ಳಬೇಡಿರಿ; ಇಲ್ಲಿ ಅದು ನುಸಿ ಹಿಡಿದು, ಕಿಲುಬು ಹತ್ತಿ ಕೆಟ್ಟುಹೋಗುವುದು; ಇಲ್ಲಿ ಕಳ್ಳರು ಕನ್ನಾಕೊರೆದು ಕದಿಯುವರು.20 ಆದರೆ ಪರಲೋಕದಲ್ಲಿ ಸಂಪತ್ತು ಮಾಡಿ ಇಟ್ಟುಕೊಳ್ಳಿರಿ; ಅಲ್ಲಿ ಅದು ನುಸಿ ಹಿಡಿದು, ಕಿಲುಬು ಹತ್ತಿ ಕೆಟ್ಟುಹೋಗುವುದಿಲ್ಲ; ಅಲ್ಲಿ ಕಳ್ಳರು ಕನ್ನಾಕೊರೆಯುವುದೂ ಇಲ್ಲ. ಕದಿಯುವುದೂ ಇಲ್ಲ,21 ನಿನ್ನ ಸಂಪತ್ತು ಇದ್ದಲ್ಲಿಯೇ ನಿನ್ನ ಮನಸ್ಸು ಇರುತ್ತದಷ್ಟೆ.22 “ಕಣ್ಣು ದೇಹಕ್ಕೆ ದೀಪವಾಗಿದೆ; ಹೀಗಿರುವುದರಿಂದ ನಿನ್ನ ಕಣ್ಣು ಚೆನ್ನಾಗಿದ್ದರೆ ನಿನ್ನ ದೇಹವೆಲ್ಲಾ ಬೆಳಕಾಗಿರುವುದು.23 ನಿನ್ನ ಕಣ್ಣು ಕೆಟ್ಟದ್ದಾಗಿದ್ದರೆ ನಿನ್ನ ದೇಹವೆಲ್ಲಾ ಕತ್ತಲಾಗಿರುವುದು. ನಿನ್ನೊಳಗಿರುವ ಬೆಳಕೇ ಕತ್ತಲಾದರೆ ಆ ಕತ್ತಲು ಎಷ್ಟು ಮಹತ್ತರವಾಗಿರಬೇಕು!24 “ಯಾರೊಬ್ಬನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು; ಇಲ್ಲವೆ ಒಬ್ಬನಿಗೆ ಶ್ರದ್ಧೆಯಿಂದ ಸೇವೆಮಾಡಿ ಮತ್ತೊಬ್ಬನನ್ನು ತಾತ್ಸಾರ ಮಾಡಬಹುದು. ನೀವು ದೇವರನ್ನೂ ಐಶ್ವರ್ಯವನ್ನೂ ಒಟ್ಟಾಗಿ ಸೇವಿಸಲಾರಿರಿ.ನಿಮ್ಮ ಅಗತ್ಯಗಳಿಗಾಗಿ ಚಿಂತಿಸಬೇಡಿರಿ25 “ಈ ಕಾರಣದಿಂದ, ನಮ್ಮ ಜೀವನಕ್ಕೆ ಏನು ಊಟಮಾಡಬೇಕು, ಏನು ಕುಡಿಯಬೇಕು, ನಮ್ಮ ದೇಹರಕ್ಷಣೆಗಾಗಿ ಏನು ಧರಿಸಿಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ ಎಂದು ನಿಮಗೆ ಹೇಳುತ್ತೇನೆ. ಊಟಕ್ಕಿಂತ ಪ್ರಾಣವು ಉಡುಪಿಗಿಂತ ದೇಹವು ಮೇಲಾದುದಲ್ಲವೇ.26 ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡಿರಿ; ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಕಣಜಗಳಲ್ಲಿ ತುಂಬಿಟ್ಟುಕೊಳ್ಳುವುದಿಲ್ಲ; ಆದಾಗ್ಯೂ ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳನ್ನು ಸಾಕಿ ಸಲಹುತ್ತಾನೆ; ಅವುಗಳಿಗಿಂತ ನೀವು ಹೆಚ್ಚಿನವರಲ್ಲವೋ?27 ಚಿಂತೆಮಾಡಿ ನಿಮ್ಮ ಜೀವಿತಾವಧಿಯನ್ನು ಒಂದು ಮೊಳ ಉದ್ದ ಬೆಳೆಸಲು ನಿಮ್ಮಲ್ಲಿ ಯಾರಿಂದಾದೀತು?28 ಇದಲ್ಲದೆ ನೀವು ಉಡುಪಿನ ವಿಷಯದಲ್ಲಿ ಚಿಂತೆಮಾಡುವುದೇಕೆ? ಅಡವಿಯ ಹೂವುಗಳು ಬೆಳೆಯುವ ರೀತಿಯನ್ನು ಯೋಚಿಸಿ ತಿಳಿದುಕೊಳ್ಳಿರಿ; ಅವು ದುಡಿಯುವುದಿಲ್ಲ, ನೂಲುವುದಿಲ್ಲ;29 ಆದಾಗ್ಯೂ ಆ ಹೂವುಗಳಲ್ಲಿ ಒಂದಕ್ಕಿರುವಷ್ಟು ಅಲಂಕಾರ ಅರಸನಾದ ಸೊಲೊಮೋನನಿಗೆ ಅವನು ತನ್ನ ಸಕಲ ವೈಭವದಿಂದಿರುವಾಗಲೂ ಸಹ ಇರಲಿಲ್ಲವೆಂದು ನಿಮಗೆ ಹೇಳುತ್ತೇನೆ.30 ಎಲೈ ಅಲ್ಪ ವಿಶ್ವಾಸಿಗಳೇ, ಈ ಹೊತ್ತು ಇದ್ದು ನಾಳೆ ಒಲೆಯ ಪಾಲಾಗುವ ಅಡವಿಯ ಹುಲ್ಲಿಗೇ ದೇವರು ಹೀಗೆ ಉಡಿಸಿದರೆ ಅದಕ್ಕಿಂತ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸಿ ತೊಡಿಸುವನಲ್ಲವೇ!31 ಹೀಗಿರುವುದರಿಂದ, ‘ಏನು ಊಟಮಾಡಬೇಕು, ಏನು ಕುಡಿಯಬೇಕು, ಏನು ಧರಿಸಿಕೊಳ್ಳಬೇಕು’ ಎಂದು ಚಿಂತೆಮಾಡಬೇಡಿರಿ.32 ಇವೆಲ್ಲವುಗಳಿಗಾಗಿ ಅನ್ಯಜನಗಳು ತವಕಪಡುತ್ತಾರೆ. ಇದೆಲ್ಲಾ ನಿಮಗೆ ಅಗತ್ಯವಿದೆ ಎಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದಿದೆಯಷ್ಟೆ.33 ಹೀಗಿರುವುದರಿಂದ, ನೀವು ಮೊದಲು ದೇವರ ರಾಜ್ಯವನ್ನೂ ನೀತಿಯನ್ನೂ ಹುಡುಕಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.34 ಆದುದರಿಂದ ನಾಳಿನ ವಿಷಯವಾಗಿ ಚಿಂತೆ ಮಾಡಬೇಡಿರಿ; ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವುದು. ಆ ಹೊತ್ತಿನ ಪಾಡೇ ಆ ಹೊತ್ತಿಗೆ ಸಾಕು.

ಮ್ಯಾಥ್ಯೂ 6

ಇತರರ ಬಗ್ಗೆ ನ್ಯಾಯತೀರ್ಪು ಮಾಡಬೇಡಿ

 “ತೀರ್ಪುಮಾಡಬೇಡಿರಿ; ಹಾಗೆ ನಿಮಗೂ ತೀರ್ಪಾಗುವುದಿಲ್ಲ.2 ನೀವು ಮಾಡುವ ತೀರ್ಪಿಗೆ ಸರಿಯಾಗಿ ನಿಮಗೂ ತೀರ್ಪಾಗುವುದು; ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು.3 “ನೀನು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ಯೋಚಿಸದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ಧೂಳನ್ನು ಏಕೆ ಯೋಚಿಸುವೇ?4 ನೀನು ನಿನ್ನ ಸಹೋದರನಿಗೆ, ‘ನಿನ್ನ ಕಣ್ಣಿನೊಳಗಿನಿಂದ ಧೂಳನ್ನು ತೆಗೆಯುತ್ತೇನೆ ಬಾ’ ಎಂದು ಏಕೆ ಹೇಳುವೇ? ನಿನ್ನ ಕಣ್ಣಿನಲ್ಲೇ ತೊಲೆ ಇದೆಯಲ್ಲಾ.5 ಕಪಟಿಯೇ! ಮೊದಲು ನಿನ್ನ ಕಣ್ಣಿನೊಳಗಿನಿಂದ ತೊಲೆಯನ್ನು ತೆಗೆದುಹಾಕಿದರೆ; ನಿನ್ನ ಸಹೋದರನ ಕಣ್ಣಿನೊಳಗಿನಿಂದ ಧೂಳನ್ನು ತೆಗೆಯವುದಕ್ಕೆ ನಿನಗೆ ಸ್ಪಷ್ಟವಾಗಿ ಕಾಣಿಸುವುದು.6 “ಪವಿತ್ರವಾದುದನ್ನು ನಾಯಿಗಳಿಗೆ ನೀಡಬೇಡಿರಿ; ನಿಮ್ಮ ಮುತ್ತುಗಳನ್ನು ಹಂದಿಗಳ ಮುಂದೆ ಚೆಲ್ಲಬೇಡಿರಿ. ಬಹುಶಃ ಅವು ತಮ್ಮ ಕಾಲಿನಿಂದ ಅವುಗಳನ್ನು ತುಳಿದು ಹಿಂತಿರುಗಿ ಬಂದು ನಿಮ್ಮನ್ನು ಸೀಳಿಬಿಟ್ಟಾವು.ಫಲದಾಯಕ ಪ್ರಾರ್ಥನೆ7 “ಬೇಡಿಕೊಳ್ಳಿರಿ, ನಿಮಗೆ ದೊರೆಯುವುದು; ಹುಡುಕಿರಿ, ನಿಮಗೆ ಸಿಕ್ಕುವುದು; ತಟ್ಟಿರಿ, ನಿಮಗೆ ತೆರೆಯುವುದು;8 ಏಕೆಂದರೆ ಬೇಡಿಕೊಳ್ಳುವ ಪ್ರತಿಯೊಬ್ಬನೂ ಹೊಂದುವನು, ಹುಡುಕುವವನಿಗೆ ಸಿಕ್ಕುವುದು, ತಟ್ಟುವವನಿಗೆ ತೆರೆಯಲ್ಪಡುವುದು.9 “ನಿಮ್ಮಲ್ಲಿ ಯಾವನು ರೊಟ್ಟಿ ಕೇಳುವ ಮಗನಿಗೆ ಕಲ್ಲನ್ನು ಕೊಡುವನೋ?10 ಮೀನು ಕೇಳಿದರೆ ಹಾವನ್ನು ಕೊಡುವನೋ?11 ಹಾಗಾದರೆ ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಉಡುಗೊರೆಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಒಳ್ಳೆಯ ವರಗಳನ್ನು ಕೊಡುವನಲ್ಲವೇ?12 ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ. ಧರ್ಮಶಾಸ್ತ್ರದ ಮತ್ತು ಪ್ರವಾದಿಗಳ ತಾತ್ಪರ್ಯ ಇದೇ ಆಗಿದೆ.ವಿನಾಶದ ಬಾಗಿಲು ವಿಶಾಲ13 “ಇಕ್ಕಟ್ಟಾದ ಬಾಗಿಲಿನಿಂದ ಒಳಕ್ಕೆ ಹೋಗಿರಿ. ನಾಶಕ್ಕೆ ಹೋಗುವ ಬಾಗಿಲು ದೊಡ್ಡದು, ದಾರಿ ವಿಶಾಲವಾದುದು; ಅದರಲ್ಲಿ ಹೋಗುವವರು ಬಹು ಜನ.14 ನಿತ್ಯ ಜೀವಕ್ಕೆ ಹೋಗುವ ಬಾಗಿಲು ಇಕ್ಕಟ್ಟು, ದಾರಿ ಬಿಕ್ಕಟ್ಟು; ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ.ಸುಳ್ಳು ಪ್ರವಾದಿಗಳಿದ್ದಾರೆ ಎಚ್ಚರಿಕೆ15 “ಕುರಿವೇಷ ಹಾಕಿಕೊಂಡು ನಿಮ್ಮ ಬಳಿಗೆ ಬರುವ ಸುಳ್ಳುಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರಿ; ನಿಜವಾಗಿಯೂ ಅವರು ಕಿತ್ತುತಿನ್ನುವ ತೋಳಗಳೇ.16 ಅವರ ಫಲಗಳಿಂದ ಅವರನ್ನು ತಿಳಿದುಕೊಳ್ಳುವಿರಿ. ಮುಳ್ಳುಗಿಡಗಳಲ್ಲಿ ದ್ರಾಕ್ಷಿಹಣ್ಣುಗಳನ್ನೂ ದತ್ತೂರಿ ಗಿಡಗಳಿಂದ ಅಂಜೂರಗಳನ್ನೂ ಸಂಗ್ರಹಿಸುವುದುಂಟೇ?17 ಹಾಗೆಯೇ ಒಳ್ಳೆಯಮರಗಳೆಲ್ಲಾ ಒಳ್ಳೆಯ ಫಲವನ್ನು ಕೊಡುವವು; ಹುಳುಕು ಮರವು ಕೆಟ್ಟ ಫಲವನ್ನು ಕೊಡುವುದು. ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡಲಾರದು;18 ಹುಳುಕು ಮರವು ಒಳ್ಳೆಯ ಫಲವನ್ನು ಕೊಡಲಾರದು.19 ಒಳ್ಳೆಯ ಫಲವನ್ನು ಕೊಡದ ಎಲ್ಲಾ ಮರಗಳನ್ನು ಕಡಿದು ಬೆಂಕಿಯಲ್ಲಿ ಹಾಕುತ್ತಾರೆ.20 ಹೀಗಿರಲಾಗಿ ಅವರ ಫಲಗಳಿಂದಲೇ ಅವರನ್ನು ತಿಳಿದುಕೊಳ್ಳುವಿರಿ.ಕಪಟಿಗಳಿಗೆ ದೊರೆಯುವ ತೀರ್ಪು21 “ನನ್ನನ್ನು ಕರ್ತನೇ, ಕರ್ತನೇ ಅನ್ನುವವರೆಲ್ಲರು ಪರಲೋಕ ರಾಜ್ಯವನ್ನು ಪ್ರವೇಶಿಸುವುದಿಲ್ಲ; ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನು ಮಾತ್ರ ಪರಲೋಕ ರಾಜ್ಯಕ್ಕೆ ಪ್ರವೇಶಿಸುವನು.22 ಕರ್ತನೇ, ಕರ್ತನೇ, ನಿನ್ನ ಹೆಸರಿನಲ್ಲಿ ನಾವು ಪ್ರವಾದನೆ ಮಾಡಲಿಲ್ಲವೇ? ನಿನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸಲಿಲ್ಲವೇ? ನಿನ್ನ ಹೆಸರಿನಲ್ಲಿ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ ಎಂದು ತೀರ್ಪಿನ ದಿನದಲ್ಲಿ ಎಷ್ಟೋ ಜನರು ನನಗೆ ಹೇಳುವರು.23 ಆಗ ನಾನು ಅವರಿಗೆ, ‘ನಿಮ್ಮ ಗುರುತೇ ನನಗಿಲ್ಲ; ದುಷ್ಟತನ ಮಾಡುವ ನೀವು, ನನ್ನಿಂದ ತೊಲಗಿಹೋಗಿರಿ,’ ಎಂದು ಹೇಳಿಬಿಡುವೆನು.ಸ್ಥಿರವಾದ ಮನೆ24 “ಆದುದರಿಂದ, ಈ ನನ್ನ ಮಾತುಗಳನ್ನು ಕೇಳಿ ಅವುಗಳಂತೆ ನಡೆಯುವವನು ಬಂಡೆಯ ಮೇಲೆ ಮನೆಯನ್ನು ಕಟ್ಟಿಕೊಂಡ ಬುದ್ಧಿವಂತನಿಗೆ ಹೋಲುವನು.25 ಮನೆ ಕಟ್ಟಿದ ಮೇಲೆ ಮಳೆ ಸುರಿಯಿತು; ಪ್ರವಾಹವು ಬಂದವು; ನಾಲ್ಕು ಕಡೆಯಿಂದ ಗಾಳಿ ಬೀಸಿ ಆ ಮನೆಗೆ ಹೊಡೆಯಿತು. ಆದಾಗ್ಯೂ ಅದರ ಅಸ್ತಿವಾರವು ಬಂಡೆಯ ಮೇಲಿದ್ದುದರಿಂದ ಅದು ಬೀಳಲಿಲ್ಲ.26 ಆದರೆ ಈ ನನ್ನ ಮಾತುಗಳನ್ನು ಕೇಳಿಯೂ ಅವುಗಳಂತೆ ನಡೆಯದ ಪ್ರತಿಯೊಬ್ಬನು ಮರಳಿನ ಮೇಲೆ ಮನೆಯನ್ನು ಕಟ್ಟಿಕೊಂಡ ಬುದ್ಧಿಹೀನನಿಗೆ ಸಮನಾಗಿರುವನು.27 ಮನೆ ಕಟ್ಟಿದ ಮೇಲೆ ಮಳೆ ಸುರಿಯಿತು; ಪ್ರವಾಹವು ಬಂದವು; ನಾಲ್ಕು ಕಡೆಯಿಂದ ಗಾಳಿ ಬೀಸಿ ಆ ಮನೆಗೆ ಹೊಡೆಯಿತು. ಆಗ ಆ ಮನೆ ಸಂಪೂರ್ಣವಾಗಿ ಕುಸಿದುಬಿತ್ತು. ಆ ಕುಸಿತ ಅಗಾಧವಾದುದು.28 “ಯೇಸು ಈ ಮಾತುಗಳನ್ನು ಹೇಳಿ ಮುಗಿಸಿದ ಮೇಲೆ ಆ ಜನರ ಗುಂಪು ಆತನ ಉಪದೇಶಕ್ಕೆ ಅತ್ಯಾಶ್ಚರ್ಯಪಟ್ಟರು.29 ಏಕೆಂದರೆ ಆತನು ಅವರ ಶಾಸ್ತ್ರಿಗಳಂತೆ ಉಪದೇಶಿಸದೆ ಅಧಿಕಾರವಿದ್ದವನಂತೆ ಅವರಿಗೆ ಉಪದೇಶಮಾಡುತ್ತಿದ್ದನು.

ಮ್ಯಾಥ್ಯೂ 7

ಯೋಹಾನ 20: 19-3119 ಅದೇ ದಿನ ಎಂದರೆ ವಾರದ ಮೊದಲನೆಯ ದಿನದ ಸಂಜೆಯಲ್ಲಿ ಶಿಷ್ಯರು ಯೆಹೂದ್ಯರ ಭಯದಿಂದ ತಾವು ಇದ್ದ ಮನೆಯ ಬಾಗಿಲುಗಳನ್ನು ಮುಚ್ಚಿಕೊಂಡಿರಲು, ಆಗ ಯೇಸು ಬಂದು ಅವರ ನಡುವೆ ನಿಂತು, “ನಿಮಗೆ ಸಮಾಧಾನವಾಗಲಿ” ಎಂದನು.20 ಇದನ್ನು ಹೇಳಿದ ಮೇಲೆ ಅವರಿಗೆ ತನ್ನ ಕೈಗಳನ್ನೂ ಪಕ್ಕೆಯನ್ನೂ ತೋರಿಸಿದನು. ಆಗ ಶಿಷ್ಯರು ಕರ್ತನನ್ನು ನೋಡಿ ಸಂತೋಷಪಟ್ಟರು.21 ಯೇಸು ಅವರಿಗೆ, “ನಿಮಗೆ ಸಮಾಧಾನವಾಗಲಿ” ಎಂದು ಪುನಃ ಹೇಳಿ, “ತಂದೆಯು ನನ್ನನ್ನು ಕಳುಹಿಸಿಕೊಟ್ಟ ಹಾಗೆಯೇ ನಾನೂ ನಿಮ್ಮನ್ನು ಕಳುಹಿಸಿಕೊಡುತ್ತೇನೆ” ಎಂದನು.22 ಆತನು ಇದನ್ನು ಹೇಳಿ ಅವರ ಮೇಲೆ ಉಸಿರೂದಿ ಅವರಿಗೆ, “ನೀವು ಪವಿತ್ರಾತ್ಮನನ್ನು ಪಡೆದುಕೊಳ್ಳಿರಿ.23 ನೀವು ಯಾರ ಪಾಪಗಳನ್ನು ಕ್ಷಮಿಸಿಬಿಡುತ್ತೀರೋ, ಅವರಿಗೆ ಅವುಗಳು ಕ್ಷಮಾಪಣೆಯಾಗುತ್ತದೆ; ಯಾರ ಪಾಪಗಳನ್ನು ನೀವು ಕ್ಷಮಿಸದೇ ಉಳಿಸುತ್ತೀರೋ, ಅವರಿಗೆ ಅವುಗಳು ಉಳಿಯುತ್ತವೆ” ಎಂದು ಹೇಳಿದನು.24 ಯೇಸು ಬಂದಾಗ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ದಿದುಮನೆನಿಸಿಕೊಳ್ಳುವ ತೋಮನು ಅವರ ಜೊತೆ ಇರಲಿಲ್ಲ.25 ಉಳಿದ ಶಿಷ್ಯರು ಅವನಿಗೆ, “ನಾವು ಕರ್ತನನ್ನು ನೋಡಿದ್ದೇವೆ” ಎಂದು ಹೇಳಿದರು. ಅದಕ್ಕೆ ಅವನು, “ನಾನು ಆತನ ಕೈಗಳಲ್ಲಿ ಮೊಳೆಗಳಿಂದಾದ ಗಾಯವನ್ನು ನೋಡಿ, ಆ ಮೊಳೆಯ ಗಾಯದಲ್ಲಿ ನನ್ನ ಬೆರಳನ್ನು ಇಟ್ಟು ಆತನ ಪಕ್ಕೆಯಲ್ಲಿ ನನ್ನ ಕೈಯನ್ನು ಹಾಕದ ಹೊರತು ನಿಮ್ಮ ಮಾತನ್ನು ನಂಬುವುದೇ ಇಲ್ಲ” ಎಂದನು.26 ಎಂಟು ದಿನಗಳಾದ ಮೇಲೆ ಆತನ ಶಿಷ್ಯರು ಪುನಃ ಒಳಗಿದ್ದಾಗ ತೋಮನೂ ಅವರ ಜೊತೆ ಇದ್ದನು. ಬಾಗಿಲುಗಳು ಮುಚ್ಚಿದ್ದವು ಆಗ ಯೇಸು ಬಂದು ನಡುವೆ ನಿಂತು ನಿಮಗೆ “ಸಮಾಧಾನವಾಗಲಿ ಎಂದನು”27 ಆ ಮೇಲೆ ತೋಮನಿಗೆ, “ನಿನ್ನ ಬೆರಳನ್ನು ಈ ಕಡೆ ಚಾಚಿ ನನ್ನ ಕೈಗಳನ್ನು ಮುಟ್ಟಿ ನೋಡು, ನಿನ್ನ ಕೈ ಚಾಚಿ ನನ್ನ ಪಕ್ಕೆಯಲ್ಲಿ ಹಾಕು. ಅಪನಂಬಿಕೆಯಳ್ಳವನಾಗಿರಬೇಡ, ನಂಬುವವನಾಗು” ಎಂದು ಹೇಳಿದನು.28 ತೋಮನು ಆತನಿಗೆ, “ನನ್ನ ಕರ್ತನೇ, ನನ್ನ ದೇವರೇ” ಎಂದು ಹೇಳಿದನು.29 ಯೇಸು ಆತನಿಗೆ, “ನೀನು ನನ್ನನ್ನು ನೋಡಿದ್ದರಿಂದ ನಂಬಿದ್ದೀ, ನೋಡದೆ ನಂಬಿದವರು ಧನ್ಯರು” ಎಂದು ಹೇಳಿದನು.30 ಯೇಸು ಇನ್ನು ಬೇರೆ ಎಷ್ಟೋ ಸೂಚಕಕಾರ್ಯಗಳನ್ನು ತನ್ನ ಶಿಷ್ಯರ ಮುಂದೆ ಮಾಡಿದನು. ಅವುಗಳನ್ನೆಲ್ಲಾ ಈ ಗ್ರಂಥದಲ್ಲಿ ಬರೆದಿರುವುದಿಲ್ಲಾ.31 ಆದರೆ ಯೇಸುವೇ ದೇವಕುಮಾರನಾದ ಕ್ರಿಸ್ತನೆಂದು ನೀವು ನಂಬುವಂತೆಯೂ, ನಂಬಿ ಆತನ ಹೆಸರಿನಲ್ಲಿ ನಿತ್ಯ ಜೀವವನ್ನು ಪಡೆದುಕೊಳ್ಳುವಂತೆಯೂ ಇಷ್ಟೆಲ್ಲಾ ಬರೆದಿದೆ.

ಯೋಹಾನ 20: 19-31

 ಯೇಸು ತನ್ನ ಶಿಷ್ಯರಿಗೆ ಪುನಃ ದರ್ಶನಕೊಟ್ಟದ್ದು

ತರುವಾಯ ಯೇಸು ತಿಬೇರಿಯ ಸಮುದ್ರದ ಬಳಿಯಲ್ಲಿ ಶಿಷ್ಯರಿಗೆ ಪುನಃ ಕಾಣಿಸಿಕೊಂಡನು:2 ಸೀಮೋನ್ ಪೇತ್ರನೂ, ದಿದುಮನೆಂಬ ತೋಮನೂ, ಗಲಿಲಾಯದ ಕಾನಾ ಊರಿನ ನತಾನಯೇಲನೂ, ಜೆಬೆದಾಯನ ಮಕ್ಕಳೂ ಮತ್ತು ಆತನ ಶಿಷ್ಯರಲ್ಲಿ ಇನ್ನಿಬ್ಬರೂ ಕೂಡಿಬಂದಿದ್ದರು.3 ಆಗ ಅವರಿಗೆ ಸೀಮೋನ ಪೇತ್ರನು, “ನಾನು ಮೀನು ಹಿಡಿಯಲು ಹೋಗುತ್ತೇನೆ” ಎಂದು ಹೇಳಲು ಅವರು ಅವನಿಗೆ, “ನಾವೂ ಸಹ ನಿನ್ನ ಜೊತೆಯಲ್ಲಿ ಬರುತ್ತೇವೆ” ಎಂದರು. ಅವರು ಹೊರಟು ದೋಣಿಯನ್ನು ಹತ್ತಿದರು. ಆದರೆ ಆ ರಾತ್ರಿ ಅವರಿಗೆ ಏನೂ ಸಿಗಲಿಲ್ಲ.4 ಬೆಳಗಾಗುವಾಗ ಯೇಸು ದಡದಲ್ಲಿ ನಿಂತಿದ್ದನು. ಆದಾಗ್ಯೂ ಶಿಷ್ಯರು ಆತನನ್ನು ಯೇಸುವೇ ಎಂದು ಗುರುತಿಸಲಿಲ್ಲ.5 ಆಗ ಯೇಸು ಅವರನ್ನು, “ಮಕ್ಕಳಿರಾ, ನಿಮ್ಮಲ್ಲಿ ಮೀನುಗಳು ಉಂಟೋ?” ಎಂದು ಕೇಳಲು, ಅವರು ಆತನಿಗೆ “ಇಲ್ಲ” ಎಂದು ಉತ್ತರಕೊಟ್ಟರು.6 ಆತನು ಅವರಿಗೆ, “ನೀವು ದೋಣಿಯ ಬಲಗಡೆಯಲ್ಲಿ ಬಲೆಯನ್ನು ಬೀಸಿರಿ; ಆಗ ನಿಮಗೆ ಸಿಕ್ಕುತ್ತವೆ” ಎಂದು ಹೇಳಿದನು. ಅವರು ಬಲೆ ಬೀಸಿದಾಗ ಮೀನುಗಳು ರಾಶಿ ರಾಶಿಯಾಗಿ ಬಲೆಗೆ ಬಂದು ಸೇರಿದ್ದರಿಂದ, ಅವರಿಗೆ ಬಲೆಯನ್ನು ಎಳೆಯುವುದಕ್ಕೆ ಸಾಧ್ಯವಾಗದೆ ಹೋಯಿತು.7 ಆಗ ಯೇಸುವಿಗೆ ಪ್ರಿಯನಾಗಿದ್ದ ಶಿಷ್ಯನು ಪೇತ್ರನಿಗೆ, “ಆತನು ಕರ್ತನೇ” ಎಂದು ಹೇಳಿದನು. ಸೀಮೋನ್ ಪೇತ್ರನು ಅದನ್ನು ಕೇಳಿ ತಾನು ತೆಗೆದು ಬಿಟ್ಟಿದ್ದ ತನ್ನ ಮೇಲಂಗಿಯನ್ನು ಸುತ್ತಿಕೊಂಡು ಸಮುದ್ರದೊಳಗೆ ಧುಮುಕಿದನು.8 ದಡವು ದೂರವಿರಲಿಲ್ಲ, ಹೆಚ್ಚು ಕಡಿಮೆ ಇನ್ನೂರು ಅಡಿ ದೂರವಿತ್ತು. ಉಳಿದ ಶಿಷ್ಯರು ಮೀನು ತುಂಬಿದ್ದ ಆ ಬಲೆಯನ್ನು ಎಳೆಯುತ್ತಾ ದೋಣಿಯಲ್ಲಿಯೇ ಬಂದರು.9 ಅವರು ದಡಕ್ಕೆ ಬಂದು ಸೇರಿದಾಗ, ಕೆಂಡಗಳನ್ನೂ ಅವುಗಳ ಮೇಲೆ ಇಟ್ಟಿದ್ದ ಮೀನುಗಳನ್ನು ಮತ್ತು ರೊಟ್ಟಿಯನ್ನು ಕಂಡರು.10 ಯೇಸು ಅವರಿಗೆ, “ನೀವು ಈಗ ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿರಿ” ಎಂದು ಹೇಳಲು,11 ಸೀಮೋನ್ ಪೇತ್ರನು ದೋಣಿಯನ್ನು ಹತ್ತಿ ಬಲೆಯನ್ನು ದಡಕ್ಕೆ ಎಳದುಕೊಂಡು ಬಂದನು. ಅದು ನೂರೈವತ್ಮೂರು ದೊಡ್ಡ ಮೀನುಗಳಿಂದ ತುಂಬಿತ್ತು. ಅಷ್ಟು ಮೀನುಗಳು ಇದ್ದರೂ ಬಲೆಯು ಹರಿದಿರಲಿಲ್ಲ.12 ಯೇಸು ಅವರಿಗೆ, “ಬಂದು ಊಟ ಮಾಡಿರಿ” ಎಂದು ಹೇಳಿದನು. ಶಿಷ್ಯರು ಆತನನ್ನು ಕರ್ತನೆಂದು ತಿಳಿದಿದ್ದರಿಂದ “ನೀನು ಯಾರು?” ಎಂದು ಕೇಳುವುದಕ್ಕೆ ಅವರಲ್ಲಿ ಒಬ್ಬರಿಗೂ ಧೈರ್ಯವಿರಲಿಲ್ಲ.13 ಯೇಸು ಬಂದು ರೊಟ್ಟಿಯನ್ನು ತೆಗೆದುಕೊಂಡು ಅವರಿಗೆ ಕೊಟ್ಟನು. ಹಾಗೆಯೇ ಮೀನನ್ನೂ ಕೊಟ್ಟನು.14 ಯೇಸು ಸತ್ತವರೊಳಗಿಂದ ಜೀವಿತನಾಗಿ ಎದ್ದ ಮೇಲೆ, ತನ್ನ ಶಿಷ್ಯರಿಗೆ ಕಾಣಿಸಿಕೊಂಡದ್ದು ಇದು ಮೂರನೆಯ ಸಾರಿ.15 ಅವರ ಊಟವಾದ ಮೇಲೆ ಯೇಸು ಸೀಮೋನ್ ಪೇತ್ರನಿಗೆ, “ಯೋಹಾನನ ಮಗನಾದ ಸೀಮೋನನೇ, ನೀನು ಇವರಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತಿಯೋ?” ಎಂದು ಕೇಳಲು ಅವನು “ಹೌದು, ಕರ್ತನೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂದು ನೀನೇ ಬಲ್ಲೆ” ಎಂದನು. ಆತನು ಅವನಿಗೆ, “ನನ್ನ ಕುರಿಮರಿಗಳನ್ನು ಮೇಯಿಸು” ಎಂದು ಹೇಳಿದನು.16 ಆತನು ತಿರುಗಿ ಎರಡನೆಯ ಸಾರಿ ಅವನಿಗೆ, “ಯೋಹಾನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯೋ?” ಎಂದು ಕೇಳಲು, ಅವನು ಹೌದು ಕರ್ತನೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂದು ನೀನೇ ಬಲ್ಲೆ ಎಂದನು. ಆತನು ಅವನಿಗೆ “ನನ್ನ ಕುರಿಗಳನ್ನು ಪಾಲಿಸು” ಎಂದು ಹೇಳಿದನು.17 ಯೇಸು ಮೂರನೆಯ ಸಾರಿ, “ಯೋಹಾನನ ಮಗನಾದ ಸೀಮೋನನೇ ನೀನು ನನ್ನ ಮೇಲೆ ಮಮತೆ ಇಟ್ಟಿದ್ದಿಯೋ?” ಎಂದು ಕೇಳಿದನು, ಮೂರನೆಯ ಸಾರಿ ಆತನು, “ನನ್ನ ಮೇಲೆ ಮಮತೆ ಇಟ್ಟಿದ್ದೀಯೋ?” ಎಂದು ತನ್ನನ್ನು ಕೇಳಿದ್ದಕ್ಕೆ ಪೇತ್ರನು ದುಃಖಪಟ್ಟು, “ಕರ್ತನೇ, ನಿನಗೆ ಎಲ್ಲವೂ ತಿಳಿದಿದೆ. ನಾನು ನಿನ್ನ ಮೇಲೆ ಮಮತೆ ಇಟ್ಟೀದ್ದೇನೆಂದು ನಿನಗೆ ತಿಳಿದಿದೆ” ಎಂದನು. ಆಗ ಅವನಿಗೆ ಯೇಸು “ನನ್ನ ಕುರಿಗಳನ್ನು ಮೇಯಿಸು” ಎಂದನು.18 “ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ನೀನು ಯುವಕನಾಗಿದ್ದಾಗ ನೀನೇ ನಿನ್ನ ಉಡುಪನ್ನು ಧರಿಸಿಕೊಂಡು ಇಷ್ಟಬಂದ ಕಡೆಗೆ ತಿರುಗಾಡುತ್ತಿದ್ದೀ. ಆದರೆ ನೀನು ಮುದುಕನಾದಾಗ ನಿನ್ನ ಕೈಗಳನ್ನು ಚಾಚುವಿ, ಆಗ ಮತ್ತೊಬ್ಬನು ನಿನ್ನ ನಡುವನ್ನು ಕಟ್ಟಿ ನಿನಗೆ ಇಷ್ಟವಿಲ್ಲದ ಕಡೆಗೆ ನಿನ್ನನ್ನು ಹೊತ್ತುಕೊಂಡು ಹೋಗುವನು” ಎಂದು ಹೇಳಿದನು.19 ಅವನು ಎಂಥಾ ಮರಣದಿಂದ ದೇವರನ್ನು ಮಹಿಮೆಪಡಿಸುವನು ಎಂಬುದನ್ನು ಯೇಸು ಈ ಮಾತಿನಿಂದ ಸೂಚಿಸಿದನು. ಆತನು ಇದನ್ನು ಹೇಳಿ ಪೇತ್ರನಿಗೆ “ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.20 ಪೇತ್ರನು ಹಿಂತಿರುಗಿ ನೋಡಿದಾಗ, ಯೇಸುವಿಗೆ ಪ್ರಿಯನಾಗಿದ್ದ ಶಿಷ್ಯನು ಹಿಂದೆ ಬರುವುದನ್ನು ಕಂಡನು. ಆ ಶಿಷ್ಯನು ಊಟದ ಸಮಯದಲ್ಲಿ ಯೇಸುವಿನ ಎದೆಗೆ ಒರಗಿಕೊಂಡು, “ಕರ್ತನೇ, ನಿನ್ನನ್ನು ಹಿಡಿದುಕೊಡುವವನು ಯಾರು?” ಎಂದು ಕೇಳಿದವನೇ.21 ಇವನನ್ನು ಪೇತ್ರನು ನೋಡಿ ಯೇಸುವಿಗೆ, “ಕರ್ತನೇ, ಇವನ ಬಗ್ಗೆ ಏನು ಹೇಳುತ್ತೀಯಾ?” ಎಂದು ಕೇಳಲು,22 ಯೇಸು ಅವನಿಗೆ “ನಾನು ಬರುವ ತನಕ ಇವನು ಉಳಿದಿರಬೇಕೆಂಬುದು ನನಗೆ ಮನಸ್ಸಾಗಿದ್ದರೆ ಅದರಿಂದ ನಿನಗೇನು? ನೀನು ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.23 ಆದುದರಿಂದ ಆ ಶಿಷ್ಯನು ಸಾಯುವುದಿಲ್ಲವೆಂಬ ಮಾತು ಸಹೋದರರಲ್ಲಿ ಹಬ್ಬಿತು. ಆದರೆ ಅವನು ಸಾಯುವುದಿಲ್ಲವೆಂದು ಯೇಸು ಅವನಿಗೆ ಹೇಳಲಿಲ್ಲ. “ನಾನು ಬರುವ ತನಕ ಅವನು ಉಳಿದಿರಬೇಕೆಂದು ನನಗೆ ಮನಸ್ಸಿದ್ದರೆ ಅದು ನಿನಗೇನು?” ಎಂದು ಮಾತ್ರ ಹೇಳಿದನು.24 ಈ ವಿಷಯವಾಗಿ ಸಾಕ್ಷಿಕೊಟ್ಟು, ಇವುಗಳನ್ನು ಬರೆದ ಶಿಷ್ಯನು ಇವನೇ. ಇವನ ಸಾಕ್ಷಿಯು ಸತ್ಯವೆಂದು ನಾವು ಬಲ್ಲೆವು.25 ಇದಲ್ಲದೆ ಯೇಸುವು ಮಾಡಿದ ಇನ್ನೂ ಬೇರೆ ಅನೇಕ ಸಂಗತಿಗಳು ಸಹ ಇವೆ. ಅವುಗಳನ್ನೆಲ್ಲಾ ಒಂದೊಂದಾಗಿ ಬರೆಯುವುದಾದರೆ, ಆ ಪುಸ್ತಕಗಳು ಲೋಕವೇ ಹಿಡಿಸಲಾರದಷ್ಟಾಗುವುದು ಎಂದು ನಾನು ಭಾವಿಸುತ್ತೇನೆ.

ಯೋಹಾನ 21: 1-25

1 ಥೆಯೊಫಿಲನೇ, ನಾನು ಮೊದಲು ಬರೆದ ಪುಸ್ತಕದಲ್ಲಿ, ಯೇಸು ತಾನು ಆರಿಸಿಕೊಂಡಿದ್ದ ಅಪೊಸ್ತಲರಿಗೆ ಪವಿತ್ರಾತ್ಮನ ಮೂಲಕ ಅಪ್ಪಣೆಕೊಟ್ಟು,2 ಆತನು ಸ್ವರ್ಗಾರೋಹಣವಾದ ದಿನದವರೆಗೆ ಆತನು ಮಾಡಿದ ಎಲ್ಲಾ ಕಾರ್ಯಗಳನ್ನೂ, ಉಪದೇಶಿಸಿದ ಎಲ್ಲಾ ಬೋಧನೆಗಳನ್ನೂ ಬರೆದಿದ್ದೇನೆ.3 ಯೇಸುವು ಬಾಧೆಪಟ್ಟು ಸತ್ತ ನಂತರ ತಾನು ಜೀವಂತನಾಗಿ ಎದ್ದು ಬಂದಿದ್ದೇನೆ ಎಂದು ಅನೇಕ ಸಂಭವಗಳ ಮೂಲಕ ತಾನು ಆರಿಸಿಕೊಂಡಿದ್ದ ಅಪೊಸ್ತಲರಿಗೆ ಸ್ಪಷ್ಟಪಡಿಸಿದನು. ಸತತವಾಗಿ ನಲವತ್ತು ದಿನಗಳ ತನಕ ಅವರಿಗೆ ಕಾಣಿಸಿಕೊಳ್ಳುತ್ತಾ ದೇವರ ರಾಜ್ಯದ ವಿಷಯವನ್ನು ಕುರಿತು ಅವರಿಗೆ ಬೋಧಿಸಿದನು.4 ಒಮ್ಮೆ ಅವರೆಲ್ಲರೂ ಒಂದುಗೂಡಿದ್ದ ಸಂದರ್ಭದಲ್ಲಿ, “ನೀವು ಯೆರೂಸಲೇಮನ್ನು ಬಿಟ್ಟುಹೋಗದೆ, ನನ್ನಿಂದ ಕೇಳಿದಂಥ ಮತ್ತು ತಂದೆಯು ಮಾಡಿದ ವಾಗ್ದಾನಗಳಿಗಾಗಿ ಇಲ್ಲೇ ಕಾದುಕೊಂಡಿರಿ,5 ಏಕೆಂದರೆ, ಯೋಹಾನನಂತೂ ನೀರಿನಿಂದ ದೀಕ್ಷಾಸ್ನಾನ ಮಾಡಿಸುತ್ತಿದ್ದನು ಆದರೆ ಇನ್ನು ಕೆಲವೇ ದಿನಗಳಲ್ಲಿ ನಿಮಗೆ ಪವಿತ್ರಾತ್ಮನಿಂದ ದೀಕ್ಷಾಸ್ನಾನವಾಗುವುದು” ಎಂದು ಅಪ್ಪಣೆ ಕೊಟ್ಟನು.6 ಕೂಡಿಬಂದವರು ಆತನನ್ನು,, “ಕರ್ತನೇ, ನೀನು ಇದೇ ಕಾಲದಲ್ಲಿ ಇಸ್ರಾಯೇಲ್ ಜನರಿಗೆ ರಾಜ್ಯವನ್ನು ಪುನಃ ಸ್ಥಾಪಿಸಿಕೊಡುವಿಯೋ?” ಎಂದು ಕೇಳಲು7 ಆತನು ಅವರಿಗೆ, “ತಂದೆಯು ತನ್ನ ಅಧಿಕಾರದಲ್ಲಿಟ್ಟುಕೊಂಡಿರುವ ಕಾಲಗಳನ್ನೂ, ಸಮಯಗಳನ್ನೂ ತಿಳಿದುಕೊಳ್ಳುವುದು ನಿಮ್ಮ ಕಾರ್ಯವಲ್ಲ.8 ಆದರೆ ಪವಿತ್ರಾತ್ಮನು ನಿಮ್ಮ ಮೇಲೆ ಬರಲು ನೀವು ಶಕ್ತಿಯನ್ನು ಹೊಂದಿದವರಾಗಿ ಯೆರೂಸಲೇಮಿನಲ್ಲಿಯೂ, ಯೂದಾಯದ ಎಲ್ಲಾ ಸ್ಥಳದಲ್ಲಿಯು, ಸಮಾರ್ಯ ಸೀಮೆಗಳಲ್ಲಿಯೂ, ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರುವಿರಿ” ಅಂದನು.9 ಈ ಮಾತುಗಳನ್ನು ಅವನು ಹೇಳಿದ ಬಳಿಕ ಅವರು ನೋಡುತ್ತಿದ್ದ ಹಾಗೆಯೇ ಆತನು ಪರಲೋಕಕ್ಕೆ ಎತ್ತಲ್ಪಟ್ಟನು, ಮೋಡವೊಂದು ಆತನನ್ನು ಕವಿದುಕೊಂಡಿದ್ದರಿಂದ, ಯೇಸುವು ಅವರ ಕಣ್ಣಿಗೆ ಮರೆಯಾದನು.10 ಆತನು ಹೋಗುತ್ತಿರುವಾಗ ಅವರು ಆಕಾಶದ ಕಡೆಗೆ ದೃಷ್ಟಿಸಿ ನೋಡುತ್ತಾ ಇರಲಾಗಿ ಶುಭ್ರ ವಸ್ತ್ರಧಾರಿಗಳಾದ ಇಬ್ಬರು ಪುರುಷರು ಫಕ್ಕನೆ ಅವರ ಹತ್ತಿರ ನಿಂತುಕೊಂಡರು.11 “ಗಲಿಲಾಯದವರೇ, ನೀವು ಏಕೆ ಹೀಗೆ ಆಕಾಶದ ಕಡೆಗೆ ನೋಡುತ್ತಾ ನಿಂತಿದ್ದೀರಿ? ನಿಮ್ಮ ಬಳಿಯಿಂದ ಆಕಾಶದೊಳಗೆ ಸೇರಿಸಲ್ಪಟ್ಟಿರುವ ಈ ಯೇಸುವು ಯಾವ ರೀತಿಯಲ್ಲಿ ಆಕಾಶದೊಳಗೆ ಹೋಗಿರುವುದನ್ನು ನೀವು ಕಂಡಿರೋ ಹಾಗೆಯೇ ಆತನು ಹಿಂತಿರುಗಿ ಬರುವನು” ಎಂದು ಹೇಳಿದರು.

ಕೃತ್ಯಗಳು 1: 1-11

ಅಬ್ರಹಾಮನನ್ನು ದೇವರು ಪರೀಕ್ಷಿಸಿದ್ದು

22 ಈ ಸಂಗತಿಗಳು ಆದ ಮೇಲೆ ದೇವರು ಅಬ್ರಹಾಮನನ್ನು ಪರೀಕ್ಷಿಸಿದನು.2 ಹೇಗೆಂದರೆ ಆತನು ಅವನನ್ನು, “ಅಬ್ರಹಾಮನೇ” ಎಂದು ಕರೆಯಲು ಅವನು, “ಇಗೋ, ಇದ್ದೇನೆ” ಎಂದನು. ಆಗ ಆತನು, “ನಿನಗೆ ಪ್ರಿಯನಾಗಿರುವ ಒಬ್ಬನೇ ಮಗನಾದ ಇಸಾಕನನ್ನು ಕರೆದುಕೊಂಡು ಮೊರೀಯ ದೇಶಕ್ಕೆ ಹೋಗಿ ಅಲ್ಲಿ ಅವನನ್ನು ನಾನು ಹೇಳುವ ಒಂದು ಬೆಟ್ಟದ ಮೇಲೆ ಸರ್ವಾಂಗಹೋಮವಾಗಿ ಅರ್ಪಿಸಬೇಕು” ಎಂದನು.3 ಅದರಂತೆ ಮುಂಜಾನೆಯೇ ಎದ್ದು ಅಬ್ರಹಾಮನು ಕತ್ತೆಗೆ ತಡಿ ಹಾಕಿಸಿ, ಯಜ್ಞಕ್ಕೆ ಬೇಕಾದ ಕಟ್ಟಿಗೆಯನ್ನು ಒಡೆಸಿ ಅದನ್ನು ತೆಗೆದುಕೊಂಡು ತನ್ನ ಸೇವಕರಲ್ಲಿ ಇಬ್ಬರನ್ನೂ, ತನ್ನ ಮಗನಾದ ಇಸಾಕನನ್ನೂ ಕರೆದುಕೊಂಡು ದೇವರು ಹೇಳಿದ ಸ್ಥಳಕ್ಕೆ ಹೊರಟನು.4 ಮೂರನೆಯ ದಿನದಲ್ಲಿ ಅಬ್ರಹಾಮನು ಕಣ್ಣೆತ್ತಿ ನೋಡುವಾಗ ಆ ಸ್ಥಳವು ದೂರದಲ್ಲಿ ಕಾಣಿಸಲು ಅವನು ತನ್ನ ಸೇವಕರಿಗೆ,5 “ನೀವು ಇಲ್ಲೇ ಕತ್ತೆಯ ಬಳಿಯಲ್ಲಿರಿ; ನಾನೂ ನನ್ನ ಮಗನೂ ಅಲ್ಲಿಗೆ ಹೋಗಿ ದೇವಾರಾಧನೆ ಮಾಡಿಕೊಂಡು ನಿಮ್ಮ ಬಳಿಗೆ ಬರುತ್ತೇವೆ” ಎಂದು ಅಬ್ರಹಾಮನು ಹೇಳಿದನು.6 ಆನಂತರ ಅಬ್ರಹಾಮನು ಯಜ್ಞಕ್ಕೆ ಬೇಕಾದ ಕಟ್ಟಿಗೆಯನ್ನು ತನ್ನ ಮಗನಾದ ಇಸಾಕನ ಮೇಲೆ ಹೊರಿಸಿ, ತನ್ನ ಕೈಯಲ್ಲೇ ಬೆಂಕಿಯನ್ನೂ ಕತ್ತಿಯನ್ನೂ ತೆಗೆದುಕೊಂಡ ನಂತರ ಅವರಿಬ್ಬರೂ ಹೊರಟರು.7 ಹೋಗುವಾಗ ಇಸಾಕನು ತನ್ನ ತಂದೆಯಾದ ಅಬ್ರಹಾಮನಿಗೆ, “ಅಪ್ಪಾ” ಎಂದು ಕರೆಯಲು ಅಬ್ರಹಾಮನು, “ಏನು ಮಗನೇ” ಎಂದನು. ಇಸಾಕನು, “ಇಗೋ, ಬೆಂಕಿಯೂ ಕಟ್ಟಿಗೆಯೂ ಉಂಟು; ಆದರೆ ಹೋಮಕ್ಕೆ ಬೇಕಾದ ಕುರಿ ಎಲ್ಲಿ” ಎಂದು ಕೇಳಿದ್ದಕ್ಕೆ,8 ಅಬ್ರಹಾಮನು, “ಮಗನೇ, ಹೋಮಕ್ಕೆ ಬೇಕಾದ ಕುರಿಮರಿಯನ್ನು ದೇವರೇ ಒದಗಿಸುವನು” ಎಂದನು.9 ದೇವರು ಹೇಳಿದ ಸ್ಥಳಕ್ಕೆ ಅವರು ಸೇರಿದಾಗ ಅಬ್ರಹಾಮನು ಯಜ್ಞವೇದಿಯನ್ನು ಕಟ್ಟಿ, ಕಟ್ಟಿಗೆಯನ್ನು ಜೋಡಿಸಿ ತನ್ನ ಮಗನಾದ ಇಸಾಕನ ಕೈಕಾಲುಗಳನ್ನು ಕಟ್ಟಿ ಅವನನ್ನು ಯಜ್ಞವೇದಿಯ ಮೇಲೆ ಇದ್ದ ಕಟ್ಟಿಗೆಯ ಮೇಲೆ ಮಲಗಿಸಿದನು.10 ಅಬ್ರಹಾಮನು ತನ್ನ ಮಗನನ್ನು ಕೊಲ್ಲುವುದಕ್ಕೆ, ಕೈಚಾಚಿ ಕತ್ತಿಯನ್ನು ತೆಗೆದುಕೊಂಡನು.11 ಆಗ ಯೆಹೋವನ ದೂತನು ಆಕಾಶದೊಳಗಿನಿಂದ, “ಅಬ್ರಹಾಮನೇ, ಅಬ್ರಹಾಮನೇ” ಎಂದು ಅವನನ್ನು ಕರೆದನು. ಅದಕ್ಕೆ ಅಬ್ರಹಾಮನು, “ಇಗೋ, ಇದ್ದೇನೆ” ಎಂದನು.12 ಆ ದೂತನು ಅವನಿಗೆ, “ಹುಡುಗನ ಮೇಲೆ ಕೈ ಹಾಕಬೇಡ, ಅವನಿಗೆ ಏನೂ ಮಾಡಬೇಡ. ನೀನು ನಿನ್ನ ಒಬ್ಬನೇ ಮಗನನ್ನು ನನಗೆ ಸಮರ್ಪಿಸುವುದಕ್ಕೆ ಹಿಂಜರಿಯಲಿಲ್ಲ. ಈಗ ನೀನು ದೇವರಲ್ಲಿ ಭಯಭಕ್ತಿಯುಳ್ಳವನು ಎಂದು ನನಗೆ ಗೊತ್ತಾಯಿತು” ಎಂದು ಹೇಳಿದನು.13 ಅಬ್ರಹಾಮನು ಕಣ್ಣೆತ್ತಿ ನೋಡಲಾಗಿ ತನ್ನ ಹಿಂದೆ, ಒಂದು ಟಗರು ಪೊದೆಯಲ್ಲಿ ಕೊಂಬುಗಳಿಂದ ಸಿಕ್ಕಿ ಹಾಕಿಕೊಂಡಿರುವುದನ್ನು ಕಂಡನು. ಅವನು ಹೋಗಿ ಅದನ್ನು ಹಿಡಿದು ತಂದು ತನ್ನ ಮಗನಿಗೆ ಬದಲಾಗಿ ಹೋಮಮಾಡಿದನು.14 ಆ ಸ್ಥಳಕ್ಕೆ ಅಬ್ರಹಾಮನು “ಯೆಹೋವ ಯೀರೆ” ಎಂದು ಹೆಸರಿಟ್ಟನು. ಯೆಹೋವನು ಬೆಟ್ಟದಲ್ಲಿ ಒದಗಿಸುವನು ಎಂಬುದಾಗಿ ಇಂದಿನವರೆಗೂ ಹಾಗೆ ಹೇಳುವ ಪದ್ಧತಿ ಇದೆ.15 ಯೆಹೋವನ ದೂತನು ಆಕಾಶದೊಳಗಿನಿಂದ ಎರಡನೆಯ ಸಾರಿ ಅಬ್ರಹಾಮನನ್ನು ಕರೆದು ಅವನಿಗೆ,16 “ನೀನು ನಿನ್ನ ಒಬ್ಬನೇ ಮಗನನ್ನು ಸಮರ್ಪಿಸುವುದಕ್ಕೆ ಹಿಂದೆಗೆಯದೆ ಹೋದುದರಿಂದ, ಯೆಹೋವನಾದ ನಾನು ನಿನಗೆ ಪ್ರಮಾಣವಾಗಿ ಹೇಳುವುದೇನಂದರೆ17 ನಾನು ನಿನ್ನನ್ನು ಆಶೀರ್ವದಿಸಿಯೇ ಆಶೀರ್ವದಿಸುವೆನು; ನಿನ್ನ ಸಂತತಿಯನ್ನು ಅಧಿಕವಾಗಿ ಹೆಚ್ಚಿಸುವೆನು, ಅದನ್ನು ಆಕಾಶದ ನಕ್ಷತ್ರಗಳಂತೆಯೂ, ಸಮುದ್ರ ತೀರದಲ್ಲಿರುವ ಮರಳಿನಂತೆಯೂ ಅಸಂಖ್ಯವಾಗುವಂತೆ ಮಾಡುವೆನು; ಅವರು ಶತ್ರುಗಳ ಪಟ್ಟಣಗಳನ್ನು ಸ್ವತ್ತಾಗಿ ಮಾಡಿಕೊಳ್ಳುವರು.18 ನೀನು ನನ್ನ ಮಾತಿಗೆ ವಿಧೇಯನಾಗಿ ಭೂಮಿಯ ಎಲ್ಲಾ ಜನಾಂಗಗಳಿಗೆ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವುದು ಎಂಬುದಾಗಿ ಯೆಹೋವನು ವಾಗ್ದಾನ ಮಾಡಿದ್ದಾನೆ.” ಎಂದನು.19 ತರುವಾಯ ಅಬ್ರಹಾಮನು ತನ್ನ ಸೇವಕರ ಬಳಿಗೆ ಹಿಂತಿರುಗಿ ಬಂದನು. ಅವರು ಹೊರಟು ಅವನ ಜೊತೆಯಲ್ಲಿ ಬೇರ್ಷೆಬಕ್ಕೆ ಹೋದರು. ಅಬ್ರಹಾಮನು ಬೇರ್ಷೆಬದಲ್ಲಿ ವಾಸವಾಗಿದ್ದನು.

ಆದಿಕಾಂಡ 22

ಮನುಷ್ಯರ ಕೆಟ್ಟತನ

 ಭೂಮಿಯ ಮೇಲೆ ಮನುಷ್ಯರ ಸಂಖ್ಯೆ ಹೆಚ್ಚಾಯಿತು. ಇವರಿಗೆ ಹುಟ್ಟಿದ ಹೆಣ್ಣುಮಕ್ಕಳು2 ಸೌಂದರ್ಯವುಳ್ಳವರಾಗಿರುವುದನ್ನು ನೋಡಿ ದೇವಪುತ್ರರು ತಮಗೆ ಇಷ್ಟವಾದವರನ್ನು ಹೆಂಡತಿಯರನ್ನಾಗಿ ಮಾಡಿಕೊಂಡರು.3 ಆಗ ಯೆಹೋವನು, “ ನನ್ನ ಆತ್ಮವು ಮನುಷ್ಯರಲ್ಲಿ ಶಾಶ್ವತವಾಗಿ ಹೆಣಗಲು ಸಾಧ್ಯವಿಲ್ಲ; ಏಕೆಂದರೆ ಅವರು ರಕ್ತಮಾಂಸ ಹೊಂದಿರುವ ಮರ್ತ್ಯರೇ. ಅವರು ನೂರ ಇಪ್ಪತ್ತು ವರ್ಷ ಬದುಕುವರು” ಅಂದನು.4 ಅನಂತರ ದೇವಪುತ್ರರು ಮನುಷ್ಯ ಪುತ್ರಿಯರೊಂದಿಗೆ ಸಂಗಮಿಸಿದಾಗ ಮಕ್ಕಳು ಹುಟ್ಟಿದರು. ಆ ಕಾಲದಿಂದಲೂ ಅದಾದ ನಂತರವೂ ಜಗದಲ್ಲಿ ನೆಫೀಲಿಯರು ಇದ್ದರು. ಇವರೇ ಪೂರ್ವಕಾಲದಲ್ಲಿ ಪ್ರಸಿದ್ಧರಾಗಿದ್ದ ಪರಾಕ್ರಮಶಾಲಿಗಳು ಎಂದು ಹೆಸರಾದವರು.5 ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿರುವುದನ್ನೂ, ಅವರು ತಮ್ಮ ಹೃದಯದಲ್ಲಿ ಯೋಚಿಸುವುದೆಲ್ಲವು ಯಾವಾಗಲೂ ಕೆಟ್ಟ ಆಲೋಚನೆಗಳನ್ನೇ ಮಾಡುತ್ತಿರುವುದನ್ನು ಯೆಹೋವನು ನೋಡಿದನು.6 ಯೆಹೋವನು ಭೂಮಿಯ ಮೇಲೆ ಮನುಷ್ಯರನ್ನು ಉಂಟುಮಾಡಿದ್ದಕ್ಕೆ ವ್ಯಥೆಪಟ್ಟು, ತನ್ನ ಹೃದಯದಲ್ಲಿ ನೊಂದುಕೊಂಡನು.7 ಇದಲ್ಲದೆ ಯೆಹೋವನು, “ನಾನು ಸೃಷ್ಟಿಸಿದ ಮನುಷ್ಯ ಜಾತಿಯನ್ನು ಭೂಮಿಯ ಮೇಲಿನಿಂದ ಅಳಿಸಿಬಿಡುವೆನು; ಮನುಷ್ಯರೊಂದಿಗೆ ಸಕಲ ಕಾಡುಮೃಗ, ಕ್ರಿಮಿ, ಕೀಟ, ಪಕ್ಷಿಗಳನ್ನೂ ನಾಶ ಮಾಡುವೆನು. ನಾನು ಅವರನ್ನು ಸೃಷ್ಟಿಮಾಡಿದ್ದಕ್ಕೆ ದುಃಖವಾಗುತ್ತಿದೆ” ಎಂದು ದುಃಖಿಸಿದನು.8 ಆದರೆ ನೋಹನ ನಡವಳಿಕೆ ಯೆಹೋವನಿಗೆ ಮೆಚ್ಚುಗೆಯಾದುದರಿಂದ ನೋಹನಿಗೆ ಯೆಹೋವನ ದಯೆ ದೊರಕಿತು.ನೋಹನ ಚರಿತ್ರೆ9 ನೋಹನ ಚರಿತ್ರೆ: ನೋಹನು ಸತ್ಯವಂತನೂ ಎಲ್ಲಾ ಜನರಲ್ಲಿ ನೀತಿವಂತನು ಆಗಿದ್ದನು; ಅವನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು.10 ನೋಹನು ಶೇಮ್, ಹಾಮ್, ಯೆಫೆತ್ ಎಂಬ ಮೂರು ಮಂದಿ ಮಕ್ಕಳನ್ನು ಪಡೆದನು.11 ಭೂಲೋಕದವರು ದೇವರ ದೃಷ್ಟಿಯಲ್ಲಿ ಕೆಟ್ಟ ನಡತೆಯಿಂದ ದೋಷಿಗಳಾಗಿದ್ದರು. ಹಿಂಸೆ ಮತ್ತು ಅನ್ಯಾಯ ಭೂಮಿಯನ್ನು ತುಂಬಿಕೊಂಡಿತ್ತು.12 ದೇವರು ಭೂಮಿಯನ್ನು ನೋಡಿದಾಗ ಅದು ಕೆಟ್ಟುಹೋಗಿ ಕಲುಷಿತಗೊಂಡಿತ್ತು. ಭೂನಿವಾಸಿಗಳೆಲ್ಲರೂ ತಮ್ಮ ನಡವಳಿಕೆಯನ್ನು ಕೆಡಿಸಿಕೊಂಡಿದ್ದರು.13 ಆಗ ದೇವರು ನೋಹನಿಗೆ, “ಎಲ್ಲಾ ಮನುಷ್ಯರಿಗೆ ಅಂತ್ಯವನ್ನು ತೀರ್ಮಾನಿಸಿದ್ದೇನೆ; ಭೂಲೋಕವು ಅನ್ಯಾಯದಿಂದಲೂ ಹಿಂಸೆಯಿಂದಲೂ ತುಂಬಿದೆ; ನಾನು ಭೂಮಿಯೊಂದಿಗೆ ಅವರನ್ನೂ ಅಳಿಸಿ ಬಿಡುತ್ತೇನೆ.14 ನೀನು ನಿನಗೋಸ್ಕರ ತುರಾಯಿ ಮರದಿಂದ ನಾವೆಯನ್ನು ಮಾಡಿಕೋ; ಅದರಲ್ಲಿ ತುಂಬ ಕೋಣೆಗಳು ಇರಬೇಕು; ಒಳಕ್ಕೂ ಹೊರಕ್ಕೂ ರಾಳವನ್ನು ಹಚ್ಚು.15 ನೀನು ಅದನ್ನು ಮಾಡಬೇಕಾದ ವಿಧಾನ ಹೇಗೆಂದರೆ, ಅದು ಮುನ್ನೂರು ಮೊಳ ಉದ್ದವೂ, ಐವತ್ತು ಮೊಳ ಅಗಲವೂ, ಮೂವತ್ತು ಮೊಳ ಎತ್ತರವೂ ಉಳ್ಳದ್ದಾಗಿರಬೇಕು.16 ಅದರ ಚಾವಣಿಯ ಕೆಳಗೆ ಸುತ್ತಲೂ ಒಂದು ಮೊಳ ಎತ್ತರದ ಕಿಟಕಿಯನ್ನು ಮಾಡಬೇಕು; ಪಕ್ಕದಲ್ಲಿ ಬಾಗಿಲನ್ನಿಡಬೇಕು. ನಾವೆಯಲ್ಲಿ ಒಂದರ ಮೇಲೆ ಒಂದಾಗಿ ಮೂರು ಅಂತಸ್ತುಗಳನ್ನು ಮಾಡಬೇಕು.17 ನಾನಂತೂ ಭೂಮಿಯ ಮೇಲೆ ಜಲಪ್ರಳಯವನ್ನು ಬರಮಾಡಿ ಆಕಾಶದ ಕೆಳಗಿರುವ ಸಕಲಪ್ರಾಣಿಗಳನ್ನೂ ನಾಶಮಾಡುವೆನು; ಭೂಮಿಯಲ್ಲಿರುವ ಸಮಸ್ತವೂ ಲಯವಾಗುವುದು.18 “ಆದರೆ ನಿನ್ನೊಂದಿಗೆ ನಾನು ಒಂದು ಒಡಂಬಡಿಕೆಯನ್ನು ಮಾಡುತ್ತೇನೆ. ನೀನೂ ನಿನ್ನ ಹೆಂಡತಿ, ಮಕ್ಕಳು, ಸೊಸೆಯರು ಸಹಿತವಾಗಿ ನಾವೆಯಲ್ಲಿ ಸೇರಬೇಕು.19 ಇದಲ್ಲದೆ ಜೀವಿಗಳ ಪ್ರತಿ ಜಾತಿಯಲ್ಲಿಯೂ ಒಂದು ಗಂಡು ಒಂದು ಹೆಣ್ಣು ಹೀಗೆ ಎರಡೆರಡನ್ನು ನಾವೆಯಲ್ಲಿ ಸೇರಿಸಿ, ನಿನ್ನೊಂದಿಗೆ ಉಳಿಸಿ ಕಾಪಾಡಿಕೊಳ್ಳಬೇಕು.20 ಪಶು, ಪಕ್ಷಿ, ಕಾಡುಮೃಗ, ಕ್ರಿಮಿ, ಕೀಟ ಇವುಗಳ ಸಕಲ ಜಾತಿಗಳಲ್ಲಿಯೂ ಎರಡೆರಡು ಬದುಕುವುದಕ್ಕಾಗಿ ನಿನ್ನ ಬಳಿಗೆ ಬರುವವು.21 ನಿನಗೂ ಅವುಗಳಿಗೂ ಪೋಷಣೆಯಾಗುವಂತೆ ಸಕಲ ವಿಧವಾದ ಆಹಾರ ಪದಾರ್ಥಗಳನ್ನು ನಿನ್ನ ಬಳಿಯಲ್ಲಿ ಕೂಡಿಸಿಟ್ಟುಕೊಳ್ಳಬೇಕು” ಎಂದು ಹೇಳಿದನು.22 ದೇವರು ಅಪ್ಪಣೆಕೊಟ್ಟ ಪ್ರಕಾರವೇ ನೋಹನು ಮಾಡಿದನು.

ಆದಿಕಾಂಡ 6

ನೋಹನೊಡನೆ ಒಡಂಬಡಿಕೆ

ದೇವರು ನೋಹನನ್ನೂ, ಅವನ ಮಕ್ಕಳನ್ನೂ ಆಶೀರ್ವದಿಸಿ ಅವರಿಗೆ, “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಲೋಕದಲ್ಲೆಲ್ಲಾ ತುಂಬಿಕೊಳ್ಳಿರಿ.2 ಭೂಮಿಯ ಮೇಲಿರುವ ಎಲ್ಲಾ ಮೃಗಗಳೂ, ಆಕಾಶದ ಎಲ್ಲಾ ಪಕ್ಷಿಗಳೂ, ನೆಲದ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಗಳೂ, ಸಮುದ್ರದ ಮೀನುಗಳೂ ನಿಮಗೆ ಹೆದರುವವು. ನಾನು ಅವುಗಳನ್ನೆಲ್ಲಾ ನಿಮ್ಮ ಸ್ವಾಧೀನಕ್ಕೆ ಕೊಟ್ಟಿದ್ದೇನೆ.3 ಭೂಮಿಯ ಮೇಲೆ ಚಲಿಸುವ ಎಲ್ಲಾ ಕ್ರಿಮಿಕೀಟಗಳೂ ನಿಮಗೆ ಆಹಾರವಾಗಿರುವವು. ನಾನು ನಿಮ್ಮ ಆಹಾರಕ್ಕೆ ಹಸಿರುಪಲ್ಯಗಳನ್ನು ನಿಮಗೆ ಕೊಟ್ಟಂತೆ ಇವುಗಳನ್ನೂ ಕೊಟ್ಟಿದ್ದೇನೆ.4 ಆದರೆ ಮಾಂಸವನ್ನು ಅದರ ಜೀವಸತ್ವವಾದ ರಕ್ತದೊಂದಿಗೆ ನೀವು ತಿನ್ನಬಾರದು. ಏಕೆಂದರೆ ರಕ್ತದಲ್ಲಿ ಜೀವ ಇದೆ.5 ಇದಲ್ಲದೆ ನಿಮ್ಮ ರಕ್ತ ಸುರಿಸಿ ಜೀವ ತೆಗೆಯುವವನಿಗೆ ಮುಯ್ಯಿತೀರಿಸುವೆನು. ಮೃಗವಾಗಿದ್ದರೆ, ಅದಕ್ಕೂ ಮುಯ್ಯಿತೀರಿಸುವೆನು. ಮನುಷ್ಯನಾಗಿದ್ದರೆ, ಹತನಾದವನು ಅವನ ಸಹೋದರನಾದುದರಿಂದ ಅವನಿಗೂ ಮುಯ್ಯಿ ತೀರಿಸುವೆನು. ನರಹತ್ಯವು ಸಹೋದರ ಹತ್ಯವಲ್ಲವೇ?6 ದೇವರು ಮನುಷ್ಯರನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದ್ದರಿಂದ ಯಾರು ಮನುಷ್ಯನ ರಕ್ತವನ್ನು ಸುರಿಸುತ್ತಾನೋ ಅವನ ರಕ್ತವನ್ನು ಮನುಷ್ಯನೇ ಸುರಿಸುವನು.7 ನೀವು ಅಭಿವೃದ್ಧಿಯಾಗಿ ಹೆಚ್ಚಿರಿ; ಭೂಮಿಯ ಮೇಲೆ ನಿಮಗೆ ಬಹುಸಂತಾನವಾಗಲಿ” ಎಂದು ಹೇಳಿದನು.8 ಇದಲ್ಲದೆ ದೇವರು ನೋಹನಿಗೂ ಅವನ ಮಕ್ಕಳಿಗೂ,9 “ಕೇಳಿರಿ ನಾನು ನಿಮ್ಮೊಂದಿಗೂ, ನಿಮ್ಮ ತರುವಾಯ ನಿಮ್ಮ ಸಂತತಿಯವರೊಂದಿಗೂ, ಒಡಂಬಡಿಕೆ ಮಾಡಿಕೊಳ್ಳುವೆನು.10 ನಿಮ್ಮೊಂದಿಗೆ ನಾವೆಯಿಂದ ಹೊರಟು ಬಂದ ಪಶು ಪಕ್ಷಿ, ಮೃಗ, ಸಕಲ ಭೂಜಂತುಗಳೊಂದಿಗೂ ನನ್ನ ಒಡಂಬಡಿಕೆಯನ್ನು ಸ್ಥಾಪಿಸುತ್ತೇನೆ.11 ಆ ಒಡಂಬಡಿಕೆ ಯಾವುದೆಂದರೆ, ಇನ್ನು ಮೇಲೆ ಯಾವ ಪ್ರಾಣಿಗಳೂ ಜಲಪ್ರಳಯದಿಂದ ನಾಶವಾಗುವುದಿಲ್ಲ; ಇನ್ನು ಮುಂದೆ ಭೂಮಿಯನ್ನು ಹಾಳುಮಾಡುವ ಜಲಪ್ರಳಯವು ಬರುವುದೇ ಇಲ್ಲ” ಎಂದು ಹೇಳಿದನು.12 ದೇವರು ಪುನಃ ಹೇಳಿದ್ದೇನಂದರೆ, “ನಾನು ನಿಮ್ಮನ್ನೂ ನಿಮ್ಮ ಸಂಗಡ ಇರುವ ಸಮಸ್ತ ಜೀವರಾಶಿಗಳನ್ನೂ ಕುರಿತು ತಲತಲಾಂತರಗಳಲ್ಲಿಯೂ ಮಾಡುವ ಈ ಒಡಂಬಡಿಕೆಗೆ ಮೇಘಗಳಲ್ಲಿ ನಾನು ಇಟ್ಟಿರುವ ಈ ಕಾಮನಬಿಲ್ಲೇ ಗುರುತಾಗಿರುವುದು.13 ನನಗೂ ಭೂಜೀವಿಗಳಿಗೂ ಮಾಡಿಕೊಂಡ ಒಡಂಬಡಿಕೆಗೆ ಇದೇ ಗುರುತಾಗಿರಲಿ.14 ನಾನು ಭೂಲೋಕದ ಮೇಲೆ ಮೇಘಗಳನ್ನು ಕವಿಸುವಾಗ ಆ ಕಾಮನಬಿಲ್ಲು ಮೇಘಗಳಲ್ಲಿ ಕಂಡುಬರುವುದು.15 ಆಗ ನಾನು ನಿಮ್ಮನ್ನೂ, ಎಲ್ಲಾ ಜೀವರಾಶಿಗಳನ್ನೂ ಕುರಿತು ಮಾಡಿದ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುವೆನು. ಇನ್ನು ಮುಂದೆ ನೀರು ಹೆಚ್ಚಿ ಎಲ್ಲಾ ಭೂಜೀವಿಗಳನ್ನು ಹಾಳುಮಾಡುವ ಪ್ರಳಯವಾಗುವುದಿಲ್ಲ.16 ಆ ಕಾಮನಬಿಲ್ಲು ಮೇಘಗಳಲ್ಲಿ ಕಾಣಿಸುವಾಗ ನಾನು ಅದನ್ನು ನೋಡಿ ದೇವರಾದ ನನಗೂ ಭೂಮಿಯ ಮೇಲಿರುವ ಎಲ್ಲಾ ಜೀವಜಂತುಗಳಿಗೂ ಆದ ಶಾಶ್ವತವಾದ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುವೆನು” ಅಂದನು.17 ಮತ್ತು ದೇವರು ನೋಹನಿಗೆ, “ನನಗೂ ಎಲ್ಲಾ ಭೂಜೀವಿಗಳಿಗೂ ಆದ ಒಡಂಬಡಿಕೆಗೆ ಇದೇ ಗುರುತು” ಎಂದು ಹೇಳಿದನು.ಶೇಮ್ ಯೆಫೆತರಿಗೆ ಸಿಕ್ಕ ಆಶೀರ್ವಾದ, ಕಾನಾನ್ಯರಿಗೆ ದೊರೆತ ಶಾಪ18 ನಾವೆಯಿಂದ ಹೊರಟುಬಂದ ನೋಹನ ಮಕ್ಕಳು ಯಾರೆಂದರೆ ಶೇಮ್, ಹಾಮ್, ಯೆಫೆತ್. ಹಾಮನು ಕಾನಾನನ ತಂದೆಯು.19 ಈ ಮೂವರು ನೋಹನ ಮಕ್ಕಳು. ಇವರಿಂದಲೇ ಜನರು ಉತ್ಪತ್ತಿಯಾಗಿ ಭೂಮಿಯಲ್ಲೆಲ್ಲಾ ಹರಡಿಕೊಂಡರು.

ಆದಿಕಾಂಡ 9

ಸಂಗೀತ ನಿರ್ದೇಶಕರಿಗೆ. “ದಿ ಡೋ ಆಫ್ ದಿ ಮಾರ್ನಿಂಗ್” ರಾಗಕ್ಕೆ. ದಾವೀದನ ಕೀರ್ತನೆ.

ನನ್ನ ದೇವರೇ, ನನ್ನ ದೇವರೇ, ಏಕೆ ನನ್ನನ್ನು ಕೈಬಿಟ್ಟಿದ್ದೀ? ನೀನು ಏಕೆ ನನಗೆ ಸಹಾಯಮಾಡದೆಯೂ, ನನ್ನ ಕೂಗನ್ನು ಕೇಳದೆಯೂ ದೂರವಾಗಿದ್ದೀ?2 ನನ್ನ ದೇವರೇ, ಹಗಲಿನಲ್ಲಿ ಮೊರೆಯಿಡುತ್ತೇನೆ; ಪ್ರತ್ಯುತ್ತರವೇ ಇಲ್ಲ; ರಾತ್ರಿಯಲ್ಲಿಯೂ ನನಗೆ ಉಪಶಮನವಿಲ್ಲ.3 ಇಸ್ರಾಯೇಲರ ಸ್ತೋತ್ರಸಿಂಹಾಸನದಲ್ಲಿ ಇರುವಾತನೇ, ನೀನು ಪವಿತ್ರಸ್ವರೂಪನು.4 ನಮ್ಮ ಪೂರ್ವಿಕರು ನಿನ್ನಲ್ಲಿ ಭರವಸವಿಟ್ಟರು; ನಿನ್ನನ್ನು ನಂಬಿ ಉದ್ಧಾರವಾದರು.5 ನಿನಗೆ ಮೊರೆಯಿಟ್ಟು ವಿಮುಕ್ತರಾದರು; ನಿನ್ನಲ್ಲಿ ವಿಶ್ವಾಸವಿಟ್ಟು ಆಶಾಭಂಗಪಡಲಿಲ್ಲ.6 ನಾನಾದರೋ ಹುಳದಂಥವನೇ ಹೊರತು ಮನುಷ್ಯನಲ್ಲ; ಮನುಷ್ಯರಿಂದ ನಿಂದಿಸಲ್ಪಟ್ಟು ಜನರಿಂದ ತಿರಸ್ಕಾರ ಹೊಂದಿದ್ದೇನೆ.7 ನನ್ನನ್ನು ನೋಡುವವರೆಲ್ಲರೂ ಹಾಸ್ಯಮಾಡುತ್ತಾರೆ; ಅವರು ಓರೇ ತುಟಿ ಮಾಡಿ ತಲೆ ಆಡಿಸುತ್ತಾ,8 “ಯೆಹೋವನು ತನ್ನನ್ನು ರಕ್ಷಿಸುವನೆಂದು ಆತನಲ್ಲಿ ಭರವಸವಿಟ್ಟಿದ್ದಾನಲ್ಲಾ; ಆತನು ಇವನನ್ನು ಮೆಚ್ಚಿದ್ದಾದರೆ ರಕ್ಷಿಸಲಿ” ಎಂದು ಹೇಳುತ್ತಾರೆ.9 ತಾಯಿಯ ಗರ್ಭದೊಳಗಿಂದ ನನ್ನನ್ನು ಬರಮಾಡಿದವನು ನೀನೇ ಅಲ್ಲವೇ. ತಾಯಿಯ ಎದೆಯಲ್ಲಿ ನನ್ನನ್ನು ನಿಶ್ಚಿಂತೆಯಿಂದ ಇರಿಸಿದವನು ನೀನೇ ಅಲ್ಲವೇ.10 ಹುಟ್ಟಿದಂದಿನಿಂದ ನೀನೇ ನನಗೆ ಆಧಾರ; ತಾಯಿ ಹೆತ್ತಂದಿನಿಂದ ನನ್ನ ದೇವರು ನೀನೇ.11 ನನಗೀಗ ಕಷ್ಟವು ಪ್ರಾಪ್ತವಾಗಿದೆ; ಸಹಾಯಕರು ಯಾರೂ ಇಲ್ಲ, ದೂರವಾಗಿರಬೇಡ.12 ಬಹಳ ಗೂಳಿಗಳು ನನ್ನನ್ನು ಸುತ್ತಿಕೊಂಡಿವೆ; ಬಾಷಾನಿನ ಬಲವುಳ್ಳ ಹೋರಿಗಳು ನನ್ನನ್ನು ಮುತ್ತಿಕೊಂಡಿವೆ.13 ಅವರು ಗರ್ಜಿಸುವ ಉಗ್ರಸಿಂಹಗಳಂತೆ ನನ್ನನ್ನು ನುಂಗುವುದಕ್ಕೆ ಬಾಯಿ ತೆರೆದಿದ್ದಾರೆ.14 ನಾನು ಹೊಯ್ಯಲ್ಪಟ್ಟ ನೀರಿನಂತಿದ್ದೇನೆ; ನನ್ನ ಎಲುಬುಗಳೆಲ್ಲಾ ಕೀಲು ತಪ್ಪಿದೆ. ನನ್ನ ಹೃದಯ ಮೇಣದಂತೆ ನನ್ನಲ್ಲಿ ಕರಗಿಹೋಗಿದೆ.15 ನನ್ನ ಶಕ್ತಿಯು ಬೋಕಿಯ ಹಾಗೆ ಒಣಗಿಹೋಗಿದೆ; ನನ್ನ ನಾಲಿಗೆಯು ಬಾಯಿಯ ಅಂಗಳಕ್ಕೆ ಹತ್ತಿಹೋಗಿದೆ. ನೀನು ನನ್ನನ್ನು ಮಣ್ಣಿಗೆ ಸೇರಿಸುತ್ತೀ.16 ನಾಯಿಗಳು ನನ್ನನ್ನು ಸುತ್ತಿಕೊಂಡಿವೆ; ದುಷ್ಟರ ಗುಂಪು ನನ್ನನ್ನು ಆವರಿಸಿಕೊಂಡಿದೆ. ನನ್ನ ಕೈಕಾಲುಗಳನ್ನು ತಿವಿದಿದ್ದಾರೆ.17 ನನ್ನ ಎಲುಬುಗಳನ್ನೆಲ್ಲಾ ಎಣಿಸುವುದಕ್ಕಾಗುವುದು; ಅವರೋ ನನ್ನನ್ನು ನೋಡಿ ನೋಡಿ ಹಿಗ್ಗುತ್ತಾರೆ.18 ನನ್ನ ಮೇಲ್ಹೊದಿಕೆಯನ್ನು ತಮ್ಮಲ್ಲಿ ಪಾಲು ಮಾಡಿಕೊಳ್ಳುತ್ತಾರೆ; ನನ್ನ ಅಂಗಿಗಾಗಿ ಚೀಟುಹಾಕುತ್ತಾರೆ.19 ಯೆಹೋವನೇ, ನನ್ನ ರಕ್ಷಕನೇ, ನೀನಾದರೋ ದೂರವಾಗಿರಬೇಡ; ಬೇಗ ಬಂದು ಸಹಾಯಮಾಡು.20 ಕತ್ತಿಗೆ ಸಿಕ್ಕದಂತೆ ನನ್ನನ್ನು ತಪ್ಪಿಸು; ನನ್ನ ಪ್ರಿಯ ಪ್ರಾಣವು ನಾಯಿಯ ವಶವಾಗದಂತೆ ಕಾಪಾಡು.21 ಸಿಂಹಗಳ ಬಾಯಿಂದ ರಕ್ಷಿಸು, ಕಾಡುಕೋಣಗಳ ಕೊಂಬುಗಳಿಂದ ನನ್ನನ್ನು ತಪ್ಪಿಸು.22 ನಿನ್ನ ನಾಮ ಮಹಿಮೆಯನ್ನು ನನ್ನ ಸಹೋದರರಿಗೆ ತಿಳಿಸುವೆನು; ಸಭಾಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು.23 ಯೆಹೋವನ ಭಕ್ತರೇ, ಆತನನ್ನು ಸ್ತುತಿಸಿರಿ; ಯಾಕೋಬ ವಂಶದವರೇ, ನೀವೆಲ್ಲರೂ ಆತನನ್ನು ಕೊಂಡಾಡಿರಿ. ಇಸ್ರಾಯೇಲ್ ವಂಶಸ್ಥರೇ, ನೀವೆಲ್ಲರೂ ಆತನಲ್ಲಿ ಭಯಭಕ್ತಿಯುಳ್ಳವರಾಗಿರಿ.24 ಆತನು ಕುಗ್ಗಿಹೋದವನ ದುರವಸ್ಥೆಯನ್ನು ತಿರಸ್ಕರಿಸಲಿಲ್ಲ, ಅದಕ್ಕೆ ಅಸಹ್ಯಪಡಲಿಲ್ಲ; ತನ್ನ ಮುಖವನ್ನು ಅವನಿಗೆ ಮರೆಮಾಡದೆ, ಅವನ ಪ್ರಾರ್ಥನೆಗೆ ಕಿವಿಗೊಟ್ಟನು.25 ನಾನು ಮಹಾಸಭೆಯಲ್ಲಿ ಮಾಡುವ ಸ್ತೋತ್ರಕ್ಕೆ ನೀನೇ ಆಧಾರನು; ನನ್ನ ಹರಕೆಗಳನ್ನು ನಿನ್ನ ಭಕ್ತರ ಮುಂದೆ ಸಲ್ಲಿಸುವೆನು.26 ದೀನರು ಉಂಡು ತೃಪ್ತರಾಗುವರು; ಯೆಹೋವನ ಭಕ್ತರೆಲ್ಲರೂ ಆತನನ್ನು ಕೊಂಡಾಡುವರು. ಅವರ ಅಂತರಾತ್ಮವು ಯಾವಾಗಲು ಚೈತನ್ಯವುಳ್ಳದ್ದಾಗಿರಲಿ.27 ಭೂಮಂಡಲದವರೆಲ್ಲರೂ ಎಚ್ಚರಗೊಂಡು ಯೆಹೋವನ ಕಡೆಗೆ ತಿರುಗಿಕೊಳ್ಳುವರು; ಯೆಹೋವನೇ, ಎಲ್ಲಾ ಜನಾಂಗಗಳವರು ನಿನಗೆ ಅಡ್ಡಬೀಳುವರು.28 ರಾಜ್ಯವು ಯೆಹೋವನದೇ; ಎಲ್ಲಾ ಜನಾಂಗಗಳಿಗೂ ಆತನೇ ಒಡೆಯನು.29 ಭೂಲೋಕದಲ್ಲಿರುವ ಪುಷ್ಟರೆಲ್ಲರೂ ಆರಾಧಿಸುವರು; ತಮ್ಮ ಜೀವವನ್ನು ಉಳಿಸಿಕೊಳ್ಳಲಾರದೆ ಮಣ್ಣು ಪಾಲಾಗುವವರೆಲ್ಲರೂ ಆತನಿಗೆ ಅಡ್ಡಬೀಳುವರು.30 ಆತನನ್ನು ಸೇವಿಸುವವರ ಸಂತಾನದವರು ಯೆಹೋವನ ಸಂತಾನದವರೆಂದು ಎಣಿಸಲ್ಪಡವರು.31 ಅವರು ಬಂದು ಆತನ ನೀತಿಯನ್ನೂ, ಆತನು ನಡೆಸಿದ ಕಾರ್ಯಗಳನ್ನೂ ಮುಂದೆ ಹುಟ್ಟುವ ಜನಕ್ಕೆ ತಿಳಿಸುವರು.

ಕೀರ್ತನೆ 22

ಹತ್ತುಮಂದಿ ಕನ್ಯೆಯರ ಸಾಮ್ಯ

 “ಪರಲೋಕ ರಾಜ್ಯವು ತಮ್ಮ ದೀಪಾರತಿಗಳನ್ನು ತೆಗೆದುಕೊಂಡು ಮದಲಿಂಗನನ್ನು ಸಂಧಿಸುವುದಕ್ಕೆ ಹೊರಟಂತಹ ಹತ್ತು ಮಂದಿ ಕನ್ನಿಕೆಯರಿಗೆ ಹೋಲಿಕೆಯಾಗಿದೆ.2 ಅವರಲ್ಲಿ ಐದು ಮಂದಿ ಬುದ್ಧಿವಂತೆಯರು, ಐದು ಮಂದಿ ಬುದ್ಧಿಹೀನರು.3 ಅವಿವೇಕಿಗಳು ತಮ್ಮ ದೀಪಾರತಿಗಳನ್ನು ತೆಗೆದುಕೊಂಡರು, ಆದರೆ ತಮ್ಮೊಂದಿಗೆ ಎಣ್ಣೆಯನ್ನು ತೆಗೆದುಕೊಳ್ಳಲಿಲ್ಲ.4 ಆದರೆ ಬುದ್ಧಿವಂತರಾದ ಕನ್ನಿಕೆಯರು ತಮ್ಮ ದೀಪಾರತಿಗಳೊಂದಿಗೆ ಪಾತ್ರೆಗಳಲ್ಲಿ ಎಣ್ಣೆಯನ್ನೂ ತೆಗೆದುಕೊಂಡರು.5 ಮದಲಿಂಗನು ಬರುವುದಕ್ಕೆ ತಡಮಾಡಲು ಅವರೆಲ್ಲರೂ ತೂಕಡಿಸಿ ನಿದ್ರಿಸಿದರು.6 ಆದರೆ ಅರ್ಧರಾತ್ರಿಯಲ್ಲಿ, ‘ಇಗೋ, ಮದಲಿಂಗನು ಬರುತ್ತಿದ್ದಾನೆ ಅವನನ್ನು ಎದುರುಗೊಳ್ಳಲು ಹೊರಡಿರಿ’ ಎಂಬ ಕೂಗು ಕೇಳಿಸಿತು.7 ಆಗ ಆ ಕನ್ನಿಕೆಯರೆಲ್ಲರು ಎಚ್ಚೆತ್ತು ತಮ್ಮ ದೀಪಾರತಿಗಳನ್ನು ಸರಿಮಾಡಿಕೊಂಡರು.8 ಆಗ ಬುದ್ಧಿಹೀನರಾದ ಕನ್ನಿಕೆಯರು ಬುದ್ಧಿವಂತರಾಗಿದ್ದ ಕನ್ನಿಕೆಯರಿಗೆ, ‘ನಿಮ್ಮ ಎಣ್ಣೆಯಲ್ಲಿ ನಮಗೆ ಸ್ವಲ್ಪ ಕೊಡಿರಿ.9 ಏಕೆಂದರೆ ನಮ್ಮ ದೀಪಗಳು ಆರಿಹೋಗುತ್ತವೆ’ ಎಂದು ಕೇಳಿದರು. ಅದಕ್ಕೆ ಆ ಬುದ್ಧಿವಂತರಾದ ಕನ್ನಿಕೆಯರು, ಆಗುವುದಿಲ್ಲ ‘ನಿಮಗೆ ಕೊಟ್ಟರೆ ನಮಗೂ ನಿಮಗೂ ಸಾಲದೆ ಹೋದೀತು; ನೀವು ಮಾರುವವರ ಬಳಿಗೆ ಹೋಗಿ ಕೊಂಡುಕೊಂಡರೆ ಒಳ್ಳೆಯದು’ ಅಂದರು.10 ಅವರು ಕೊಂಡುಕೊಳ್ಳುವುದಕ್ಕೆ ಹೊರಟುಹೋದಾಗ ಮದಲಿಂಗನು ಬಂದನು. ಸಿದ್ಧವಾಗಿದ್ದವರು ಅವನ ಸಂಗಡ ಮದುವೆಯ ಮನೆಯೊಳಗೆ ಹೋದರು, ಬಾಗಿಲನ್ನು ಮುಚ್ಚಲಾಯಿತು.11 ಅನಂತರ ಉಳಿದ ಕನ್ನಿಕೆಯರು ಸಹ ಬಂದು, ‘ಕರ್ತನೇ, ಕರ್ತನೇ, ನಮಗೆ ಬಾಗಿಲು ತೆರೆಯಿರಿ’ ಅಂದರು.12 ಆದರೆ ಆತನು ಅವರಿಗೆ ಉತ್ತರವಾಗಿ, ‘ನಿಮ್ಮನ್ನು ನಾನರಿಯೆನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ’ ಅಂದನು.13 ಏಕೆಂದರೆ ಆ ದಿನವಾದರೂ ಗಳಿಗೆಯಾದರೂ ನಿಮಗೆ ತಿಳಿಯದು, ಆದಕಾರಣ ಎಚ್ಚರವಾಗಿರಿ.ತಲಾಂತುಗಳ ಸಾಮ್ಯ14 “ದೇವರ ರಾಜ್ಯವು ಹೇಗೆಂದರೆ ದೇಶಾಂತರಕ್ಕೆ ಹೊರಟ್ಟಿದ್ದ ಒಬ್ಬ ಮನುಷ್ಯನು ತನ್ನ ಸೇವಕರನ್ನು ಕರೆದು ಅವರಿಗೆ ತನ್ನ ಆಸ್ತಿಯನ್ನು ಒಪ್ಪಿಸಿಕೊಟ್ಟಂತಿರುವುದು.15 ಅವನು ಒಬ್ಬನಿಗೆ ಐದು ತಲಾಂತು, ಇನ್ನೊಬ್ಬನಿಗೆ ಎರಡು, ಮತ್ತೊಬ್ಬನಿಗೆ ಒಂದು, ಹೀಗೆ ಅವನವನ ಸಾಮರ್ಥ್ಯದ ಪ್ರಕಾರ ತಲಾಂತನ್ನು ವಹಿಸಿಕೊಟ್ಟು ತನ್ನ ಪ್ರಯಾಣಕ್ಕೆ ಹೋದನು.16 ತಕ್ಷಣವೇ ಐದು ತಲಾಂತು ಹೊಂದಿದವನು ಹೋಗಿ ಅದನ್ನು ವ್ಯಾಪಾರಕ್ಕೆ ಹಾಕಿ ಇನ್ನೂ ಐದು ತಲಾಂತು ಗಳಿಸಿಕೊಂಡನು.17 ಹಾಗೆಯೇ ಎರಡು ತಲಾಂತು ಹೊಂದಿದವನು ಇನ್ನೂ ಎರಡು ಸಂಪಾದಿಸಿಕೊಂಡನು.18 ಆದರೆ ಒಂದು ತಲಾಂತು ಹೊಂದಿದವನು ಹೋಗಿ ಭೂಮಿಯನ್ನು ಅಗೆದು ತನ್ನ ಯಜಮಾನನ ಹಣವನ್ನು ಬಚ್ಚಿಟ್ಟನು.19 ಬಹುಕಾಲದ ಮೇಲೆ ಆ ಸೇವಕರ ಯಜಮಾನನು ಬಂದು ಅವರಿಂದ ಲೆಕ್ಕ ತೆಗೆದುಕೊಳ್ಳಲು20 ಐದು ತಲಾಂತುಗಳು ಹೊಂದಿದವನು ಮುಂದೆ ಬಂದು ಇನ್ನೂ ಐದು ತಲಾಂತುಗಳನ್ನು ತಂದು, ‘ಯಜಮಾನನೇ, ನೀನು ಐದು ತಲಾಂತಗಳನ್ನು ನನಗೆ ಕೊಟ್ಟಿದ್ದೆಯಲ್ಲಾ, ಇಗೋ, ಇನ್ನು ಐದು ತಲಾಂತು ಸಂಪಾದಿಸಿದ್ದೇನೆ’ ಅಂದನು.21 ಅವನ ಯಜಮಾನನು ಅವನಿಗೆ, ‘ಭಲಾ, ನಂಬಿಗಸ್ತನಾದ ಒಳ್ಳೆಯ ಸೇವಕನೇ; ನೀನು ಸ್ವಲ್ಪ ಕೆಲಸದಲ್ಲಿ ಪ್ರಾಮಾಣಿಕನಾಗಿದ್ದಿ; ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ; ನಿನ್ನ ಒಡೆಯನ ಸಂತೋಷದಲ್ಲಿ ಸೇರು’ ಅಂದನು.22 ಆಗ ಎರಡು ತಲಾಂತು ಹೊಂದಿದವನು ಮುಂದೆ ಬಂದು, ‘ಯಜಮಾನನೇ, ನೀನು ಎರಡು ತಲಾಂತನ್ನು ನನಗೆ ಒಪ್ಪಿಸಿದ್ದೆಯಲ್ಲಾ; ಇಗೋ, ಇನ್ನು ಎರಡು ತಲಾಂತು ಸಂಪಾದಿಸಿದ್ದೇನೆ’ ಅಂದನು.23 ಅವನ ಯಜಮಾನನು ಅವನಿಗೆ, ‘ಭಲಾ, ನಂಬಿಗಸ್ತನಾದ ಒಳ್ಳೆಯ ಸೇವಕನೇ; ನೀನು ಸ್ವಲ್ಪ ಕೆಲಸದಲ್ಲಿ ಪ್ರಾಮಾಣಿಕನಾಗಿದ್ದಿ, ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ; ನಿನ್ನ ಒಡೆಯನ ಸಂತೋಷದಲ್ಲಿ ಸೇರು’ ಎಂದು ಹೇಳಿದನು.24 ತರುವಾಯ ಒಂದು ತಲಾಂತು ಹೊಂದಿದವನು ಸಹ ಮುಂದೆಬಂದು, ‘ಯಜಮಾನನೇ, ನೀನು ಬಿತ್ತದಿರುವಲ್ಲಿ ಕೊಯ್ಯುವವನು, ನೀನು ತೂರದಿರುವಲ್ಲಿ ರಾಶಿಮಾಡಿಕೊಳ್ಳುವವನು ಆಗಿರುವ ಕಠಿಣ ಮನುಷ್ಯನು ಎಂದು ನಾನು ತಿಳಿದು25 ಹೆದರಿ, ಹೊರಟುಹೋಗಿ ನಿನ್ನ ತಲಾಂತನ್ನು ಭೂಮಿಯಲ್ಲಿ ಬಚ್ಚಿಟ್ಟೆನು; ಇಗೋ, ನಿನ್ನದು ನಿನಗೇ ಸಲ್ಲಿಸುತ್ತಿದ್ದೇನೆ’ ಅಂದನು.26 ಆಗ ಅವನ ಯಜಮಾನನು ಅವನಿಗೆ, ‘ಮೈಗಳ್ಳನಾದ ದುಷ್ಟ ಸೇವಕನೇ; ನೀನು ನನ್ನನ್ನು ಬಿತ್ತದಿರುವಲ್ಲಿ ಕೊಯ್ಯುವವನು ತೂರದಿರುವಲ್ಲಿ ರಾಶಿಮಾಡಿಕೊಳ್ಳುವವನು ಎಂದು ತಿಳಿದಿದ್ದೇಯಾ?27 ಹಾಗಾದರೆ, ನೀನು ನನ್ನ ಹಣವನ್ನು ಸಾಹುಕಾರರಲ್ಲಿ ಬಡ್ಡಿಗೆ ಹಾಕಬೇಕಾಗಿತ್ತು; ನಾನು ಬಂದು ನನ್ನದನ್ನು ಬಡ್ಡಿ ಸಹಿತ ಪಡೆದುಕೊಳ್ಳುತ್ತಿದ್ದೆನು ಎಂದು ಹೇಳಿ,28 ಅವನಿಂದ ಆ ತಲಾಂತನ್ನು ತೆಗೆದು ಹತ್ತು ತಲಾಂತು ಇರುವ ಸೇವಕನಿಗೆ ಕೊಟ್ಟನು.29 ಇದ್ದವರಿಗೆ ಇನ್ನೂ ಹೆಚ್ಚಾಗಿ ಕೊಡಲ್ಪಡುವುದು, ಅವರಿಗೆ ಇನ್ನೂ ಹೆಚ್ಚಾಗುವುದು; ಇಲ್ಲದವನ ಕಡೆಯಿಂದ ಇದ್ದದ್ದೂ ತೆಗೆಯಲ್ಪಡುವುದು.30 ಮತ್ತು ನಿಷ್ಪ್ರಯೋಜಕನಾದ ಈ ಸೇವಕನನ್ನು ಹೊರಗೆ ಕಗ್ಗತ್ತಲೆಗೆ ಹಾಕಿಬಿಡಿರಿ ಎಂದು ಅಪ್ಪಣೆಕೊಟ್ಟನು. ಅಲ್ಲಿ ಗೋಳಾಟವೂ ಕಟಕಟನೆ ಹಲ್ಲುಕಡಿಯೋಣವೂ ಇರುವವು.’31 “ಇದಲ್ಲದೆ ಮನುಷ್ಯಕುಮಾರನು ತನ್ನ ಮಹಿಮೆಯಿಂದ ಸಮಸ್ತ ದೇವದೂತರೊಂದಿಗೆ ಬರುವಾಗ ತನ್ನ ಮಹಿಮೆಯ ಸಿಂಹಾಸನದಲ್ಲಿ ಕುಳಿತುಕೊಳ್ಳುವನು;32 ಆಗ ಎಲ್ಲಾ ದೇಶಗಳ ಜನರನ್ನೂ ಆತನ ಸಮ್ಮುಖದಲ್ಲಿ ತಂದು ಸೇರಿಸುವರು. ಕುರುಬನು ಕುರಿಗಳನ್ನೂ, ಆಡುಗಳನ್ನೂ ಬೇರ್ಪಡಿಸುವ ಪ್ರಕಾರ ಆತನು ಅವರನ್ನು ಬೇರ್ಪಡಿಸುವನು.33 ಕುರಿಗಳನ್ನು ತನ್ನ ಬಲಗಡೆಯಲ್ಲಿ ಮತ್ತು ಆಡುಗಳನ್ನು ಎಡಗಡೆಯಲ್ಲಿ ನಿಲ್ಲಿಸುವನು.34 ಆಗ ಅರಸನು ತನ್ನ ಬಲಗಡೆಯಲ್ಲಿರುವವರಿಗೆ, ‘ನನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವತ್ತಾಗಿ ಪಡೆದುಕೊಳ್ಳಿರಿ.35 ನಾನು ಹಸಿದಿದ್ದೆನು, ನನಗೆ ಊಟ ಕೊಟ್ಟಿರಿ; ನಾನು ಬಾಯಾರಿದ್ದೆನು, ನನಗೆ ಕುಡಿಯುವುದಕ್ಕೆ ಕೊಟ್ಟಿರಿ; ಪರದೇಶಿಯಾಗಿದ್ದೆನು, ನನಗೆ ಆಶ್ರಯ ಕೊಟ್ಟಿರಿ;36 ಬಟ್ಟೆಯಿಲ್ಲದವನಾಗಿದ್ದೆನು, ನನಗೆ ಉಡುವುದಕ್ಕೆ ಕೊಟ್ಟಿರಿ; ಅಸ್ವಸ್ಥನಾಗಿದ್ದಾಗ, ನನ್ನನ್ನು ಆರೈಕೆ ಮಾಡಿದಿರಿ; ಸೆರೆಮನೆಯಲ್ಲಿದ್ದೆನು, ನನ್ನನ್ನು ನೋಡುವುದಕ್ಕೆ ಬಂದಿರಿ’ ಎಂದು ಹೇಳುವನು.37 ಅದಕ್ಕೆ ಉತ್ತರವಾಗಿ ನೀತಿವಂತರು, ‘ಕರ್ತನೇ, ಯಾವಾಗ ನೀನು ಹಸಿದಿದ್ದನ್ನು ಕಂಡು ನಿನಗೆ ಊಟ ಕೊಟ್ಟೆವು? ಇಲ್ಲವೆ ನೀನು ಬಾಯಾರಿದ್ದನ್ನು ಕಂಡು ಕುಡಿಯುವುದಕ್ಕೆ ಕೊಟ್ಟೆವು?38 ಯಾವಾಗ ನೀನು ಪರದೇಶಿಯಾಗಿರುವುದನ್ನು ಕಂಡು ಆಶ್ರಯ ನೀಡಿದೆವು? ಇಲ್ಲವೆ ನಿನಗೆ ಬಟ್ಟೆಯಿಲ್ಲದ್ದನ್ನು ಕಂಡು ಉಡುವುದಕ್ಕೆ ಕೊಟ್ಟೆವು?39 ಯಾವಾಗ ನೀನು ಅಸ್ವಸ್ಥನಾಗಿದ್ದಾಗ ಅಥವಾ ಸೆರೆಮನೆಯಲ್ಲಿ ಇದ್ದುದನ್ನು ಕಂಡು ನಿನ್ನನ್ನು ನೋಡುವುದಕ್ಕೆ ಬಂದೆವು’ ಎಂದು ಕೇಳುವರು.40 ಅದಕ್ಕೆ ಉತ್ತರವಾಗಿ ಅರಸನು, ‘ಈ ನನ್ನ ಸಹೋದರರಲ್ಲಿ ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದಿರೋ ಅದನ್ನು ನನಗೂ ಮಾಡಿದ ಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ’ ಅನ್ನುವನು.41 ಆ ಮೇಲೆ ಆತನು ಎಡಗಡೆಯಲ್ಲಿರುವವರಿಗೆ, ‘ಶಾಪಗ್ರಸ್ತರೇ, ನನ್ನನ್ನು ಬಿಟ್ಟು ಪಿಶಾಚಿಗೂ ಅವನ ದೂತರಿಗೂ ಸಿದ್ಧಮಾಡಿರುವ ನಿತ್ಯ ಬೆಂಕಿಯೊಳಕ್ಕೆ ಹೋಗಿರಿ.42 ನಾನು ಹಸಿದಿದ್ದೆನು, ನೀವು ನನಗೆ ಊಟ ಕೊಡಲಿಲ್ಲ; ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವುದಕ್ಕೆ ಕೊಡಲಿಲ್ಲ.43 ಪರದೇಶಿಯಾಗಿದ್ದೆನು, ನೀವು ನನಗೆ ಆಶ್ರಯ ಕೊಡಲಿಲ್ಲ; ಬಟ್ಟೆಯಿಲ್ಲದವನಾಗಿದ್ದೆನು, ನೀವು ನನಗೆ ಉಡುವುದಕ್ಕೆ ಕೊಡಲಿಲ್ಲ; ಅಸ್ವಸ್ಥನಾಗಿದ್ದೆನು, ಸೆರೆಮನೆಯಲ್ಲಿದ್ದೆನು, ನೀವು ನನ್ನನ್ನು ಆರೈಕೆಮಾಡುವುದಕ್ಕೆ ಬರಲಿಲ್ಲವೆಂದು’ ಹೇಳುವನು.44 ಅದಕ್ಕೆ ಉತ್ತರವಾಗಿ ಅವರೂ ಸಹ, ‘ಕರ್ತನೇ, ಯಾವಾಗ ನೀನು ಹಸಿದಿದ್ದನ್ನೂ, ನೀನು ಬಾಯಾರಿದ್ದನ್ನೂ, ನೀನು ಪರದೇಶಿಯಾಗಿದ್ದನ್ನೂ, ಬಟ್ಟೆಯಿಲ್ಲದವನಾಗಿದ್ದನ್ನೂ, ಅಸ್ವಸ್ಥನಾಗಿದ್ದುದನ್ನೂ, ಸೆರೆಮನೆಯಲ್ಲಿದ್ದುದನ್ನೂ ಕಂಡು ನಿನಗೆ ಉಪಚಾರಮಾಡದೆ ಹೋದೆವು?’ ಅನ್ನುವರು.45 ಆಗ ಆತನು ಉತ್ತರವಾಗಿ ಅವರಿಗೆ, ‘ನೀವು ಈ ಕೇವಲ ಅಲ್ಪರಾದವರಲ್ಲಿ ಒಬ್ಬನಿಗೆ ಏನನ್ನು ಮಾಡದೆ ಹೋದಿರೋ ಅದನ್ನು ನನಗೂ ಮಾಡದೆ ಹೋದ ಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ’ ಅನ್ನುವನು.46 ಮತ್ತು ಅನೀತಿವಂತರಾದ ಇವರು ನಿತ್ಯದಂಡನೆಗೆ ಹೋಗುವರು ಆದರೆ ನೀತಿವಂತರು ನಿತ್ಯಜೀವಕ್ಕೆ ಹೋಗುವರು” ಎಂದು ಹೇಳಿದನು.

ಮ್ಯಾಥ್ಯೂ 25

ಯೇಸು ಅರಸನಂತೆ ಯೆರೂಸಲೇಮಿನಲ್ಲಿ ಪ್ರವೇಶಿಸಿದ್ದು

 ಯೇಸು ಮತ್ತು ಆತನ ಶಿಷ್ಯರು ಯೆರೂಸಲೇಮಿಗೆ ಸಮೀಪಿಸಿ ಆಲಿವ್ ಎಣ್ಣೆಯ ಮರಗಳ ಗುಡ್ಡದ ಬಳಿಯಲ್ಲಿರುವ ಬೇತ್ಫಗೆಗೆ ಬಂದಾಗ2 ಆತನು ಇಬ್ಬರು ಶಿಷ್ಯರನ್ನು ಕರೆದು, “ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ; ಹೋದಕೂಡಲೆ ಅಲ್ಲಿ ಕಟ್ಟಿರುವ ಕತ್ತೆಯನ್ನೂ ಅದರೊಂದಿಗೆ ಇರುವ ಮರಿಯನ್ನೂ ಕಾಣುವಿರಿ; ಅವುಗಳನ್ನು ಬಿಚ್ಚಿ ನನ್ನ ಹತ್ತಿರಕ್ಕೆ ತನ್ನಿರಿ.3 ಯಾವನಾದರೂ ನಿಮಗೆ ಏನಾದರೂ ಹೇಳಿದರೆ, ‘ಇವು ನಮ್ಮ ಕರ್ತನಿಗೆ ಬೇಕಾಗಿವೆ’ ಎಂದು ನೀವು ಹೇಳಿರಿ; ಅವನು ಕೂಡಲೆ ಅವುಗಳನ್ನು ಬಿಟ್ಟು ಕೊಡುವನು” ಎಂದು ಹೇಳಿ ಕಳುಹಿಸಿದನು.4 ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರುವಂತೆ ಇದಾಯಿತು; ಅದೇನೆಂದರೆ,5 “ಚೀಯೋನ್ ಪುತ್ರಿಯೇ, ನೋಡು, ನಿನ್ನ ಅರಸನು ನಿನ್ನ ಬಳಿಗೆ ಬರುತ್ತಿದ್ದಾನೆ; ಆತನು ಸಾತ್ವಿಕ ಗುಣವುಳ್ಳವನಾಗಿಯೂ ಕತ್ತೆಯನ್ನು, ಹೌದು ಕತ್ತೆಮರಿಯನ್ನು ಹತ್ತಿದವನಾಗಿಯೂ ಬರುತ್ತಾನೆಂದು” ಹೇಳಿರಿ ಎಂಬುದು.6 ಆಗ ಶಿಷ್ಯರು ಹೋಗಿ ಯೇಸು ತಮಗೆ ಅಪ್ಪಣೆಕೊಟ್ಟಂತೆಯೇ ಮಾಡಿದರು.7 ಕತ್ತೆಯನ್ನೂ ಮರಿಯನ್ನೂ ತಂದು ಅವುಗಳ ಮೇಲೆ ತಮ್ಮ ಬಟ್ಟೆಗಳನ್ನು ಹಾಕಲು ಯೇಸು ಹತ್ತಿ ಕುಳಿತುಕೊಂಡನು.8 ಆಗ ಜನರ ಗುಂಪಿನಲ್ಲಿ ಬಹಳ ಮಂದಿ ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು; ಬೇರೆ ಕೆಲವರು ಮರಗಳಿಂದ ರೆಂಬೆಗಳನ್ನು ಕಡಿದು ದಾರಿಯಲ್ಲಿ ಹರಡಿದರು.9 ಆತನ ಹಿಂದೆ ಮುಂದೆ ಗುಂಪಾಗಿ ಹೋಗುತ್ತಿದ್ದ ಜನರು, “ದಾವೀದನ ಕುಮಾರನಿಗೆ ಹೊಸನ್ನ! ಕರ್ತನ ಹೆಸರಿನಲ್ಲಿ ಬರುವವನು ಧನ್ಯನು! ಮೇಲಣ ಲೋಕಗಳಲ್ಲಿ ಹೊಸನ್ನ!” ಎಂದು ಆರ್ಭಟಿಸಿದರು.10 ಯೇಸು ಯೆರೂಸಲೇಮನ್ನು ಪ್ರವೇಶಿಸಲು ಪಟ್ಟಣದಲ್ಲೆಲ್ಲಾ ಗದ್ದಲವಾಗಿ, “ಈತನು ಯಾರು?” ಅಂದರು.11 ಅದಕ್ಕೆ ಆ ಗುಂಪಿನ ಜನರು, “ಈತನು ಗಲಿಲಾಯದ ನಜರೇತಿನ ಪ್ರವಾದಿಯಾದ ಯೇಸು” ಅಂದರು.ಯೇಸು ದೇವಾಲಯದಲ್ಲಿದ್ದ ವ್ಯಾಪಾರಸ್ಥರನ್ನು ಹೊರಡಿಸಿದ್ದು; ಆತನ ಮಾತಿಗೆ ಅಂಜೂರದ ಮರವು ಒಣಗಿಹೋದದ್ದು12 ಬಳಿಕ ಯೇಸು ದೇವಾಲಯದೊಳಗೆ ಹೋಗಿ ಅದರಲ್ಲಿ ಮಾರುವ ಕೊಳ್ಳುವ ಎಲ್ಲರನ್ನೂ ಹೊರಡಿಸಿಬಿಟ್ಟು ಹಣ ವಿನಿಮಯದಾರರ ಮೇಜುಗಳನ್ನೂ ಪಾರಿವಾಳ ಮಾರುವವರ ಕಾಲ್ಮಣೆಗಳನ್ನೂ ಕೆಡವಿಹಾಕಿದನು.13 ಆತನು ಅವರಿಗೆ, “‘ನನ್ನ ಮನೆಯು ಪ್ರಾರ್ಥನಾಲಯವಾಗಿದೆ’ ಎಂದು ಬರೆದಿದೆ; ಆದರೆ ನೀವು ಅದನ್ನು ಕಳ್ಳರ ಗವಿ ಮಾಡುತ್ತಿದ್ದೀರಿ” ಎಂದು ಹೇಳಿದನು.14 ಆಗ ಅಲ್ಲಿದ್ದ ಕುರುಡರೂ ಕುಂಟರೂ ದೇವಾಲಯದಲ್ಲಿ ಆತನ ಬಳಿಗೆ ಬರಲು ಆತನು ಅವರನ್ನು ಸ್ವಸ್ಥಮಾಡಿದನು.15 ಆದರೆ ಮುಖ್ಯಯಾಜಕರೂ ಶಾಸ್ತ್ರಿಗಳೂ ಆತನು ಮಾಡಿದ ಆಶ್ಚರ್ಯಕರವಾದ ಕಾರ್ಯಗಳನ್ನು ನೋಡಿ ಹಾಗು “ದಾವೀದನ ಕುಮಾರನಿಗೆ ಹೊಸನ್ನ” ಎಂದು ದೇವಾಲಯದಲ್ಲಿ ಹುಡುಗರು ಕೂಗುತ್ತಿರುವುದನ್ನು ಕೇಳಿ ಕೋಪಗೊಂಡರು.16 ಆತನಿಗೆ, “ಇವರು ಹೇಳುವುದನ್ನು ಕೇಳುತ್ತಿರುವೆಯಾ” ಎಂದು ಹೇಳಲು ಯೇಸು, “ಹೌದು, ಕೇಳುತ್ತಿದ್ದೇನೆ, ಆದರೆ ‘ಸಣ್ಣ ಮಕ್ಕಳ ಬಾಯಿಂದಲೂ ಮೊಲೆಕೂಸುಗಳ ಬಾಯಿಂದಲೂ ನೀನು ಸ್ತೋತ್ರವನ್ನು ಸಿದ್ಧಿಗೆ ತಂದಿರುವಿ’ ಎಂಬುದನ್ನು ನೀವು ಎಂದಾದರೂ ಓದಲಿಲ್ಲವೋ?” ಎಂದು ಕೇಳಿದನು.17 ಬಳಿಕ ಅವರನ್ನು ಬಿಟ್ಟು ಪಟ್ಟಣದಿಂದ ಹೊರಟು ಬೇಥಾನ್ಯಕ್ಕೆ ಬಂದು ಅಲ್ಲಿ ರಾತ್ರಿ ಮಲಗಿದನು.18 ಬೆಳಗ್ಗೆ ಯೇಸು ಪಟ್ಟಣಕ್ಕೆ ಹಿಂತಿರುಗಿ ಬರುತ್ತಿರುವಾಗ ಹಸಿದಿದ್ದನು.19 ದಾರಿಯಲ್ಲಿ ಒಂದು ಅಂಜೂರದ ಮರವನ್ನು ಕಂಡು ಅದರ ಹತ್ತಿರಕ್ಕೆ ಹೋಗಿ ಅದರಲ್ಲಿ ಬರೀ ಎಲೆಗಳು ಮಾತ್ರ ಇರುವುದನ್ನು ಕಂಡು ಅದಕ್ಕೆ, “ಇನ್ನು ಮೇಲೆ ನಿನ್ನಲ್ಲಿ ಎಂದೆಂದಿಗೂ ಫಲವು ಫಲಿಸದೆ ಹೋಗಲಿ” ಎಂದು ಹೇಳಿದನು. ಆ ಕ್ಷಣವೇ ಆ ಅಂಜೂರದ ಮರವು ಒಣಗಿಹೋಯಿತು.20 ಶಿಷ್ಯರು ಅದನ್ನು ನೋಡಿ ಬೆರಗಾಗಿ, “ಈ ಅಂಜೂರದ ಮರವು ಒಂದು ಕ್ಷಣದಲ್ಲೇ ಒಣಗಿಹೋಯಿತಲ್ಲಾ” ಎಂದು ಆಶ್ಚರ್ಯಗೊಂಡರು.21 ಅದಕ್ಕೆ ಯೇಸು, “ನಿಮಗೆ ಸತ್ಯವಾಗಿ ಹೇಳುತ್ತೇನೆ ನೀವು ಸಂಶಯಪಡದೆ ನಂಬಿದರೆ ಈ ಅಂಜೂರದ ಮರಕ್ಕೆ ಮಾಡಿದಂಥದನ್ನು ನೀವು ಮಾಡುವಿರಿ ಮಾತ್ರವಲ್ಲದೆ ಈ ಬೆಟ್ಟಕ್ಕೆ, ‘ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು’ ಎಂದು ಹೇಳಿದರೆ ಅದೂ ಆಗುವುದು.22 ನೀವು ನಂಬಿಕೊಂಡು ಪ್ರಾರ್ಥನೆಯಲ್ಲಿ ಏನೇನು ಬೇಡಿಕೊಳ್ಳುವಿರೋ ಅದನ್ನೆಲ್ಲಾ ಹೊಂದುವಿರಿ” ಅಂದನು.ಶಾಸ್ತ್ರಿಗಳು ಯೇಸುವಿನ ಅಧಿಕಾರವನ್ನು ಪ್ರಶ್ನೇ ಮಾಡಿದ್ದು23 ತರುವಾಯ ಯೇಸು ದೇವಾಲಯಕ್ಕೆ ಬಂದು ಬೋಧಿಸುತ್ತಿರುವಾಗ ಮುಖ್ಯಯಾಜಕರೂ ಜನರ ಹಿರಿಯರೂ ಆತನ ಬಳಿಗೆ ಬಂದು, “ನೀನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತಿರುವೆ? ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು?” ಎಂದು ಕೇಳಿದರು.24 ಯೇಸು ಅವರಿಗೆ ಹೇಳಿದ್ದೇನೆಂದರೆ, “ನಾನೂ ಸಹ ನಿಮ್ಮನ್ನು ಒಂದು ಪ್ರಶ್ನೆ ಕೇಳುತ್ತೇನೆ; ಅದಕ್ಕೆ ನೀವು ನನಗೆ ಉತ್ತರಿಸಿದರೆ ಆಗ ನಾನು ಯಾವ ಅಧಿಕಾರದಿಂದ ಇದನ್ನು ಮಾಡುತ್ತೇನೆಂಬುದನ್ನು ನಿಮಗೆ ಹೇಳುತ್ತೇನೆ.25 ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ಎಲ್ಲಿಂದ ಬಂದಿತು ಪರಲೋಕದಿಂದಲೋ ಅಥವಾ ಮನುಷ್ಯರಿಂದಲೋ?” ಅಂದನು. ಆಗ ಅವರು, “‘ಪರಲೋಕದಿಂದ ಬಂದಿತೆಂದು’ ನಾವು ಹೇಳಿದರೆ, ‘ಹಾಗಾದರೆ ನೀವು ಅವನನ್ನು ಏಕೆ ನಂಬಲಿಲ್ಲ’ ಎಂದು ನಮಗೆ ಕೇಳಿಯಾನು;26 ‘ಮನುಷ್ಯರಿಂದ ಬಂದಿತೆಂದು’ ಹೇಳಿದರೆ, ನಮಗೆ ಜನರ ಭಯವಿದೆ ಯೋಹಾನನು ಪ್ರವಾದಿಯೆಂದು ಎಲ್ಲರೂ ಒಪ್ಪಿಕೊಂಡಿದ್ದಾರಲ್ಲಾ” ಎಂಬುದಾಗಿ ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು.27 ಅನಂತರ ಅವರು, “ನಾವರಿಯೆವು” ಎಂದು ಯೇಸುವಿಗೆ ಉತ್ತರಕೊಟ್ಟರು. ಆಗ ಆತನು ಅವರಿಗೆ, “ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೋ ಅದನ್ನು ನಾನು ಸಹ ನಿಮಗೆ ಹೇಳುವುದಿಲ್ಲ.28 ಆದರೆ ನಿಮಗೆ ಹೇಗೆ ತೋರುತ್ತದೆ? ಒಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು. ಅವನು ಮೊದಲನೆಯವನ ಬಳಿಗೆ ಬಂದು, ‘ಮಗನೇ, ನೀನು ಹೋಗಿ ಈ ದಿನ ದ್ರಾಕ್ಷಾತೋಟದಲ್ಲಿ ಕೆಲಸ ಮಾಡು’ ಎಂದು ಹೇಳಲು29 ಅವನು ಪ್ರತ್ಯುತ್ತರವಾಗಿ, ‘ನಾನು ಹೋಗುವುದಿಲ್ಲವೆಂದು’ ಹೇಳಿದ್ದಾಗ್ಯೂ ತರುವಾಯ ತನ್ನ ಮನಸ್ಸನ್ನು ಬದಲಿಸಿ, ತೋಟಕ್ಕೆ ಹೋದನು.30 ಆಮೇಲೆ ಎರಡನೆಯವನ ಬಳಿಗೆ ಬಂದು ಅದೇ ಮಾತನ್ನು ಹೇಳಿದಾಗ ಅವನು, ‘ನಾನು ಹೋಗುತ್ತೇನಪ್ಪಾ’ ಎಂದು ಹೇಳಿದರೂ ಅವನು ಹೋಗಲೇ ಇಲ್ಲ.31 ಅವರಿಬ್ಬರಲ್ಲಿ ತಂದೆಯ ಚಿತ್ತದಂತೆ ನಡೆದವನು ಯಾರು? ಎಂದು ಕೇಳಿದ್ದಕ್ಕೆ ಅವರು, ‘ಮೊಲನೆಯವನೇ’” ಅಂದರು. ಆಗ ಯೇಸು ಅವರಿಗೆ, ಸುಂಕದವರೂ, ವೇಶ್ಯೆಯರೂ ನಿಮಗಿಂತ ಮೊದಲು ದೇವರ ರಾಜ್ಯವನ್ನು ಸೇರುವರು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.32 ಯಾಕೆಂದರೆ, ಯೋಹಾನನು ನೀತಿಮಾರ್ಗವನ್ನು ಬೋಧಿಸುವವನಾಗಿ ನಿಮ್ಮ ಬಳಿಗೆ ಬಂದನು. ನೀವು ಅವನನ್ನು ನಂಬಲಿಲ್ಲ; ಸುಂಕದವರು, ವೇಶ್ಯೆಯರು ಅವನನ್ನು ನಂಬಿದರು; ನೀವು ಇದನ್ನು ನೋಡಿದ್ದಾಗ್ಯೂ ಪಶ್ಚಾತ್ತಾಪ ಪಡಲಿಲ್ಲ, ಅವನನ್ನು ನಂಬಲಿಲ್ಲ.

ಮತ್ತಾಯ 21:23

33 “ಮತ್ತೊಂದು ಸಾಮ್ಯವನ್ನು ಕೇಳಿರಿ, ಒಬ್ಬ ಮನೆಯ ಯಜಮಾನನಿದ್ದನು. ಅವನು ಒಂದು ದ್ರಾಕ್ಷಾತೋಟವನ್ನು ನೆಟ್ಟು ಅದರ ಸುತ್ತಲೂ ಬೇಲಿಹಾಕಿಸಿ, ಅದರಲ್ಲಿ ದ್ರಾಕ್ಷಿಯ ಗಾಣವನ್ನು ಹಾಕಿಸಿ, ಕಾವಲು ಗೋಪುರವನ್ನು ಕಟ್ಟಿಸಿ, ದ್ರಾಕ್ಷಿಯ ತೋಟಗಾರರಿಗೆ ಅದನ್ನು ಗುತ್ತಿಗೆಗೆ ಕೊಟ್ಟು, ಅವನು ಬೇರೊಂದು ದೇಶಕ್ಕೆ ಹೋದನು.34 ಫಲಕಾಲ ಹತ್ತಿರವಾದಾಗ ತನಗೆ ಬರಬೇಕಾದ ಹಣ್ಣುಗಳನ್ನು ತೆಗೆದುಕೊಂಡು ಬರುವುದಕ್ಕಾಗಿ ಆ ತೋಟಗಾರರ ಬಳಿಗೆ ತನ್ನ ಆಳುಗಳನ್ನು ಕಳುಹಿಸಲು,35 ತೋಟಗಾರರು ಅವನ ಆಳುಗಳನ್ನು ಹಿಡಿದು ಒಬ್ಬನನ್ನು ಹೊಡೆದರು, ಮತ್ತೊಬ್ಬನನ್ನು ಕಡಿದು ಹಾಕಿದರು, ಇನ್ನೊಬ್ಬನನ್ನು ಕಲ್ಲೆಸೆದು ಕೊಂದರು.36 ಆ ಯಜಮಾನನು ಪುನಃ ಮೊದಲಿನವರಿಗಿಂತ ಹೆಚ್ಚು ಮಂದಿ ಆಳುಗಳನ್ನು ಕಳುಹಿಸಿದನು, ಅವರು ಅವರಿಗೂ ಹಾಗೆಯೇ ಮಾಡಿದರು.37 ಕಡೆಯಲ್ಲಿ ‘ನನ್ನ ಮಗನಿಗಾದರೂ ಮರ್ಯಾದೆ ತೋರಿಸಾರು’ ಅಂದುಕೊಂಡು ತನ್ನ ಮಗನನ್ನು ಅವರ ಬಳಿಗೆ ಕಳುಹಿಸಿದನು.38 ಆದರೆ ಆ ತೋಟಗಾರರು ಅವನ ಮಗನನ್ನು ಕಂಡು, ‘ಇವನೇ ಉತ್ತರಾಧಿಕಾರಿ, ಬನ್ನಿ ಇವನನ್ನು ಕೊಂದು ಹಾಕೋಣ, ಇವನ ಸ್ವತ್ತನ್ನು ನಾವೇ ತೆಗೆದುಕೊಳ್ಳೋಣ’ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡು39 ಅವನನ್ನು ಹಿಡಿದು ದ್ರಾಕ್ಷಾತೋಟದಿಂದ ಹೊರಕ್ಕೆ ದೊಬ್ಬಿ ಕೊಂದು ಹಾಕಿದರು.40 ಹಾಗಾದರೆ ದ್ರಾಕ್ಷಾತೋಟದ ಧಣಿಯು ಬಂದಾಗ ಆ ತೋಟಗಾರರಿಗೆ ಏನು ಮಾಡುವನು?” ಅಂದನು.41 ಅವರು ಆತನಿಗೆ, “ಆ ಕೆಡುಕರನ್ನು ಕ್ರೂರವಾಗಿ ಸಂಹರಿಸಿ ತಕ್ಕಕಾಲಕ್ಕೆ ಹಣ್ಣುಗಳನ್ನು ತನಗೆ ಸಲ್ಲಿಸುವಂಥ ಬೇರೆ ತೋಟಗಾರರಿಗೆ ತನ್ನ ತೋಟವನ್ನು ಗುತ್ತಿಗೆಗೆ ಕೊಡುವನು” ಎಂದು ಹೇಳಿದರು.42 ಯೇಸು ಅವರಿಗೆ, “‘ಮನೆ ಕಟ್ಟುವವರು ಬೇಡವೆಂದು ತಿರಸ್ಕರಿಸಲ್ಪಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು; ಇದು ಕರ್ತನಿಂದಲೇ ಆಯಿತು; ಮತ್ತು ನಮ್ಮ ಕಣ್ಣುಗಳಿಗೆ ಅದು ಆಶ್ಚರ್ಯವಾಗಿ ತೋರುತ್ತದೆ ಎಂಬ ಮಾತನ್ನು ನೀವು ಶಾಸ್ತ್ರದಲ್ಲಿ ಎಂದಾದರೂ ಓದಲಿಲ್ಲವೋ?’43 ಆದುದರಿಂದ ದೇವರ ರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಾಂಗಕ್ಕೆ ಕೊಡಲಾಗುವುದು.44 ಈ ಕಲ್ಲಿನ ಮೇಲೆ ಬೀಳುವವನು ತುಂಡು ತುಂಡಾಗುವನು; ಇದು ಯಾರ ಮೇಲೆ ಬೀಳುತ್ತದೋ ಅದು ಅವನನ್ನು ಪುಡಿಪುಡಿ ಮಾಡುವುದು” ಎಂದು ಹೇಳಿದನು.45 ಮುಖ್ಯಯಾಜಕರೂ ಫರಿಸಾಯರೂ ಆತನ ಸಾಮ್ಯಗಳನ್ನು ಕೇಳಿ ತಮ್ಮನ್ನೇ ಕುರಿತು ಮಾತನಾಡುತ್ತಿದ್ದಾನೆಂದು ತಿಳಿದುಕೊಂಡು. ಯೇಸುವನ್ನು ಬಂಧಿಸಲು ಸಂದರ್ಭ ನೋಡುತ್ತಿದ್ದರು;46 ಆದರೆ ಅವರು ಆತನನ್ನು ಬಂಧಿಸುವುದಕ್ಕೆ ಪ್ರಯತ್ನಿಸಿದರೂ ಜನರು ಆತನನ್ನು ಪ್ರವಾದಿಯೆಂದು ಎಣಿಸಿದ್ದರಿಂದ ಅವರಿಗೆ ಭಯಪಟ್ಟರು.

ಯೇಸು ಶಾಸ್ತ್ರಿಗಳನ್ನೂ ಫರಿಸಾಯರನ್ನೂ ಗದರಿಸಿದ್ದು; ಯೆರೂಸಲೇಮಿನ ವಿಷಯದಲ್ಲಿ ದುಃಖಪಟ್ಟದ್ದು

23 ತರುವಾಯ ಯೇಸು ಜನರ ಗುಂಪಿಗೂ ಹಾಗು ತನ್ನ ಶಿಷ್ಯರಿಗೂ ಹೇಳಿದ್ದೇನೆಂದರೆ,2 “ಶಾಸ್ತ್ರಿಗಳೂ ಫರಿಸಾಯರೂ ಮೋಶೆಯ ಸ್ಥಾನದಲ್ಲಿ ಕುಳಿತುಕೊಂಡಿದ್ದಾರೆ;3 ಆದುದರಿಂದ ಅವರು ನಿಮಗೆ ಏನೆಲ್ಲಾ ಆಜ್ಞಾಪಿಸುತ್ತಾರೋ ಅದನ್ನೆಲ್ಲಾ ಕೈಕೊಂಡು ನಡೆಯಿರಿ; ಆದರೆ ಅವರ ಕ್ರಿಯೆಗಳ ಪ್ರಕಾರ ನಡೆಯಬೇಡಿರಿ; ಅವರು ಹೇಳುತ್ತಾರೆಯೇ ಹೊರತು ಅದರಂತೆ ನಡೆಯುವುದಿಲ್ಲ.4 ಅವರು ಭಾರವಾದ ಹೊರೆಗಳನ್ನು ಕಟ್ಟಿ ಜನರ ಹೆಗಲಿನ ಮೇಲೆ ಹೊರಿಸುತ್ತಾರೆ; ಆದರೆ ತಾವಾದರೋ ಬೆರಳಿನಿಂದಲಾದರೂ ಅವುಗಳನ್ನು ಮುಟ್ಟಲೊಲ್ಲರು.5 ಅವರು ತಮ್ಮ ಕೆಲಸಗಳನ್ನೆಲ್ಲಾ ಜನರು ನೋಡಬೇಕೆಂದು ಮಾಡುತ್ತಾರೆ. ತಾವು ಕಟ್ಟಿಕೊಳ್ಳುವ ಜ್ಞಾಪಕಪಟ್ಟಿಗಳನ್ನು ಅಗಲಮಾಡುತ್ತಾರೆ. ತಮ್ಮ ವಸ್ತ್ರಗಳ ಗೊಂಡೆಗಳನ್ನು ಉದ್ದಮಾಡಿಕೊಳ್ಳುತ್ತಾರೆ.6 ಇದಲ್ಲದೆ ಔತಣ ಉತ್ಸವಗಳಲ್ಲಿ ಪ್ರಥಮಸ್ಥಾನ, ಸಭಾಮಂದಿರಗಳಲ್ಲಿ ಮುಖ್ಯ ಪೀಠಗಳು;7 ಅಂಗಡಿ ಬೀದಿಗಳಲ್ಲಿ ನಮಸ್ಕಾರಗಳು, ಜನರಿಂದ ‘ಗುರುಗಳೆನ್ನಿಸಿಕೊಳ್ಳುವುದು,’ ಇವುಗಳೇ ಅವರಿಗೆ ಇಷ್ಟ.8 ಆದರೆ ನೀವು ‘ಬೋಧಕರೆನ್ನಿಸಿಕೊಳ್ಳಬೇಡಿರಿ;’ ಏಕೆಂದರೆ ಕ್ರಿಸ್ತನೊಬ್ಬನೇ ನಿಮಗಿರುವ ಬೋಧಕನು ಮತ್ತು ನೀವೆಲ್ಲರೂ ಸಹೋದರರು.9 ಇದಲ್ಲದೆ ಭೂಲೋಕದಲ್ಲಿ ಯಾರನ್ನೂ ನಿಮ್ಮ ತಂದೆ ಎಂದು ಕರೆಯಬೇಡಿರಿ; ಏಕೆಂದರೆ ಪರಲೋಕದಲ್ಲಿರುವಾತನೊಬ್ಬನೇ ನಿಮ್ಮ ತಂದೆ10 ಮತ್ತು ‘ಗುರುವೆಂದು’ ಅನ್ನಿಸಿಕೊಳ್ಳಬೇಡಿರಿ; ಏಕೆಂದರೆ, ಕ್ರಿಸ್ತನೊಬ್ಬನೇ ನಿಮಗಿರುವ ಗುರುವು11 ಆದರೆ ನಿಮ್ಮಲ್ಲಿ ಹೆಚ್ಚಿನವನು ನಿಮ್ಮ ಸೇವಕನಾಗಿರಬೇಕು.12 ತನ್ನನ್ನು ಹೆಚ್ಚಿಸಿಕೊಳ್ಳುವವನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.13 “ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ಪರಲೋಕ ರಾಜ್ಯದ ಬಾಗಿಲನ್ನು ಮನುಷ್ಯರ ಎದುರಿಗೆ ಮುಚ್ಚಿಬಿಡುತ್ತೀರಿ. ನೀವಂತೂ ಒಳಕ್ಕೆ ಪ್ರವೇಶಿಸುವುದಿಲ್ಲ, ಒಳಕ್ಕೆ ಪ್ರವೇಶಿಸಬೇಕೆಂದಿರುವವರನ್ನೂ ಪ್ರವೇಶಿಸಗೊಡಿಸುವುದೂ ಇಲ್ಲ.14 ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ ಜನರು ನೋಡಬೇಕೆಂದು ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತೀರೀ. ನೀವು ವಿಧವೆಯರ ಮನೆಗಳನ್ನು ನುಂಗಿ ನಟನೆಮಾಡುತ್ತೀರಿ. ಆದುದರಿಂದ ನೀವು ಹೆಚ್ಚಿನ ದಂಡನೆಯನ್ನು ಹೊಂದುವಿರಿ.15 “ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಒಬ್ಬ ಮನುಷ್ಯನನ್ನು ಮತಾಂತರಗೊಳ್ಳಿಸುವುದಕ್ಕಾಗಿ ಭೂಮಿಯನ್ನೂ ಸಮುದ್ರವನ್ನೂ ಸುತ್ತಾಡಿಕೊಂಡು ಬರುತ್ತೀರಿ; ಅವನು ನಿಮ್ಮ ಮತಕ್ಕೆ ಸೇರಿದ ಮೇಲೆ ಅವನನ್ನು ನಿಮಗಿಂತ ಎರಡರಷ್ಟು ನರಕಕ್ಕೆ ಪಾತ್ರನಾಗಮಾಡುತ್ತೀರಿ.16 “ಅಯ್ಯೋ, ಕುರುಡು ಮಾರ್ಗದರ್ಶಿಗಳೇ, ‘ಒಬ್ಬನು ದೇವಾಲಯದ ಮೇಲೆ ಆಣೆಯಿಟ್ಟುಕೊಂಡರೆ ಅದೇನು ಆಣೆಯಲ್ಲ ಅನ್ನುತ್ತೀರಿ. ಆದರೆ ಒಬ್ಬನು ದೇವಾಲಯದ ಚಿನ್ನದ ಮೇಲೆ ಆಣೆಯಿಟ್ಟುಕೊಂಡರೆ ಅದನ್ನು ನಡಿಸಲೇಬೇಕು’ ಎಂದು ಹೇಳುತ್ತೀರಿ.17 ಕುರುಡರೇ, ಮೂರ್ಖರೇ, ಯಾವುದು ಹೆಚ್ಚಿನದು? ಚಿನ್ನವೋ, ಚಿನ್ನವನ್ನು ಪ್ರತಿಷ್ಠೆ ಮಾಡುವ ದೇವಾಲಯವೋ?18 ಮತ್ತು ‘ಒಬ್ಬನು ಯಜ್ಞವೇದಿಯ ಮೇಲೆ ಆಣೆಯಿಟ್ಟುಕೊಂಡರೆ ಅದೇನು ಆಣೆಯಲ್ಲ ಅನ್ನುತ್ತೀರಿ, ಆದರೆ ಅದರಲ್ಲಿರುವ ಕಾಣಿಕೆಯ ಮೇಲೆ ಆಣೆಯಿಟ್ಟುಕೊಂಡರೆ ಅದನ್ನು ನಡಿಸಲೇಬೇಕು’ ಎಂದು ಹೇಳುತ್ತೀರಿ.19 ಕುರುಡರೇ, ಮೂರ್ಖರೇ, ಯಾವುದು ಹೆಚ್ಚಿನದು? ಕಾಣಿಕೆಯೋ, ಆ ಕಾಣಿಕೆಯನ್ನು ಪ್ರತಿಷ್ಠೆ ಮಾಡುವ ಯಜ್ಞವೇದಿಯೋ?20 ಹೀಗಿರುವುದರಿಂದ ಯಾವನಾದರೂ ಯಜ್ಞವೇದಿಯ ಮೇಲೆ ಆಣೆಯಿಟ್ಟುಕೊಂಡರೆ ಅದರ ಮೇಲೆಯೂ, ಅದರಲ್ಲಿರುವ ಎಲ್ಲದರ ಮೇಲೆಯೂ ಆಣೆಯಿಟ್ಟುಕೊಂಡ ಹಾಗಾಯಿತು.21 ಮತ್ತು ಯಾವನಾದರೂ ದೇವಾಲಯದ ಮೇಲೆ ಆಣೆಯಿಟ್ಟುಕೊಂಡರೆ ಅದರ ಮೇಲೆಯೂ, ಅದರಲ್ಲಿ ವಾಸಮಾಡುವಾತನ ಮೇಲೆಯೂ ಆಣೆಯಿಟ್ಟುಕೊಂಡ ಹಾಗಾಯಿತು.22 ಮತ್ತು ಪರಲೋಕದ ಮೇಲೆ ಆಣೆಯಿಟ್ಟುಕೊಂಡರೆ ದೇವರ ಸಿಂಹಾಸನದ ಮೇಲೆಯೂ ಅದರಲ್ಲಿ ಕುಳಿತಿರುವಾತನ ಮೇಲೆಯೂ ಆಣೆಯಿಟ್ಟುಕೊಂಡ ಹಾಗಾಯಿತು.23 ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಪುದೀನ, ಮರುಗಪತ್ರೆ, ಸಬಸಿಗೆಸೊಪ್ಪು, ಜೀರಿಗೆಗಳಲ್ಲಿ ದಶಮ ಭಾಗವನ್ನು ಕೊಡುತ್ತೀರಿ ಸರಿ, ಆದರೆ ಧರ್ಮಶಾಸ್ತ್ರದಲ್ಲಿ ಮುಖ್ಯವಾದುದನ್ನು ಅಂದರೆ ನ್ಯಾಯವನ್ನೂ, ಕರುಣೆಯನ್ನೂ ನಂಬಿಕೆಯನ್ನೂ ಬಿಟ್ಟುಬಿಟ್ಟಿದ್ದೀರಿ. ಇವುಗಳನ್ನು ಮಾಡಬೇಕು; ಅವುಗಳನ್ನೂ ಬಿಡಬಾರದು.24 ಕುರುಡ ಮಾರ್ಗದರ್ಶಿಗಳೇ, ನೀವು ಸೊಳ್ಳೇ ಸೋಸುವವರು, ಆದರೆ ಒಂಟೆ ನುಂಗುವವರು.25 “ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಪಾತ್ರೆ, ಬಟ್ಟಲು ಇವುಗಳ ಹೊರಭಾಗವನ್ನು ಶುಚಿಮಾಡುತ್ತೀರಿ ಆದರೆ ಅವುಗಳ ಒಳಗೆ ಸುಲಿಗೆಯಿಂದಲೂ, ದುರಾಶೆಯಿಂದಲೂ ತುಂಬಿರುತ್ತವೆ.26 ಕುರುಡನಾದ ಫರಿಸಾಯನೇ, ಮೊದಲು ಪಾತ್ರೆ ಬಟ್ಟಲುಗಳ ಒಳಭಾಗವನ್ನು ಶುಚಿಮಾಡು, ಆಗ ಅವುಗಳ ಹೊರಭಾಗವೂ ಶುಚಿಯಾಗುವುದು.27 “ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ ನೀವು ಸುಣ್ಣಾ ಹಚ್ಚಿದ ಸಮಾಧಿಗಳಿಗೆ ಹೋಲಿಕೆಯಾಗಿದ್ದೀರಿ; ಇವು ಹೊರಗೆ ಸುಂದರವಾಗಿ ಕಾಣುತ್ತವೆ. ಒಳಗೆ ನೋಡಿದರೆ ಸತ್ತವರ ಎಲುಬುಗಳಿಂದಲೂ ಎಲ್ಲಾ ಹೊಲಸಿನಿಂದಲೂ ತುಂಬಿರುತ್ತವೆ.28 ಹಾಗೆಯೇ ನೀವು ಸಹ ಹೊರಗೆ ಜನರಿಗೆ ನೀತಿವಂತರಂತೆ ಕಾಣಿಸಿಕೊಳ್ಳುತ್ತೀರಿ. ಆದರೆ ಒಳಗೆ ಕಪಟ ಮತ್ತು ಅಕ್ರಮದಿಂದ ತುಂಬಿದವರಾಗಿದ್ದೀರಿ.29 ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಪ್ರವಾದಿಗಳ ಸಮಾಧಿಗಳನ್ನು ಕಟ್ಟಿ, ನೀತಿವಂತರ ಗೋರಿಗಳನ್ನು ಅಲಂಕರಿಸಿ,30 ‘ನಾವು ನಮ್ಮ ಹಿರಿಯರ ಕಾಲದಲ್ಲಿ ಇದ್ದಿದ್ದರೆ ಪ್ರವಾದಿಗಳನ್ನು ಕೊಂದ ಪಾಪದಲ್ಲಿ ಪಾಲುಗಾರರಾಗುತ್ತಿರಲಿಲ್ಲ’ ಅನ್ನುತ್ತೀರಿ.31 ಹಾಗಾದರೆ ನೀವು ಪ್ರವಾದಿಗಳನ್ನು ಕೊಂದವರ ಮಕ್ಕಳೇ ಹೌದು ಎಂಬುದಕ್ಕೆ ನಿಮಗೆ ನೀವೇ ಸಾಕ್ಷಿಗಳಾಗಿದ್ದೀರಿ.32 ಒಳ್ಳೆಯದು, ನೀವು ನಿಮ್ಮ ಹಿರಿಯರ ಪಾಪದ ಅಳತೆಯನ್ನು ಪೂರ್ತಿಮಾಡುತ್ತೀರಿ.33 ಹಾವುಗಳೇ, ಸರ್ಪಜಾತಿಯವರೇ, ನರಕದಂಡನೆಯಿಂದ ಹೇಗೆ ನೀವು ತಪ್ಪಿಸಿಕೊಳ್ಳುವಿರಿ?34 ಆದುದರಿಂದ ನೋಡಿರಿ, ನಾನು ನಿಮ್ಮ ಬಳಿಗೆ ಪ್ರವಾದಿಗಳನ್ನೂ ಜ್ಞಾನಿಗಳನ್ನೂ ಶಾಸ್ತ್ರಿಗಳನ್ನೂ ಕಳುಹಿಸುತ್ತೇನೆ; ಅವರಲ್ಲಿ ಕೆಲವರನ್ನು ನೀವು ಕೊಲ್ಲುವಿರಿ, ಶಿಲುಬೆಗೆ ಹಾಕುವಿರಿ; ಕೆಲವರನ್ನು ನಿಮ್ಮ ಸಭಾಮಂದಿರಗಳಲ್ಲಿ ಚಾಟಿಗಳಿಂದ ಹೊಡೆದು ಊರಿಂದ ಊರಿಗೆ ಅಟ್ಟಿಕೊಂಡು ಹೋಗುವಿರಿ.35 ಹೀಗೆ ನೀತಿವಂತನಾದ ಹೇಬೆಲನ ರಕ್ತವು ಮೊದಲುಗೊಂಡು ನೀವು ದೇವಾಲಯಕ್ಕೂ ಯಜ್ಞವೇದಿಗೂ ನಡುವೆ ಕೊಂದು ಹಾಕಿದ ಬರಕೀಯನ ಮಗನಾದ ಜಕರೀಯನ ರಕ್ತದವರೆಗೂ ಭೂಮಿಯ ಮೇಲೆ ಸುರಿಸಲ್ಪಟ್ಟ ಎಲ್ಲಾ ನೀತಿವಂತರ ರಕ್ತಸುರಿಸಿದ ಅಪರಾಧವು ನಿಮ್ಮ ತಲೆಯ ಮೇಲೆ ಬರುವುದು.36 ಇದೆಲ್ಲಾ ಈ ಸಂತತಿಯವರ ಮೇಲೆ ಬರುವುದೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.37 “ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳ ಪ್ರಾಣತೆಗೆಯುವವಳೇ, ದೇವರು ನಿನ್ನ ಬಳಿಗೆ ಕಳುಹಿಸಿಕೊಟ್ಟವರನ್ನು ಕಲ್ಲೆಸೆದು ಕೊಲ್ಲುವವಳೇ! ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಹುದುಗಿಸಿಕೊಳ್ಳುವಂತೆ ನಿನ್ನ ಮಕ್ಕಳನ್ನು ಸೇರಿಸಿಕೊಳ್ಳಲು ನನಗೆ ಎಷ್ಟೋ ಸಾರಿ ಮನಸ್ಸಿತ್ತು; ಆದರೆ ನಿನಗೆ ಮನಸ್ಸಿಲ್ಲದೆ ಹೋಯಿತು.38 ನೋಡಿರಿ, ನಿಮ್ಮ ಮನೆಯು ನಿಮಗೆ ಬರಿದಾಗಿ ಬಿಡುತ್ತದೆ.39 ಈಗಿಂದ, ‘ಕರ್ತನ ಹೆಸರಿನಲ್ಲಿ ಬರುವವನು ಧನ್ಯನು ಎಂದು ನೀವಾಗಿ ನೀವು ಹೇಳುವ ತನಕ ನೀವು ನನ್ನನ್ನು ನೋಡುವುದೇ ಇಲ್ಲವೆಂದು ನಿಮಗೆ ಹೇಳುತ್ತೇನೆ’” ಅಂದನು.

Matthew23:39

ಯೇಸು ತನ್ನ ಶಿಷ್ಯರಿಗಾಗಿ ಪ್ರಾರ್ಥಿಸಿದ್ದು

 ಯೇಸು ಈ ಮಾತುಗಳನ್ನು ಹೇಳಿದ ಮೇಲೆ ಆಕಾಶದ ಕಡೆಗೆ ಕಣ್ಣೆತ್ತಿ ನೋಡಿ ಹೇಳಿದ್ದೇನೆಂದರೆ, “ತಂದೆಯೇ, ಸಮಯ ಬಂದಿದೆ; ಮಗನು ನಿನ್ನನ್ನು ಮಹಿಮೆಪಡಿಸುವುದಕೊಸ್ಕರ ನಿನ್ನ ಮಗನನ್ನು ಮಹಿಮೆಪಡಿಸು.2 ನೀನು ಯಾರಾರನ್ನು ಕೊಟ್ಟಿದ್ದೀಯೋ ಅವರೆಲ್ಲರಿಗೂ ನಿತ್ಯಜೀವವನ್ನು ಕೊಡಬೇಕೆಂದು, ಆತನಿಗೆ ಎಲ್ಲಾ ಮನುಷ್ಯರ ಮೇಲೆ ಅಧಿಕಾರವನ್ನು ಕೊಟ್ಟಿರುವೆ.3 ಒಬ್ಬನೇ ಸತ್ಯ ದೇವರಾಗಿರುವ ನಿನ್ನನ್ನೂ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವುದೇ ನಿತ್ಯಜೀವವು.4 ನೀನು ನನಗೆ ಕೊಟ್ಟ ಕೆಲಸವನ್ನು ನಾನು ನೆರವೇರಿಸಿ ಭೂಲೋಕದಲ್ಲಿ ನಾನು ನಿನ್ನನ್ನು ಮಹಿಮೆಪಡಿಸಿದ್ದೇನೆ.5 ಈಗ ತಂದೆಯೇ, ಲೋಕವು ಸೃಷ್ಟಿಯಾಗುವುದಕ್ಕಿಂತ ಮೊದಲು, ನಿನ್ನ ಬಳಿಯಲ್ಲಿ ನನಗಿದ್ದ ಮಹಿಮೆಯಂತೆಯೇ ನಿನ್ನೊಂದಿಗೆ ನನ್ನನ್ನು ಮಹಿಮೆಪಡಿಸು.6 “ಲೋಕದಲ್ಲಿ ನೀನು ನನಗೆ ಕೊಟ್ಟಿರುವ ಮನುಷ್ಯರಿಗೆ ನಾನು ನಿನ್ನ ಹೆಸರನ್ನು ಪ್ರಕಟಪಡಿಸಿದ್ದೇನೆ. ಇವರು ನಿನ್ನವರಾಗಿದ್ದರು ಮತ್ತು ನೀನು ಇವರನ್ನು ನನಗೆ ಕೊಟ್ಟಿದ್ದೀ. ಇವರು ನಿನ್ನ ವಾಕ್ಯಕ್ಕೆ ವಿಧೇಯರಾಗಿದ್ದಾರೆ.7 ನೀನು ನನಗೆ ಕೊಟ್ಟದ್ದೆಲ್ಲವೂ ನಿನ್ನಿಂದಲೇ ಬಂದಿದೆ ಎಂದು ಈಗ ಇವರು ತಿಳಿದುಕೊಂಡಿದ್ದಾರೆ.8 ಹೇಗೆಂದರೆ, ನೀನು ನನಗೆ ಕೊಟ್ಟ ಮಾತುಗಳನ್ನು ನಾನು ಇವರಿಗೆ ಕೊಟ್ಟಿದ್ದೇನೆ. ಇವರು ಆ ಮಾತುಗಳನ್ನು ಸ್ವೀಕರಿಸಿದ್ದಾರೆ ಮತ್ತು ನಾನು ನಿನ್ನ ಬಳಿಯಿಂದ ಬಂದವನೆಂದು ಇವರು ನಿಜವಾಗಿ ತಿಳಿದು, ನೀನೇ ನನ್ನನ್ನು ಕಳುಹಿಸಿದ್ದೀ ಎಂದು ನಂಬಿದ್ದಾರೆ.9 ನಾನು ಇವರಿಗಾಗಿಯೇ ಬೇಡಿಕೊಳ್ಳುತ್ತೇನೆ. ಲೋಕಕ್ಕೋಸ್ಕರ ಬೇಡಿಕೊಳ್ಳದೆ, ನೀನು ನನಗೆ ಕೊಟ್ಟವರಿಗಾಗಿಯೇ ಬೇಡಿಕೊಳ್ಳುತ್ತೇನೆ, ಏಕೆಂದರೆ, ಇವರು ನಿನ್ನವರು.10 ನನ್ನದೆಲ್ಲವೂ ನಿನ್ನದೇ ಮತ್ತು ನಿನ್ನದೆಲ್ಲವೂ ನನ್ನದೇ. ನಾನು ಇವರಲ್ಲಿ ಮಹಿಮೆಗೊಂಡಿದ್ದೇನೆ.11 ಇನ್ನು ಮೇಲೆ ನಾನು ಲೋಕದಲ್ಲಿ ಇರುವುದಿಲ್ಲ, ಇವರಾದರೋ ಲೋಕದಲ್ಲಿ ಇರುತ್ತಾರೆ. ನಾನು ನಿನ್ನ ಬಳಿಗೆ ಬರುತ್ತೇನೆ. ಪರಿಶುದ್ಧನಾದ ತಂದೆಯೇ, ನಾವು ಒಂದಾಗಿರುವ ಹಾಗೆ ಇವರೂ ಒಂದಾಗಿರಬೇಕೆಂದು, ನೀನು ನನಗೆ ಕೊಟ್ಟ ನಿನ್ನ ಹೆಸರಿನಲ್ಲಿ ಇವರನ್ನು ಕಾಪಾಡು.12 ನಾನು ಇವರ ಜೊತೆ ಇದ್ದಾಗ ನೀನು ನನಗೆ ಕೊಟ್ಟ ನಿನ್ನ ಹೆಸರಿನಲ್ಲಿ ಇವರನ್ನು ಕಾಪಾಡಿ ಸಂರಕ್ಷಿಸಿದೆನು. ಧರ್ಮಶಾಸ್ತ್ರದ ಮಾತು ನೆರವೇರುವಂತೆ ನಾಶಕ್ಕಾಗಿ ಹುಟ್ಟಿದವನೇ ಹೊರತು ಇವರಲ್ಲಿ ಒಬ್ಬನೂ ನಾಶವಾಗಲಿಲ್ಲ.13 “ಆದರೆ ಈಗ ನಾನು ನಿನ್ನ ಬಳಿಗೆ ಬರುತ್ತೇನೆ. ಆದುದರಿಂದ ನನ್ನ ಆನಂದವು ಇವರಲ್ಲಿ ಪರಿಪೂರ್ಣವಾಗಿರುವಂತೆ ನಾನು ಲೋಕದಲ್ಲಿದ್ದು ಈ ಮಾತುಗಳನ್ನಾಡುತ್ತಿದೇನೆ.14 ನಾನು ನಿನ್ನ ವಾಕ್ಯವನ್ನು ಇವರಿಗೆ ಕೊಟ್ಟಿದ್ದೇನೆ, ನಾನು ಈ ಲೋಕದವನಲ್ಲದವನಾಗಿರುವ ಪ್ರಕಾರ ಇವರೂ ಈ ಲೋಕದವರಲ್ಲ. ಆದಕಾರಣ ಲೋಕವು ಇವರನ್ನು ದ್ವೇಷಿಸುತ್ತದೆ.15 ಇವರನ್ನು ಲೋಕದಿಂದ ತೆಗೆಯಬೇಕೆಂದು ನಾನು ಬೇಡಿಕೊಳ್ಳುವುದಿಲ್ಲ, ಆದರೆ ಇವರನ್ನು ಕೆಡುಕನಿಂದ ಕಾಪಾಡಬೇಕೆಂದು ನಾನು ಬೇಡಿಕೊಳ್ಳುತ್ತೇನೆ.16 ನಾನು ಲೋಕದವನಲ್ಲದೆ ಇರುವಂತೆ ಇವರೂ ಲೋಕದವರಲ್ಲ.17 ನೀನು ಸತ್ಯದಿಂದ ಇವರನ್ನು ಪ್ರತಿಷ್ಠೆಪಡಿಸು, ನಿನ್ನ ವಾಕ್ಯವೇ ಸತ್ಯ.18 ನೀನು ನನ್ನನ್ನು ಲೋಕಕ್ಕೆ ಕಳುಹಿಸಿದಂತೆಯೇ, ನಾನು ಸಹ ಇವರನ್ನು ಲೋಕಕ್ಕೆ ಕಳುಹಿಸಿದ್ದೇನೆ.19 ಇವರು ನಿಜವಾಗಿ ಪ್ರತಿಷ್ಠಿರಾಗಬೇಕೆಂದು, ನನ್ನನ್ನು ನಾನೇ ಇವರಿಗೋಸ್ಕರ ಪ್ರತಿಷ್ಠಿಸಿಕೊಂಡಿದ್ದೇನೆ.ಯೇಸು ಎಲ್ಲಾ ವಿಶ್ವಾಸಿಗಳಿಗಾಗಿ ಪ್ರಾರ್ಥಿಸಿದ್ದು20 “ಆದರೆ ಇವರಿಗೋಸ್ಕರ ಮಾತ್ರವಲ್ಲದೆ ಇವರ ವಾಕ್ಯದಿಂದ ನನ್ನನ್ನು ನಂಬುವವರಿಗೋಸ್ಕರವಾಗಿಯೂ ನಿನ್ನನ್ನು ಬೇಡಿಕೊಳ್ಳುತ್ತೇನೆ.21 ತಂದೆಯೇ, ನೀನು ನನ್ನಲ್ಲಿಯೂ ನಾನು ನಿನ್ನಲ್ಲಿಯೂ ಇರುವ ಹಾಗೆಯೇ ಅವರು ಸಹ ಒಂದಾಗಿರಬೇಕೆಂತಲೂ ಬೇಡಿಕೊಳ್ಳುತ್ತೇನೆ. ನೀನು ನನ್ನನ್ನು ಕಳುಹಿಸಿದ್ದೀ ಎಂದು ಲೋಕವು ನಂಬುವುದಕ್ಕಾಗಿ, ಅವರೆಲ್ಲರೂ ನಮ್ಮಲ್ಲಿ ಒಂದಾಗಿರಲಿ ಎಂದು ನಿನ್ನನ್ನು ಕೇಳಿಕೊಳ್ಳುತ್ತೇನೆ.22 ನಾವು ಒಂದಾಗಿರುವ ಹಾಗೆಯೇ ಇವರೂ ಒಂದಾಗಿರಬೇಕೆಂದು ನೀನು ನನಗೆ ಕೊಟ್ಟಿರುವ ಮಹಿಮೆಯನ್ನು ನಾನು ಇವರಿಗೆ ಕೊಟ್ಟಿದ್ದೇನೆ.23 ನಾನು ಇವರಲ್ಲಿಯೂ ನೀನು ನನ್ನಲ್ಲಿಯೂ ಇರುವಂತೆ ಇವರೂ ಐಕ್ಯತೆಯಲ್ಲಿ ಪರಿಪೂರ್ಣರಾಗಿರಲಿ. ಹೀಗೆ ನೀನು ನನ್ನನ್ನು ಕಳುಹಿಸಿದ್ದೀ, ಎಂದೂ ಮತ್ತು ನೀನು ನನ್ನನ್ನು ಪ್ರೀತಿಸಿದಂತೆ, ಇವರನ್ನೂ ನೀನು ಪ್ರೀತಿಸುತ್ತೀ ಎಂದು ಲೋಕವು ತಿಳಿದುಕೊಳ್ಳುವುದು.24 ತಂದೆಯೇ, ನೀನು ನನಗೆ ಕೊಟ್ಟವರು, ನಾನಿರುವ ಸ್ಥಳದಲ್ಲಿ ನನ್ನೊಂದಿಗೆ ಇದ್ದುಕೊಂಡು, ಜಗದುತ್ಪತ್ತಿಗೂ ಮೊದಲೇ ನೀನು ನನ್ನನ್ನು ಪ್ರೀತಿಸಿ ನನಗೆ ಕೊಟ್ಟಿರುವ ಮಹಿಮೆಯನ್ನು ಇವರು ನೋಡಬೇಕೆಂದು, ನಾನು ಆಶಿಸುತ್ತೇನೆ.25 ನೀತಿಸ್ವರೂಪನಾದ ತಂದೆಯೇ, ಲೋಕವು ನಿನ್ನನ್ನು ತಿಳಿಯಲಿಲ್ಲ, ಆದರೆ ನಾನು ನಿನ್ನನ್ನು ತಿಳಿದಿದ್ದೇನೆ ಮತ್ತು ಇವರು ನೀನೇ ನನ್ನನ್ನು ಕಳುಹಿಸಿದ್ದೀ ಎಂದು ತಿಳಿದಿದ್ದಾರೆ.26 ನಾನು ಅವರಿಗೆ ನಿನ್ನ ಹೆಸರನ್ನು ತಿಳಿಸಿದ್ದೇನೆ. ಇನ್ನೂ ತಿಳಿಸುವೆನು. ಏಕೆಂದರೆ, ನೀನು ನನ್ನನ್ನು ಪ್ರೀತಿಸಿದಂಥ ಪ್ರೀತಿಯು ಇವರಲ್ಲಿ ಇರಬೇಕೆಂತಲೂ ಮತ್ತು ನಾನೂ ಅವರಲ್ಲಿ ಇರಬೇಕೆಂದೂ ಪ್ರಾರ್ಥಿಸುತ್ತೇನೆ” ಎಂದನು.

ಜಾನ್ 17