Skip to content

bible passage

ಯೇಸು ತನ್ನ ಶಿಷ್ಯರ ಕಾಲುಗಳನ್ನು ತೊಳೆದದ್ದು

13 ಪಸ್ಕಹಬ್ಬದ ಹಿಂದಿನ ದಿನ ಯೇಸು, ತಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗಬೇಕಾದ ತನ್ನ ಗಳಿಗೆ ಬಂದಿತೆಂದು ತಿಳಿದುಕೊಂಡು, ಈ ಲೋಕದಲ್ಲಿರುವ ತನ್ನವರನ್ನು ಪ್ರೀತಿಸಿ, ಅವರನ್ನು ಕೊನೆಯವರೆಗೂ ಪ್ರೀತಿಸುತ್ತಾ ಬಂದನು.2 ಅವರು ಭೋಜನಕ್ಕೆ ಕುಳಿತುಕೊಂಡಿದ್ದರು, ಅಷ್ಟರೊಳಗೆ ಸೈತಾನನು ಸೀಮೋನನ ಮಗನಾದ ಇಸ್ಕರಿಯೋತ ಯೂದನ ಹೃದಯದಲ್ಲಿ ಯೇಸುವನ್ನು ಹಿಡಿದುಕೊಡಬೇಕೆಂಬ ಆಲೋಚನೆಯನ್ನು ಹುಟ್ಟಿಸಿದನು.3 ತಂದೆಯು ತನ್ನ ಕೈಯಲ್ಲಿ ಎಲ್ಲದರ ಮೇಲೆ ಅಧಿಕಾರ ಕೊಟ್ಟಿದ್ದಾನೆಂದೂ, ತಾನು ದೇವರ ಬಳಿಯಿಂದ ಬಂದು, ತಿರುಗಿ ದೇವರ ಬಳಿಗೆ ಹೋಗುತ್ತೇನೆಂದೂ ಯೇಸುವಿಗೆ ತಿಳಿದಿತ್ತು.4 ಆತನು ಊಟದಿಂದ ಎದ್ದು ತನ್ನ ಮೇಲುಹೊದಿಕೆಯನ್ನು ತೆಗೆದಿಟ್ಟು ಅಂಗ ವಸ್ತ್ರವನ್ನು ತೆಗೆದುಕೊಂಡು ನಡುವಿಗೆ ಕಟ್ಟಿಕೊಂಡನು.5 ಅನಂತರ ಬೋಗುಣಿಯಲ್ಲಿ ನೀರು ಹಾಕಿಕೊಂಡು ಶಿಷ್ಯರ ಪಾದಗಳನ್ನು ತೊಳೆಯುತ್ತಾ, ತಾನು ಸೊಂಟಕ್ಕೆ ಕಟ್ಟಿಕೊಂಡ ಅಂಗವಸ್ತ್ರದಿಂದ ಪಾದಗಳನ್ನು ಒರಸುವುದಕ್ಕೂ ಪ್ರಾರಂಭಿಸಿದನು.6 ಹೀಗೆ ಆತನು ಸೀಮೋನ ಪೇತ್ರನ ಬಳಿಗೆ ಬಂದಾಗ ಅವನು ಆತನಿಗೆ, “ಕರ್ತನೇ, ನೀನು ನನ್ನ ಪಾದಗಳನ್ನು ತೊಳೆಯುತ್ತೀಯೋ?” ಎಂದು ಹೇಳಿದನು.7 ಅದಕ್ಕೆ ಯೇಸು “ನಾನು ಮಾಡುವುದು ಏನೆಂದು ಈಗ ನಿನಗೆ ತಿಳಿಯುವುದಿಲ್ಲ. ಆನಂತರ ನಿನಗೆ ತಿಳಿಯುವುದು” ಎಂದನು.8 ಪೇತ್ರನು ಆತನಿಗೆ, “ನೀನು ನನ್ನ ಪಾದಗಳನ್ನು ಎಂದಿಗೂ ತೊಳೆಯಬಾರದು” ಎಂದು ಹೇಳಿದ್ದಕ್ಕೆ, ಯೇಸು, “ನಾನು ನಿನ್ನನ್ನು ತೊಳೆಯದಿದ್ದರೆ ನನ್ನೊಂದಿಗೆ ನಿನಗೆ ಪಾಲು ಇರುವುದಿಲ್ಲ” ಎಂದನು.9 ಸೀಮೋನ ಪೇತ್ರನು, “ಕರ್ತನೇ, ನನ್ನ ಪಾದಗಳನ್ನು ಮಾತ್ರವಲ್ಲದೆ, ಕೈಗಳನ್ನೂ, ತಲೆಯನ್ನೂ ಸಹ ತೊಳೆ” ಎಂದನು.10 ಯೇಸು ಅವನಿಗೆ, “ಸ್ನಾನಮಾಡಿಕೊಂಡವನಿಗೆ ತನ್ನ ಪಾದಗಳನ್ನು ಮಾತ್ರ ತೊಳೆದುಕೊಂಡರೆ ಸಾಕು, ಅವನು ಸಂಪೂರ್ಣವಾಗಿ ಶುದ್ಧನಾಗಿದ್ದಾನೆ. ನೀವೂ ಶುದ್ಧರಾಗಿದ್ದೀರಿ. ಆದರೆ ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ” ಎಂದು ಹೇಳಿದನು.11 ಯೇಸು ತನ್ನನ್ನು ಹಿಡಿದು ಕೊಡುವವನು ಯಾರೆಂದು ತಿಳಿದಿದ್ದರಿಂದ, “ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ” ಎಂದು ಹೇಳಿದ್ದನು.12 ಆತನು ಅವರ ಪಾದಗಳನ್ನು ತೊಳೆದ ಮೇಲೆ ತನ್ನ ಮೇಲುಹೊದಿಕೆಯನ್ನು ಹಾಕಿಕೊಂಡು, ಪುನಃ ಕುಳಿತುಕೊಂಡು ಅವರಿಗೆ ಹೇಳಿದ್ದೇನಂದರೆ, “ನಾನು ನಿಮಗೆ ಮಾಡಿದ್ದು ಏನೆಂದು ತಿಳಿಯಿತೋ?13 ನೀವು ನನ್ನನ್ನು ಗುರುವೆಂದೂ ಮತ್ತು ಕರ್ತನೆಂದೂ ಕರೆಯುತ್ತೀರಿ. ನೀವು ಹೇಳುವುದು ಸರಿ. ಹೌದು, ನಾನು ಅಂಥವನೇ ಆಗಿದ್ದೇನೆ.14 ಹಾಗಾದರೆ ಕರ್ತನೂ, ಗುರುವೂ ಆಗಿರುವ ನಾನೇ ನಿಮ್ಮ ಪಾದಗಳನ್ನು ತೊಳೆದಿರುವಾಗ, ನೀವು ಸಹ ಒಬ್ಬರ ಪಾದಗಳನ್ನೊಬ್ಬರು ತೊಳೆಯಬೇಕು.15 ನಾನು ನಿಮಗೆ ಮಾಡಿದಂತೆಯೇ ನೀವು ಸಹ ಮಾಡಬೇಕೆಂದು ನಾನು ನಿಮಗೆ ಮಾದರಿಯನ್ನು ತೋರಿಸಿದ್ದೇನೆ.16 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ; ತನ್ನ ದಣಿಗಿಂತ ಆಳು ದೊಡ್ಡವನಲ್ಲ. ಹಾಗೆಯೇ ಕಳುಹಿಸಲ್ಪಟ್ಟವನು ಕಳುಹಿಸಿದವನಿಗಿಂತ ದೊಡ್ಡವನಲ್ಲ.17 ನೀವು ಇವುಗಳನ್ನು ತಿಳಿದುಕೊಂಡು ಇದರಂತೆ ಮಾಡಿದರೆ ನೀವು ಧನ್ಯರು.18 ನಾನು ನಿಮ್ಮೆಲ್ಲರನ್ನು ಕುರಿತು ಈ ಮಾತನ್ನು ಹೇಳಲಿಲ್ಲ. ನಾನು ಆರಿಸಿಕೊಂಡವರೆಲ್ಲರನ್ನು ನಾನು ಬಲ್ಲೆನು. ಆದರೆ ನನ್ನ ಜೊತೆಯಲ್ಲಿ ಊಟಮಾಡುವವನೇ, ನನಗೆ ದ್ರೋಹ ಬಗೆದನು, ಎಂಬ ಶಾಸ್ತ್ರದ ಮಾತು ನೆರವೇರಬೇಕಾಗಿದೆ.19 ಅದು ನಡೆಯುವಾಗ ನಾನೇ ಆತನು ಎಂದು ನೀವು ನಂಬುವಂತೆ, ಅದು ಸಂಭವಿಸುವುದಕ್ಕಿಂತ ಮೊದಲೇ ಅದನ್ನು ಈಗ ನಿಮಗೆ ಹೇಳುತ್ತಿದ್ದೇನೆ.20 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ; ನಾನು ಕಳುಹಿಸಿದಾತನನ್ನು ಸ್ವೀಕರಿಸುವವನು ನನ್ನನ್ನು ಸ್ವೀಕರಿಸುತ್ತಾನೆ; ನನ್ನನ್ನು ಸ್ವೀಕರಿಸುವವನು ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸುತ್ತಾನೆ.”ಯೇಸು ತನ್ನನ್ನು ಹಿಡಿದುಕೊಡುವವನನ್ನು ಸೂಚಿಸಿದ್ದು21 ಇದನ್ನು ಹೇಳುತ್ತಾ ಯೇಸು ಆತ್ಮದಲ್ಲಿ ನೊಂದುಕೊಂಡವನಾಗಿ, “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ; ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡಿದು ಕೊಡುತ್ತಾನೆ” ಎಂದು ಸಾಕ್ಷಿ ಹೇಳಿದನು.22 ಆಗ ಈತನು ಯಾರ ವಿಷಯವಾಗಿ ಈ ಮಾತನ್ನು ಹೇಳುತ್ತಾನೆಂದು ಶಿಷ್ಯರು ಗಲಿಬಿಲಿಗೊಂಡು ಒಬ್ಬರನೊಬ್ಬರು ನೋಡಿಕೊಂಡರು.23 ಶಿಷ್ಯರೊಳಗೆ ಯೇಸುವಿಗೆ ಪ್ರಿಯನಾಗಿದ್ದ ಒಬ್ಬ ಶಿಷ್ಯನು ಆತನ ಎದೆಗೆ ಒರಗಿಕೊಂಡಿದ್ದನು.24 ಅವನಿಗೆ ಸೀಮೋನ ಪೇತ್ರನು ಸನ್ನೆಮಾಡಿ, “ಆತನು ಯಾರ ವಿಷಯವಾಗಿ ಮಾತನಾಡಿದನು ಎಂದು ಕೇಳು” ಅಂದನು.25 ಆ ಶಿಷ್ಯನು ಹಾಗೆಯೇ ಯೇಸುವಿನ ಎದೆಗೆ ಒರಗಿಕೊಂಡವನಾಗಿ, “ಕರ್ತನೇ, ಅವನು ಯಾರು?” ಎಂದು ಆತನನ್ನು ಕೇಳಿದನು.26 ಅದಕ್ಕೆ ಯೇಸು, “ನಾನು ಈ ರೊಟ್ಟಿಯ ತುಂಡನ್ನು ಅದ್ದಿ ಯಾರಿಗೆ ಕೊಡುತ್ತೇನೋ ಅವನೇ!” ಎಂದು ಉತ್ತರಿಸಿ ಆ ರೊಟ್ಟಿಯ ತುಂಡನ್ನು ಅದ್ದಿ, ತೆಗೆದು, ಸೀಮೋನ್ ಇಸ್ಕರಿಯೋತನ ಮಗನಾದ ಯೂದನಿಗೆ ಕೊಟ್ಟನು.27 ಅವನು ಆ ರೊಟ್ಟಿಯ ತುಂಡನ್ನು ತೆಗೆದುಕೊಂಡ ಕೂಡಲೇ, ಸೈತಾನನು ಅವನೊಳಗೆ ಪ್ರವೇಶಿಸಿದನು. ಆಗ ಯೇಸು ಅವನಿಗೆ, “ನೀನು ಮಾಡುವುದನ್ನು ಬೇಗನೇ ಮಾಡು” ಎಂದು ಹೇಳಿದನು.28 ಆದರೆ ಆತನು ಅವನಿಗೆ ಇದನ್ನು ಏಕೆ ಹೇಳಿದನೆಂದು ಊಟದ ಮೇಜಿನಲ್ಲಿ ಕುಳಿತವರಲ್ಲಿ ಯಾರಿಗೂ ತಿಳಿಯಲಿಲ್ಲ.29 ಅವರಲ್ಲಿ ಕೆಲವರು, ಯೂದನ ವಶದಲ್ಲಿ ಹಣದ ಚೀಲವಿದ್ದುದರಿಂದ ಯೇಸು ಅವನಿಗೆ “ಹಬ್ಬಕ್ಕೆ ನಮಗೆ ಅಗತ್ಯವಾದವುಗಳನ್ನು ಕೊಂಡುಕೋ ಎಂದೋ, ಅಥವಾ ಬಡವರಿಗೆ ಏನಾದರೂ ಕೊಡು ಎಂದೋ, ಯೇಸು ಅವನಿಗೆ ಹೇಳುತ್ತಾನೆ” ಎಂದು ಅಂದುಕೊಂಡರು.30 ಇಸ್ಕರಿಯೋತ ಯೂದನು ಆ ರೊಟ್ಟಿಯ ತುಂಡನ್ನು ತೆಗೆದುಕೊಂಡ ಕೂಡಲೇ, ಅಲ್ಲಿಂದ ಎದ್ದು ಹೊರಗೆ ಹೋದನು. ಆಗ ರಾತ್ರಿಯಾಗಿತ್ತು.ಹೊಸ ಆಜ್ಞೆ31 ಅವನು ಹೊರಗೆ ಹೋದ ಮೇಲೆ ಯೇಸುವು, “ಈಗ ಮನುಷ್ಯಕುಮಾರನು ಮಹಿಮೆ ಹೊಂದುತ್ತಾನೆ, ಮತ್ತು ದೇವರು ಆತನಲ್ಲಿ ಮಹಿಮೆ ಹೊಂದಿದ್ದಾನೆ.32 ದೇವರು ಆತನಲ್ಲಿ ಮಹಿಮೆ ಹೊಂದಿರುವುದರಿಂದ, ದೇವರು ಸಹ ಮನುಷ್ಯಕುಮಾರನನ್ನು ತನ್ನಲ್ಲಿ ಮಹಿಮೆಪಡಿಸುವನು. ತಕ್ಷಣವೇ ಮಹಿಮೆಪಡಿಸುವನು.33 ನನ್ನ ಮಕ್ಕಳೇ, ಇನ್ನು ಸ್ವಲ್ಪ ಕಾಲವೇ ನಾನು ನಿಮ್ಮ ಜೊತೆಯಲ್ಲಿ ಇರುತ್ತೇನೆ. ನೀವು ನನ್ನನ್ನು ಹುಡುಕುವಿರಿ ಆದರೆ ‘ನಾನು ಹೋಗುವಲ್ಲಿಗೆ ನೀವು ಬರಲಾರಿರಿ’ ಎಂದು ನಾನು ಯೆಹೂದ್ಯರಿಗೆ ಹೇಳಿದಂತೆಯೇ ನಿಮಗೂ ಈಗ ಹೇಳುತ್ತೇನೆ.34 ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ: ಏನೆಂದರೆ, ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಾನು ನಿಮ್ಮನ್ನು ಪ್ರೀತಿಸಿದ ಹಾಗೆಯೇ ನೀವೂ ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು, ಎಂಬುದೇ.35 ನಿಮ್ಮೊಳಗೆ ಪರಸ್ಪರ ಪ್ರೀತಿಯಿರುವುದಾದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳಿದುಕೊಳ್ಳುವರು” ಎಂದನು.36 ಸೀಮೋನ್ ಪೇತ್ರನು ಆತನಿಗೆ, “ಕರ್ತನೇ, ನೀನು ಎಲ್ಲಿಗೆ ಹೋಗುತ್ತೀ?” ಎಂದು ಕೇಳಿದ್ದಕ್ಕೆ ಯೇಸು ಅವನಿಗೆ, “ನಾನು ಹೋಗುವ ಕಡೆಗೆ, ಈಗ ನೀನು ನನ್ನನ್ನು ಹಿಂಬಾಲಿಸಲಾರೆ. ಅನಂತರ ನೀನು ನನ್ನನ್ನು ಹಿಂಬಾಲಿಸುವೆ” ಎಂದನು.37 ಪೇತ್ರನು ಆತನಿಗೆ, “ಕರ್ತನೇ, ನಾನು ಈಗ ನಿನ್ನನ್ನು ಏಕೆ ಹಿಂಬಾಲಿಸಲಾರೆನು? ನಿನಗಾಗಿ ನನ್ನ ಪ್ರಾಣವನ್ನೇ ಕೊಡುವೆನು” ಎಂದು ಹೇಳಿದನು.38 ಆಗ ಯೇಸು ಅವನಿಗೆ, “ನೀನು ನನಗಾಗಿ ಪ್ರಾಣವನ್ನೇ ಕೊಡುವೆಯಾ? ನಿನಗೆ ನಿಜನಿಜವಾಗಿ ಹೇಳುತ್ತೇನೆ: ನೀನು ನನ್ನನ್ನು ಮೂರು ಸಾರಿ ನಿರಾಕರಿಸುವ ತನಕ ಕೋಳಿಯು ಕೂಗುವುದೇ ಇಲ್ಲ” ಎಂದನು.

ಜಾನ್ 13

14 “ನಿಮ್ಮ ಹೃದಯವು ಕಳವಳಗೊಳ್ಳದಿರಲಿ. ನೀವು ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ.2 ನನ್ನ ತಂದೆಯ ಮನೆಯಲ್ಲಿ ಅನೇಕ ವಾಸಸ್ಥಾನಗಳಿವೆ, ಇಲ್ಲದಿದ್ದರೆ ನಾನು ನಿಮಗೆ ಹೇಳುತ್ತಿದ್ದೆನು. ನಾನು ನಿಮಗಾಗಿ ಸ್ಥಳವನ್ನು ಸಿದ್ಧಮಾಡುವುದಕ್ಕೆ ಹೋಗುತ್ತೇನಲ್ಲಾ!3 ನಾನು ಹೋಗಿ ನಿಮಗಾಗಿ ಸ್ಥಳವನ್ನು ಸಿದ್ಧಪಡಿಸಿದ ಮೇಲೆ, ಪುನಃ ಬಂದು ನಿಮ್ಮನ್ನು ನನ್ನ ಬಳಿಗೆ ಸೇರಿಸಿಕೊಳ್ಳುವೆನು. ಏಕೆಂದರೆ, ನಾನಿರುವಲ್ಲಿ ನೀವು ಸಹ ಇರಬೇಕು.4 ನಾನು ಹೋಗುವ ಸ್ಥಳದ ಮಾರ್ಗವು ನಿಮಗೆ ತಿಳಿದಿದೆ” ಎಂದನು.5 ತೋಮನು ಆತನಿಗೆ, “ಕರ್ತನೇ, ನೀನು ಎಲ್ಲಿಗೆ ಹೋಗುತ್ತೀ ಎಂಬುದೇ ನಮಗೆ ತಿಳಿಯದು, ಮತ್ತೆ ಮಾರ್ಗವು ಹೇಗೆ ತಿಳಿದೀತು?” ಎಂದು ಕೇಳಲು,6 ಯೇಸು ಅವನಿಗೆ, “ನಾನೇ ಮಾರ್ಗವೂ, ಸತ್ಯವೂ ಮತ್ತು ಜೀವವೂ ಆಗಿದ್ದೇನೆ. ನನ್ನ ಮೂಲಕವಲ್ಲದೆ ಯಾರೂ ತಂದೆಯ ಬಳಿಗೆ ಬರಲಾರರು.7 ನೀವು ನನ್ನನ್ನು ತಿಳಿದಿದ್ದರೆ ನನ್ನ ತಂದೆಯನ್ನೂ ಸಹ ತಿಳಿಯುತ್ತಿದ್ದಿರಿ. ಈಗಿನಿಂದ ನೀವು ಆತನನ್ನು ತಿಳಿದಿದ್ದೀರಿ ಮತ್ತು ಆತನನ್ನು ನೋಡಿದ್ದೀರಿ” ಎಂದು ಹೇಳಿದನು.8 ಫಿಲಿಪ್ಪನು, “ಕರ್ತನೇ, ನಮಗೆ ತಂದೆಯನ್ನು ತೋರಿಸು ನಮಗೆ ಅಷ್ಟೇ ಸಾಕು” ಎಂದನು.9 ಯೇಸು ಅವನಿಗೆ, “ಫಿಲಿಪ್ಪನೇ, ನಾನು ಇಷ್ಟು ಕಾಲ ನಿಮ್ಮ ಜೊತೆಯಲ್ಲಿಯೇ ಇದ್ದರೂ ಇನ್ನೂ ನೀನು ನನ್ನನ್ನು ತಿಳಿಯಲಿಲ್ಲವೇ! ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ, ಮತ್ತು ನಮಗೆ ತಂದೆಯನ್ನು ತೋರಿಸು ಎಂದು ನೀನು ಹೇಳುವುದಾದರು ಹೇಗೆ?10 ನಾನು ತಂದೆಯಲ್ಲಿ ಇದ್ದೇನೆ ಮತ್ತು ತಂದೆಯು ನನ್ನಲ್ಲಿ ಇದ್ದಾನೆ ಎಂಬುದನ್ನು ನೀನು ನಂಬುವುದಿಲ್ಲವೋ? ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಆಡುವುದಿಲ್ಲ; ತಂದೆಯು ನನ್ನಲ್ಲಿ ಇದ್ದುಕೊಂಡು ತನ್ನ ಕಾರ್ಯಗಳನ್ನು ಮಾಡುತ್ತಾನೆ.11 ನಾನು ತಂದೆಯಲ್ಲಿಯೂ, ತಂದೆಯು ನನ್ನಲ್ಲಿಯೂ ಇದ್ದಾನೆಂದು ತಿಳಿದು ನೀವು ನನ್ನನ್ನು ನಂಬಿರಿ. ಇಲ್ಲವೇ ನಾನು ಮಾಡಿದ ಕಾರ್ಯಗಳ ನಿಮಿತ್ತದಿಂದಾದರೂ ನೀವು ನನ್ನನ್ನು ನಂಬಿರಿ.12 “ನಿಮಗೆ ನಿಜನಿಜವಾಗಿ ಹೇಳುತ್ತೇನೆ. ನನ್ನನ್ನು ನಂಬುವವನು ನಾನು ಮಾಡುವ ಕಾರ್ಯಗಳನ್ನು ತಾನು ಸಹ ಮಾಡುತ್ತಾನೆ; ಮತ್ತು ಇವುಗಳಿಗಿಂತ ಮಹತ್ತಾದ ಕ್ರಿಯೆಗಳನ್ನು ಮಾಡುವನು, ಏಕೆಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ.13 ಇದಲ್ಲದೆ ನೀವು ನನ್ನ ಹೆಸರಿನಲ್ಲಿ ಏನೇನು ಬೇಡಿಕೊಳ್ಳುವಿರೋ ಅದನ್ನು ನಾನು ನೆರವೇರಿಸುವೆನು. ಹೀಗೆ ಮಗನ ಮೂಲಕವಾಗಿ ತಂದೆಗೆ ಮಹಿಮೆ ಉಂಟಾಗುವುದು.14 ನೀವು ನನ್ನ ಹೆಸರಿನಲ್ಲಿ ನನ್ನನ್ನು ಏನಾದರೂ ಬೇಡಿಕೊಂಡರೆ ನಾನು ಅದನ್ನು ನೆರವೇರಿಸುವೆನು.15 “ನೀವು ನನ್ನನ್ನು ಪ್ರೀತಿಸುವವರಾದರೆ ನನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವಿರಿ.16 ಆಗ ನಾನು ತಂದೆಯನ್ನು ಕೇಳಿಕೊಳ್ಳುವೆನು, ಆತನು ನಿಮಗೆ ಬೇರೊಬ್ಬ ಸಹಾಯಕನನ್ನು ಸದಾಕಾಲವೂ ನಿಮ್ಮೊಂದಿಗೆ ಇರುವುದಕ್ಕೆ ಕಳುಹಿಸಿ ಕೊಡುವನು.17 ಆ ಸಹಾಯಕನು ಯಾರೆಂದರೆ ಸತ್ಯದ ಆತ್ಮನೇ. ಲೋಕವು ಆತನನ್ನು ನೋಡದೆಯೂ, ತಿಳಿಯದೆಯೂ ಇರುವುದರಿಂದ ಆತನನ್ನು ಸ್ವೀಕರಿಸಲಾರದು. ನೀವು ಆತನನ್ನು ಬಲ್ಲಿರಿ, ಹೇಗೆಂದರೆ ಆತನು ನಿಮ್ಮೊಂದಿಗೆ ವಾಸಮಾಡುತ್ತಾನೆ ಮತ್ತು ನಿಮ್ಮೊಳಗೆ ಇರುವನು.18 “ನಾನು ನಿಮ್ಮನ್ನು ಅನಾಥರನ್ನಾಗಿ ಬಿಡುವುದಿಲ್ಲ, ನಿಮ್ಮ ಬಳಿಗೆ ಬರುತ್ತೇನೆ.19 ಇನ್ನು ಸ್ವಲ್ಪ ಕಾಲವಾದ ಮೇಲೆ ಲೋಕವು ನನ್ನನ್ನು ನೋಡುವುದಿಲ್ಲ, ಆದರೆ ನೀವು ನನ್ನನ್ನು ನೋಡುವಿರಿ. ನಾನು ಜೀವಿಸುವುದರಿಂದ ನೀವು ಜೀವಿಸುವಿರಿ.20 ನಾನು ನನ್ನ ತಂದೆಯಲ್ಲಿಯೂ, ನೀವು ನನ್ನಲ್ಲಿಯೂ ಮತ್ತು ನಾನು ನಿಮ್ಮಲ್ಲಿಯೂ ಇರುವುದನ್ನು ನೀವು ಆ ದಿನದಲ್ಲಿ ತಿಳಿದುಕೊಳ್ಳುವಿರಿ.21 ನನ್ನ ಆಜ್ಞೆಗಳನ್ನು ಹೊಂದಿ ಅವುಗಳನ್ನು ಕೈಕೊಂಡು ನಡೆಯುವವನೇ ನನ್ನನ್ನು ಪ್ರೀತಿಸುವವನು. ನನ್ನನ್ನು ಪ್ರೀತಿಸುವವನು ನನ್ನ ತಂದೆಗೆ ಪ್ರಿಯನಾಗಿರುವನು. ನಾನೂ ಅವನನ್ನು ಪ್ರೀತಿಸಿ ಅವನಿಗೆ ನನ್ನನ್ನು ಪ್ರಕಟಪಡಿಸಿ ತೋರಿಸುವೆನು” ಎಂದು ಹೇಳಿದನು.22 ಯೂದನು, (ಇವನು ಇಸ್ಕರಿಯೋತನಲ್ಲ) “ಕರ್ತನೇ, ನೀನು ಲೋಕಕ್ಕೆ ಕಾಣಿಸಿಕೊಳ್ಳದೆ ನಮಗೆ ಮಾತ್ರ ಕಾಣಿಸಿಕೊಳ್ಳುವುದಕ್ಕೆ ಕಾರಣವೇನು?” ಎಂದು ಕೇಳಿದನು.23 ಯೇಸು ಅವನಿಗೆ, “ಯಾವನಾದರೂ ನನ್ನನ್ನು ಪ್ರೀತಿಸುವುದಾದರೆ ನನ್ನ ಮಾತಿನಂತೆ ನಡೆಯುವನು. ಅವನನ್ನು ನನ್ನ ತಂದೆಯು ಪ್ರೀತಿಸುವನು ಮತ್ತು ನಾವಿಬ್ಬರೂ ಅವನ ಬಳಿಗೆ ಬಂದು, ಅವನೊಂದಿಗೆ ನೆಲೆಸುವೆವು.24 ನನ್ನನ್ನು ಪ್ರೀತಿಸದವನು, ನನ್ನ ಮಾತುಗಳನ್ನು ಕೈಕೊಂಡು ನಡೆಯುವುದಿಲ್ಲ. ನೀವು ಕೇಳಿದ ಮಾತು ನನ್ನದಲ್ಲ. ನನ್ನನ್ನು ಕಳುಹಿಸಿದ ತಂದೆಯದೇ ಆಗಿದೆ.25 “ಈ ಮಾತುಗಳನ್ನು ನಾನು ಇನ್ನೂ ನಿಮ್ಮ ಬಳಿಯಲ್ಲಿರುವಾಗಲೇ ಹೇಳಿದ್ದೇನೆ.26 ಆದರೆ ಆ ಸಹಾಯಕನು, ಅಂದರೆ ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿಕೊಡುವ ಪವಿತ್ರಾತ್ಮನೇ ನಿಮಗೆ ಎಲ್ಲವನ್ನು ಉಪದೇಶಿಸಿ ನಾನು ನಿಮಗೆ ಹೇಳಿದ್ದನೆಲ್ಲಾ ನಿಮ್ಮ ನೆನಪಿಗೆ ತಂದುಕೊಡುವನು.27 “ನಾನು ನನ್ನ ಸಮಾಧಾನವನ್ನು ನಿಮಗೆ ಕೊಟ್ಟು ಹೋಗುತ್ತಿದ್ದೇನೆ. ನನ್ನಲ್ಲಿರುವಂಥ ಸಮಾಧಾನವನ್ನು ನಾನು ನಿಮಗೆ ಕೊಡುತ್ತೇನೆ. ಲೋಕವು ಕೊಡುವಂತೆ ನಾನು ನಿಮಗೆ ಕೊಡುವುದಿಲ್ಲ. ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ಹೆದರದಿರಲಿ.28 ನಾನು ಹೋಗಿ ಪುನಃ ನಿಮ್ಮ ಬಳಿಗೆ ಬರುತ್ತೇನೆ ಎಂದು ನಿಮಗೆ ಹೇಳಿದ್ದನ್ನು ಕೇಳಿದ್ದೀರಿ. ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ ನಾನು ತಂದೆಯ ಬಳಿಗೆ ಹೋಗುತ್ತೇನೆಂದು ಹೇಳಿದ್ದಕ್ಕೆ ಸಂತೋಷಪಡುತ್ತಿದ್ದೀರಿ, ಏಕೆಂದರೆ ತಂದೆಯು ನನಗಿಂತಲೂ ದೊಡ್ಡವನು.29 ಇದೆಲ್ಲಾ ನಡೆಯುವಾಗ ನೀವು ನನ್ನನ್ನು ನಂಬುವಂತೆ, ಅದು ನಡೆಯುವುದಕ್ಕಿಂತ ಮೊದಲೇ ನಿಮಗೆ ತಿಳಿಸಿದ್ದೇನೆ.30 ಇನ್ನು ಮೇಲೆ ನಾನು ನಿಮ್ಮ ಜೊತೆ ಹೆಚ್ಚು ವಿಷಯಗಳನ್ನು ಮಾತನಾಡುವುದಿಲ್ಲ. ಏಕೆಂದರೆ ಇಹಲೋಕಾಧಿಪತಿಯು ಬರಲಿದ್ದಾನೆ. ನನ್ನ ಮೇಲೆ ಅವನಿಗೆ ಯಾವ ಅಧಿಕಾರವೂ ಇಲ್ಲ.31 ಆದರೂ ನಾನು ತಂದೆಯನ್ನು ಪ್ರೀತಿಸುತ್ತೇನೆಂದು ಲೋಕಕ್ಕೆ ತಿಳಿಯಬೇಕೆಂದು ತಂದೆ ನನಗೆ ಆಜ್ಞಾಪಿಸಿದಂತೆಯೇ ನಾನು ಮಾಡುತ್ತೇನೆ. ಏಳಿರಿ, ನಾವು ಇಲ್ಲಿಂದ ಹೋಗೋಣ” ಎಂದನು.

ಜಾನ್ 14

ಯೇಸುವೇ ನಿಜವಾದ ದ್ರಾಕ್ಷಿಬಳ್ಳಿ15 “ನಾನೇ ನಿಜವಾದ ದ್ರಾಕ್ಷಿಬಳ್ಳಿ, ನನ್ನ ತಂದೆ ತೋಟಗಾರನು.2 ನನ್ನಲ್ಲಿದ್ದು ಫಲಕೊಡದಿರುವ ಪ್ರತಿಯೊಂದು ಕೊಂಬೆಯನ್ನು ಆತನು ಕತ್ತರಿಸಿಹಾಕುತ್ತಾನೆ. ಫಲ ಕೊಡುವ ಪ್ರತಿಯೊಂದು ಕೊಂಬೆಯು ಹೆಚ್ಚು ಫಲ ಕೊಡುವ ಹಾಗೆ ಅದನ್ನು ಕತ್ತರಿಸಿ ಶುದ್ಧಮಾಡುತ್ತಾನೆ.3 ನಾನು ನಿಮಗೆ ಹೇಳಿದ ವಾಕ್ಯದ ದೆಸೆಯಿಂದ ಈಗ ನೀವು ಶುದ್ಧರಾಗಿದ್ದೀರಿ.4 ನೀವು ನನ್ನಲ್ಲಿ ನೆಲೆಗೊಂಡಿರಿ, ನಾನೂ ನಿಮ್ಮಲ್ಲಿ ನೆಲೆಗೊಂಡಿರುವೆನು. ಕೊಂಬೆಯು ಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನಷ್ಟಕ್ಕೇ ತಾನೇ ಫಲಕೊಡಲಾರದೋ, ಹಾಗೆಯೇ ನೀವು ನನ್ನಲ್ಲಿ ನೆಲೆಗೊಂಡಿರದಿದ್ದರೆ ಫಲಕೊಡಲಾರಿರಿ.5 ನಾನು ದ್ರಾಕ್ಷಿಬಳ್ಳಿ, ನೀವು ಕೊಂಬೆಗಳು; ಒಬ್ಬನು ನನ್ನಲ್ಲಿಯೂ ನಾನು ಅವನಲ್ಲಿಯೂ ನೆಲೆಗೊಂಡಿದ್ದರೆ ಅವನು ಬಹಳ ಫಲ ಕೊಡುವನು. ನೀವು ನನ್ನನ್ನು ಬಿಟ್ಟು ಏನೂ ಮಾಡಲಾರಿರಿ.6 ಯಾವನು ನನ್ನಲ್ಲಿ ನೆಲೆಗೊಂಡಿರುವುದಿಲ್ಲವೋ ಅವನು ಹೊರಕ್ಕೆ ಬಿಸಾಡಲ್ಪಟ್ಟ ಕೊಂಬೆಯಂತೆ ಒಣಗಿಹೋಗುವನು. ಅಂಥ ಕೊಂಬೆಗಳನ್ನು ಕೂಡಿಸಿ ಬೆಂಕಿಯಲ್ಲಿ ಹಾಕುವರು. ಅವು ಸುಟ್ಟು ಹೋಗುತ್ತವೆ.7 ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನೀವು ಏನಾದರೂ ಬೇಡಿಕೊಳ್ಳಿರಿ ಅದು ನಿಮಗೆ ದೊರೆಯುವುದು.8 ನೀವು ಬಹಳ ಫಲಕೊಡುವುದರಿಂದಲೇ ನನ್ನ ತಂದೆಗೆ ಮಹಿಮೆ ಉಂಟಾಗುವುದು ಮತ್ತು ನೀವು ನನ್ನ ಶಿಷ್ಯರಾಗುವಿರಿ.9 “ತಂದೆ ನನ್ನನ್ನು ಪ್ರೀತಿಸಿದ ಹಾಗೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ. ನೀವು ನನ್ನ ಪ್ರೀತಿಯಲ್ಲಿ ನೆಲೆಗೊಂಡಿರಿ.10 ನಾನು ನನ್ನ ತಂದೆಯ ಆಜ್ಞೆಗಳನ್ನು ಕೈಗೊಂಡು ಆತನ ಪ್ರೀತಿಯಲ್ಲಿ ನೆಲೆಗೊಂಡಿರುವ ಪ್ರಕಾರ, ನೀವು ನನ್ನ ಆಜ್ಞೆಗಳನ್ನು ಕೈಕೊಂಡು ನಡೆದರೆ, ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ.11 ನನ್ನಲ್ಲಿರುವ ಆನಂದವು ನಿಮ್ಮಲ್ಲಿಯೂ ಇರಬೇಕೆಂದೂ, ಆ ನಿಮ್ಮ ಆನಂದವು ಪರಿಪೂರ್ಣವಾಗಬೇಕೆಂದೂ ನಾನು ಇವುಗಳನ್ನು ನಿಮಗೆ ಹೇಳಿದ್ದೇನೆ.12 ನಾನು ನಿಮ್ಮನ್ನು ಪ್ರೀತಿಸಿದ ಹಾಗೆಯೇ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನನ್ನ ಆಜ್ಞೆಯಾಗಿದೆ.13 ತನ್ನ ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವುದೂ ಇಲ್ಲ.14 ನಾನು ನಿಮಗೆ ಕೊಟ್ಟ ಆಜ್ಞೆಗಳ ಪ್ರಕಾರ ನೀವು ನಡೆದರೆ, ನೀವು ನನ್ನ ಸ್ನೇಹಿತರು.15 ಇನ್ನು ಮೇಲೆ ನಾನು ನಿಮ್ಮನ್ನು ಆಳುಗಳೆಂದು ಕರೆಯುವುದಿಲ್ಲ, ಏಕೆಂದರೆ, ಯಜಮಾನನು ಮಾಡುವಂಥದ್ದು ಆಳಿಗೆ ತಿಳಿಯುವುದಿಲ್ಲ. ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ, ಏಕೆಂದರೆ ತಂದೆಯ ಕಡೆಯಿಂದ ನಾನು ಕೇಳಿದ್ದನ್ನೆಲ್ಲಾ ನಾನು ನಿಮಗೆ ತಿಳಿಸಿದ್ದೇನೆ.16 ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ. ನಾನು ನಿಮ್ಮನ್ನು ಆರಿಸಿಕೊಂಡಿದ್ದೇನೆ, ನೀವು ಹೊರಟು ಹೋಗಿ ಫಲಕೊಡಬೇಕೆಂತಲೂ, ಹಾಗೂ ನೀವು ಕೊಡುವ ಫಲವು ಸದಾಕಾಲ ನಿಲ್ಲುವಂಥದ್ದಾಗಬೇಕಂತಲೂ ನಾನು ನಿಮ್ಮನ್ನು ನೇಮಿಸಿದ್ದೇನೆ. ಹೀಗಿರಲಾಗಿ ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನೇನು ಬೇಡಿಕೊಳ್ಳುವಿರೋ, ಅದನ್ನು ಆತನು ನಿಮಗೆ ಕೊಡುವನು.17 ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂತಲೇ ಇವುಗಳನ್ನು ನಾನು ನಿಮಗೆ ಆಜ್ಞಾಪಿಸುತ್ತಿದ್ದೇನೆ.18 “ಲೋಕವು ನಿಮ್ಮನ್ನು ದ್ವೇಷ ಮಾಡುವುದಾದರೆ ಅದು ಮೊದಲು ನನ್ನನ್ನು ದ್ವೇಷ ಮಾಡಿತ್ತೆಂದು ನೀವು ತಿಳಿದುಕೊಳ್ಳಿರಿ.19 ನೀವು ಲೋಕದವರಾಗಿದ್ದರೆ ಲೋಕವು ನಿಮ್ಮನ್ನು ತನ್ನವರೆಂದು ಪ್ರೀತಿಸುತ್ತಿತ್ತು. ನೀವಾದರೋ ಲೋಕದ ಕಡೆಯವರಲ್ಲ, ನಾನು ನಿಮ್ಮನ್ನು ಆರಿಸಿಕೊಂಡಿದ್ದರಿಂದಲೇ ಲೋಕವು ನಿಮ್ಮನ್ನು ದ್ವೇಷ ಮಾಡುತ್ತದೆ.20 ದಣಿಗಿಂತ ಆಳು ದೊಡ್ಡವನಲ್ಲವೆಂಬುದಾಗಿ ನಾನು ನಿಮಗೆ ಹೇಳಿದ ಮಾತನ್ನು ಜ್ಞಾಪಕ ಮಾಡಿಕೊಳ್ಳಿರಿ. ಅವರು ನನ್ನನ್ನು ಹಿಂಸೆಪಡಿಸಿದರೆ ನಿಮ್ಮನ್ನು ಸಹ ಹಿಂಸೆಪಡಿಸುವರು. ಅವರು ನನ್ನ ಮಾತನ್ನು ಕೈಗೊಂಡಿದ್ದರೆ ನಿಮ್ಮ ಮಾತನ್ನು ಸಹ ಕೈಗೊಳ್ಳುತ್ತಿದ್ದರು.21 ಆದರೆ ಅವರು ನನ್ನನ್ನು ಕಳುಹಿಸಿಕೊಟ್ಟಾತನನ್ನು ತಿಳಿಯದವರಾದ್ದರಿಂದ ಇದನ್ನೆಲ್ಲಾ ನನ್ನ ಹೆಸರಿನ ನಿಮಿತ್ತ ನಿಮಗೆ ಮಾಡುವರು.22 ನಾನು ಬಾರದೆ ಮತ್ತು ಅವರ ಸಂಗಡ ಮಾತನಾಡದೆ ಹೋಗಿದ್ದಾರೆ ಅವರಿಗೆ ಪಾಪವು ಇರುತ್ತಿರಲಿಲ್ಲ. ಆದರೆ ಅವರ ಪಾಪಕ್ಕಾಗಿ ಈಗ ಯಾವ ನೆಪವೂ ಇಲ್ಲ.23 ನನ್ನನ್ನು ದ್ವೇಷಿಸುವವನು ನನ್ನ ತಂದೆಯನ್ನು ಸಹ ದ್ವೇಷಿಸುತ್ತಾನೆ.24 ಬೇರೆ ಯಾರೂ ಮಾಡದಿರುವ ಕ್ರಿಯೆಗಳನ್ನು ನಾನು ಅವರ ನಡುವೆ ಮಾಡದೆಹೋಗಿದ್ದರೆ ಅವರಿಗೆ ಪಾಪವು ಇರುತ್ತಿರಲಿಲ್ಲ. ಆದರೆ ಈಗ ಅವರು ನನ್ನ ಅದ್ಭುತಕಾರ್ಯಗಳನ್ನು ನೋಡಿದ್ದಾರೆ, ಆದರೂ ನನ್ನನ್ನೂ ನನ್ನ ತಂದೆಯನ್ನೂ ದ್ವೇಷಿಸಿದ್ದಾರೆ25 ‘ಅವರು ನನ್ನನ್ನು ನಿಷ್ಕಾರಣವಾಗಿ ದ್ವೇಷಿಸಿದರು’ ಎಂದು ಅವರ ಧರ್ಮಶಾಸ್ತ್ರದಲ್ಲಿ ಬರೆದಿರುವ ಮಾತು ನೆರವೇರುವಂತೆ ಹೀಗಾಯಿತು.26 ಆದರೆ ತಂದೆಯ ಬಳಿಯಿಂದ ನಾನು ನಿಮಗೆ ಕಳುಹಿಸಿಕೊಡುವ ಸಹಾಯಕನು, ಎಂದರೆ, ತಂದೆಯ ಬಳಿಯಿಂದ ಹೊರಡುವ ಸತ್ಯದ ಆತ್ಮನು ಬಂದಾಗ, ಆತನೇ ನನ್ನ ವಿಷಯವಾಗಿ ಸಾಕ್ಷಿ ಕೊಡುವನು.27 ನೀವು ಮೊದಲಿನಿಂದ ನನ್ನ ಸಂಗಡ ಇದ್ದುದರಿಂದ ನೀವೂ ಸಹ ನನಗೆ ಸಾಕ್ಷಿಗಳಾಗಿದ್ದೀರಿ.

ಜಾನ್ 15

16 “ನೀವು ನಂಬಿಕೆಯಿಂದ ಎಡವಿ ಬಿದ್ದು ಹೋಗಬಾರದೆಂದು ನಾನು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ.2 ಅವರು ನಿಮ್ಮನ್ನು ಸಭಾಮಂದಿರದಿಂದ ಹೊರಗೆ ಹಾಕುವರು; ಅದಲ್ಲದೆ ನಿಮ್ಮನ್ನು ಕೊಲ್ಲುವವನು ತಾನು ದೇವರಿಗೆ ಬಲಿಕೊಟ್ಟೆನೆಂದು ಭಾವಿಸುವ ಕಾಲವು ಬರಲಿದೆ.3 ಅವರು ತಂದೆಯನ್ನಾದರೂ ನನ್ನನ್ನಾದರೂ ತಿಳಿಯದವರಾಗಿರುವುದರಿಂದ ಇವೆಲ್ಲವುಗಳನ್ನು ನಿಮಗೆ ಮಾಡುವರು.4 ಆದರೆ ಅವರ ಕಾಲ ಬಂದಾಗ ಆತನು ನಮಗೆ ಇಂಥಿಂಥದ್ದನ್ನು ಹೇಳಿದನಲ್ಲಾ ಎಂದು ನಿಮ್ಮ ನೆನಪಿಗೆ ಬರುವಂತೆ, ನಿಮ್ಮ ಸಂಗಡ ಈ ಮಾತುಗಳನ್ನು ಆಡಿದ್ದೇನೆ. ನಾನು ನಿಮ್ಮ ಸಂಗಡ ಇದ್ದುದರಿಂದ ಮೊದಲು ಇವುಗಳನ್ನು ನಿಮಗೆ ಹೇಳಲಿಲ್ಲ.5 “ಆದರೆ ಈಗ ನಾನು ನನ್ನನ್ನು ಕಳುಹಿಸಿಕೊಟ್ಟಾತನ ಬಳಿಗೆ ಹೋಗುತ್ತೇನೆ. ‘ನೀನು ಎಲ್ಲಿಗೆ ಹೋಗುತ್ತಿ?’ ಎಂದು ನಿಮ್ಮಲ್ಲಿ ಒಬ್ಬನಾದರೂ ನನ್ನನ್ನು ಕೇಳುವುದಿಲ್ಲ.6 ನಾನು ಈ ಮಾತುಗಳನ್ನು ನಿಮಗೆ ಹೇಳಿದ್ದರಿಂದ ನಿಮ್ಮ ಹೃದಯವು ದುಃಖಭರಿತವಾಗಿದೆ.7 ಆದರೂ ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ, ನಾನು ಹೋಗುವುದು ನಿಮಗೆ ಒಳ್ಳೆಯದು, ಹೇಗೆಂದರೆ ನಾನು ಹೋಗದಿದ್ದರೆ ಆ ಸಹಾಯಕನು ನಿಮ್ಮ ಬಳಿಗೆ ಬರುವುದಿಲ್ಲ. ನಾನು ಹೋದರೆ ಆತನನ್ನು ನಿಮ್ಮ ಬಳಿಗೆ ಕಳುಹಿಸಿಕೊಡುತ್ತೇನೆ.8 ಆತನು ಬಂದಾಗ ಪಾಪ, ನೀತಿ ಮತ್ತು ನ್ಯಾಯತೀರ್ಪಿನ ಕುರಿತು ಲೋಕಕ್ಕೆ ಮನವರಿಕೆಯನ್ನು ಉಂಟುಮಾಡುವನು.9 ಅವರು ನನ್ನನ್ನು ನಂಬದೇ ಇರುವುದರಿಂದ ಪಾಪದ ಕುರಿತಾಗಿಯೂ10 ನಾನು ನನ್ನ ತಂದೆಯ ಬಳಿಗೆ ಹೋಗಿ, ಇನ್ನು ಮೇಲೆ ನಿಮಗೆ ಕಾಣಿಸದೆ ಇರುವುದರಿಂದ ನೀತಿಯ ಕುರಿತಾಗಿಯೂ,11 ಇಹಲೋಕಾಧಿಪತಿಗೆ ನ್ಯಾಯತೀರ್ಪಾಗಿರುವುದರಿಂದ ನ್ಯಾಯತೀರ್ಪಿನ ಕುರಿತಾಗಿಯೂ, ಲೋಕಕ್ಕೆ ಮನವರಿಕೆಯನ್ನು ಉಂಟುಮಾಡುವನು.12 “ನಾನು ನಿಮಗೆ ಹೇಳಬೇಕಾದ ವಿಷಯಗಳು ಇನ್ನೂ ಬಹಳ ಉಂಟು, ಆದರೆ ನೀವು ಈಗ ಅವುಗಳನ್ನು ಗ್ರಹಿಸಲು ನಿಮ್ಮಲ್ಲಿ ಸಾಮರ್ಥ್ಯವಿಲ್ಲ.13 ಆದರೆ ಸತ್ಯದ ಆತ್ಮನು ಬರುವಾಗ ಆತನು ನಿಮ್ಮನ್ನು ಪೂರ್ಣ ಸತ್ಯದ ಕಡೆಗೆ ನಡೆಸುವನು. ಆತನು ತನ್ನಷ್ಟಕ್ಕೆ ತಾನೇ ಮಾತನಾಡದೆ ಕೇಳಿದ ಮಾತುಗಳನ್ನೇ ಆಡುವನು ಮತ್ತು ಮುಂದೆ ನಡೆಯುವ ಸಂಗತಿಗಳನ್ನು ನಿಮಗೆ ತಿಳಿಸುವನು.14 ಆತನು ನನ್ನದನ್ನು ಸ್ವೀಕರಿಸಿ ನಿಮಗೆ ತಿಳಿಯಪಡಿಸುತ್ತಾನಾದ್ದರಿಂದ ನನ್ನನ್ನೇ ಮಹಿಮೆಪಡಿಸುವನು.15 ತಂದೆಗೆ ಇರುವುದೆಲ್ಲಾ ನನ್ನದು. ಆದುದರಿಂದಲೇ ನನ್ನದನ್ನು ಸ್ವೀಕರಿಸಿ ನಿಮಗೆ ತಿಳಿಸುವನೆಂದು ನಾನು ಹೇಳಿದೆನು.16 ಇನ್ನು ಸ್ವಲ್ಪ ಕಾಲವಾದ ಮೇಲೆ ನಾನು ನಿಮಗೆ ಕಾಣಿಸುವುದಿಲ್ಲ, ಅನಂತರ ಸ್ವಲ್ಪ ಕಾಲವಾದ ಮೇಲೆ ನೀವು ಪುನಃ ನನ್ನನ್ನು ನೋಡುವಿರಿ” ಎಂದನು.17 ಇದನ್ನು ಕೇಳಿ ಆತನ ಶಿಷ್ಯರಲ್ಲಿ ಕೆಲವರು, “ಇದೇನು ಈತನು ಹೇಳುವ ಮಾತು? ‘ಸ್ವಲ್ಪ ಕಾಲವಾದ ಮೇಲೆ ನಾನು ನಿಮಗೆ ಕಾಣಿಸುವುದಿಲ್ಲ ಅನಂತರ ಸ್ವಲ್ಪ ಕಾಲವಾದ ಮೇಲೆ ನೀವು ಪುನಃ ನನ್ನನ್ನು ನೋಡುವಿರಿ ಮತ್ತು ನಾನು ತಂದೆಯ ಬಳಿಗೆ ಹೋಗುತ್ತೇನೆ’ ಎನ್ನುತ್ತಾನಲ್ಲಾ” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡು18 “‘ಸ್ವಲ್ಪ ಕಾಲವೆಂದು’ ಈತನು ಹೇಳುವ ಈ ಮಾತೇನು? ಏನು ಮಾತನಾಡುತ್ತಿದ್ದಾನೋ ನಮಗೆ ತಿಳಿಯದು” ಎಂದು ಅಂದುಕೊಳ್ಳುತ್ತಿದ್ದರು.19 ಯೇಸುವು ಇದನ್ನು ಕುರಿತು ತನ್ನನ್ನು ಕೇಳಬೇಕೆಂದಿದ್ದಾರೆಂದು ತಿಳಿದು ಅವರಿಗೆ, “ಸ್ವಲ್ಪ ಕಾಲವಾದ ಮೇಲೆ ನಾನು ನಿಮಗೆ ಕಾಣಿಸುವುದಿಲ್ಲ, ಇನ್ನು ಸ್ವಲ್ಪ ಕಾಲವಾದ ಮೇಲೆ ನನ್ನನ್ನು ನೋಡುವಿರಿ, ಎಂದು ನಾನು ನಿಮಗೆ ಹೇಳಿದ್ದಕ್ಕೆ ನೀವು ನಿಮ್ಮನಿಮ್ಮೊಳಗೆ ವಿಚಾರಿಸಿಕೊಳ್ಳುತ್ತಿದ್ದೀರಾ?20 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ. ನೀವು ಅಳುತ್ತಾ ಗೋಳಾಡುತ್ತಾ ಇರುವಿರಿ. ಆದರೆ ಲೋಕವು ಸಂತೋಷಿಸುವುದು. ನಿಮಗೆ ದುಃಖವಾಗುವುದು ಆದರೆ ನಿಮ್ಮ ದುಃಖವು ಹೋಗಿ ಆನಂದ ಬರುವುದು.21 ಒಬ್ಬ ಸ್ತ್ರೀ ಹೆರುವಾಗ ತನ್ನ ಬೇನೆಯ ಕಾಲವು ಬಂದಿತೆಂದು ತಿಳಿದು ಆಕೆಗೆ ದುಃಖವಾಗುತ್ತದೆ, ಆದರೆ ಆಕೆಯು ಕೂಸನ್ನು ಹೆತ್ತ ಮೇಲೆ, ಲೋಕದಲ್ಲಿ ಒಂದು ಮಗು ಹುಟ್ಟಿತೆಂದು ಆನಂದದಿಂದ ಆ ವೇದನೆಯನ್ನು ಪುನಃ ನೆನಸಿಕೊಳ್ಳುವುದಿಲ್ಲ.22 ಹಾಗೆಯೇ, ನಿಮಗೂ ಈಗ ದುಃಖವಿದ್ದರೂ ನಾನು ನಿಮ್ಮನ್ನು ತಿರುಗಿ ನೋಡುವೆನು, ಆಗ ನಿಮ್ಮ ಹೃದಯಕ್ಕೆ ಆನಂದವಾಗುವುದು, ಮತ್ತು ನಿಮ್ಮ ಆನಂದವನ್ನು ಯಾರು ನಿಮ್ಮಿಂದ ತೆಗೆದು ಹಾಕಲು ಸಾಧ್ಯವಿಲ್ಲ.23 ಆ ದಿನದಲ್ಲಿ ನೀವು ನನ್ನನ್ನು ಏನೂ ಕೇಳುವುದಿಲ್ಲ. ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನು ಕೇಳಿಕೊಂಡರೂ ಅದನ್ನು ಆತನು ನಿಮಗೆ ಕೊಡುವನು.24 ನೀವು ಇದುವರೆಗೆ ನನ್ನ ಹೆಸರಿನಲ್ಲಿ ಏನೊಂದನ್ನೂ ಕೇಳಿಕೊಳ್ಳಲಿಲ್ಲ. ಕೇಳಿಕೊಳ್ಳಿರಿ, ಆಗ ನಿಮ್ಮ ಆನಂದವು ಪರಿಪೂರ್ಣವಾಗುವ ಹಾಗೆ ನಿಮಗೆ ದೊರೆಯುವುದು.25 “ಈ ಸಂಗತಿಗಳನ್ನು ಸಾಮ್ಯರೂಪವಾಗಿ ನಿಮಗೆ ಹೇಳಿದ್ದೇನೆ, ಆದರೆ ಇನ್ನು ಮೇಲೆ ಸಾಮ್ಯರೂಪವಾಗಿ ನಿಮ್ಮೊಂದಿಗೆ ಮಾತನಾಡದೆ ತಂದೆಯ ಕುರಿತಾಗಿ ಸ್ಪಷ್ಟವಾಗಿ ತಿಳಿಸುವ ಕಾಲವು ಬರುತ್ತದೆ.26 ಆ ದಿನದಲ್ಲಿ ನೀವು ನನ್ನ ಹೆಸರಿನಲ್ಲಿ ಕೇಳಿಕೊಳ್ಳುವಿರಿ, ನಿಮ್ಮ ಪರವಾಗಿ ನಾನು ತಂದೆಯನ್ನು ಬೇಡಿಕೊಳ್ಳುವೆನೆಂದು ನಾನು ನಿಮಗೆ ಹೇಳುವುದಿಲ್ಲ.27 ನೀವು ನನ್ನನ್ನು ಪ್ರೀತಿಸಿ ನಾನು ತಂದೆಯ ಬಳಿಯಿಂದ ಹೊರಟುಬಂದವನೆಂದು ನಂಬಿದ್ದರಿಂದ ತಂದೆಯು ತಾನೇ ನಿಮ್ಮನ್ನು ಪ್ರೀತಿಸುತ್ತಾನೆ.28 ನಾನು ತಂದೆಯ ಬಳಿಯಿಂದ ಹೊರಟು ಈ ಲೋಕಕ್ಕೆ ಬಂದಿದ್ದೇನೆ, ಪುನಃ ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುತ್ತೇನೆ” ಎಂದನು.29 ಅದಕ್ಕೆ ಆತನ ಶಿಷ್ಯರು, “ಇಗೋ, ನೀನು ಹೇಳುವ ಸಂಗತಿಯನ್ನು ಈಗ ಸಾಮ್ಯರೂಪವಾಗಿ ಹೇಳದೆ ಸ್ಪಷ್ಟವಾಗಿ ಹೇಳುತ್ತಿದ್ದೀ.30 ನೀನು ಸಮಸ್ತವನ್ನು ತಿಳಿದವನೆಂದೂ, ನಿನಗೆ ಪ್ರಶ್ನೆ ಮಾಡಬೇಕಾದ ಅಗತ್ಯವಿಲ್ಲವೆಂದೂ ಈಗ ನಮಗೆ ತಿಳಿಯಿತು. ಆದುದರಿಂದ ನಿನ್ನನ್ನು ದೇವರ ಬಳಿಯಿಂದ ಬಂದವನೇ ಎಂದು ನಾವು ನಂಬುತ್ತೇವೆ” ಎಂದರು.31 ಅದಕ್ಕೆ ಯೇಸು, “ಈಗ ನೀವು ನಂಬುತ್ತೀರಿ.32 ಇಗೋ, ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಸ್ಥಳಕ್ಕೆ ಚದರಿಹೋಗಿ ನನ್ನನ್ನು ಒಬ್ಬಂಟಿಗನಾಗಿ ಬಿಡುವ ಸಮಯವು ಬರುತ್ತದೆ. ಹೌದು, ಅದು ಈಗಲೇ ಬಂದಿದೆ. ಆದರೂ ನಾನು ಏಕಾಂಗಿಯಲ್ಲ, ಏಕೆಂದರೆ ತಂದೆಯು ನನ್ನ ಸಂಗಡ ಇದ್ದಾನೆ.33 ನೀವು ನನ್ನಲ್ಲಿದ್ದು ಸಮಾಧಾನವನ್ನು ಹೊಂದಿದವರಾಗಿರಬೇಕೆಂದು ಇದನ್ನೆಲ್ಲಾ ನಿಮ್ಮೊಂದಿಗೆ ಹೇಳಿದ್ದೇನೆ. ಲೋಕದಲ್ಲಿ ನಿಮಗೆ ಸಂಕಟಗಳುಂಟು. ಆದರೆ ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ” ಎಂದು ಹೇಳಿದನು.

ಜಾನ್ 16

12 ದ್ರಾಕ್ಷಾಲತೆಯು ಒಣಗಿದೆ ಮತ್ತು ಅಂಜೂರದ ಗಿಡವು ಬಾಡಿಹೋಗಿದೆ; ದಾಳಿಂಬೆ, ಖರ್ಜೂರ ಮತ್ತು ಸೇಬು ಮರಗಳು ಹಾಗು ಹೊಲದ ಸಕಲ ವನವೃಕ್ಷಗಳು ಒಣಗಿ ಹೋಗಿವೆ. ಮನುಷ್ಯರು ಸೊರಗಿ ಸಂತೋಷವಿಲ್ಲದೆ ಕಳೆಗುಂದಿದ್ದಾರೆ.

ಜೋಯಲ್ 1:12

9 “ನಿಮ್ಮನ್ನು ಬೂದಿಯಿಂದಲೂ, ಬಿಸಿಗಾಳಿಯಿಂದಲೂ ಬಾಧಿಸಿದೆನು. ನಿಮ್ಮ ಲೆಕ್ಕವಿಲ್ಲದ ವನ, ದ್ರಾಕ್ಷಿತೋಟಗಳನ್ನು, ಅಂಜೂರದ ಗಿಡಗಳನ್ನು, ನಿಮ್ಮ ಎಣ್ಣೆಯ ಮರಗಳನ್ನು ಮಿಡತೆಯು ತಿಂದುಬಿಟ್ಟಿತು. ಆದರೂ ನೀವು ನನ್ನ ಕಡೆಗೆ ಹಿಂದಿರುಗಲಿಲ್ಲ” ಇದು ಯೆಹೋವನು ನುಡಿ.

ಅಮೋಸ್ 4: 9

19 ಕಣಜದಲ್ಲಿ ಕಾಳು ಇನ್ನು ಇದೆಯೋ? ದ್ರಾಕ್ಷಿ, ಅಂಜೂರ, ದಾಳಿಂಬೆ, ಒಲೀವ್ ಈ ಗಿಡಗಳು ಫಲಿಸಲಿಲ್ಲವಲ್ಲಾ. ಇದೇ ದಿನ ಮೊದಲುಗೊಂಡು ನಿಮ್ಮನ್ನು ಆಶೀರ್ವದಿಸುವೆನು.”

ಹಗ್ಗೈ 2:19

4 ನಕ್ಷತ್ರ ಸೈನ್ಯವೆಲ್ಲಾ ಗತಿಸಿ ಹೋಗುವುದು, ಆಕಾಶ ಮಂಡಲವು ಸುರಳಿಯಂತೆ ಸುತ್ತಿಕೊಳ್ಳುವುದು. ದ್ರಾಕ್ಷಿಯ ಎಲೆ ಒಣಗಿ ಗಿಡದಿಂದ ಬೀಳುವಂತೆಯೂ, ಅಂಜೂರ ಮರದಿಂದ ಮಾಗಿದ ಹಣ್ಣು ಉದುರುವ ಹಾಗೂ ತಾರಾಮಂಡಲವೆಲ್ಲಾ ಬಾಡಿ ಕೆಳಗೆ ಉದುರುವುದು.

ಯೆಶಾಯ 34: 4

13 ನಾನು ಇವರನ್ನು ಸಂಪೂರ್ಣವಾಗಿ ನಿರ್ಮೂಲ ಮಾಡಿಬಿಡುವೆನು. ದ್ರಾಕ್ಷಿಯ ಬಳ್ಳಿಯಲ್ಲಿಯೂ, ಅಂಜೂರದ ಮರದಲ್ಲಿಯೂ ಹಣ್ಣಿರುವುದಿಲ್ಲ, ಎಲೆಯು ಬಾಡುವುದು; ನಾನು ಹಾಳುಮಾಡುವವರನ್ನು ಅವರಿಗೆ ನೇಮಿಸುವೆನು” ಇದು ಯೆಹೋವನ ನುಡಿ.

ಯೆರೆಮಿಾಯ 8:13

ಇಸ್ಕರಿಯೋತ ಯೂದನು ಯೇಸುವನ್ನು ಹಿಡಿದುಕೊಟ್ಟದ್ದು

ಯೇಸು ಈ ಮಾತುಗಳನ್ನಾಡಿದ ಮೇಲೆ ತನ್ನ ಶಿಷ್ಯರ ಜೊತೆ ಕೆದ್ರೋನ್ ಹಳ್ಳದ ಆಚೆಗೆ ಹೋದನು. ಆತನೂ, ಆತನ ಶಿಷ್ಯರೂ ಅಲ್ಲಿದ್ದ ಒಂದು ತೋಟದೊಳಗೆ ಪ್ರವೇಶಿಸಿದರು.2 ಆತನನ್ನು ಹಿಡಿದುಕೊಡಲಿದ್ದ ಯೂದನಿಗೂ ಆ ಸ್ಥಳವು ಗೊತ್ತಿತ್ತು ಏಕೆಂದರೆ, ಆಗಾಗ ಯೇಸು ತನ್ನ ಶಿಷ್ಯರೊಂದಿಗೆ ಅಲ್ಲಿ ಸೇರಿಬರುತ್ತಿದ್ದರು.3 ಹೀಗಿರಲಾಗಿ ಯೂದನು ಮುಖ್ಯಯಾಜಕರಿಂದ ಮತ್ತು ಫರಿಸಾಯರಿಂದ ಸೈನಿಕರ ಗುಂಪನ್ನೂ, ಕಾವಲಾಳುಗಳನ್ನೂ ಕರೆದುಕೊಂಡು ದೀಪಗಳನ್ನೂ, ಪಂಜುಗಳನ್ನೂ ಮತ್ತು ಆಯುಧಗಳನ್ನೂ ಹಿಡಿದುಕೊಂಡು ಅಲ್ಲಿಗೆ ಬಂದನು.4 ಆಗ ಯೇಸು ತನಗೆ ಸಂಭವಿಸಲಿರುವುದನ್ನೆಲ್ಲಾ ತಿಳಿದುಕೊಂಡು ಮುಂದಕ್ಕೆ ಹೋಗಿ ಅವರಿಗೆ “ನೀವು ಯಾರನ್ನು ಹುಡುಕುತ್ತೀರಿ?” ಎಂದು ಕೇಳಿದನು.5 ಅದಕ್ಕೆ ಅವರು, “ನಜರೇತಿನ ಯೇಸುವನ್ನು ಹುಡುಕುತ್ತಿದ್ದೇವೆ” ಎಂದರು. ಯೇಸು ಅವರಿಗೆ “ನಾನೇ ಆತನು” ಎಂದು ಹೇಳಿದನು. ಆತನನ್ನು ಹಿಡಿದು ಕೊಡುವ ಯೂದನು ಸಹ ಅವರ ಜೊತೆಯಲ್ಲಿ ನಿಂತಿದ್ದನು.6 ಆತನು ಅವರಿಗೆ “ನಾನೇ ಆತನು” ಎಂದು ಹೇಳಿದಾಗ ಅವರು ಹಿಂದಕ್ಕೆ ಸರಿದು ನೆಲಕ್ಕೆ ಬಿದ್ದರು.7 ಆಗ ಆತನು ಪುನಃ ಅವರಿಗೆ “ನೀವು ಯಾರನ್ನು ಹುಡುಕುತ್ತೀರಿ?” ಎಂದು ಕೇಳಲು, ಅವರು, “ನಜರೇತಿನ ಯೇಸುವನ್ನು ಹುಡುಕುತ್ತೇವೆ” ಎಂದರು.8 ಅದಕ್ಕೆ ಯೇಸು, “ನಾನೇ ಆತನು ಎಂದು ನಿಮಗೆ ಹೇಳಿದೆನಲ್ಲಾ. ನೀವು ನನ್ನನ್ನೇ ಹುಡುಕುವುದಾದರೆ ಇವರನ್ನು ಹೋಗಲುಬಿಡಿರಿ” ಎಂದನು.9 ಹೀಗೆ “ನೀನು ನನಗೆ ಕೊಟ್ಟವರಲ್ಲಿ ಒಬ್ಬನನ್ನಾದರೂ ನಾನು ಕಳೆದುಕೊಳ್ಳಲಿಲ್ಲ” ಎಂದು ತಾನೇ ಹೇಳಿದ ಮಾತು ನೆರವೇರಿತು.10 ಸೀಮೋನ್ ಪೇತ್ರನ ಬಳಿಯಲ್ಲಿ ಒಂದು ಕತ್ತಿ ಇತ್ತು; ಆಗ ಅದನ್ನು ಅವನು ಹೊರಕ್ಕೆ ಎಳೆದುಕೊಂಡು, ಹಿರಿದು ಮಹಾಯಾಜಕನ ಆಳನ್ನು ಹೊಡೆದು ಅವನ ಬಲಗಿವಿಯನ್ನು ಕತ್ತರಿಸಿದನು. ಆ ಆಳಿನ ಹೆಸರು ಮಲ್ಕನು.11 ಆಗ ಯೇಸು ಪೇತ್ರನಿಗೆ, “ಕತ್ತಿಯನ್ನು ಒರೆಯಲ್ಲಿ ಹಾಕು. ತಂದೆಯು ನನಗೆ ಕೊಟ್ಟಿರುವ ಪಾತ್ರೆಯಲ್ಲಿ ನಾನು ಕುಡಿಯಬಾರದೋ?” ಎಂದು ಹೇಳಿದನು.ಮಹಾಯಾಜಕನು ಯೇಸುವನ್ನು ವಿಚಾರಿಸಿದ್ದು; ಪೇತ್ರನು ಆತನನ್ನು ನಾನರಿಯೆ ಎಂದು ಹೇಳಿದ್ದು12 ಆಮೇಲೆ ಆ ಸೈನಿಕರ ಗುಂಪು ಮತ್ತು ಸಹಸ್ರಾಧಿಪತಿಯೂ, ಯೆಹೂದ್ಯರ ಓಲೇಕಾರರೂ ಯೇಸುವನ್ನು ಹಿಡಿದು ಕಟ್ಟಿದರು.13 ಆತನನ್ನು ಮೊದಲು ಅನ್ನನ ಬಳಿಗೆ ಕರೆದುಕೊಂಡು ಹೋದರು. ಅವನು ಆ ವರ್ಷದಲ್ಲಿ ಮಹಾಯಾಜಕನಾಗಿದ್ದ ಕಾಯಫನ ಮಾವನಾಗಿದ್ದನು.

ಯೋಹಾನ 18: 1-13

ಮೊದಲ ವಿಚಾರಣೆ

19 ಅಷ್ಟರೊಳಗೆ ಮಹಾಯಾಜಕನು ಯೇಸುವನ್ನು ಆತನ ಶಿಷ್ಯರ ವಿಷಯವಾಗಿಯೂ ಆತನ ಉಪದೇಶದ ವಿಷಯವಾಗಿಯೂ ವಿಚಾರಿಸಿದನು.20 ಅದಕ್ಕೆ ಯೇಸು, “ನಾನು ಬಹಿರಂಗವಾಗಿ ಲೋಕದ ಮುಂದೆ ಮಾತನಾಡಿದ್ದೇನೆ. ಯೆಹೂದ್ಯರೆಲ್ಲರು ಕೂಡಿ ಬರುವ ಸಭಾಮಂದಿರಗಳಲ್ಲಿಯೂ, ದೇವಾಲಯದಲ್ಲಿಯೂ ನಾನು ಯಾವಾಗಲೂ ಉಪದೇಶಿಸಿದ್ದೇನೆ, ಗುಪ್ತವಾಗಿ ಯಾವುದನ್ನೂ ನಾನು ಮಾತನಾಡಲಿಲ್ಲ.21 ನೀನು ನನ್ನನ್ನು ಯಾಕೆ ವಿಚಾರಿಸುತ್ತೀ? ನಾನು ಏನೇನು ಮಾತನಾಡಿದೆನೋ ಅದನ್ನು ಕೇಳಿದವರನ್ನೇ ವಿಚಾರಿಸು. ನಾನು ಹೇಳಿದ್ದನ್ನು ಅವರು ತಿಳಿದಿದ್ದಾರೆ” ಎಂದು ಉತ್ತರಕೊಟ್ಟನು.22 ಯೇಸು ಈ ಮಾತನ್ನು ಹೇಳಿದಾಗ ಹತ್ತಿರ ನಿಂತಿದ್ದ ಕಾವಲಾಳುಗಳಲ್ಲಿ ಒಬ್ಬನು ತನ್ನ ಕೈಯಿಂದ ಯೇಸುವಿನ ಕೆನ್ನೆಗೆ ಹೊಡೆದು, “ನೀನು ಮಹಾಯಾಜಕನಿಗೆ ಹೀಗೆ ಉತ್ತರ ಕೊಡುತ್ತೀಯೋ?” ಎಂದನು.23 ಯೇಸು ಅವನಿಗೆ “ನಾನು ಏನಾದರೂ ತಪ್ಪನ್ನು ಮಾತನಾಡಿದ್ದರೆ, ಆ ತಪ್ಪಿನ ವಿಷಯವಾಗಿ ಸಾಕ್ಷಿಕೊಡು; ಸತ್ಯವಾಗಿದ್ದರೆ ಏಕೆ ಹೊಡೆಯುತ್ತೀ?” ಎಂದು ಕೇಳಿದನು.24 ಆಗ ಅನ್ನನು ಆತನನ್ನು ಇನ್ನೂ ಕಟ್ಟಿರಲಾಗಿ ಮಹಾಯಾಜಕನಾದ ಕಾಯಫನ ಬಳಿಗೆ ಕಳುಹಿಸಿದನು.

ಯೋಹಾನ 18:19-24

ಎರಡನೇ ವಿಚಾರಣೆ

53 ಅವರು ಯೇಸುವನ್ನು ಮಹಾಯಾಜಕನ ಬಳಿಗೆ ಕರೆದುಕೊಂಡು ಹೋದರು. ಆತನ ಸಂಗಡ ಮುಖ್ಯಯಾಜಕರೆಲ್ಲರೂ, ಹಿರಿಯರು, ಶಾಸ್ತ್ರಿಗಳು ಕೂಡಿಬಂದರು.54 ಮತ್ತು ಪೇತ್ರನು ದೂರದಿಂದ ಆತನನ್ನು ಹಿಂಬಾಲಿಸುತ್ತಾ ಮಹಾಯಾಜಕನ ಅಂಗಳದೊಳಗೆ ಬಂದು ಕಾವಲುಗಾರರ ಸಂಗಡ ಸೇರಿ ಬೆಂಕಿಯ ಮುಂದೆ ಕುಳಿತು ಚಳಿ ಕಾಯಿಸಿಕೊಳ್ಳುತ್ತಿದ್ದನು.55 ಆಗ ಮುಖ್ಯಯಾಜಕರು ಮತ್ತು ಹಿರೀಸಭೆಯ ಸದಸ್ಯರೆಲ್ಲರೂ ಯೇಸುವನ್ನು ಮರಣದಂಡನೆಗೆ ಗುರಿಪಡಿಸುವ ಸಲುವಾಗಿ ಆತನ ವಿರುದ್ಧವಾಗಿ ಸಾಕ್ಷಿ ಹುಡುಕುತ್ತಾ ಇದ್ದರು. ಆದರೆ ಅವರಿಗೆ ಸರಿಯಾದ ಒಂದು ಸಾಕ್ಷ್ಯವೂ ದೊರಕಲಿಲ್ಲ.56 ಅನೇಕರು ಬಂದು ಆತನ ಮೇಲೆ ಸುಳ್ಳುಸಾಕ್ಷಿ ಹೇಳಿದರೂ ಅವರ ಸಾಕ್ಷಿ ಒಂದಕ್ಕೊಂದು ಸರಿಹೊಂದಲಿಲ್ಲ.57-58 ತರುವಾಯ ಕೆಲವರು ಎದ್ದು ನಿಂತು, “‘ಇವನು ಕೈಯಿಂದ ಕಟ್ಟಿರುವ ಈ ದೇವಾಲಯವನ್ನು ನಾನು ಕೆಡವಿಬಿಟ್ಟು ಕೈಯಿಂದ ಕಟ್ಟದಿರುವ ಮತ್ತೊಂದು ಆಲಯವನ್ನು ಮೂರು ದಿನಗಳಲ್ಲಿ ಕಟ್ಟುವೆನು’ ಎಂದು ಈತನು ಹೇಳಿದ್ದನ್ನು ನಾವು ಕೇಳಿಸಿಕೊಂಡಿದ್ದೇವೆ” ಎಂಬುದಾಗಿ ಆತನ ಮೇಲೆ ಸುಳ್ಳುಸಾಕ್ಷಿ ಹೇಳಿದರು.59 ಹೀಗೆ ಹೇಳಿದರೂ ಅವರ ಸಾಕ್ಷಿ ಒಂದಕ್ಕೊಂದು ಸರಿಹೊಂದಲಿಲ್ಲ.60 ಆಗ ಮಹಾಯಾಜಕನು ಅವರ ಮಧ್ಯದಲ್ಲಿ ಎದ್ದು ನಿಂತು, “ನೀನೇನೂ ಉತ್ತರ ಹೇಳುವುದಿಲ್ಲವೋ? ಇವರು ನಿನ್ನ ಮೇಲೆ ಹೇಳುವ ಈ ಸಾಕ್ಷಿ ಏನು?” ಎಂದು ಯೇಸುವನ್ನು ಕೇಳಿದನು.61 ಆದರೆ ಯೇಸು ಏನೂ ಉತ್ತರ ಕೊಡದೆ ಮೌನವಾಗಿದ್ದನು. ಪುನಃ ಮಹಾಯಾಜಕನು, “ನೀನು ಕ್ರಿಸ್ತನೋ, ಸ್ತುತಿಗೆ ಪಾತ್ರನಾದ ದೇವರ ಕುಮಾರನೋ?” ಎಂದು ಆತನನ್ನು ಕೇಳಿದನು.62 ಯೇಸುವು “ಹೌದು ನಾನೇ! “ಇದಲ್ಲದೆ ಮನುಷ್ಯಕುಮಾರನು ಸರ್ವಶಕ್ತನ ಬಲಗಡೆಯಲ್ಲಿ ಆಸೀನನಾಗಿರುವುದನ್ನೂ, ಆಕಾಶದ ಮೇಘಗಳಲ್ಲಿ ಬರುವುದನ್ನೂ ನೀವು ನೋಡುವಿರಿ” ಎಂದನು.63 ಇದನ್ನು ಕೇಳಿ ಮಹಾಯಾಜಕನು ತನ್ನ ಬಟ್ಟೆಗಳನ್ನು ಹರಿದುಕೊಂಡು, “ಇನ್ನೂ ನಮಗೆ ಸಾಕ್ಷಿಗಳ ಅಗತ್ಯವೇನಿದೆ?64 ಇವನು ಮಾಡಿದ ದೇವದೂಷಣೆಯನ್ನು ನೀವು ಕೇಳಿದಿರಲ್ಲಾ, ನಿಮಗೆ ಹೇಗೆ ತೋರುತ್ತದೆ?” ಎಂದು ಕೇಳಲು ಅವರೆಲ್ಲರೂ, ಇವನಿಗೆ ಮರಣದಂಡನೆ ಆಗಬೇಕು ಎಂದು ತೀರ್ಪು ಮಾಡಿದರು.65 ಅನಂತರ ಕೆಲವರು ಆತನ ಮೇಲೆ ಉಗುಳಿ, ಆತನ ಮುಖಕ್ಕೆ ಮುಸುಕನ್ನು ಹಾಕಿ, ಗುದ್ದಿ, ಈಗ “ಪ್ರವಾದಿಸು” ಎಂದರು. ಕಾವಲುಗಾರರು ಆತನನ್ನು ತಮ್ಮ ವಶಕ್ಕೆ ತೆಗೆದುಕೊಂಡು ಆತನಿಗೆ ಹೊಡೆದರು.ಪೇತ್ರನ ನಿರಾಕರಣೆ

ಮಾರ್ಕ್ 14: 53-65

ದ್ರೋಹ ಮಾಡಿದ ಜುದಾಸ್‌ಗೆ ಏನಾಯಿತು?

ಬೆಳಗಾಗಲು ಎಲ್ಲಾ ಮುಖ್ಯಯಾಜಕರೂ, ಜನರ ಹಿರಿಯರೂ ಯೇಸುವನ್ನು ಕೊಲ್ಲಿಸಬೇಕೆಂದು ಸಂಚುಮಾಡಿಕೊಂಡು,2 ಆತನನ್ನು ಕಟ್ಟಿಸಿ ಕರೆದುಕೊಂಡು ಹೋಗಿ ದೇಶಾಧಿಪತಿಯಾದ ಪಿಲಾತನಿಗೆ ಒಪ್ಪಿಸಿದರು.ಯೂದನು ಪಶ್ಚಾತ್ತಾಪಪಟ್ಟು ಆತ್ಮಹತ್ಯೆ ಮಾಡಿಕೊಂಡದ್ದು3 ಆಗ ಆತನನ್ನು ದ್ರೋಹದಿಂದ ಹಿಡಿದುಕೊಟ್ಟಿದ್ದ ಯೂದನು ಯೇಸುವಿಗೆ ಮರಣದಂಡನೆಯ ತೀರ್ಪು ಆಗಿರುವುದನ್ನು ನೋಡಿ, ಪಶ್ಚಾತ್ತಾಪಪಟ್ಟು, ಆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಮುಖ್ಯಯಾಜಕರಿಗೂ ಹಿರಿಯರಿಗೂ ಹಿಂದಿರುಗಿಸಿದನು.4 “ನಿರಪರಾಧಿಯನ್ನು ಮರಣಕ್ಕೆ ಒಪ್ಪಿಸಿಕೊಟ್ಟು ನಾನು ಪಾಪ ಮಾಡಿದ್ದೇನೆ” ಅಂದನು. ಅದಕ್ಕವರು, “ಅದು ನಮಗೇನು? ನೀನೇ ನೋಡಿಕೋ” ಅಂದರು.5 ಆಗ ಅವನು ದೇವಾಲಯದಲ್ಲಿ ಆ ಹಣವನ್ನು ಎಸೆದು ಹೊರಟುಹೋಗಿ ನೇಣು ಹಾಕಿಕೊಂಡು ಸತ್ತನು.6 ಮುಖ್ಯಯಾಜಕರು ಆ ಹಣವನ್ನು ತೆಗೆದುಕೊಂಡು “ಇದು ಜೀವಹತ್ಯೆಗೆ ಕೊಟ್ಟ ಕ್ರಯವಾದುದರಿಂದ ಇದನ್ನು ಕಾಣಿಕೆ ಪೆಟ್ಟಿಗೆಯಲ್ಲಿ ಹಾಕಬಾರದು” ಎಂದರು.7 ಬಳಿಕ ಆಲೋಚನೆಮಾಡಿ ಪರದೇಶಿಗಳನ್ನು ಹೂಣಿಡುವುದಕ್ಕೋಸ್ಕರ ಅದರಿಂದ ಕುಂಬಾರನ ಹೊಲವೆಂಬ ಭೂಮಿಯನ್ನು ಕೊಂಡುಕೊಂಡರು.8 ಈ ಕಾರಣದಿಂದ ಇಂದಿನವರೆಗೂ ಆ ಹೊಲಕ್ಕೆ “ಜೀವಹತ್ಯದ ಹೊಲವೆಂಬ” ಹೆಸರು ಇದೆ

ಮತ್ತಾಯ 27: 1-8

ಪಿಲಾತನು ಯೇಸುವನ್ನು ಮರಣದಂಡನೆಗೆ ಒಪ್ಪಿಸಿದ್ದು

11 ಯೇಸು ದೇಶಾಧಿಪತಿಯ ಮುಂದೆ ನಿಂತಿರುವಾಗ ದೇಶಾಧಿಪತಿಯು ಆತನನ್ನು, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಿದನು. ಯೇಸು, “ನೀನೇ ಹೇಳಿದ್ದೀ” ಅಂದನು.12 ಮತ್ತು ಮುಖ್ಯಯಾಜಕರೂ ಹಿರಿಯರೂ ಆತನ ಮೇಲೆ ದೂರುಹೇಳುತ್ತಿರುವಾಗ ಆತನು ಏನೂ ಉತ್ತರ ಕೊಡಲಿಲ್ಲ,13 ನಂತರ ಪಿಲಾತನು ಆತನನ್ನು, “ನಿನ್ನ ವಿರುದ್ಧ ಇಷ್ಟು ಸಾಕ್ಷಿ ಹೇಳುತ್ತಿದ್ದಾರೆ, ನಿನಗೆ ಕೇಳಿಸುತ್ತಿಲ್ಲವೋ?” ಎಂದು ಕೇಳಿದನು.14 ಆತನು ಅವನ ಯಾವ ಮಾತುಗಳಿಗೂ ಉತ್ತರಕೊಡಲಿಲ್ಲ. ಅದನ್ನು ನೋಡಿ ದೇಶಾಧಿಪತಿಯು ತುಂಬಾ ಆಶ್ಚರ್ಯಪಟ್ಟನು.15 ಆದರೆ ಆ ಹಬ್ಬದಲ್ಲಿ ಜನರು ಅಪೇಕ್ಷಿಸುವ ಸೆರೆಯವನನ್ನು ಅವರಿಗೆ ಬಿಟ್ಟುಕೊಡುವುದು ದೇಶಾಧಿಪತಿಯ ಪದ್ಧತಿಯಾಗಿತ್ತು.16 ಆ ಕಾಲದಲ್ಲಿ ಬರಬ್ಬನೆಂಬ ಕುಖ್ಯಾತನಾದ ಒಬ್ಬ ಸೆರೆಯವನಿದ್ದನು.17 ಹೀಗಿರಲಾಗಿ ಅವರು ಸೇರಿಬಂದಿದ್ದ ಸಮಯದಲ್ಲಿ ಪಿಲಾತನು, “ನಿಮಗೆ ಯಾರನ್ನು ಬಿಟ್ಟುಕೊಡಬೇಕೆನ್ನುತ್ತೀರಿ? ಬರಬ್ಬನನ್ನೋ ಅಥವಾ ಕ್ರಿಸ್ತನೆನ್ನಿಸಿಕೊಳ್ಳುವ ಯೇಸುವನ್ನೋ?” ಎಂದು ಅವರನ್ನು ಕೇಳಿದನು.18 ಏಕೆಂದರೆ ಅವರು ಹೊಟ್ಟೆಕಿಚ್ಚಿನಿಂದಲೇ ಈ ರೀತಿಯಾಗಿ ಮಾಡಿದ್ದಾರೆಂದು ಅವನಿಗೆ ತಿಳಿದಿತ್ತು.19 ಇದಲ್ಲದೆ ಅವನು ನ್ಯಾಯಾಸನದಲ್ಲಿ ಕುಳಿತಿರುವಾಗ ಅವನ ಹೆಂಡತಿಯು, “ನೀನು ಆ ನೀತಿವಂತನ ಗೊಡವೆಗೆ ಹೋಗಬೇಡ; ಅವನ ದೆಸೆಯಿಂದ ಈ ಹೊತ್ತು ಕನಸಿನಲ್ಲಿ ಬಹಳ ತೊಂದರೆ ಪಟ್ಟೆನು” ಎಂದು ಅವನ ಬಳಿಗೆ ಸಂದೇಶ ಹೇಳಿಕಳುಹಿಸಿದಳು.20 ಆದರೆ ಮುಖ್ಯಯಾಜಕರೂ ಹಿರಿಯರೂ ಬರಬ್ಬನನ್ನು ಬಿಟ್ಟುಕೊಡಬೇಕೆಂದು ಬೇಡಿಕೊಳ್ಳುವಂತೆಯೂ ಯೇಸುವನ್ನು ಸಾಯಿಸಬೇಕೆಂದು ಕೇಳುವ ಹಾಗೆಯೂ ಜನರನ್ನು ಒಡಂಬಡಿಸಿದ್ದರು.21 ಅದಕ್ಕೆ ದೇಶಾಧಿಪತಿಯು ಅವರನ್ನು, “ಈ ಇಬ್ಬರಲ್ಲಿ ಯಾರನ್ನು ನಿಮಗೆ ಬಿಟ್ಟುಕೊಡಬೇಕನ್ನುತ್ತೀರಿ?” ಎಂದು ಕೇಳಲು ಅವರು “ಬರಬ್ಬನನ್ನು” ಅಂದರು.22 ಪಿಲಾತನು ಅವರನ್ನು, “ಹಾಗಾದರೆ ಕ್ರಿಸ್ತನೆನ್ನಿಸಿಕೊಳ್ಳುವ ಯೇಸುವನ್ನು ನಾನೇನು ಮಾಡಲಿ?” ಎಂದು ಕೇಳಲು ಎಲ್ಲರೂ, “ಅವನನ್ನು ಶಿಲುಬೆಗೆ ಹಾಕಿಸು” ಅಂದರು.23 ಅದಕ್ಕವನು “ಏಕೆ? ಈತನು ಮಾಡಿದ ಅಪರಾಧವೇನು?” ಅಂದನು. ಆದರೆ ಅವರು, “ಅವನನ್ನು ಶಿಲುಬೆಗೆ ಹಾಕಿಸು” ಎಂದು ಬಹಳವಾಗಿ ಆರ್ಭಟಿಸಿದರು.24 ಆಗ ಪಿಲಾತನು ತನ್ನ ಯತ್ನ ನಡೆಯುವುದಿಲ್ಲ ಗದ್ದಲ ಮಾತ್ರ ಹೆಚ್ಚಾಗುತ್ತದೆ ಎಂದು ತಿಳಿದು ನೀರನ್ನು ತೆಗೆದುಕೊಂಡು ಜನರ ಮುಂದೆ ಕೈ ತೊಳೆದುಕೊಂಡು, “ಈ ನೀತಿವಂತನನ್ನು ಕೊಲ್ಲಿಸುವುದರಲ್ಲಿ ನಾನು ನಿರಪರಾಧಿ, ನೀವೇ ನೋಡಿಕೊಳ್ಳಿರಿ” ಎನ್ನಲು25 ಜನರೆಲ್ಲಾ, “ ಆತನ ರಕ್ತವು ನಮ್ಮ ಮತ್ತು ನಮ್ಮ ಮಕ್ಕಳ ಮೇಲೆ ಬರಲಿ” ಅಂದರು.26 ಆಗ ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಗಳಿಂದ ಹೊಡಿಸಿ ಶಿಲುಬೆಗೆ ಹಾಕುವುದಕ್ಕೆ ಒಪ್ಪಿಸಿದನು.

ಮತ್ತಾಯ 27: 11-26

ಯೇಸುವನ್ನು ಅಪಹಾಸ್ಯ ಮಾಡಿ ಶಿಲುಬೆಗೆ ಹಾಕಿದ್ದು

27 ಆ ಮೇಲೆ ದೇಶಾಧಿಪತಿಯ ಸಿಪಾಯಿಗಳು ಯೇಸುವನ್ನು ಅರಮನೆಯೊಳಗೆ ಕರೆದುಕೊಂಡು ಹೋಗಿ ಪಟಾಲವನ್ನೆಲ್ಲಾ ಆತನ ಸುತ್ತಲೂ ಸೇರಿಸಿಕೊಂಡು,28 ಆತನ ಬಟ್ಟೆಗಳನ್ನು ತೆಗೆದುಹಾಕಿ ಕೆಂಪು ನಿಲುವಂಗಿಯನ್ನು ಹೊದಿಸಿ,29 ಮುಳ್ಳುಬಳ್ಳಿಯಿಂದ ಕಿರೀಟವನ್ನು ಹೆಣೆದು ಆತನ ತಲೆಯ ಮೇಲೆ ಇಟ್ಟು ಬಲಗೈಯಲ್ಲಿ ಬೆತ್ತವನ್ನು ಕೊಟ್ಟು, ಆತನ ಮುಂದೆ ಮೊಣಕಾಲೂರಿ, “ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ” ಎಂದು ಆತನನ್ನು ಪರಿಹಾಸ್ಯಮಾಡಿ30 ಮತ್ತು ಆತನ ಮೇಲೆ ಉಗುಳಿ ಆ ಬೆತ್ತವನ್ನು ತೆಗೆದುಕೊಂಡು ಆತನ ತಲೆಯ ಮೇಲೆ ಹೊಡೆದರು.31 ಹೀಗೆ ಆತನನ್ನು ಪರಿಹಾಸ್ಯಮಾಡಿದ ಮೇಲೆ ಆ ನಿಲುವಂಗಿಯನ್ನು ತೆಗೆದು ಆತನ ಬಟ್ಟೆಗಳನ್ನು ಹೊದಿಸಿ ಆತನನ್ನು ಶಿಲುಬೆಗೆ ಹಾಕುವುದಕ್ಕೆ ತೆಗೆದುಕೊಂಡು ಹೋದರು.ಗೊಲ್ಗೊಥಾಕ್ಕೆ ಪ್ರಯಾಣ32 ಅವರು ಹೊರಕ್ಕೆ ಹೋಗುತ್ತಿರುವಾಗ ಕುರೇನೆ ಪಟ್ಟಣದ ಸೀಮೋನನೆಂಬುವನನ್ನು ಕಂಡು ಅವನನ್ನು ಬಲವಂತವಾಗಿ ಆತನ ಶಿಲುಬೆಯನ್ನು ಹೊರುವುದಕ್ಕೆ ಕರೆದುಕೊಂಡರು.33 ಅವರೆಲ್ಲರೂ ಗೊಲ್ಗೊಥಾ ಅಂದರೆ “ಕಪಾಲಸ್ಥಳ” ಎಂಬ ಸ್ಥಾನಕ್ಕೆ ಬಂದಾಗ34 ಆತನಿಗೆ ಕಹಿ ಬೆರಸಿದ ದ್ರಾಕ್ಷಾರಸವನ್ನು ಕುಡಿಯುವುದಕ್ಕೆ ಕೊಟ್ಟರು; ಆತನು ಅದನ್ನು ರುಚಿ ನೋಡಿ ಕುಡಿಯಲಾರದೆ ಇದ್ದನು.35 ಬಳಿಕ ಅವರು ಆತನನ್ನು ಶಿಲುಬೆಗೆ ಹಾಕಿ ಆತನ ಬಟ್ಟೆಗಳಿಗಾಗಿ ಚೀಟು ಹಾಕಿ ಪಾಲುಮಾಡಿಕೊಂಡರು;36 ಮತ್ತು ಅಲ್ಲಿ ಕುಳಿತುಕೊಂಡು ಆತನನ್ನು ಕಾಯುತ್ತಾ ಇದ್ದರು.37 ಇದಲ್ಲದೆ ಆತನ ಮೇಲೆ ಹೊರಿಸಿದ ಅಪರಾಧವನ್ನು ಬರೆದು ಆತನ ತಲೆಯ ಮೇಲ್ಗಡೆ ಹಚ್ಚಿದರು; ಅದೇನೆಂದರೆ, “ಈತನು ಯೇಸು, ಯೆಹೂದ್ಯರ ಅರಸನು” ಎಂಬುದೇ.38 ಆಗ ಇಬ್ಬರು ಕಳ್ಳರನ್ನು ತಂದು ಒಬ್ಬನನ್ನು ಬಲಗಡೆಯಲ್ಲಿ ಮತ್ತೊಬ್ಬನನ್ನು ಎಡಗಡೆಯಲ್ಲಿ ಆತನ ಸಂಗಡ ಶಿಲುಬೆಗೆ ಹಾಕಿದರು.39 ಅಲ್ಲಿ ಹಾದುಹೋಗುತ್ತಿರುವವರು ತಲೆ ಅಲ್ಲಾಡಿಸಿ,40 “ದೇವಾಲಯವನ್ನು ಕೆಡವಿ ಮೂರು ದಿನದಲ್ಲಿ ಕಟ್ಟುವವನೇ, ನಿನ್ನನ್ನು ರಕ್ಷಿಸಿಕೊ; ನೀನು ದೇವರ ಮಗನೇ ಆಗಿದ್ದರೆ ಶಿಲುಬೆಯಿಂದ ಇಳಿದು ಬಾ” ಎಂದು ಆತನನ್ನು ಹಂಗಿಸುತ್ತಿದ್ದರು.41 ಅದೇ ರೀತಿ ಮುಖ್ಯಯಾಜಕರೂ, ಶಾಸ್ತ್ರಿಗಳೂ, ಹಿರಿಯರೂ, “ಅವನು ಮತ್ತೊಬ್ಬರನ್ನು ರಕ್ಷಿಸಿದನು, ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು.42 ಅವನು ಇಸ್ರಾಯೇಲಿನ ಅರಸನಲ್ಲವೇ. ಈಗ ಶಿಲುಬೆಯಿಂದ ಇಳಿದು ಬರಲಿ, ಇಳಿದು ಬಂದರೆ ಅವನಲ್ಲಿ ನಂಬಿಕೆಯಿಡುತ್ತೇವೆ ಅಂದರು.43 ಅವನು ದೇವರಲ್ಲಿ ಭರವಸವಿಟ್ಟಿದ್ದಾನೆ, ದೇವರಿಗೆ ಇಷ್ಟವಿದ್ದರೆ ಈಗ ಅವನನ್ನು ಬಿಡಿಸಲಿ; ‘ತಾನು ದೇವರ ಮಗನಾಗಿದ್ದೇನೆಂದು ಹೇಳಿದನಲ್ಲಾ’” ಎಂದು ಅಣಕಿಸಿ ಮಾತನಾಡುತ್ತಿದ್ದರು.44 ಆತನ ಸಂಗಡ ಶಿಲುಬೆಗೆ ಹಾಕಲ್ಪಟ್ಟ ಕಳ್ಳರು ಸಹ ಆತನನ್ನು ಅದೇ ಪ್ರಕಾರ ನಿಂದಿಸುತ್ತಿದ್ದರು.ಯೇಸುವಿನ ಮರಣ45 ಮಧ್ಯಾಹ್ನ ಹನ್ನೆರಡು ಘಂಟೆಯಿಂದ ಮೂರು ಘಂಟೆಯ ವರೆಗೆ ಆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು.46 ಸುಮಾರು ಮೂರು ಘಂಟೆಗೆ ಯೇಸು, “ಏಲೀ, ಏಲೀ, ಲಮಾ ಸಬಕ್ತಾನೀ” ಅಂದರೆ, “ನನ್ನ ದೇವರೇ, ನನ್ನ ದೇವರೇ, ಏಕೆ ನನ್ನನ್ನು ಕೈಬಿಟ್ಟಿದ್ದೀ” ಎಂದು ಮಹಾ ಧ್ವನಿಯಿಂದ ಕೂಗಿದನು.47 ಅಲ್ಲಿ ನಿಂತಿದ್ದವರಲ್ಲಿ ಕೆಲವರು ಅದನ್ನು ಕೇಳಿ, “ಇವನು ಎಲೀಯನನ್ನು ಕರೆಯುತ್ತಿದ್ದಾನೆ” ಅಂದನು.48 ಕೂಡಲೆ ಅವರಲ್ಲಿ ಒಬ್ಬನು ಓಡಿಹೋಗಿ ಸ್ಪಂಜನ್ನು ತಂದು ಹುಳಿರಸದಿಂದ ತುಂಬಿಸಿ ಕೋಲಿಗೆ ಸಿಕ್ಕಿಸಿ ಆತನಿಗೆ ಕುಡಿಯುವುದಕ್ಕೆ ಕೊಟ್ಟನು.49 ಮಿಕ್ಕಾದವರು, “ಬಿಡು, ಎಲೀಯನು ಬಂದು ಅವನನ್ನು ರಕ್ಷಿಸುವನೇನೋ ನೋಡೋಣ” ಅಂದರು .50 ಅನಂತರ ಯೇಸು ತಿರುಗಿ ಮಹಾ ಧ್ವನಿಯಿಂದ ಕೂಗಿ ಪ್ರಾಣಬಿಟ್ಟನು.51 ಆಗ ಇಗೋ, ದೇವಾಲಯದ ಪರದೆಯು ಮೇಲಿಂದ ಕೆಳಗಿನವರೆಗೂ ಹರಿದು ಎರಡು ಭಾಗವಾಯಿತು; ಭೂಮಿಯು ನಡುಗಿತು;52 ಬಂಡೆಗಳು ಸೀಳಿಹೋದವು; ಸಮಾಧಿಗಳು ತೆರೆದವು; ನಿದ್ರೆಹೋಗಿದ್ದ ಅನೇಕ ಭಕ್ತರ ದೇಹಗಳು ಜೀವದಿಂದ ಎದ್ದವು;53 ಮತ್ತು ಆತನ ಪುನರುತ್ಥಾನವಾದ ಮೇಲೆ ಸಮಾಧಿಗಳೊಳಗಿಂದ ಹೊರಗೆ ಬಂದು ಪರಿಶುದ್ಧ ಪಟ್ಟಣದೊಳಗೆ ಹೋಗಿ ಅನೇಕರಿಗೆ ಕಾಣಿಸಿಕೊಂಡರು.54 ಶತಾಧಿಪತಿಯು ಮತ್ತು ಅವನ ಸಂಗಡ ಯೇಸುವನ್ನು ಕಾಯುತ್ತಿದ್ದವರು ಭೂಕಂಪವನ್ನೂ, ನಡೆದ ಸಂಗತಿಗಳನ್ನೂ ನೋಡಿ ಬಹಳ ಹೆದರಿಕೊಂಡು, “ನಿಜವಾಗಿ ಈತನು ದೇವಕುಮಾರನಾಗಿದ್ದನು” ಅಂದರು.55 ಇದಲ್ಲದೆ ಅನೇಕ ಸ್ತ್ರೀಯರು ಅಲ್ಲಿ ಇದ್ದು ದೂರದಿಂದ ಇದನ್ನು ನೋಡುತ್ತಿದ್ದರು. ಇವರು ಯೇಸುವಿನ ಸೇವೆಮಾಡುತ್ತಾ ಗಲಿಲಾಯದಿಂದ ಆತನ ಹಿಂದೆ ಬಂದವರಾಗಿದ್ದರು.56 ಇವರಲ್ಲಿ ಮಗ್ದಲದ ಮರಿಯಳೂ ಯಾಕೋಬ ಯೋಸೆಯರ ತಾಯಿಯಾದ ಮರಿಯಳೂ ಜೆಬೆದಾಯನ ಮಕ್ಕಳ ತಾಯಿಯೂ ಇದ್ದರು.

ಮತ್ತಾಯ 27:27-56

31 ಅದು ಸಿದ್ಧತೆಯ ದಿನವಾದುದರಿಂದ ಯೆಹೂದ್ಯರು, ಸಬ್ಬತ್ ದಿನದಲ್ಲಿ ಮೃತದೇಹಗಳು ಶಿಲುಬೆಯ ಮೇಲೆ ಇರಬಾರದೆಂದು, ಪಿಲಾತನನ್ನು ಅವರ ಕಾಲುಗಳನ್ನು ಮುರಿದು ಅವರನ್ನು ತೆಗೆದುಬಿಡಬೇಕೆಂದು ಕೇಳಿಕೊಂಡರು, ಏಕೆಂದರೆ ಆ ಸಬ್ಬತ್ ದಿನವು ಬಹು ವಿಶೇಷವಾದದ್ದು.32 ಅದರಂತೆ ಸಿಪಾಯಿಗಳು ಬಂದು ಮೊದಲನೆಯವನ ಕಾಲುಗಳನ್ನು ಅವನ ಜೊತೆಯಲ್ಲಿ ಶಿಲುಬೆಗೆ ಹಾಕಿಸಿಕೊಂಡಿದ್ದ ಮತ್ತೊಬ್ಬನ ಕಾಲುಗಳನ್ನು ಮುರಿದರು.33 ಆದರೆ ಯೇಸುವಿನ ಬಳಿಗೆ ಬಂದಾಗ ಆತನು ಆಗಲೇ ಸತ್ತಿರುವುದನ್ನು ಅವರು ಕಂಡು ಆತನ ಕಾಲುಗಳನ್ನು ಮುರಿಯಲಿಲ್ಲ.34 ಆದರೆ ಸಿಪಾಯಿಗಳಲ್ಲಿ ಒಬ್ಬನು ಈಟಿಯಿಂದ ಆತನ ಪಕ್ಕೆಯನ್ನು ತಿವಿದನು. ಕೂಡಲೆ ರಕ್ತವೂ ನೀರೂ ಹೊರಗೆ ಬಂದವು.35 ಅದನ್ನು ಕಂಡವನೇ ಸಾಕ್ಷಿ ಹೇಳಿದ್ದಾನೆ. ಅವನ ಸಾಕ್ಷಿಯು ಸತ್ಯವೇ; ತಾನು ಹೇಳುವುದು ಸತ್ಯವೆಂದು ಅವನು ಬಲ್ಲನು. ನೀವು ಸಹ ನಂಬಬೇಕೆಂದು ಇದನ್ನು ಹೇಳಿದ್ದಾನೆ.36 ಏಕೆಂದರೆ “ಆತನ ಎಲುಬುಗಳಲ್ಲಿ ಒಂದನ್ನಾದರೂ ಮುರಿಯಬಾರದು” ಎಂದು ಧರ್ಮಶಾಸ್ತ್ರದಲ್ಲಿ ಬರೆದ ಮಾತು ನೆರವೇರುವಂತೆ ಇದಾಯಿತು.37 “ಅವರು ತಾವು ಇರಿದವನನ್ನು ದೃಷ್ಟಿಸಿನೋಡುವರು” ಎಂದು ಧರ್ಮಶಾಸ್ತ್ರದಲ್ಲಿ ಮತ್ತೊಂದು ಮಾತು ಹೇಳಿ ಅದ

ಯೋಹಾನ 19: 31-37

ಶಿಷ್ಯರು ಯೇಸುವಿನ ದೇಹವನ್ನು ಸಮಾಧಿಯಲ್ಲಿ ಇರಿಸಿದ್ದು

57 ಸಂಜೆಯಾದಾಗ ಅರಿಮಥಾಯ ಊರಿನ ಯೋಸೇಫನೆಂಬ ಒಬ್ಬ ಧನವಂತನು ಅಲ್ಲಿಗೆ ಬಂದನು. ಇವನು ಸಹ ಯೇಸುವಿನ ಶಿಷ್ಯನಾಗಿದ್ದನು.58 ಇವನು ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ತನಗೆ ಕೊಡಿಸಬೇಕೆಂದು ಬೇಡಿಕೊಳ್ಳಲು ಪಿಲಾತನು ಅದನ್ನು ಆತನಿಗೆ ಕೊಡಬೇಕೆಂದು ಅಪ್ಪಣೆಮಾಡಿದನು.59 ಯೋಸೇಫನು ದೇಹವನ್ನು ತೆಗೆದುಕೊಂಡು ಅದನ್ನು ಶುದ್ಧವಾದ ನಾರುಮಡಿಯಲ್ಲಿ ಸುತ್ತಿ60 ಬಂಡೆಯಲ್ಲಿ ತೋಡಿದ್ದ ಹೊಸ ಸಮಾಧಿಯಲ್ಲಿ ಇಟ್ಟು ಸಮಾಧಿಯ ಬಾಗಿಲಿಗೆ ದೊಡ್ಡ ಕಲ್ಲನ್ನು ಉರುಳಿಸಿ ಹೊರಟುಹೋದನು.61 ಮಗ್ದಲದ ಮರಿಯಳೂ ಮತ್ತು ಆ ಇನ್ನೊಬ್ಬ ಮರಿಯಳೂ ಅಲ್ಲಿ ಸಮಾಧಿಗೆ ಎದುರಾಗಿ ಕುಳಿತಿದ್ದರು.

ಮತ್ತಾಯ 27: 57-61

ದೇವರು ವಿಶ್ವವನ್ನು ಸೃಷ್ಟಿಸಿದ್ದು

 ಆದಿಯಲ್ಲಿ ದೇವರು ಆಕಾಶವನ್ನು, ಭೂಮಿಯನ್ನು ಸೃಷ್ಟಿಮಾಡಿದನು.2 ಭೂಮಿಯು ಕ್ರಮವಿಲ್ಲದೆಯೂ ಬರಿದಾಗಿಯೂ ಇತ್ತು. ಆದಿಸಾಗರದ ಮೇಲೆ ಕತ್ತಲಿತ್ತು. ದೇವರಾತ್ಮವು ಸಾಗರದ ಮೇಲೆ ಚಲಿಸುತ್ತಿತ್ತು.3 ಅನಂತರ ದೇವರು “ಬೆಳಕಾಗಲಿ” ಎಂದು ಆಜ್ಞಾಪಿಸಲು ಬೆಳಕಾಯಿತು.ಸೃಷ್ಟಿಯ ಎರಡನೆಯ ವಿವರಣೆ4 ದೇವರು ಆ ಬೆಳಕನ್ನು ಒಳ್ಳೆಯದೆಂದು ಕಂಡನು.5 ದೇವರು ಬೆಳಕನ್ನೂ ಕತ್ತಲನ್ನೂ ಬೇರ್ಪಡಿಸಿ ಬೆಳಕಿಗೆ “ಹಗಲು” ಎಂದೂ, ಕತ್ತಲೆಗೆ “ಇರುಳು” ಎಂದೂ ಹೆಸರಿಟ್ಟನು. ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಮೊದಲನೆಯ ದಿನವಾಯಿತು.6 ಬಳಿಕ ದೇವರು “ಜಲರಾಶಿಗಳ ನಡುವೆ ವಿಸ್ತಾರವಾದ ಗುಮ್ಮಟವು ಉಂಟಾಗಲಿ ಅದು ಕೆಳಗಿನ ನೀರುಗಳನ್ನೂ ಮೇಲಿನ ನೀರುಗಳನ್ನೂ ಬೇರೆ ಬೇರೆ ಮಾಡಲಿ” ಅಂದನು.7 ದೇವರು ವಿಸ್ತಾರವಾದ ಗುಮ್ಮಟವನ್ನು ಮಾಡಿ ಅದರ ಕೆಳಗಿದ್ದ ನೀರುಗಳನ್ನು ಅದರ ಮೇಲಿದ್ದ ನೀರುಗಳಿಂದ ವಿಂಗಡಿಸಿದನು. ಅದು ಹಾಗೆಯೇ ಆಯಿತು.8 ದೇವರು ಆ ಗುಮ್ಮಟಕ್ಕೆ “ಆಕಾಶ” ಎಂದು ಹೆಸರಿಟ್ಟನು. ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಎರಡನೆಯ ದಿನವಾಯಿತು.9 ಅನಂತರ ದೇವರು, “ಆಕಾಶದ ಕೆಳಗಿರುವ ನೀರೆಲ್ಲಾ ಒಂದೇ ಸ್ಥಳದಲ್ಲಿ ಒಟ್ಟಿಗೆ ಕೂಡಿಕೊಳ್ಳಲಿ ಮತ್ತು ಒಣನೆಲವು ಕಾಣಿಸಲಿ” ಅಂದನು. ಹಾಗೆಯೇ ಆಯಿತು.10 ದೇವರು ಒಣನೆಲಕ್ಕೆ “ಭೂಮಿ” ಎಂದೂ ಜಲರಾಶಿಗೆ “ಸಮುದ್ರ” ಎಂದೂ ಹೆಸರಿಟ್ಟನು. ಆತನು ಅದನ್ನು ಒಳ್ಳೆಯದೆಂದು ನೋಡಿದನು.11 ತರುವಾಯ ದೇವರು, “ಭೂಮಿಯು ಹುಲ್ಲನ್ನು, ಸಸ್ಯಗಳನ್ನೂ, ಬೀಜಬಿಡುವ ಕಾಯಿಪಲ್ಯದ ಗಿಡಗಳನ್ನೂ ಬೆಳೆಯಿಸಲಿ ಮತ್ತು ಬೀಜವುಳ್ಳ ಹಣ್ಣಿನ ಮರಗಳನ್ನು ಅವುಗಳ ಜಾತಿಗನುಸಾರವಾಗಿ ಫಲಿಸಲಿ” ಎಂದು ಹೇಳಿದನು, ಹಾಗೆಯೇ ಆಯಿತು.12 ಭೂಮಿಯಲ್ಲಿ ಸಸ್ಯಗಳು ಬೆಳೆದವು. ತಮ್ಮ ತಮ್ಮ ಜಾತಿಯ ಪ್ರಕಾರ ಬೀಜಬಿಡುವ ಕಾಯಿಪಲ್ಯದ ಗಿಡಗಳು ಉಂಟಾದವು. ತಮ್ಮ ತಮ್ಮ ಜಾತಿಗನುಸಾರವಾಗಿ ಬೀಜವುಳ್ಳ ಹಣ್ಣಿನ ಮರಗಳು ಉತ್ಪತ್ತಿಯಾದವು. ದೇವರು ಅದನ್ನು ಒಳ್ಳೆಯದೆಂದು ಕಂಡನು13 ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಮೂರನೆಯ ದಿನವಾಯಿತು.14 ಬಳಿಕ ದೇವರು, “ಆಕಾಶ ಮಂಡಲದಲ್ಲಿ ಬೆಳಕುಗಳು ಉಂಟಾಗಲಿ. ಅವು ಹಗಲಿರುಳುಗಳನ್ನು ಬೇರೆ ಬೇರೆ ಮಾಡಲಿ. ಅವು ಕಾಲಗಳನ್ನೂ, ದಿನಸಂವತ್ಸರಗಳನ್ನೂ ಸೂಚಿಸುವ ಗುರುತುಗಳಾಗಿರಲಿ.15 ಭೂಮಿಯ ಮೇಲೆ ಬೆಳಕು ಕೊಡುವುದಕ್ಕೆ ಅವು ಆಕಾಶಮಂಡಲದಲ್ಲಿ ದೀಪಗಳಂತಿರಲಿ” ಅಂದನು. ಹಾಗೆಯೇ ಆಯಿತು.16 ದೇವರು ಹಗಲನ್ನಾಳುವುದಕ್ಕೆ ದೊಡ್ಡ ದೀಪವನ್ನೂ ಇರುಳನ್ನಾಳುವುದಕ್ಕೆ ಚಿಕ್ಕ ದೀಪವನ್ನೂ ಹೀಗೆ ಎರಡು ದೊಡ್ಡ ದೀಪಗಳನ್ನು ಉಂಟು ಮಾಡಿದನು. ಆತನು ನಕ್ಷತ್ರಗಳನ್ನು ಸಹ ಉಂಟು ಮಾಡಿದನು.17 ದೇವರು ಆ ಬೆಳಕುಗಳನ್ನು ಆಕಾಶದಲ್ಲಿ ನಿಲ್ಲಿಸಿ ಭೂಮಿಯ ಮೇಲೆ ಬೆಳಕು ಕೊಡುವುದಕ್ಕೂ18 ಹಗಲಿರುಳುಗಳನ್ನು ಆಳುವುದಕ್ಕೂ ಬೆಳಕನ್ನು, ಕತ್ತಲನ್ನು ಬೇರೆ ಬೇರೆ ಮಾಡುವುದಕ್ಕೂ ಅವುಗಳನ್ನು ನೇಮಿಸಿದನು. ದೇವರು ಅದನ್ನು ಒಳ್ಳೆಯದೆಂದು ಕಂಡನು.19 ಸಾಯಂಕಾಲವೂ ಉದಯಕಾಲವೂ ಆಗಿ ನಾಲ್ಕನೆಯ ದಿನವಾಯಿತು.20 ತರುವಾಯ ದೇವರು, “ಗುಂಪು ಗುಂಪಾಗಿ ಚಲಿಸುವ ಜಲಜಂತುಗಳು ನೀರಿನಲ್ಲಿ ತುಂಬಿಕೊಳ್ಳಲಿ, ಪಕ್ಷಿಗಳು ಭೂಮಿಯ ಮೇಲೆ ಅಂತರಿಕ್ಷದಲ್ಲಿ ಹಾರಾಡಲಿ” ಎಂದು ಹೇಳಿದನು.21 ಹೀಗೆ ದೇವರು ಮಹಾ ಜಲಚರಗಳನ್ನೂ ನೀರಿನಲ್ಲಿ ತುಂಬಿರುವ ಸಕಲ ವಿಧವಾದ ಜೀವಿಗಳನ್ನೂ ರೆಕ್ಕೆಗಳುಳ್ಳ ಸಕಲವಿಧವಾದ ಪಕ್ಷಿಗಳನ್ನೂ ಅವುಗಳ ಜಾತಿಗನುಸಾರವಾಗಿ ಉಂಟುಮಾಡಿದನು. ಆತನು ಅದನ್ನು ಒಳ್ಳೆಯದೆಂದು ಕಂಡನು.22 ಇದಲ್ಲದೆ ದೇವರು, “ಅವುಗಳಿಗೆ ನೀವು ಅಭಿವೃದ್ಧಿಯಾಗಿ ಹೆಚ್ಚಿರಿ, ಜಲಚರಗಳು ಸಮುದ್ರದ ನೀರಿನಲ್ಲಿ ತುಂಬಿಕೊಳ್ಳಲಿ, ಪಕ್ಷಿಗಳು ಭೂಮಿಯ ಮೇಲೆ ಹೆಚ್ಚಲಿ” ಎಂದು ಹೇಳಿ ಆಶೀರ್ವದಿಸಿದನು.23 ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಐದನೆಯ ದಿನವಾಯಿತು.24 ಬಳಿಕ ದೇವರು, “ಭೂಮಿಯಿಂದ ಜೀವಜಂತುಗಳು ಉಂಟಾಗಲಿ; ಪಶು, ಕ್ರಿಮಿಗಳೂ ಕಾಡುಮೃಗಗಳು, ತಮ್ಮ ತಮ್ಮ ಜಾತಿಗನುಸಾರವಾಗಿ ಹುಟ್ಟಲಿ” ಅಂದನು. ಹಾಗೆಯೇ ಆಯಿತು.25 ದೇವರು ಕಾಡುಮೃಗಗಳನ್ನೂ, ಪಶುಗಳನ್ನೂ, ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳನ್ನೂ ಅವುಗಳ ಜಾತಿಗನುಸಾರವಾಗಿ ಉಂಟುಮಾಡಿದನು. ಆತನು ಅದನ್ನು ಒಳ್ಳೆಯದೆಂದು ಕಂಡನು.26 ಆಮೇಲೆ ದೇವರು, ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟು ಮಾಡೋಣ. ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ, ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ, ಪ್ರಾಣಿಗಳ ಮೇಲೆಯೂ, ನೆಲದ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಕೀಟಗಳ ಮೇಲೆಯೂ ಎಲ್ಲಾ ಭೂಮಿಯ ಮೇಲೆಯೂ ದೊರೆತನಮಾಡಲಿ ಅಂದನು.27 ಹೀಗೆ ದೇವರು; “ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು. ದೇವರ ಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು. ಅವರನ್ನು ಗಂಡುಹೆಣ್ಣಾಗಿ ಸೃಷ್ಟಿ ಮಾಡಿದನು.”28 ಇದಲ್ಲದೆ ದೇವರು ಅವರನ್ನು ಆಶೀರ್ವದಿಸಿ, “ನೀವು ಬಹು ಸಂತಾನವುಳ್ಳವರಾಗಿ ಹೆಚ್ಚಿರಿ. ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನ ಮಾಡಿರಿ” ಎಂದು ಅವರಿಗೆ ಹೇಳಿದನು.29 ಅಲ್ಲದೆ ದೇವರು, “ಇಗೋ, ಸಮಸ್ತ ಭೂಮಿಯ ಮೇಲಿರುವ ಬೀಜವುಳ್ಳ ಎಲ್ಲಾ ಪೈರುಗಳನ್ನೂ, ಬೀಜವುಳ್ಳ ಎಲ್ಲಾ ಹಣ್ಣಿನ ಮರಗಳನ್ನೂ ನಿಮಗೆ ಆಹಾರಕ್ಕಾಗಿ ಕೊಟ್ಟಿದ್ದೇನೆ30 ಇದಲ್ಲದೆ ಭೂಮಿಯ ಮೇಲೆ ತಿರುಗಾಡುವ ಮೃಗಗಳು, ಆಕಾಶದಲ್ಲಿ ಹಾರಾಡುವ ಪಕ್ಷಿಗಳು, ನೆಲದಲ್ಲಿ ಹರಿದಾಡುವ ಕ್ರಿಮಿಕೀಟಗಳು ಮೊದಲಾದ ಜೀವಿಗಳಿಗೆ ಹಸುರಾದ ಸಸ್ಯಗಳನ್ನೆಲ್ಲಾ ಆಹಾರಕ್ಕಾಗಿ ಕೊಟ್ಟಿದ್ದೇನೆ” ಎಂದು ಹೇಳಿದನು. ಅದು ಹಾಗೆಯೇ ಆಯಿತು.31 ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅವೆಲ್ಲವೂ ಬಹು ಒಳ್ಳೆಯದಾಗಿ ತೋರಿತು. ಸಾಯಂಕಾಲವೂ ಉದಯಕಾಲವೂ ಆಗಿ ಆರನೆಯ ದಿನವಾಯಿತು.

ಜೆನೆಸಿಸ್ 1

2 ಹೀಗೆ ಭೂಮಿಯು ಆಕಾಶಗಳು ಅವುಗಳಲ್ಲಿರುವ ಸಮಸ್ತವೂ ನಿರ್ಮಿತವಾದವು.2 ದೇವರು ತನ್ನ ಸೃಷ್ಟಿಕಾರ್ಯವನ್ನು ಮುಗಿಸಿಬಿಟ್ಟು ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನು.3 ದೇವರು ತನ್ನ ಸೃಷ್ಟಿ ಕಾರ್ಯವನ್ನು ಮುಗಿಸಿದ ನಂತರ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡಿದ್ದರಿಂದ ಆ ದಿನವನ್ನು ಪರಿಶುದ್ಧ ದಿನವಾಗಿರಲಿ ಎಂದು ಆಶೀರ್ವದಿಸಿದನು.4 ಯೆಹೋವನಾದ ದೇವರು ಭೂಮಿಯು ಆಕಾಶಗಳನ್ನು ನಿರ್ಮಾಣ ಮಾಡಿದ ಚರಿತ್ರೆ ಇದೇ.ಏದೆನ್ ಉದ್ಯಾನವನವೂ ಪಾಪೋತ್ಪತ್ತಿಯೂ5 ಯೆಹೋವನಾದ ದೇವರು ಭೂಮ್ಯಾಕಾಶಗಳನ್ನು ಉಂಟುಮಾಡಿದಾಗ ಯಾವ ವಿಧವಾದ ಗಿಡವೂ ಭೂಮಿಯಲ್ಲಿ ಇರಲಿಲ್ಲ. ಯಾವ ಸಸ್ಯವೂ ಮೊಳೆತಿರಲಿಲ್ಲ. ಏಕೆಂದರೆ ಯೆಹೋವನಾದ ದೇವರು ಭೂಮಿಯ ಮೇಲೆ ಮಳೆಯನ್ನು ಸುರಿಸಿರಲಿಲ್ಲ. ಭೂಮಿಯನ್ನು ವ್ಯವಸಾಯ ಮಾಡುವುದಕ್ಕೆ ಮನುಷ್ಯನೂ ಇರಲಿಲ್ಲ.6 ಆದರೂ ಭೂಮಿಯಿಂದ ನೀರಿನ ಬುಗ್ಗೆ ಉಕ್ಕಿ ಮೇಲೆ ಬಂದು ನೆಲವನ್ನೆಲ್ಲಾ ತೋಯಿಸುತ್ತಿದವು.7 ಹೀಗಿರಲು ಯೆಹೋವನಾದ ದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ಸೃಷ್ಟಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು. ಆಗ ಮನುಷ್ಯನು ಬದುಕುವ ಪ್ರಾಣಿಯಾದನು.8 ಇದಲ್ಲದೆ ಯೆಹೋವನಾದ ದೇವರು ಮೂಡಣ ದಿಕ್ಕಿನಲ್ಲಿರುವ ಏದೆನ್ ಸೀಮೆಯಲ್ಲಿ ಒಂದು ಉದ್ಯಾನವನವನ್ನು ಸೃಷ್ಟಿಸಿ ತಾನು ಉಂಟುಮಾಡಿದ ಮನುಷ್ಯನನ್ನು ಅದರಲ್ಲಿ ತಂಗುವಂತೆ ಮಾಡಿದನು.9 ಆನಂತರ ಯೆಹೋವನಾದ ದೇವರು ನೋಡುವುದಕ್ಕೆ ರಮ್ಯವಾಗಿಯೂ, ತಿನ್ನುವುದಕ್ಕೆ ಉತ್ತಮವಾಗಿಯೂ ಇರುವ ಎಲ್ಲಾ ತರಹದ ಮರಗಳನ್ನು ಆ ಭೂಮಿಯಲ್ಲಿ ಬೆಳೆಯುವಂತೆ ಮಾಡಿದನು. ಅದಲ್ಲದೆ ಆ ವನದ ಮಧ್ಯದಲ್ಲಿ ಜೀವದಾಯಕ ವೃಕ್ಷವನ್ನೂ ಒಳ್ಳೇದರ ಕೆಟ್ಟದ್ದರ ಅರಿವನ್ನು ಹುಟ್ಟಿಸುವ ವೃಕ್ಷವನ್ನು ಬೆಳೆಯಿಸಿದನು.10 ಏದೆನ್ ಸೀಮೆಯಲ್ಲಿ ಒಂದು ನದಿ ಹುಟ್ಟಿ ಆ ವನವನ್ನು ತೋಯಿಸುತ್ತಿತು. ಅದು ಅಲ್ಲಿಂದ ನಾಲ್ಕು ಉಪನದಿಗಳಾಗಿ ಕವಲೊಡೆದಿತ್ತು.11 ಮೊದಲನೆಯದರ ಹೆಸರು ಪೀಶೋನ್, ಅದು ಬಂಗಾರ ದೊರೆಯುವ ಹವೀಲ ದೇಶವನ್ನೆಲ್ಲಾ ಸುತ್ತಿ ಹರಿಯುತ್ತದೆ.12 ಆ ಪ್ರದೇಶದ ಬಂಗಾರವು ಅಮೂಲ್ಯವಾದದ್ದು. ಅಲ್ಲಿ ಬದೋಲಖ ಧೂಪವೂ, ಗೋಮೇಧಿಕದ ಅಮೂಲ್ಯ ರತ್ನವು ಸಿಕ್ಕುತ್ತದೆ.13 ಎರಡನೆಯ ನದಿಯ ಹೆಸರು ಗೀಹೋನ್, ಅದು ಕೂಷ್ ದೇಶವನ್ನೆಲ್ಲಾ ಸುತ್ತಿ ಹರಿಯುತ್ತದೆ.14 ಮೂರನೆಯ ನದಿಯ ಹೆಸರು ಟೈಗ್ರೀಸ್; ಅದು ಅಶ್ಶೂರ್ ದೇಶದ ಪೂರ್ವಕ್ಕೆ ಹರಿಯುವುದು. ನಾಲ್ಕನೆಯದು ಯೂಫ್ರೆಟಿಸ್ ನದಿ.15 ಯೆಹೋವನಾದ ದೇವರು ಆ ಮನುಷ್ಯನನ್ನು ಕರೆದುಕೊಂಡು ಹೋಗಿ ಏದೆನ್ ತೋಟವನ್ನು ವ್ಯವಸಾಯ ಮಾಡುವುದಕ್ಕೂ ಕಾಯುವುದಕ್ಕೂ ಅದರಲ್ಲಿ ಇರಿಸಿದನು.16 ಇದಲ್ಲದೆ ಯೆಹೋವನಾದ ದೇವರು ಆ ಮನುಷ್ಯನಿಗೆ, “ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು.17 ಒಳ್ಳೇದರ ಕೆಟ್ಟದ್ದರ ಅರಿವನ್ನು ಹುಟ್ಟಿಸುವ ಈ ಮರದ ಹಣ್ಣನ್ನು ಮಾತ್ರ ತಿನ್ನಬಾರದು. ತಿಂದ ದಿನವೇ ಸತ್ತು ಹೋಗುವೆ” ಎಂದು ಆಜ್ಞಾಪಿಸಿದನು.18 ಅನಂತರ ಯೆಹೋವನಾದ ದೇವರು, “ಮನುಷ್ಯನು ಒಂಟಿಯಾಗಿರುವುದು ಒಳ್ಳೆಯದಲ್ಲ. ಅವನಿಗೆ ಸರಿಯಾದ ಸಹಕಾರಿಯನ್ನು ಉಂಟುಮಾಡುವೆನು” ಅಂದನು.19 ಯೆಹೋವನು ಎಲ್ಲಾ ಭೂಜಂತುಗಳನ್ನೂ ಆಕಾಶದ ಪಕ್ಷಿಗಳನ್ನೂ, ನೆಲದ ಮಣ್ಣಿನಿಂದ ಸೃಷ್ಟಿಸಿ ಇವುಗಳಿಗೆ ಮನುಷ್ಯನು ಏನೇನು ಹೆಸರಿಡುವನೋ ನೋಡೋಣ ಎಂದು ಅವನ ಬಳಿಗೆ ಬರಮಾಡಿದನು. ಮನುಷ್ಯನು ಒಂದೊಂದು ಪ್ರಾಣಿಗೆ ಯಾವ ಯಾವ ಹೆಸರಿಟ್ಟನೋ ಅದೇ ಅವುಗಳ ಹೆಸರಾಯಿತು.20 ಹೀಗೆ ಆದಾಮನು ಎಲ್ಲಾ ಪಶುಗಳಿಗೂ, ಆಕಾಶದ ಪಕ್ಷಿಗಳಿಗೂ, ಕಾಡುಮೃಗಗಳಿಗೂ ಹೆಸರಿಟ್ಟನು. ಆದರೆ ಆ ಮನುಷ್ಯನಿಗೆ ಸರಿಯಾದ ಸಹಕಾರಿ ಸಿಗಲಿಲ್ಲ.21 ಹೀಗಿರುವಲ್ಲಿ ಯೆಹೋವನಾದ ದೇವರು ಆ ಮನುಷ್ಯನಿಗೆ ಗಾಢನಿದ್ರೆಯನ್ನು ಬರಮಾಡಿ ಅವನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತೆಗೆದುಕೊಂಡು ಅದರ ಸ್ಥಳವನ್ನು ಮಾಂಸದಿಂದ ತುಂಬಿದನು.22 ಯೆಹೋವನು ಮನುಷ್ಯನಿಂದ ತೆಗೆದ ಎಲುಬನ್ನು, ಸ್ತ್ರೀಯನ್ನಾಗಿ ಮಾಡಿ ಆಕೆಯನ್ನು ಅವನ ಬಳಿಗೆ ಕರೆದುಕೊಂಡು ಬಂದನು. ಅವನು ಆಕೆಯನ್ನು ನೋಡಿ,23 “ಈಗ ಸರಿ, ಈಕೆಯು ನನ್ನ ಎಲುಬುಗಳಿಂದ ಬಂದ ಎಲುಬು, ನನ್ನ ಮಾಂಸದಿಂದ ಬಂದ ಮಾಂಸವೂ ಆಗಿದ್ದಾಳೆ. ಈಕೆಯು ಮನುಷ್ಯನಿಂದ ಉತ್ಪತ್ತಿಯಾದ ಕಾರಣ ನಾರೀ ಎನ್ನಿಸಿಕೊಳ್ಳುವಳು” ಅಂದನು.24 ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗಿರುವರು.25 ಆ ಮನುಷ್ಯನು ಮತ್ತು ಅವನ ಹೆಂಡತಿ ಬೆತ್ತಲೆಯಾಗಿದ್ದರೂ ನಾಚಿಕೊಳ್ಳಲಿಲ್ಲ.

ಜೆನೆಸಿಸ್ 2

 ಮೊದಲ ಪಸ್ಕಹಬ್ಬ

ಐಗುಪ್ತ ದೇಶದಲ್ಲಿ ಯೆಹೋವನು ಮೋಶೆ ಮತ್ತು ಆರೋನರ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,2 “ಎಲ್ಲಾ ತಿಂಗಳುಗಳಲ್ಲಿ ಇದೇ ನಿಮಗೆ ಮೊದಲ ತಿಂಗಳಾಗಿರಬೇಕು. ಇದೇ ನಿಮಗೆ ಪ್ರತಿ ವರ್ಷದ ಮೊದಲನೆಯ ತಿಂಗಳಾಗಿರುವುದು.3 ಇದರ ವಿಷಯದಲ್ಲಿ ನೀವು ಇಸ್ರಾಯೇಲರ ಸಮೂಹಕ್ಕೆಲ್ಲಾ ಹೀಗೆ ಅಪ್ಪಣೆಮಾಡಬೇಕು, ‘ಈ ತಿಂಗಳಿನ ಹತ್ತನೆಯ ದಿನದಲ್ಲಿ ನಿಮ್ಮ ನಿಮ್ಮ ಗೋತ್ರಗಳ ಪ್ರತಿಯೊಂದು ಮನೆಯವರು ಒಂದೊಂದು ಕುರಿಮರಿಯನ್ನಾಗಲಿ, ಆಡುಮರಿಯನ್ನಾಗಲಿ ತೆಗೆದುಕೊಳ್ಳಬೇಕು.4 ಕುಟುಂಬವು ಚಿಕ್ಕದಾಗಿದ್ದರೆ, ಒಂದು ಕುರಿಮರಿಯನ್ನು ಪೂರ್ಣವಾಗಿ ತಿನ್ನುವುದಕ್ಕೆ ಆಗದೆ ಹೋದ ಪಕ್ಷಕ್ಕೆ ನೆರೆಮನೆಯ ಕುಟುಂಬದವರೊಂದಿಗೆ ಸೇರಿ, ಒಬ್ಬೊಬ್ಬನು ಎಷ್ಟೆಷ್ಟು ತಿನ್ನುವನೆಂದು ಗೊತ್ತುಮಾಡಿಕೊಂಡು ಜನಗಳ ಸಂಖ್ಯಾನುಸಾರ ಮರಿಗಳನ್ನು ತೆಗೆದುಕೊಳ್ಳಲಿ.5 ಆ ಮರಿಯು ಊನವಿಲ್ಲದ ಒಂದು ವರ್ಷದ ಗಂಡುಮರಿಯಾಗಿರಬೇಕು. ನೀವು ಕುರಿಗಳಿಂದಾಗಲಿ ಅಥವಾ ಆಡುಗಳಿಂದಾಗಲಿ ಅದನ್ನು ತೆಗೆದುಕೊಳ್ಳಬಹುದು.6 ಈ ತಿಂಗಳಿನ ಹದಿನಾಲ್ಕನೆಯ ದಿನದವರೆಗೆ ಅವುಗಳನ್ನು ಇಟ್ಟುಕೊಂಡಿದ್ದು, ಆ ದಿನದ ಸಂಜೆ ವೇಳೆಯಲ್ಲಿ ಇಸ್ರಾಯೇಲರ ಸಮೂಹದವರೆಲ್ಲರೂ ಒಟ್ಟಿಗೆ ಸೇರಿ ಅವುಗಳನ್ನು ವಧಿಸಬೇಕು.7 ಅವರು ಅವುಗಳ ರಕ್ತದಲ್ಲಿ ಸ್ವಲ್ಪವನ್ನು ತೆಗೆದು ತಾವು ಆ ಭೋಜನವನ್ನು ಮಾಡುವ ಮನೆಬಾಗಿಲಿನ ಎರಡು ನಿಲುವುಪಟ್ಟಿಗಳಿಗೂ, ಮೇಲಿನ ಪಟ್ಟಿಗೂ ಹಚ್ಚಬೇಕು.8 ಆ ರಾತ್ರಿಯಲ್ಲಿಯೇ ಆ ಮಾಂಸವನ್ನು ಭೋಜನಮಾಡಬೇಕು. ಅದನ್ನು ಬೆಂಕಿಯಲ್ಲಿ ಸುಟ್ಟು ಹುಳಿಯಿಲ್ಲದ ರೊಟ್ಟಿಗಳ ಮತ್ತು ಕಹಿಯಾದ ಸೊಪ್ಪಿನ ಪಲ್ಯಗಳ ಸಂಗಡ ಊಟಮಾಡಬೇಕು.9 ಅದನ್ನು ಹಸಿಯಾಗಿಯೂ ನೀರಿನಲ್ಲಿ ಬೇಯಿಸಿಯೂ ತಿನ್ನಕೂಡದು. ಅದರ ತಲೆ, ತೊಡೆ, ಹೊಟ್ಟೆ, ಇವುಗಳ ಸಹಿತವಾಗಿ ಬೆಂಕಿಯಲ್ಲೇ ಸುಟ್ಟು ತಿನ್ನಬೇಕು.10 ಮರುದಿನದ ಬೆಳಗಿನವರೆಗೆ ಅದರಲ್ಲಿ ಸ್ವಲ್ಪವನ್ನಾದರೂ ಉಳಿಸಕೂಡದು, ಬೆಳಗಿನವರೆಗೆ ಉಳಿದದ್ದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.11 ಆ ಭೋಜನವನ್ನು ಮಾಡಬೇಕಾದ ಕ್ರಮ ಹೇಗೆಂದರೆ: ನೀವು ನಡುವನ್ನು ಕಟ್ಟಿಕೊಂಡು, ಕೆರವನ್ನು ಮೆಟ್ಟಿಕೊಂಡು, ಕೋಲುಹಿಡಿದು, ತ್ವರೆಯಾಗಿ ಮಾಡಬೇಕು. ಇದು ಯೆಹೋವನಿಗೆ ಆಚರಿಸತಕ್ಕ ಪಸ್ಕಹಬ್ಬವು.12 ಆ ರಾತ್ರಿ ನಾನು ಐಗುಪ್ತದೇಶದ ಮೇಲೆ ಹಾದುಹೋಗಿ ಮನುಷ್ಯರಲ್ಲಾಗಲಿ, ಪಶುಗಳಲ್ಲಾಗಲಿ, ಚೊಚ್ಚಲಾಗಿರುವುದನ್ನೆಲ್ಲಾ ಸಂಹರಿಸುವೆನು. ಐಗುಪ್ತ ದೇಶದ ಸಮಸ್ತ ದೇವತೆಗಳಿಗೂ ನ್ಯಾಯತೀರಿಸುವೆನು. ನಾನೇ ಯೆಹೋವನು.13 ಆದರೆ ನೀವು ಇರುವ ಎಲ್ಲಾ ಮನೆಗಳ ಬಾಗಿಲಿಗೆ ಹಚ್ಚಿರುವ ರಕ್ತವು ನಿಮಗೆ ಗುರುತಾಗಿರುವುದು. ಆ ರಕ್ತವನ್ನು ನಾನು ನೋಡುವಾಗ ನಿಮಗೆ ಯಾವ ನಷ್ಟವನ್ನೂ ಮಾಡದೇ ಮುಂದಕ್ಕೆ ದಾಟಿಹೋಗುವೆನು. ನಾನು ಐಗುಪ್ತ್ಯದವರನ್ನು ಸಂಹರಿಸುವಾಗ ನಿಮಗೆ ಯಾವ ಹಾನಿಯೂ ಉಂಟಾಗುವುದಿಲ್ಲ.14 ಈ ದಿನವು ನಿಮಗೆ ಜ್ಞಾಪಕಾರ್ಥವಾಗಿರುವುದು. ಯೆಹೋವನ ಘನಕ್ಕಾಗಿ ಆ ಹಬ್ಬವನ್ನು ತಲತಲಾಂತರಕ್ಕೂ ಆಚರಿಸಬೇಕು. ಅದನ್ನು ಶಾಶ್ವತನಿಯಮವೆಂದು ಎಂದೆಂದಿಗೂ ಆಚರಿಸಬೇಕು.ಹುಳಿಯಿಲ್ಲದ ರೊಟ್ಟಿಯ ಹಬ್ಬ15 “‘ಏಳು ದಿನಗಳವರೆಗೆ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಮೊದಲನೆಯ ದಿನದಲ್ಲಿಯೇ ಹುಳಿಹಿಟ್ಟನ್ನು ನಿಮ್ಮ ಮನೆಯೊಳಗಿಂದ ತೆಗೆದುಬಿಡಬೇಕು. ಏಕೆಂದರೆ ಮೊದಲನೆಯ ದಿನದಿಂದ ಏಳನೆಯ ದಿನದವರೆಗೆ ಹುಳಿರೊಟ್ಟಿಯನ್ನು ತಿನ್ನುವವನು ಇಸ್ರಾಯೇಲಿನೊಳಗಿಂದ ತೆಗೆದುಹಾಕಲ್ಪಡಬೇಕು.16 ಮೊದಲನೆಯ ದಿನದಲ್ಲಿ ಪರಿಶುದ್ಧ ದೇವಾರಾಧನೆಗಾಗಿ ಸಭೆ ಸೇರಬೇಕು. ಏಳನೆಯ ದಿನದಲ್ಲಿಯೂ ದೇವಾರಾಧನೆಗಾಗಿ ಸಭೆ ಸೇರಬೇಕು. ಈ ಎರಡು ದಿನಗಳಲ್ಲಿ ಯಾವ ಕೆಲಸವನ್ನು ಮಾಡಕೂಡದು. ಊಟಕ್ಕೆ ಬೇಕಾದದ್ದನ್ನು ಮಾತ್ರ ಮಾಡಬಹುದೇ ಹೊರತು ಬೇರೆ ಯಾವ ಕೆಲಸವನ್ನು ಮಾಡಬಾರದು.17 ನೀವು ಹುಳಿಯಿಲ್ಲದ ರೊಟ್ಟಿಯ ಹಬ್ಬವನ್ನು ಆಚರಿಸಬೇಕು. ಏಕೆಂದರೆ ಈ ದಿನದಲ್ಲಿಯೇ ನಾನು ನಿಮ್ಮ ಸೈನ್ಯಗಳನ್ನು ಐಗುಪ್ತ ದೇಶದೊಳಗಿಂದ ಹೊರಗೆ ಬರಮಾಡಿದ್ದರಿಂದ ನೀವೂ, ನಿಮ್ಮ ಸಂತತಿಯವರೂ ಈ ದಿನವನ್ನು ಆಚರಣೆಗೆ ತರಬೇಕು. ಇದು ಶಾಶ್ವತವಾದ ನಿಯಮವಾಗಿದೆ.18 ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಾಯಂಕಾಲ ಮೊದಲುಗೊಂಡು ಅದೇ ತಿಂಗಳಿನ ಇಪ್ಪತ್ತೊಂದನೆಯ ದಿನದ ಸಾಯಂಕಾಲದವರೆಗೆ ನೀವು ಹುಳಿಯಿಲ್ಲದ ರೊಟ್ಟಿಗಳನ್ನೇ ತಿನ್ನಬೇಕು.19 ಆ ಏಳು ದಿನಗಳವರೆಗೆ ನಿಮ್ಮ ಮನೆಗಳಲ್ಲಿ ಹುಳಿಹಿಟ್ಟು ಇರಬಾರದು. ಹುಳಿ ಬೆರಸಿದ್ದನ್ನು ಯಾರು ತಿನ್ನುವರೋ ಅವನು ಪರದೇಶದವನಾಗಲಿ, ಸ್ವದೇಶದವನಾಗಲಿ ಇಸ್ರಾಯೇಲ ಸಮೂಹದೊಳಗಿಂದ ತೆಗೆದುಹಾಕಲ್ಪಡಬೇಕು.20 ನೀವು ನಿಮ್ಮ ಮನೆಗಳಲ್ಲಿ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕೇ ಹೊರತು, ಹುಳಿಕಲಸಿದ ಯಾವುದನ್ನೂ ತಿನ್ನಕೂಡದು’” ಎಂದು ಆಜ್ಞಾಪಿಸಿದನು.ಮೊದಲನೆಯ ಪಸ್ಕ ಹಬ್ಬದ ಆಚರಣೆ21 ಆಗ ಮೋಶೆಯು ಇಸ್ರಾಯೇಲರ ಹಿರಿಯರೆಲ್ಲರನ್ನೂ ಕರೆಯಿಸಿ ಅವರಿಗೆ, “ನೀವು, ನಿಮ್ಮ ನಿಮ್ಮ ಕುಟುಂಬಗಳಿಗೋಸ್ಕರ ಮಂದೆಯಿಂದ ಮರಿಗಳನ್ನು ಆರಿಸಿಕೊಂಡು ಪಸ್ಕಹಬ್ಬಕ್ಕೆ ಕೊಯ್ಯಿರಿ.22 ಹಿಸ್ಸೋಪ್ ಗಿಡದ ಕಟ್ಟನ್ನು ತೆಗೆದುಕೊಂಡು ಬೋಗುಣಿಯಲ್ಲಿರುವ ರಕ್ತದಲ್ಲಿ ಅದನ್ನು ಅದ್ದಿ ಬಾಗಿಲಿನ ಮೇಲಿನ ಅಡ್ಡಪಟ್ಟಿಗೂ, ಅದರ ಪಕ್ಕದಲ್ಲಿರುವ ಎರಡು ನಿಲುವುಪಟ್ಟಿಗಳಿಗೂ ಹಚ್ಚಬೇಕು. ತರುವಾಯ ನಿಮ್ಮಲ್ಲಿ ಒಬ್ಬರೂ ಬೆಳಗಾಗುವವರೆಗೆ ಮನೆಯ ಬಾಗಿಲನ್ನು ಬಿಟ್ಟು ಹೊರಗೆ ಹೋಗಬಾರದು.23 ಯೆಹೋವನು ಐಗುಪ್ತ್ಯರನ್ನು ಹತಮಾಡುವುದಕ್ಕೆ ದೇಶದ ನಡುವೆ ಹಾದುಹೋಗುವನು. ಆಗ ನಿಮ್ಮ ನಿಮ್ಮ ಮನೆಬಾಗಿಲಿನ ಮೇಲಣ ಪಟ್ಟಿಯಲ್ಲಿಯೂ, ಎರಡು ನಿಲುವು ಪಟ್ಟಿಗಳಲ್ಲಿಯೂ ಆ ರಕ್ತವನ್ನು ಕಂಡು ಮುಂದಕ್ಕೆ ದಾಟಿ ಹೋಗುವನು. ನಿಮ್ಮ ಪ್ರಾಣ ತೆಗೆಯುವುದಕ್ಕೆ ಸಂಹಾರಕನು ನಿಮ್ಮ ಮನೆಗಳಲ್ಲಿ ಬರುವುದೇ ಇಲ್ಲ.24 ಇದು ನಿಮಗೂ, ನಿಮ್ಮ ಸಂತತಿಯವರಿಗೂ ಶಾಶ್ವತವಾದ ನಿಯಮವೆಂದು ಆಚರಿಸಬೇಕು.25 ಯೆಹೋವನು ತನ್ನ ಮಾತಿನ ಮೇರೆಗೆ ನಿಮಗೆ ಕೊಡುವ ದೇಶಕ್ಕೆ ನೀವು ಬಂದಾಗ, ಈ ಆಚರಣೆಯನ್ನು ಕೈಕೊಳ್ಳಬೇಕು.26 ಮುಂದೆ ನಿಮ್ಮ ಮಕ್ಕಳು, ‘ನೀವು ನಡೆಸುವ ಈ ಆಚರಣೆ ಏನು?’ ಎಂದು ನಿಮ್ಮನ್ನು ಕೇಳುವಾಗ,27 ನೀವು ಅವರಿಗೆ, ‘ಯೆಹೋವನು ಐಗುಪ್ತ್ಯರನ್ನು ಸಂಹರಿಸಿದಾಗ ಐಗುಪ್ತ ದೇಶದಲ್ಲಿದ್ದ ಇಸ್ರಾಯೇಲರ ಮನೆಗಳಲ್ಲಿ ಪ್ರವೇಶಿಸದೆ ಮುಂದಕ್ಕೆ ದಾಟಿ ನಮ್ಮ ಮನೆಯವರನ್ನು ಉಳಿಸಿದ್ದರಿಂದ ನಾವು ಯೆಹೋವನ ಪಸ್ಕವೆಂಬ ಈ ಆಚರಣೆಯನ್ನು ನಡೆಸಲೇಬೇಕು ಎಂದು ಹೇಳಬೇಕು’” ಎಂದನು. ಆಗ ಜನರು ತಲೆಬಾಗಿ ಯೆಹೋವನಿಗೆ ನಮಸ್ಕರಿಸಿದರು.28 ಇಸ್ರಾಯೇಲರು ಅಲ್ಲಿಂದ ಹೊರಟು ಯೆಹೋವನು ಮೋಶೆ ಆರೋನರಿಗೆ ಆಜ್ಞಾಪಿಸಿದ ಪ್ರಕಾರವೇ ಮಾಡಿದರು.ಐಗುಪ್ತ್ಯರ ಚೊಚ್ಚಲುಗಳು ಸತ್ತುಹೋದದ್ದು29 ಮಧ್ಯರಾತ್ರಿಯಲ್ಲಿ ಯೆಹೋವನು ಸಿಂಹಾಸನದಲ್ಲಿರುವ ಫರೋಹನ ಚೊಚ್ಚಲು ಮಗನು ಮೊದಲುಗೊಂಡು ಸೆರೆಯಲ್ಲಿದ್ದ ಸೆರೆಯವನ ಚೊಚ್ಚಲು ಮಗನವರೆಗೂ, ಐಗುಪ್ತ ದೇಶದಲ್ಲಿದ್ದ ಎಲ್ಲಾ ಚೊಚ್ಚಲು ಮಕ್ಕಳನ್ನೂ ಸಂಹಾರ ಮಾಡಿದನು. ಪಶುಗಳ ಚೊಚ್ಚಲು ಮರಿಗಳನ್ನೂ ಸಂಹಾರಮಾಡಿದನು.30 ಆ ರಾತ್ರಿಯಲ್ಲಿ ಫರೋಹನೂ, ಅವನ ಪರಿವಾರದವರೂ, ಐಗುಪ್ತ್ಯರೆಲ್ಲರೂ ಎದ್ದು ನೋಡಲಾಗಿ ಸಾವಿಲ್ಲದ ಮನೆ ಒಂದೂ ಇರಲಿಲ್ಲ. ಐಗುಪ್ತ ದೇಶದಲ್ಲಿ ದೊಡ್ಡ ಗೋಳಾಟವಾಯಿತು

ಎಕ್ಸೋಡಸ್ 12