ಯೇಸು ತನ್ನ ಶಿಷ್ಯರ ಕಾಲುಗಳನ್ನು ತೊಳೆದದ್ದು
13 ಪಸ್ಕಹಬ್ಬದ ಹಿಂದಿನ ದಿನ ಯೇಸು, ತಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗಬೇಕಾದ ತನ್ನ ಗಳಿಗೆ ಬಂದಿತೆಂದು ತಿಳಿದುಕೊಂಡು, ಈ ಲೋಕದಲ್ಲಿರುವ ತನ್ನವರನ್ನು ಪ್ರೀತಿಸಿ, ಅವರನ್ನು ಕೊನೆಯವರೆಗೂ ಪ್ರೀತಿಸುತ್ತಾ ಬಂದನು.2 ಅವರು ಭೋಜನಕ್ಕೆ ಕುಳಿತುಕೊಂಡಿದ್ದರು, ಅಷ್ಟರೊಳಗೆ ಸೈತಾನನು ಸೀಮೋನನ ಮಗನಾದ ಇಸ್ಕರಿಯೋತ ಯೂದನ ಹೃದಯದಲ್ಲಿ ಯೇಸುವನ್ನು ಹಿಡಿದುಕೊಡಬೇಕೆಂಬ ಆಲೋಚನೆಯನ್ನು ಹುಟ್ಟಿಸಿದನು.3 ತಂದೆಯು ತನ್ನ ಕೈಯಲ್ಲಿ ಎಲ್ಲದರ ಮೇಲೆ ಅಧಿಕಾರ ಕೊಟ್ಟಿದ್ದಾನೆಂದೂ, ತಾನು ದೇವರ ಬಳಿಯಿಂದ ಬಂದು, ತಿರುಗಿ ದೇವರ ಬಳಿಗೆ ಹೋಗುತ್ತೇನೆಂದೂ ಯೇಸುವಿಗೆ ತಿಳಿದಿತ್ತು.4 ಆತನು ಊಟದಿಂದ ಎದ್ದು ತನ್ನ ಮೇಲುಹೊದಿಕೆಯನ್ನು ತೆಗೆದಿಟ್ಟು ಅಂಗ ವಸ್ತ್ರವನ್ನು ತೆಗೆದುಕೊಂಡು ನಡುವಿಗೆ ಕಟ್ಟಿಕೊಂಡನು.5 ಅನಂತರ ಬೋಗುಣಿಯಲ್ಲಿ ನೀರು ಹಾಕಿಕೊಂಡು ಶಿಷ್ಯರ ಪಾದಗಳನ್ನು ತೊಳೆಯುತ್ತಾ, ತಾನು ಸೊಂಟಕ್ಕೆ ಕಟ್ಟಿಕೊಂಡ ಅಂಗವಸ್ತ್ರದಿಂದ ಪಾದಗಳನ್ನು ಒರಸುವುದಕ್ಕೂ ಪ್ರಾರಂಭಿಸಿದನು.6 ಹೀಗೆ ಆತನು ಸೀಮೋನ ಪೇತ್ರನ ಬಳಿಗೆ ಬಂದಾಗ ಅವನು ಆತನಿಗೆ, “ಕರ್ತನೇ, ನೀನು ನನ್ನ ಪಾದಗಳನ್ನು ತೊಳೆಯುತ್ತೀಯೋ?” ಎಂದು ಹೇಳಿದನು.7 ಅದಕ್ಕೆ ಯೇಸು “ನಾನು ಮಾಡುವುದು ಏನೆಂದು ಈಗ ನಿನಗೆ ತಿಳಿಯುವುದಿಲ್ಲ. ಆನಂತರ ನಿನಗೆ ತಿಳಿಯುವುದು” ಎಂದನು.8 ಪೇತ್ರನು ಆತನಿಗೆ, “ನೀನು ನನ್ನ ಪಾದಗಳನ್ನು ಎಂದಿಗೂ ತೊಳೆಯಬಾರದು” ಎಂದು ಹೇಳಿದ್ದಕ್ಕೆ, ಯೇಸು, “ನಾನು ನಿನ್ನನ್ನು ತೊಳೆಯದಿದ್ದರೆ ನನ್ನೊಂದಿಗೆ ನಿನಗೆ ಪಾಲು ಇರುವುದಿಲ್ಲ” ಎಂದನು.9 ಸೀಮೋನ ಪೇತ್ರನು, “ಕರ್ತನೇ, ನನ್ನ ಪಾದಗಳನ್ನು ಮಾತ್ರವಲ್ಲದೆ, ಕೈಗಳನ್ನೂ, ತಲೆಯನ್ನೂ ಸಹ ತೊಳೆ” ಎಂದನು.10 ಯೇಸು ಅವನಿಗೆ, “ಸ್ನಾನಮಾಡಿಕೊಂಡವನಿಗೆ ತನ್ನ ಪಾದಗಳನ್ನು ಮಾತ್ರ ತೊಳೆದುಕೊಂಡರೆ ಸಾಕು, ಅವನು ಸಂಪೂರ್ಣವಾಗಿ ಶುದ್ಧನಾಗಿದ್ದಾನೆ. ನೀವೂ ಶುದ್ಧರಾಗಿದ್ದೀರಿ. ಆದರೆ ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ” ಎಂದು ಹೇಳಿದನು.11 ಯೇಸು ತನ್ನನ್ನು ಹಿಡಿದು ಕೊಡುವವನು ಯಾರೆಂದು ತಿಳಿದಿದ್ದರಿಂದ, “ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ” ಎಂದು ಹೇಳಿದ್ದನು.12 ಆತನು ಅವರ ಪಾದಗಳನ್ನು ತೊಳೆದ ಮೇಲೆ ತನ್ನ ಮೇಲುಹೊದಿಕೆಯನ್ನು ಹಾಕಿಕೊಂಡು, ಪುನಃ ಕುಳಿತುಕೊಂಡು ಅವರಿಗೆ ಹೇಳಿದ್ದೇನಂದರೆ, “ನಾನು ನಿಮಗೆ ಮಾಡಿದ್ದು ಏನೆಂದು ತಿಳಿಯಿತೋ?13 ನೀವು ನನ್ನನ್ನು ಗುರುವೆಂದೂ ಮತ್ತು ಕರ್ತನೆಂದೂ ಕರೆಯುತ್ತೀರಿ. ನೀವು ಹೇಳುವುದು ಸರಿ. ಹೌದು, ನಾನು ಅಂಥವನೇ ಆಗಿದ್ದೇನೆ.14 ಹಾಗಾದರೆ ಕರ್ತನೂ, ಗುರುವೂ ಆಗಿರುವ ನಾನೇ ನಿಮ್ಮ ಪಾದಗಳನ್ನು ತೊಳೆದಿರುವಾಗ, ನೀವು ಸಹ ಒಬ್ಬರ ಪಾದಗಳನ್ನೊಬ್ಬರು ತೊಳೆಯಬೇಕು.15 ನಾನು ನಿಮಗೆ ಮಾಡಿದಂತೆಯೇ ನೀವು ಸಹ ಮಾಡಬೇಕೆಂದು ನಾನು ನಿಮಗೆ ಮಾದರಿಯನ್ನು ತೋರಿಸಿದ್ದೇನೆ.16 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ; ತನ್ನ ದಣಿಗಿಂತ ಆಳು ದೊಡ್ಡವನಲ್ಲ. ಹಾಗೆಯೇ ಕಳುಹಿಸಲ್ಪಟ್ಟವನು ಕಳುಹಿಸಿದವನಿಗಿಂತ ದೊಡ್ಡವನಲ್ಲ.17 ನೀವು ಇವುಗಳನ್ನು ತಿಳಿದುಕೊಂಡು ಇದರಂತೆ ಮಾಡಿದರೆ ನೀವು ಧನ್ಯರು.18 ನಾನು ನಿಮ್ಮೆಲ್ಲರನ್ನು ಕುರಿತು ಈ ಮಾತನ್ನು ಹೇಳಲಿಲ್ಲ. ನಾನು ಆರಿಸಿಕೊಂಡವರೆಲ್ಲರನ್ನು ನಾನು ಬಲ್ಲೆನು. ಆದರೆ ನನ್ನ ಜೊತೆಯಲ್ಲಿ ಊಟಮಾಡುವವನೇ, ನನಗೆ ದ್ರೋಹ ಬಗೆದನು, ಎಂಬ ಶಾಸ್ತ್ರದ ಮಾತು ನೆರವೇರಬೇಕಾಗಿದೆ.19 ಅದು ನಡೆಯುವಾಗ ನಾನೇ ಆತನು ಎಂದು ನೀವು ನಂಬುವಂತೆ, ಅದು ಸಂಭವಿಸುವುದಕ್ಕಿಂತ ಮೊದಲೇ ಅದನ್ನು ಈಗ ನಿಮಗೆ ಹೇಳುತ್ತಿದ್ದೇನೆ.20 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ; ನಾನು ಕಳುಹಿಸಿದಾತನನ್ನು ಸ್ವೀಕರಿಸುವವನು ನನ್ನನ್ನು ಸ್ವೀಕರಿಸುತ್ತಾನೆ; ನನ್ನನ್ನು ಸ್ವೀಕರಿಸುವವನು ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸುತ್ತಾನೆ.”ಯೇಸು ತನ್ನನ್ನು ಹಿಡಿದುಕೊಡುವವನನ್ನು ಸೂಚಿಸಿದ್ದು21 ಇದನ್ನು ಹೇಳುತ್ತಾ ಯೇಸು ಆತ್ಮದಲ್ಲಿ ನೊಂದುಕೊಂಡವನಾಗಿ, “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ; ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡಿದು ಕೊಡುತ್ತಾನೆ” ಎಂದು ಸಾಕ್ಷಿ ಹೇಳಿದನು.22 ಆಗ ಈತನು ಯಾರ ವಿಷಯವಾಗಿ ಈ ಮಾತನ್ನು ಹೇಳುತ್ತಾನೆಂದು ಶಿಷ್ಯರು ಗಲಿಬಿಲಿಗೊಂಡು ಒಬ್ಬರನೊಬ್ಬರು ನೋಡಿಕೊಂಡರು.23 ಶಿಷ್ಯರೊಳಗೆ ಯೇಸುವಿಗೆ ಪ್ರಿಯನಾಗಿದ್ದ ಒಬ್ಬ ಶಿಷ್ಯನು ಆತನ ಎದೆಗೆ ಒರಗಿಕೊಂಡಿದ್ದನು.24 ಅವನಿಗೆ ಸೀಮೋನ ಪೇತ್ರನು ಸನ್ನೆಮಾಡಿ, “ಆತನು ಯಾರ ವಿಷಯವಾಗಿ ಮಾತನಾಡಿದನು ಎಂದು ಕೇಳು” ಅಂದನು.25 ಆ ಶಿಷ್ಯನು ಹಾಗೆಯೇ ಯೇಸುವಿನ ಎದೆಗೆ ಒರಗಿಕೊಂಡವನಾಗಿ, “ಕರ್ತನೇ, ಅವನು ಯಾರು?” ಎಂದು ಆತನನ್ನು ಕೇಳಿದನು.26 ಅದಕ್ಕೆ ಯೇಸು, “ನಾನು ಈ ರೊಟ್ಟಿಯ ತುಂಡನ್ನು ಅದ್ದಿ ಯಾರಿಗೆ ಕೊಡುತ್ತೇನೋ ಅವನೇ!” ಎಂದು ಉತ್ತರಿಸಿ ಆ ರೊಟ್ಟಿಯ ತುಂಡನ್ನು ಅದ್ದಿ, ತೆಗೆದು, ಸೀಮೋನ್ ಇಸ್ಕರಿಯೋತನ ಮಗನಾದ ಯೂದನಿಗೆ ಕೊಟ್ಟನು.27 ಅವನು ಆ ರೊಟ್ಟಿಯ ತುಂಡನ್ನು ತೆಗೆದುಕೊಂಡ ಕೂಡಲೇ, ಸೈತಾನನು ಅವನೊಳಗೆ ಪ್ರವೇಶಿಸಿದನು. ಆಗ ಯೇಸು ಅವನಿಗೆ, “ನೀನು ಮಾಡುವುದನ್ನು ಬೇಗನೇ ಮಾಡು” ಎಂದು ಹೇಳಿದನು.28 ಆದರೆ ಆತನು ಅವನಿಗೆ ಇದನ್ನು ಏಕೆ ಹೇಳಿದನೆಂದು ಊಟದ ಮೇಜಿನಲ್ಲಿ ಕುಳಿತವರಲ್ಲಿ ಯಾರಿಗೂ ತಿಳಿಯಲಿಲ್ಲ.29 ಅವರಲ್ಲಿ ಕೆಲವರು, ಯೂದನ ವಶದಲ್ಲಿ ಹಣದ ಚೀಲವಿದ್ದುದರಿಂದ ಯೇಸು ಅವನಿಗೆ “ಹಬ್ಬಕ್ಕೆ ನಮಗೆ ಅಗತ್ಯವಾದವುಗಳನ್ನು ಕೊಂಡುಕೋ ಎಂದೋ, ಅಥವಾ ಬಡವರಿಗೆ ಏನಾದರೂ ಕೊಡು ಎಂದೋ, ಯೇಸು ಅವನಿಗೆ ಹೇಳುತ್ತಾನೆ” ಎಂದು ಅಂದುಕೊಂಡರು.30 ಇಸ್ಕರಿಯೋತ ಯೂದನು ಆ ರೊಟ್ಟಿಯ ತುಂಡನ್ನು ತೆಗೆದುಕೊಂಡ ಕೂಡಲೇ, ಅಲ್ಲಿಂದ ಎದ್ದು ಹೊರಗೆ ಹೋದನು. ಆಗ ರಾತ್ರಿಯಾಗಿತ್ತು.ಹೊಸ ಆಜ್ಞೆ31 ಅವನು ಹೊರಗೆ ಹೋದ ಮೇಲೆ ಯೇಸುವು, “ಈಗ ಮನುಷ್ಯಕುಮಾರನು ಮಹಿಮೆ ಹೊಂದುತ್ತಾನೆ, ಮತ್ತು ದೇವರು ಆತನಲ್ಲಿ ಮಹಿಮೆ ಹೊಂದಿದ್ದಾನೆ.32 ದೇವರು ಆತನಲ್ಲಿ ಮಹಿಮೆ ಹೊಂದಿರುವುದರಿಂದ, ದೇವರು ಸಹ ಮನುಷ್ಯಕುಮಾರನನ್ನು ತನ್ನಲ್ಲಿ ಮಹಿಮೆಪಡಿಸುವನು. ತಕ್ಷಣವೇ ಮಹಿಮೆಪಡಿಸುವನು.33 ನನ್ನ ಮಕ್ಕಳೇ, ಇನ್ನು ಸ್ವಲ್ಪ ಕಾಲವೇ ನಾನು ನಿಮ್ಮ ಜೊತೆಯಲ್ಲಿ ಇರುತ್ತೇನೆ. ನೀವು ನನ್ನನ್ನು ಹುಡುಕುವಿರಿ ಆದರೆ ‘ನಾನು ಹೋಗುವಲ್ಲಿಗೆ ನೀವು ಬರಲಾರಿರಿ’ ಎಂದು ನಾನು ಯೆಹೂದ್ಯರಿಗೆ ಹೇಳಿದಂತೆಯೇ ನಿಮಗೂ ಈಗ ಹೇಳುತ್ತೇನೆ.34 ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ: ಏನೆಂದರೆ, ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಾನು ನಿಮ್ಮನ್ನು ಪ್ರೀತಿಸಿದ ಹಾಗೆಯೇ ನೀವೂ ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು, ಎಂಬುದೇ.35 ನಿಮ್ಮೊಳಗೆ ಪರಸ್ಪರ ಪ್ರೀತಿಯಿರುವುದಾದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳಿದುಕೊಳ್ಳುವರು” ಎಂದನು.36 ಸೀಮೋನ್ ಪೇತ್ರನು ಆತನಿಗೆ, “ಕರ್ತನೇ, ನೀನು ಎಲ್ಲಿಗೆ ಹೋಗುತ್ತೀ?” ಎಂದು ಕೇಳಿದ್ದಕ್ಕೆ ಯೇಸು ಅವನಿಗೆ, “ನಾನು ಹೋಗುವ ಕಡೆಗೆ, ಈಗ ನೀನು ನನ್ನನ್ನು ಹಿಂಬಾಲಿಸಲಾರೆ. ಅನಂತರ ನೀನು ನನ್ನನ್ನು ಹಿಂಬಾಲಿಸುವೆ” ಎಂದನು.37 ಪೇತ್ರನು ಆತನಿಗೆ, “ಕರ್ತನೇ, ನಾನು ಈಗ ನಿನ್ನನ್ನು ಏಕೆ ಹಿಂಬಾಲಿಸಲಾರೆನು? ನಿನಗಾಗಿ ನನ್ನ ಪ್ರಾಣವನ್ನೇ ಕೊಡುವೆನು” ಎಂದು ಹೇಳಿದನು.38 ಆಗ ಯೇಸು ಅವನಿಗೆ, “ನೀನು ನನಗಾಗಿ ಪ್ರಾಣವನ್ನೇ ಕೊಡುವೆಯಾ? ನಿನಗೆ ನಿಜನಿಜವಾಗಿ ಹೇಳುತ್ತೇನೆ: ನೀನು ನನ್ನನ್ನು ಮೂರು ಸಾರಿ ನಿರಾಕರಿಸುವ ತನಕ ಕೋಳಿಯು ಕೂಗುವುದೇ ಇಲ್ಲ” ಎಂದನು.
ಜಾನ್ 13
14 “ನಿಮ್ಮ ಹೃದಯವು ಕಳವಳಗೊಳ್ಳದಿರಲಿ. ನೀವು ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ.2 ನನ್ನ ತಂದೆಯ ಮನೆಯಲ್ಲಿ ಅನೇಕ ವಾಸಸ್ಥಾನಗಳಿವೆ, ಇಲ್ಲದಿದ್ದರೆ ನಾನು ನಿಮಗೆ ಹೇಳುತ್ತಿದ್ದೆನು. ನಾನು ನಿಮಗಾಗಿ ಸ್ಥಳವನ್ನು ಸಿದ್ಧಮಾಡುವುದಕ್ಕೆ ಹೋಗುತ್ತೇನಲ್ಲಾ!3 ನಾನು ಹೋಗಿ ನಿಮಗಾಗಿ ಸ್ಥಳವನ್ನು ಸಿದ್ಧಪಡಿಸಿದ ಮೇಲೆ, ಪುನಃ ಬಂದು ನಿಮ್ಮನ್ನು ನನ್ನ ಬಳಿಗೆ ಸೇರಿಸಿಕೊಳ್ಳುವೆನು. ಏಕೆಂದರೆ, ನಾನಿರುವಲ್ಲಿ ನೀವು ಸಹ ಇರಬೇಕು.4 ನಾನು ಹೋಗುವ ಸ್ಥಳದ ಮಾರ್ಗವು ನಿಮಗೆ ತಿಳಿದಿದೆ” ಎಂದನು.5 ತೋಮನು ಆತನಿಗೆ, “ಕರ್ತನೇ, ನೀನು ಎಲ್ಲಿಗೆ ಹೋಗುತ್ತೀ ಎಂಬುದೇ ನಮಗೆ ತಿಳಿಯದು, ಮತ್ತೆ ಮಾರ್ಗವು ಹೇಗೆ ತಿಳಿದೀತು?” ಎಂದು ಕೇಳಲು,6 ಯೇಸು ಅವನಿಗೆ, “ನಾನೇ ಮಾರ್ಗವೂ, ಸತ್ಯವೂ ಮತ್ತು ಜೀವವೂ ಆಗಿದ್ದೇನೆ. ನನ್ನ ಮೂಲಕವಲ್ಲದೆ ಯಾರೂ ತಂದೆಯ ಬಳಿಗೆ ಬರಲಾರರು.7 ನೀವು ನನ್ನನ್ನು ತಿಳಿದಿದ್ದರೆ ನನ್ನ ತಂದೆಯನ್ನೂ ಸಹ ತಿಳಿಯುತ್ತಿದ್ದಿರಿ. ಈಗಿನಿಂದ ನೀವು ಆತನನ್ನು ತಿಳಿದಿದ್ದೀರಿ ಮತ್ತು ಆತನನ್ನು ನೋಡಿದ್ದೀರಿ” ಎಂದು ಹೇಳಿದನು.8 ಫಿಲಿಪ್ಪನು, “ಕರ್ತನೇ, ನಮಗೆ ತಂದೆಯನ್ನು ತೋರಿಸು ನಮಗೆ ಅಷ್ಟೇ ಸಾಕು” ಎಂದನು.9 ಯೇಸು ಅವನಿಗೆ, “ಫಿಲಿಪ್ಪನೇ, ನಾನು ಇಷ್ಟು ಕಾಲ ನಿಮ್ಮ ಜೊತೆಯಲ್ಲಿಯೇ ಇದ್ದರೂ ಇನ್ನೂ ನೀನು ನನ್ನನ್ನು ತಿಳಿಯಲಿಲ್ಲವೇ! ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ, ಮತ್ತು ನಮಗೆ ತಂದೆಯನ್ನು ತೋರಿಸು ಎಂದು ನೀನು ಹೇಳುವುದಾದರು ಹೇಗೆ?10 ನಾನು ತಂದೆಯಲ್ಲಿ ಇದ್ದೇನೆ ಮತ್ತು ತಂದೆಯು ನನ್ನಲ್ಲಿ ಇದ್ದಾನೆ ಎಂಬುದನ್ನು ನೀನು ನಂಬುವುದಿಲ್ಲವೋ? ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಆಡುವುದಿಲ್ಲ; ತಂದೆಯು ನನ್ನಲ್ಲಿ ಇದ್ದುಕೊಂಡು ತನ್ನ ಕಾರ್ಯಗಳನ್ನು ಮಾಡುತ್ತಾನೆ.11 ನಾನು ತಂದೆಯಲ್ಲಿಯೂ, ತಂದೆಯು ನನ್ನಲ್ಲಿಯೂ ಇದ್ದಾನೆಂದು ತಿಳಿದು ನೀವು ನನ್ನನ್ನು ನಂಬಿರಿ. ಇಲ್ಲವೇ ನಾನು ಮಾಡಿದ ಕಾರ್ಯಗಳ ನಿಮಿತ್ತದಿಂದಾದರೂ ನೀವು ನನ್ನನ್ನು ನಂಬಿರಿ.12 “ನಿಮಗೆ ನಿಜನಿಜವಾಗಿ ಹೇಳುತ್ತೇನೆ. ನನ್ನನ್ನು ನಂಬುವವನು ನಾನು ಮಾಡುವ ಕಾರ್ಯಗಳನ್ನು ತಾನು ಸಹ ಮಾಡುತ್ತಾನೆ; ಮತ್ತು ಇವುಗಳಿಗಿಂತ ಮಹತ್ತಾದ ಕ್ರಿಯೆಗಳನ್ನು ಮಾಡುವನು, ಏಕೆಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ.13 ಇದಲ್ಲದೆ ನೀವು ನನ್ನ ಹೆಸರಿನಲ್ಲಿ ಏನೇನು ಬೇಡಿಕೊಳ್ಳುವಿರೋ ಅದನ್ನು ನಾನು ನೆರವೇರಿಸುವೆನು. ಹೀಗೆ ಮಗನ ಮೂಲಕವಾಗಿ ತಂದೆಗೆ ಮಹಿಮೆ ಉಂಟಾಗುವುದು.14 ನೀವು ನನ್ನ ಹೆಸರಿನಲ್ಲಿ ನನ್ನನ್ನು ಏನಾದರೂ ಬೇಡಿಕೊಂಡರೆ ನಾನು ಅದನ್ನು ನೆರವೇರಿಸುವೆನು.15 “ನೀವು ನನ್ನನ್ನು ಪ್ರೀತಿಸುವವರಾದರೆ ನನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವಿರಿ.16 ಆಗ ನಾನು ತಂದೆಯನ್ನು ಕೇಳಿಕೊಳ್ಳುವೆನು, ಆತನು ನಿಮಗೆ ಬೇರೊಬ್ಬ ಸಹಾಯಕನನ್ನು ಸದಾಕಾಲವೂ ನಿಮ್ಮೊಂದಿಗೆ ಇರುವುದಕ್ಕೆ ಕಳುಹಿಸಿ ಕೊಡುವನು.17 ಆ ಸಹಾಯಕನು ಯಾರೆಂದರೆ ಸತ್ಯದ ಆತ್ಮನೇ. ಲೋಕವು ಆತನನ್ನು ನೋಡದೆಯೂ, ತಿಳಿಯದೆಯೂ ಇರುವುದರಿಂದ ಆತನನ್ನು ಸ್ವೀಕರಿಸಲಾರದು. ನೀವು ಆತನನ್ನು ಬಲ್ಲಿರಿ, ಹೇಗೆಂದರೆ ಆತನು ನಿಮ್ಮೊಂದಿಗೆ ವಾಸಮಾಡುತ್ತಾನೆ ಮತ್ತು ನಿಮ್ಮೊಳಗೆ ಇರುವನು.18 “ನಾನು ನಿಮ್ಮನ್ನು ಅನಾಥರನ್ನಾಗಿ ಬಿಡುವುದಿಲ್ಲ, ನಿಮ್ಮ ಬಳಿಗೆ ಬರುತ್ತೇನೆ.19 ಇನ್ನು ಸ್ವಲ್ಪ ಕಾಲವಾದ ಮೇಲೆ ಲೋಕವು ನನ್ನನ್ನು ನೋಡುವುದಿಲ್ಲ, ಆದರೆ ನೀವು ನನ್ನನ್ನು ನೋಡುವಿರಿ. ನಾನು ಜೀವಿಸುವುದರಿಂದ ನೀವು ಜೀವಿಸುವಿರಿ.20 ನಾನು ನನ್ನ ತಂದೆಯಲ್ಲಿಯೂ, ನೀವು ನನ್ನಲ್ಲಿಯೂ ಮತ್ತು ನಾನು ನಿಮ್ಮಲ್ಲಿಯೂ ಇರುವುದನ್ನು ನೀವು ಆ ದಿನದಲ್ಲಿ ತಿಳಿದುಕೊಳ್ಳುವಿರಿ.21 ನನ್ನ ಆಜ್ಞೆಗಳನ್ನು ಹೊಂದಿ ಅವುಗಳನ್ನು ಕೈಕೊಂಡು ನಡೆಯುವವನೇ ನನ್ನನ್ನು ಪ್ರೀತಿಸುವವನು. ನನ್ನನ್ನು ಪ್ರೀತಿಸುವವನು ನನ್ನ ತಂದೆಗೆ ಪ್ರಿಯನಾಗಿರುವನು. ನಾನೂ ಅವನನ್ನು ಪ್ರೀತಿಸಿ ಅವನಿಗೆ ನನ್ನನ್ನು ಪ್ರಕಟಪಡಿಸಿ ತೋರಿಸುವೆನು” ಎಂದು ಹೇಳಿದನು.22 ಯೂದನು, (ಇವನು ಇಸ್ಕರಿಯೋತನಲ್ಲ) “ಕರ್ತನೇ, ನೀನು ಲೋಕಕ್ಕೆ ಕಾಣಿಸಿಕೊಳ್ಳದೆ ನಮಗೆ ಮಾತ್ರ ಕಾಣಿಸಿಕೊಳ್ಳುವುದಕ್ಕೆ ಕಾರಣವೇನು?” ಎಂದು ಕೇಳಿದನು.23 ಯೇಸು ಅವನಿಗೆ, “ಯಾವನಾದರೂ ನನ್ನನ್ನು ಪ್ರೀತಿಸುವುದಾದರೆ ನನ್ನ ಮಾತಿನಂತೆ ನಡೆಯುವನು. ಅವನನ್ನು ನನ್ನ ತಂದೆಯು ಪ್ರೀತಿಸುವನು ಮತ್ತು ನಾವಿಬ್ಬರೂ ಅವನ ಬಳಿಗೆ ಬಂದು, ಅವನೊಂದಿಗೆ ನೆಲೆಸುವೆವು.24 ನನ್ನನ್ನು ಪ್ರೀತಿಸದವನು, ನನ್ನ ಮಾತುಗಳನ್ನು ಕೈಕೊಂಡು ನಡೆಯುವುದಿಲ್ಲ. ನೀವು ಕೇಳಿದ ಮಾತು ನನ್ನದಲ್ಲ. ನನ್ನನ್ನು ಕಳುಹಿಸಿದ ತಂದೆಯದೇ ಆಗಿದೆ.25 “ಈ ಮಾತುಗಳನ್ನು ನಾನು ಇನ್ನೂ ನಿಮ್ಮ ಬಳಿಯಲ್ಲಿರುವಾಗಲೇ ಹೇಳಿದ್ದೇನೆ.26 ಆದರೆ ಆ ಸಹಾಯಕನು, ಅಂದರೆ ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿಕೊಡುವ ಪವಿತ್ರಾತ್ಮನೇ ನಿಮಗೆ ಎಲ್ಲವನ್ನು ಉಪದೇಶಿಸಿ ನಾನು ನಿಮಗೆ ಹೇಳಿದ್ದನೆಲ್ಲಾ ನಿಮ್ಮ ನೆನಪಿಗೆ ತಂದುಕೊಡುವನು.27 “ನಾನು ನನ್ನ ಸಮಾಧಾನವನ್ನು ನಿಮಗೆ ಕೊಟ್ಟು ಹೋಗುತ್ತಿದ್ದೇನೆ. ನನ್ನಲ್ಲಿರುವಂಥ ಸಮಾಧಾನವನ್ನು ನಾನು ನಿಮಗೆ ಕೊಡುತ್ತೇನೆ. ಲೋಕವು ಕೊಡುವಂತೆ ನಾನು ನಿಮಗೆ ಕೊಡುವುದಿಲ್ಲ. ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ಹೆದರದಿರಲಿ.28 ನಾನು ಹೋಗಿ ಪುನಃ ನಿಮ್ಮ ಬಳಿಗೆ ಬರುತ್ತೇನೆ ಎಂದು ನಿಮಗೆ ಹೇಳಿದ್ದನ್ನು ಕೇಳಿದ್ದೀರಿ. ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ ನಾನು ತಂದೆಯ ಬಳಿಗೆ ಹೋಗುತ್ತೇನೆಂದು ಹೇಳಿದ್ದಕ್ಕೆ ಸಂತೋಷಪಡುತ್ತಿದ್ದೀರಿ, ಏಕೆಂದರೆ ತಂದೆಯು ನನಗಿಂತಲೂ ದೊಡ್ಡವನು.29 ಇದೆಲ್ಲಾ ನಡೆಯುವಾಗ ನೀವು ನನ್ನನ್ನು ನಂಬುವಂತೆ, ಅದು ನಡೆಯುವುದಕ್ಕಿಂತ ಮೊದಲೇ ನಿಮಗೆ ತಿಳಿಸಿದ್ದೇನೆ.30 ಇನ್ನು ಮೇಲೆ ನಾನು ನಿಮ್ಮ ಜೊತೆ ಹೆಚ್ಚು ವಿಷಯಗಳನ್ನು ಮಾತನಾಡುವುದಿಲ್ಲ. ಏಕೆಂದರೆ ಇಹಲೋಕಾಧಿಪತಿಯು ಬರಲಿದ್ದಾನೆ. ನನ್ನ ಮೇಲೆ ಅವನಿಗೆ ಯಾವ ಅಧಿಕಾರವೂ ಇಲ್ಲ.31 ಆದರೂ ನಾನು ತಂದೆಯನ್ನು ಪ್ರೀತಿಸುತ್ತೇನೆಂದು ಲೋಕಕ್ಕೆ ತಿಳಿಯಬೇಕೆಂದು ತಂದೆ ನನಗೆ ಆಜ್ಞಾಪಿಸಿದಂತೆಯೇ ನಾನು ಮಾಡುತ್ತೇನೆ. ಏಳಿರಿ, ನಾವು ಇಲ್ಲಿಂದ ಹೋಗೋಣ” ಎಂದನು.
ಜಾನ್ 14
ಯೇಸುವೇ ನಿಜವಾದ ದ್ರಾಕ್ಷಿಬಳ್ಳಿ15 “ನಾನೇ ನಿಜವಾದ ದ್ರಾಕ್ಷಿಬಳ್ಳಿ, ನನ್ನ ತಂದೆ ತೋಟಗಾರನು.2 ನನ್ನಲ್ಲಿದ್ದು ಫಲಕೊಡದಿರುವ ಪ್ರತಿಯೊಂದು ಕೊಂಬೆಯನ್ನು ಆತನು ಕತ್ತರಿಸಿಹಾಕುತ್ತಾನೆ. ಫಲ ಕೊಡುವ ಪ್ರತಿಯೊಂದು ಕೊಂಬೆಯು ಹೆಚ್ಚು ಫಲ ಕೊಡುವ ಹಾಗೆ ಅದನ್ನು ಕತ್ತರಿಸಿ ಶುದ್ಧಮಾಡುತ್ತಾನೆ.3 ನಾನು ನಿಮಗೆ ಹೇಳಿದ ವಾಕ್ಯದ ದೆಸೆಯಿಂದ ಈಗ ನೀವು ಶುದ್ಧರಾಗಿದ್ದೀರಿ.4 ನೀವು ನನ್ನಲ್ಲಿ ನೆಲೆಗೊಂಡಿರಿ, ನಾನೂ ನಿಮ್ಮಲ್ಲಿ ನೆಲೆಗೊಂಡಿರುವೆನು. ಕೊಂಬೆಯು ಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನಷ್ಟಕ್ಕೇ ತಾನೇ ಫಲಕೊಡಲಾರದೋ, ಹಾಗೆಯೇ ನೀವು ನನ್ನಲ್ಲಿ ನೆಲೆಗೊಂಡಿರದಿದ್ದರೆ ಫಲಕೊಡಲಾರಿರಿ.5 ನಾನು ದ್ರಾಕ್ಷಿಬಳ್ಳಿ, ನೀವು ಕೊಂಬೆಗಳು; ಒಬ್ಬನು ನನ್ನಲ್ಲಿಯೂ ನಾನು ಅವನಲ್ಲಿಯೂ ನೆಲೆಗೊಂಡಿದ್ದರೆ ಅವನು ಬಹಳ ಫಲ ಕೊಡುವನು. ನೀವು ನನ್ನನ್ನು ಬಿಟ್ಟು ಏನೂ ಮಾಡಲಾರಿರಿ.6 ಯಾವನು ನನ್ನಲ್ಲಿ ನೆಲೆಗೊಂಡಿರುವುದಿಲ್ಲವೋ ಅವನು ಹೊರಕ್ಕೆ ಬಿಸಾಡಲ್ಪಟ್ಟ ಕೊಂಬೆಯಂತೆ ಒಣಗಿಹೋಗುವನು. ಅಂಥ ಕೊಂಬೆಗಳನ್ನು ಕೂಡಿಸಿ ಬೆಂಕಿಯಲ್ಲಿ ಹಾಕುವರು. ಅವು ಸುಟ್ಟು ಹೋಗುತ್ತವೆ.7 ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನೀವು ಏನಾದರೂ ಬೇಡಿಕೊಳ್ಳಿರಿ ಅದು ನಿಮಗೆ ದೊರೆಯುವುದು.8 ನೀವು ಬಹಳ ಫಲಕೊಡುವುದರಿಂದಲೇ ನನ್ನ ತಂದೆಗೆ ಮಹಿಮೆ ಉಂಟಾಗುವುದು ಮತ್ತು ನೀವು ನನ್ನ ಶಿಷ್ಯರಾಗುವಿರಿ.9 “ತಂದೆ ನನ್ನನ್ನು ಪ್ರೀತಿಸಿದ ಹಾಗೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ. ನೀವು ನನ್ನ ಪ್ರೀತಿಯಲ್ಲಿ ನೆಲೆಗೊಂಡಿರಿ.10 ನಾನು ನನ್ನ ತಂದೆಯ ಆಜ್ಞೆಗಳನ್ನು ಕೈಗೊಂಡು ಆತನ ಪ್ರೀತಿಯಲ್ಲಿ ನೆಲೆಗೊಂಡಿರುವ ಪ್ರಕಾರ, ನೀವು ನನ್ನ ಆಜ್ಞೆಗಳನ್ನು ಕೈಕೊಂಡು ನಡೆದರೆ, ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ.11 ನನ್ನಲ್ಲಿರುವ ಆನಂದವು ನಿಮ್ಮಲ್ಲಿಯೂ ಇರಬೇಕೆಂದೂ, ಆ ನಿಮ್ಮ ಆನಂದವು ಪರಿಪೂರ್ಣವಾಗಬೇಕೆಂದೂ ನಾನು ಇವುಗಳನ್ನು ನಿಮಗೆ ಹೇಳಿದ್ದೇನೆ.12 ನಾನು ನಿಮ್ಮನ್ನು ಪ್ರೀತಿಸಿದ ಹಾಗೆಯೇ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನನ್ನ ಆಜ್ಞೆಯಾಗಿದೆ.13 ತನ್ನ ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವುದೂ ಇಲ್ಲ.14 ನಾನು ನಿಮಗೆ ಕೊಟ್ಟ ಆಜ್ಞೆಗಳ ಪ್ರಕಾರ ನೀವು ನಡೆದರೆ, ನೀವು ನನ್ನ ಸ್ನೇಹಿತರು.15 ಇನ್ನು ಮೇಲೆ ನಾನು ನಿಮ್ಮನ್ನು ಆಳುಗಳೆಂದು ಕರೆಯುವುದಿಲ್ಲ, ಏಕೆಂದರೆ, ಯಜಮಾನನು ಮಾಡುವಂಥದ್ದು ಆಳಿಗೆ ತಿಳಿಯುವುದಿಲ್ಲ. ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ, ಏಕೆಂದರೆ ತಂದೆಯ ಕಡೆಯಿಂದ ನಾನು ಕೇಳಿದ್ದನ್ನೆಲ್ಲಾ ನಾನು ನಿಮಗೆ ತಿಳಿಸಿದ್ದೇನೆ.16 ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ. ನಾನು ನಿಮ್ಮನ್ನು ಆರಿಸಿಕೊಂಡಿದ್ದೇನೆ, ನೀವು ಹೊರಟು ಹೋಗಿ ಫಲಕೊಡಬೇಕೆಂತಲೂ, ಹಾಗೂ ನೀವು ಕೊಡುವ ಫಲವು ಸದಾಕಾಲ ನಿಲ್ಲುವಂಥದ್ದಾಗಬೇಕಂತಲೂ ನಾನು ನಿಮ್ಮನ್ನು ನೇಮಿಸಿದ್ದೇನೆ. ಹೀಗಿರಲಾಗಿ ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನೇನು ಬೇಡಿಕೊಳ್ಳುವಿರೋ, ಅದನ್ನು ಆತನು ನಿಮಗೆ ಕೊಡುವನು.17 ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂತಲೇ ಇವುಗಳನ್ನು ನಾನು ನಿಮಗೆ ಆಜ್ಞಾಪಿಸುತ್ತಿದ್ದೇನೆ.18 “ಲೋಕವು ನಿಮ್ಮನ್ನು ದ್ವೇಷ ಮಾಡುವುದಾದರೆ ಅದು ಮೊದಲು ನನ್ನನ್ನು ದ್ವೇಷ ಮಾಡಿತ್ತೆಂದು ನೀವು ತಿಳಿದುಕೊಳ್ಳಿರಿ.19 ನೀವು ಲೋಕದವರಾಗಿದ್ದರೆ ಲೋಕವು ನಿಮ್ಮನ್ನು ತನ್ನವರೆಂದು ಪ್ರೀತಿಸುತ್ತಿತ್ತು. ನೀವಾದರೋ ಲೋಕದ ಕಡೆಯವರಲ್ಲ, ನಾನು ನಿಮ್ಮನ್ನು ಆರಿಸಿಕೊಂಡಿದ್ದರಿಂದಲೇ ಲೋಕವು ನಿಮ್ಮನ್ನು ದ್ವೇಷ ಮಾಡುತ್ತದೆ.20 ದಣಿಗಿಂತ ಆಳು ದೊಡ್ಡವನಲ್ಲವೆಂಬುದಾಗಿ ನಾನು ನಿಮಗೆ ಹೇಳಿದ ಮಾತನ್ನು ಜ್ಞಾಪಕ ಮಾಡಿಕೊಳ್ಳಿರಿ. ಅವರು ನನ್ನನ್ನು ಹಿಂಸೆಪಡಿಸಿದರೆ ನಿಮ್ಮನ್ನು ಸಹ ಹಿಂಸೆಪಡಿಸುವರು. ಅವರು ನನ್ನ ಮಾತನ್ನು ಕೈಗೊಂಡಿದ್ದರೆ ನಿಮ್ಮ ಮಾತನ್ನು ಸಹ ಕೈಗೊಳ್ಳುತ್ತಿದ್ದರು.21 ಆದರೆ ಅವರು ನನ್ನನ್ನು ಕಳುಹಿಸಿಕೊಟ್ಟಾತನನ್ನು ತಿಳಿಯದವರಾದ್ದರಿಂದ ಇದನ್ನೆಲ್ಲಾ ನನ್ನ ಹೆಸರಿನ ನಿಮಿತ್ತ ನಿಮಗೆ ಮಾಡುವರು.22 ನಾನು ಬಾರದೆ ಮತ್ತು ಅವರ ಸಂಗಡ ಮಾತನಾಡದೆ ಹೋಗಿದ್ದಾರೆ ಅವರಿಗೆ ಪಾಪವು ಇರುತ್ತಿರಲಿಲ್ಲ. ಆದರೆ ಅವರ ಪಾಪಕ್ಕಾಗಿ ಈಗ ಯಾವ ನೆಪವೂ ಇಲ್ಲ.23 ನನ್ನನ್ನು ದ್ವೇಷಿಸುವವನು ನನ್ನ ತಂದೆಯನ್ನು ಸಹ ದ್ವೇಷಿಸುತ್ತಾನೆ.24 ಬೇರೆ ಯಾರೂ ಮಾಡದಿರುವ ಕ್ರಿಯೆಗಳನ್ನು ನಾನು ಅವರ ನಡುವೆ ಮಾಡದೆಹೋಗಿದ್ದರೆ ಅವರಿಗೆ ಪಾಪವು ಇರುತ್ತಿರಲಿಲ್ಲ. ಆದರೆ ಈಗ ಅವರು ನನ್ನ ಅದ್ಭುತಕಾರ್ಯಗಳನ್ನು ನೋಡಿದ್ದಾರೆ, ಆದರೂ ನನ್ನನ್ನೂ ನನ್ನ ತಂದೆಯನ್ನೂ ದ್ವೇಷಿಸಿದ್ದಾರೆ25 ‘ಅವರು ನನ್ನನ್ನು ನಿಷ್ಕಾರಣವಾಗಿ ದ್ವೇಷಿಸಿದರು’ ಎಂದು ಅವರ ಧರ್ಮಶಾಸ್ತ್ರದಲ್ಲಿ ಬರೆದಿರುವ ಮಾತು ನೆರವೇರುವಂತೆ ಹೀಗಾಯಿತು.26 ಆದರೆ ತಂದೆಯ ಬಳಿಯಿಂದ ನಾನು ನಿಮಗೆ ಕಳುಹಿಸಿಕೊಡುವ ಸಹಾಯಕನು, ಎಂದರೆ, ತಂದೆಯ ಬಳಿಯಿಂದ ಹೊರಡುವ ಸತ್ಯದ ಆತ್ಮನು ಬಂದಾಗ, ಆತನೇ ನನ್ನ ವಿಷಯವಾಗಿ ಸಾಕ್ಷಿ ಕೊಡುವನು.27 ನೀವು ಮೊದಲಿನಿಂದ ನನ್ನ ಸಂಗಡ ಇದ್ದುದರಿಂದ ನೀವೂ ಸಹ ನನಗೆ ಸಾಕ್ಷಿಗಳಾಗಿದ್ದೀರಿ.
ಜಾನ್ 15
16 “ನೀವು ನಂಬಿಕೆಯಿಂದ ಎಡವಿ ಬಿದ್ದು ಹೋಗಬಾರದೆಂದು ನಾನು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ.2 ಅವರು ನಿಮ್ಮನ್ನು ಸಭಾಮಂದಿರದಿಂದ ಹೊರಗೆ ಹಾಕುವರು; ಅದಲ್ಲದೆ ನಿಮ್ಮನ್ನು ಕೊಲ್ಲುವವನು ತಾನು ದೇವರಿಗೆ ಬಲಿಕೊಟ್ಟೆನೆಂದು ಭಾವಿಸುವ ಕಾಲವು ಬರಲಿದೆ.3 ಅವರು ತಂದೆಯನ್ನಾದರೂ ನನ್ನನ್ನಾದರೂ ತಿಳಿಯದವರಾಗಿರುವುದರಿಂದ ಇವೆಲ್ಲವುಗಳನ್ನು ನಿಮಗೆ ಮಾಡುವರು.4 ಆದರೆ ಅವರ ಕಾಲ ಬಂದಾಗ ಆತನು ನಮಗೆ ಇಂಥಿಂಥದ್ದನ್ನು ಹೇಳಿದನಲ್ಲಾ ಎಂದು ನಿಮ್ಮ ನೆನಪಿಗೆ ಬರುವಂತೆ, ನಿಮ್ಮ ಸಂಗಡ ಈ ಮಾತುಗಳನ್ನು ಆಡಿದ್ದೇನೆ. ನಾನು ನಿಮ್ಮ ಸಂಗಡ ಇದ್ದುದರಿಂದ ಮೊದಲು ಇವುಗಳನ್ನು ನಿಮಗೆ ಹೇಳಲಿಲ್ಲ.5 “ಆದರೆ ಈಗ ನಾನು ನನ್ನನ್ನು ಕಳುಹಿಸಿಕೊಟ್ಟಾತನ ಬಳಿಗೆ ಹೋಗುತ್ತೇನೆ. ‘ನೀನು ಎಲ್ಲಿಗೆ ಹೋಗುತ್ತಿ?’ ಎಂದು ನಿಮ್ಮಲ್ಲಿ ಒಬ್ಬನಾದರೂ ನನ್ನನ್ನು ಕೇಳುವುದಿಲ್ಲ.6 ನಾನು ಈ ಮಾತುಗಳನ್ನು ನಿಮಗೆ ಹೇಳಿದ್ದರಿಂದ ನಿಮ್ಮ ಹೃದಯವು ದುಃಖಭರಿತವಾಗಿದೆ.7 ಆದರೂ ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ, ನಾನು ಹೋಗುವುದು ನಿಮಗೆ ಒಳ್ಳೆಯದು, ಹೇಗೆಂದರೆ ನಾನು ಹೋಗದಿದ್ದರೆ ಆ ಸಹಾಯಕನು ನಿಮ್ಮ ಬಳಿಗೆ ಬರುವುದಿಲ್ಲ. ನಾನು ಹೋದರೆ ಆತನನ್ನು ನಿಮ್ಮ ಬಳಿಗೆ ಕಳುಹಿಸಿಕೊಡುತ್ತೇನೆ.8 ಆತನು ಬಂದಾಗ ಪಾಪ, ನೀತಿ ಮತ್ತು ನ್ಯಾಯತೀರ್ಪಿನ ಕುರಿತು ಲೋಕಕ್ಕೆ ಮನವರಿಕೆಯನ್ನು ಉಂಟುಮಾಡುವನು.9 ಅವರು ನನ್ನನ್ನು ನಂಬದೇ ಇರುವುದರಿಂದ ಪಾಪದ ಕುರಿತಾಗಿಯೂ10 ನಾನು ನನ್ನ ತಂದೆಯ ಬಳಿಗೆ ಹೋಗಿ, ಇನ್ನು ಮೇಲೆ ನಿಮಗೆ ಕಾಣಿಸದೆ ಇರುವುದರಿಂದ ನೀತಿಯ ಕುರಿತಾಗಿಯೂ,11 ಇಹಲೋಕಾಧಿಪತಿಗೆ ನ್ಯಾಯತೀರ್ಪಾಗಿರುವುದರಿಂದ ನ್ಯಾಯತೀರ್ಪಿನ ಕುರಿತಾಗಿಯೂ, ಲೋಕಕ್ಕೆ ಮನವರಿಕೆಯನ್ನು ಉಂಟುಮಾಡುವನು.12 “ನಾನು ನಿಮಗೆ ಹೇಳಬೇಕಾದ ವಿಷಯಗಳು ಇನ್ನೂ ಬಹಳ ಉಂಟು, ಆದರೆ ನೀವು ಈಗ ಅವುಗಳನ್ನು ಗ್ರಹಿಸಲು ನಿಮ್ಮಲ್ಲಿ ಸಾಮರ್ಥ್ಯವಿಲ್ಲ.13 ಆದರೆ ಸತ್ಯದ ಆತ್ಮನು ಬರುವಾಗ ಆತನು ನಿಮ್ಮನ್ನು ಪೂರ್ಣ ಸತ್ಯದ ಕಡೆಗೆ ನಡೆಸುವನು. ಆತನು ತನ್ನಷ್ಟಕ್ಕೆ ತಾನೇ ಮಾತನಾಡದೆ ಕೇಳಿದ ಮಾತುಗಳನ್ನೇ ಆಡುವನು ಮತ್ತು ಮುಂದೆ ನಡೆಯುವ ಸಂಗತಿಗಳನ್ನು ನಿಮಗೆ ತಿಳಿಸುವನು.14 ಆತನು ನನ್ನದನ್ನು ಸ್ವೀಕರಿಸಿ ನಿಮಗೆ ತಿಳಿಯಪಡಿಸುತ್ತಾನಾದ್ದರಿಂದ ನನ್ನನ್ನೇ ಮಹಿಮೆಪಡಿಸುವನು.15 ತಂದೆಗೆ ಇರುವುದೆಲ್ಲಾ ನನ್ನದು. ಆದುದರಿಂದಲೇ ನನ್ನದನ್ನು ಸ್ವೀಕರಿಸಿ ನಿಮಗೆ ತಿಳಿಸುವನೆಂದು ನಾನು ಹೇಳಿದೆನು.16 ಇನ್ನು ಸ್ವಲ್ಪ ಕಾಲವಾದ ಮೇಲೆ ನಾನು ನಿಮಗೆ ಕಾಣಿಸುವುದಿಲ್ಲ, ಅನಂತರ ಸ್ವಲ್ಪ ಕಾಲವಾದ ಮೇಲೆ ನೀವು ಪುನಃ ನನ್ನನ್ನು ನೋಡುವಿರಿ” ಎಂದನು.17 ಇದನ್ನು ಕೇಳಿ ಆತನ ಶಿಷ್ಯರಲ್ಲಿ ಕೆಲವರು, “ಇದೇನು ಈತನು ಹೇಳುವ ಮಾತು? ‘ಸ್ವಲ್ಪ ಕಾಲವಾದ ಮೇಲೆ ನಾನು ನಿಮಗೆ ಕಾಣಿಸುವುದಿಲ್ಲ ಅನಂತರ ಸ್ವಲ್ಪ ಕಾಲವಾದ ಮೇಲೆ ನೀವು ಪುನಃ ನನ್ನನ್ನು ನೋಡುವಿರಿ ಮತ್ತು ನಾನು ತಂದೆಯ ಬಳಿಗೆ ಹೋಗುತ್ತೇನೆ’ ಎನ್ನುತ್ತಾನಲ್ಲಾ” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡು18 “‘ಸ್ವಲ್ಪ ಕಾಲವೆಂದು’ ಈತನು ಹೇಳುವ ಈ ಮಾತೇನು? ಏನು ಮಾತನಾಡುತ್ತಿದ್ದಾನೋ ನಮಗೆ ತಿಳಿಯದು” ಎಂದು ಅಂದುಕೊಳ್ಳುತ್ತಿದ್ದರು.19 ಯೇಸುವು ಇದನ್ನು ಕುರಿತು ತನ್ನನ್ನು ಕೇಳಬೇಕೆಂದಿದ್ದಾರೆಂದು ತಿಳಿದು ಅವರಿಗೆ, “ಸ್ವಲ್ಪ ಕಾಲವಾದ ಮೇಲೆ ನಾನು ನಿಮಗೆ ಕಾಣಿಸುವುದಿಲ್ಲ, ಇನ್ನು ಸ್ವಲ್ಪ ಕಾಲವಾದ ಮೇಲೆ ನನ್ನನ್ನು ನೋಡುವಿರಿ, ಎಂದು ನಾನು ನಿಮಗೆ ಹೇಳಿದ್ದಕ್ಕೆ ನೀವು ನಿಮ್ಮನಿಮ್ಮೊಳಗೆ ವಿಚಾರಿಸಿಕೊಳ್ಳುತ್ತಿದ್ದೀರಾ?20 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ. ನೀವು ಅಳುತ್ತಾ ಗೋಳಾಡುತ್ತಾ ಇರುವಿರಿ. ಆದರೆ ಲೋಕವು ಸಂತೋಷಿಸುವುದು. ನಿಮಗೆ ದುಃಖವಾಗುವುದು ಆದರೆ ನಿಮ್ಮ ದುಃಖವು ಹೋಗಿ ಆನಂದ ಬರುವುದು.21 ಒಬ್ಬ ಸ್ತ್ರೀ ಹೆರುವಾಗ ತನ್ನ ಬೇನೆಯ ಕಾಲವು ಬಂದಿತೆಂದು ತಿಳಿದು ಆಕೆಗೆ ದುಃಖವಾಗುತ್ತದೆ, ಆದರೆ ಆಕೆಯು ಕೂಸನ್ನು ಹೆತ್ತ ಮೇಲೆ, ಲೋಕದಲ್ಲಿ ಒಂದು ಮಗು ಹುಟ್ಟಿತೆಂದು ಆನಂದದಿಂದ ಆ ವೇದನೆಯನ್ನು ಪುನಃ ನೆನಸಿಕೊಳ್ಳುವುದಿಲ್ಲ.22 ಹಾಗೆಯೇ, ನಿಮಗೂ ಈಗ ದುಃಖವಿದ್ದರೂ ನಾನು ನಿಮ್ಮನ್ನು ತಿರುಗಿ ನೋಡುವೆನು, ಆಗ ನಿಮ್ಮ ಹೃದಯಕ್ಕೆ ಆನಂದವಾಗುವುದು, ಮತ್ತು ನಿಮ್ಮ ಆನಂದವನ್ನು ಯಾರು ನಿಮ್ಮಿಂದ ತೆಗೆದು ಹಾಕಲು ಸಾಧ್ಯವಿಲ್ಲ.23 ಆ ದಿನದಲ್ಲಿ ನೀವು ನನ್ನನ್ನು ಏನೂ ಕೇಳುವುದಿಲ್ಲ. ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನು ಕೇಳಿಕೊಂಡರೂ ಅದನ್ನು ಆತನು ನಿಮಗೆ ಕೊಡುವನು.24 ನೀವು ಇದುವರೆಗೆ ನನ್ನ ಹೆಸರಿನಲ್ಲಿ ಏನೊಂದನ್ನೂ ಕೇಳಿಕೊಳ್ಳಲಿಲ್ಲ. ಕೇಳಿಕೊಳ್ಳಿರಿ, ಆಗ ನಿಮ್ಮ ಆನಂದವು ಪರಿಪೂರ್ಣವಾಗುವ ಹಾಗೆ ನಿಮಗೆ ದೊರೆಯುವುದು.25 “ಈ ಸಂಗತಿಗಳನ್ನು ಸಾಮ್ಯರೂಪವಾಗಿ ನಿಮಗೆ ಹೇಳಿದ್ದೇನೆ, ಆದರೆ ಇನ್ನು ಮೇಲೆ ಸಾಮ್ಯರೂಪವಾಗಿ ನಿಮ್ಮೊಂದಿಗೆ ಮಾತನಾಡದೆ ತಂದೆಯ ಕುರಿತಾಗಿ ಸ್ಪಷ್ಟವಾಗಿ ತಿಳಿಸುವ ಕಾಲವು ಬರುತ್ತದೆ.26 ಆ ದಿನದಲ್ಲಿ ನೀವು ನನ್ನ ಹೆಸರಿನಲ್ಲಿ ಕೇಳಿಕೊಳ್ಳುವಿರಿ, ನಿಮ್ಮ ಪರವಾಗಿ ನಾನು ತಂದೆಯನ್ನು ಬೇಡಿಕೊಳ್ಳುವೆನೆಂದು ನಾನು ನಿಮಗೆ ಹೇಳುವುದಿಲ್ಲ.27 ನೀವು ನನ್ನನ್ನು ಪ್ರೀತಿಸಿ ನಾನು ತಂದೆಯ ಬಳಿಯಿಂದ ಹೊರಟುಬಂದವನೆಂದು ನಂಬಿದ್ದರಿಂದ ತಂದೆಯು ತಾನೇ ನಿಮ್ಮನ್ನು ಪ್ರೀತಿಸುತ್ತಾನೆ.28 ನಾನು ತಂದೆಯ ಬಳಿಯಿಂದ ಹೊರಟು ಈ ಲೋಕಕ್ಕೆ ಬಂದಿದ್ದೇನೆ, ಪುನಃ ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುತ್ತೇನೆ” ಎಂದನು.29 ಅದಕ್ಕೆ ಆತನ ಶಿಷ್ಯರು, “ಇಗೋ, ನೀನು ಹೇಳುವ ಸಂಗತಿಯನ್ನು ಈಗ ಸಾಮ್ಯರೂಪವಾಗಿ ಹೇಳದೆ ಸ್ಪಷ್ಟವಾಗಿ ಹೇಳುತ್ತಿದ್ದೀ.30 ನೀನು ಸಮಸ್ತವನ್ನು ತಿಳಿದವನೆಂದೂ, ನಿನಗೆ ಪ್ರಶ್ನೆ ಮಾಡಬೇಕಾದ ಅಗತ್ಯವಿಲ್ಲವೆಂದೂ ಈಗ ನಮಗೆ ತಿಳಿಯಿತು. ಆದುದರಿಂದ ನಿನ್ನನ್ನು ದೇವರ ಬಳಿಯಿಂದ ಬಂದವನೇ ಎಂದು ನಾವು ನಂಬುತ್ತೇವೆ” ಎಂದರು.31 ಅದಕ್ಕೆ ಯೇಸು, “ಈಗ ನೀವು ನಂಬುತ್ತೀರಿ.32 ಇಗೋ, ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಸ್ಥಳಕ್ಕೆ ಚದರಿಹೋಗಿ ನನ್ನನ್ನು ಒಬ್ಬಂಟಿಗನಾಗಿ ಬಿಡುವ ಸಮಯವು ಬರುತ್ತದೆ. ಹೌದು, ಅದು ಈಗಲೇ ಬಂದಿದೆ. ಆದರೂ ನಾನು ಏಕಾಂಗಿಯಲ್ಲ, ಏಕೆಂದರೆ ತಂದೆಯು ನನ್ನ ಸಂಗಡ ಇದ್ದಾನೆ.33 ನೀವು ನನ್ನಲ್ಲಿದ್ದು ಸಮಾಧಾನವನ್ನು ಹೊಂದಿದವರಾಗಿರಬೇಕೆಂದು ಇದನ್ನೆಲ್ಲಾ ನಿಮ್ಮೊಂದಿಗೆ ಹೇಳಿದ್ದೇನೆ. ಲೋಕದಲ್ಲಿ ನಿಮಗೆ ಸಂಕಟಗಳುಂಟು. ಆದರೆ ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ” ಎಂದು ಹೇಳಿದನು.
ಜಾನ್ 16