ಯೋಹಾನ 20: 19-3119 ಅದೇ ದಿನ ಎಂದರೆ ವಾರದ ಮೊದಲನೆಯ ದಿನದ ಸಂಜೆಯಲ್ಲಿ ಶಿಷ್ಯರು ಯೆಹೂದ್ಯರ ಭಯದಿಂದ ತಾವು ಇದ್ದ ಮನೆಯ ಬಾಗಿಲುಗಳನ್ನು ಮುಚ್ಚಿಕೊಂಡಿರಲು, ಆಗ ಯೇಸು ಬಂದು ಅವರ ನಡುವೆ ನಿಂತು, “ನಿಮಗೆ ಸಮಾಧಾನವಾಗಲಿ” ಎಂದನು.20 ಇದನ್ನು ಹೇಳಿದ ಮೇಲೆ ಅವರಿಗೆ ತನ್ನ ಕೈಗಳನ್ನೂ ಪಕ್ಕೆಯನ್ನೂ ತೋರಿಸಿದನು. ಆಗ ಶಿಷ್ಯರು ಕರ್ತನನ್ನು ನೋಡಿ ಸಂತೋಷಪಟ್ಟರು.21 ಯೇಸು ಅವರಿಗೆ, “ನಿಮಗೆ ಸಮಾಧಾನವಾಗಲಿ” ಎಂದು ಪುನಃ ಹೇಳಿ, “ತಂದೆಯು ನನ್ನನ್ನು ಕಳುಹಿಸಿಕೊಟ್ಟ ಹಾಗೆಯೇ ನಾನೂ ನಿಮ್ಮನ್ನು ಕಳುಹಿಸಿಕೊಡುತ್ತೇನೆ” ಎಂದನು.22 ಆತನು ಇದನ್ನು ಹೇಳಿ ಅವರ ಮೇಲೆ ಉಸಿರೂದಿ ಅವರಿಗೆ, “ನೀವು ಪವಿತ್ರಾತ್ಮನನ್ನು ಪಡೆದುಕೊಳ್ಳಿರಿ.23 ನೀವು ಯಾರ ಪಾಪಗಳನ್ನು ಕ್ಷಮಿಸಿಬಿಡುತ್ತೀರೋ, ಅವರಿಗೆ ಅವುಗಳು ಕ್ಷಮಾಪಣೆಯಾಗುತ್ತದೆ; ಯಾರ ಪಾಪಗಳನ್ನು ನೀವು ಕ್ಷಮಿಸದೇ ಉಳಿಸುತ್ತೀರೋ, ಅವರಿಗೆ ಅವುಗಳು ಉಳಿಯುತ್ತವೆ” ಎಂದು ಹೇಳಿದನು.24 ಯೇಸು ಬಂದಾಗ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ದಿದುಮನೆನಿಸಿಕೊಳ್ಳುವ ತೋಮನು ಅವರ ಜೊತೆ ಇರಲಿಲ್ಲ.25 ಉಳಿದ ಶಿಷ್ಯರು ಅವನಿಗೆ, “ನಾವು ಕರ್ತನನ್ನು ನೋಡಿದ್ದೇವೆ” ಎಂದು ಹೇಳಿದರು. ಅದಕ್ಕೆ ಅವನು, “ನಾನು ಆತನ ಕೈಗಳಲ್ಲಿ ಮೊಳೆಗಳಿಂದಾದ ಗಾಯವನ್ನು ನೋಡಿ, ಆ ಮೊಳೆಯ ಗಾಯದಲ್ಲಿ ನನ್ನ ಬೆರಳನ್ನು ಇಟ್ಟು ಆತನ ಪಕ್ಕೆಯಲ್ಲಿ ನನ್ನ ಕೈಯನ್ನು ಹಾಕದ ಹೊರತು ನಿಮ್ಮ ಮಾತನ್ನು ನಂಬುವುದೇ ಇಲ್ಲ” ಎಂದನು.26 ಎಂಟು ದಿನಗಳಾದ ಮೇಲೆ ಆತನ ಶಿಷ್ಯರು ಪುನಃ ಒಳಗಿದ್ದಾಗ ತೋಮನೂ ಅವರ ಜೊತೆ ಇದ್ದನು. ಬಾಗಿಲುಗಳು ಮುಚ್ಚಿದ್ದವು ಆಗ ಯೇಸು ಬಂದು ನಡುವೆ ನಿಂತು ನಿಮಗೆ “ಸಮಾಧಾನವಾಗಲಿ ಎಂದನು”27 ಆ ಮೇಲೆ ತೋಮನಿಗೆ, “ನಿನ್ನ ಬೆರಳನ್ನು ಈ ಕಡೆ ಚಾಚಿ ನನ್ನ ಕೈಗಳನ್ನು ಮುಟ್ಟಿ ನೋಡು, ನಿನ್ನ ಕೈ ಚಾಚಿ ನನ್ನ ಪಕ್ಕೆಯಲ್ಲಿ ಹಾಕು. ಅಪನಂಬಿಕೆಯಳ್ಳವನಾಗಿರಬೇಡ, ನಂಬುವವನಾಗು” ಎಂದು ಹೇಳಿದನು.28 ತೋಮನು ಆತನಿಗೆ, “ನನ್ನ ಕರ್ತನೇ, ನನ್ನ ದೇವರೇ” ಎಂದು ಹೇಳಿದನು.29 ಯೇಸು ಆತನಿಗೆ, “ನೀನು ನನ್ನನ್ನು ನೋಡಿದ್ದರಿಂದ ನಂಬಿದ್ದೀ, ನೋಡದೆ ನಂಬಿದವರು ಧನ್ಯರು” ಎಂದು ಹೇಳಿದನು.30 ಯೇಸು ಇನ್ನು ಬೇರೆ ಎಷ್ಟೋ ಸೂಚಕಕಾರ್ಯಗಳನ್ನು ತನ್ನ ಶಿಷ್ಯರ ಮುಂದೆ ಮಾಡಿದನು. ಅವುಗಳನ್ನೆಲ್ಲಾ ಈ ಗ್ರಂಥದಲ್ಲಿ ಬರೆದಿರುವುದಿಲ್ಲಾ.31 ಆದರೆ ಯೇಸುವೇ ದೇವಕುಮಾರನಾದ ಕ್ರಿಸ್ತನೆಂದು ನೀವು ನಂಬುವಂತೆಯೂ, ನಂಬಿ ಆತನ ಹೆಸರಿನಲ್ಲಿ ನಿತ್ಯ ಜೀವವನ್ನು ಪಡೆದುಕೊಳ್ಳುವಂತೆಯೂ ಇಷ್ಟೆಲ್ಲಾ ಬರೆದಿದೆ.
ಯೋಹಾನ 20: 19-31
ಯೇಸು ತನ್ನ ಶಿಷ್ಯರಿಗೆ ಪುನಃ ದರ್ಶನಕೊಟ್ಟದ್ದು
ತರುವಾಯ ಯೇಸು ತಿಬೇರಿಯ ಸಮುದ್ರದ ಬಳಿಯಲ್ಲಿ ಶಿಷ್ಯರಿಗೆ ಪುನಃ ಕಾಣಿಸಿಕೊಂಡನು:2 ಸೀಮೋನ್ ಪೇತ್ರನೂ, ದಿದುಮನೆಂಬ ತೋಮನೂ, ಗಲಿಲಾಯದ ಕಾನಾ ಊರಿನ ನತಾನಯೇಲನೂ, ಜೆಬೆದಾಯನ ಮಕ್ಕಳೂ ಮತ್ತು ಆತನ ಶಿಷ್ಯರಲ್ಲಿ ಇನ್ನಿಬ್ಬರೂ ಕೂಡಿಬಂದಿದ್ದರು.3 ಆಗ ಅವರಿಗೆ ಸೀಮೋನ ಪೇತ್ರನು, “ನಾನು ಮೀನು ಹಿಡಿಯಲು ಹೋಗುತ್ತೇನೆ” ಎಂದು ಹೇಳಲು ಅವರು ಅವನಿಗೆ, “ನಾವೂ ಸಹ ನಿನ್ನ ಜೊತೆಯಲ್ಲಿ ಬರುತ್ತೇವೆ” ಎಂದರು. ಅವರು ಹೊರಟು ದೋಣಿಯನ್ನು ಹತ್ತಿದರು. ಆದರೆ ಆ ರಾತ್ರಿ ಅವರಿಗೆ ಏನೂ ಸಿಗಲಿಲ್ಲ.4 ಬೆಳಗಾಗುವಾಗ ಯೇಸು ದಡದಲ್ಲಿ ನಿಂತಿದ್ದನು. ಆದಾಗ್ಯೂ ಶಿಷ್ಯರು ಆತನನ್ನು ಯೇಸುವೇ ಎಂದು ಗುರುತಿಸಲಿಲ್ಲ.5 ಆಗ ಯೇಸು ಅವರನ್ನು, “ಮಕ್ಕಳಿರಾ, ನಿಮ್ಮಲ್ಲಿ ಮೀನುಗಳು ಉಂಟೋ?” ಎಂದು ಕೇಳಲು, ಅವರು ಆತನಿಗೆ “ಇಲ್ಲ” ಎಂದು ಉತ್ತರಕೊಟ್ಟರು.6 ಆತನು ಅವರಿಗೆ, “ನೀವು ದೋಣಿಯ ಬಲಗಡೆಯಲ್ಲಿ ಬಲೆಯನ್ನು ಬೀಸಿರಿ; ಆಗ ನಿಮಗೆ ಸಿಕ್ಕುತ್ತವೆ” ಎಂದು ಹೇಳಿದನು. ಅವರು ಬಲೆ ಬೀಸಿದಾಗ ಮೀನುಗಳು ರಾಶಿ ರಾಶಿಯಾಗಿ ಬಲೆಗೆ ಬಂದು ಸೇರಿದ್ದರಿಂದ, ಅವರಿಗೆ ಬಲೆಯನ್ನು ಎಳೆಯುವುದಕ್ಕೆ ಸಾಧ್ಯವಾಗದೆ ಹೋಯಿತು.7 ಆಗ ಯೇಸುವಿಗೆ ಪ್ರಿಯನಾಗಿದ್ದ ಶಿಷ್ಯನು ಪೇತ್ರನಿಗೆ, “ಆತನು ಕರ್ತನೇ” ಎಂದು ಹೇಳಿದನು. ಸೀಮೋನ್ ಪೇತ್ರನು ಅದನ್ನು ಕೇಳಿ ತಾನು ತೆಗೆದು ಬಿಟ್ಟಿದ್ದ ತನ್ನ ಮೇಲಂಗಿಯನ್ನು ಸುತ್ತಿಕೊಂಡು ಸಮುದ್ರದೊಳಗೆ ಧುಮುಕಿದನು.8 ದಡವು ದೂರವಿರಲಿಲ್ಲ, ಹೆಚ್ಚು ಕಡಿಮೆ ಇನ್ನೂರು ಅಡಿ ದೂರವಿತ್ತು. ಉಳಿದ ಶಿಷ್ಯರು ಮೀನು ತುಂಬಿದ್ದ ಆ ಬಲೆಯನ್ನು ಎಳೆಯುತ್ತಾ ದೋಣಿಯಲ್ಲಿಯೇ ಬಂದರು.9 ಅವರು ದಡಕ್ಕೆ ಬಂದು ಸೇರಿದಾಗ, ಕೆಂಡಗಳನ್ನೂ ಅವುಗಳ ಮೇಲೆ ಇಟ್ಟಿದ್ದ ಮೀನುಗಳನ್ನು ಮತ್ತು ರೊಟ್ಟಿಯನ್ನು ಕಂಡರು.10 ಯೇಸು ಅವರಿಗೆ, “ನೀವು ಈಗ ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿರಿ” ಎಂದು ಹೇಳಲು,11 ಸೀಮೋನ್ ಪೇತ್ರನು ದೋಣಿಯನ್ನು ಹತ್ತಿ ಬಲೆಯನ್ನು ದಡಕ್ಕೆ ಎಳದುಕೊಂಡು ಬಂದನು. ಅದು ನೂರೈವತ್ಮೂರು ದೊಡ್ಡ ಮೀನುಗಳಿಂದ ತುಂಬಿತ್ತು. ಅಷ್ಟು ಮೀನುಗಳು ಇದ್ದರೂ ಬಲೆಯು ಹರಿದಿರಲಿಲ್ಲ.12 ಯೇಸು ಅವರಿಗೆ, “ಬಂದು ಊಟ ಮಾಡಿರಿ” ಎಂದು ಹೇಳಿದನು. ಶಿಷ್ಯರು ಆತನನ್ನು ಕರ್ತನೆಂದು ತಿಳಿದಿದ್ದರಿಂದ “ನೀನು ಯಾರು?” ಎಂದು ಕೇಳುವುದಕ್ಕೆ ಅವರಲ್ಲಿ ಒಬ್ಬರಿಗೂ ಧೈರ್ಯವಿರಲಿಲ್ಲ.13 ಯೇಸು ಬಂದು ರೊಟ್ಟಿಯನ್ನು ತೆಗೆದುಕೊಂಡು ಅವರಿಗೆ ಕೊಟ್ಟನು. ಹಾಗೆಯೇ ಮೀನನ್ನೂ ಕೊಟ್ಟನು.14 ಯೇಸು ಸತ್ತವರೊಳಗಿಂದ ಜೀವಿತನಾಗಿ ಎದ್ದ ಮೇಲೆ, ತನ್ನ ಶಿಷ್ಯರಿಗೆ ಕಾಣಿಸಿಕೊಂಡದ್ದು ಇದು ಮೂರನೆಯ ಸಾರಿ.15 ಅವರ ಊಟವಾದ ಮೇಲೆ ಯೇಸು ಸೀಮೋನ್ ಪೇತ್ರನಿಗೆ, “ಯೋಹಾನನ ಮಗನಾದ ಸೀಮೋನನೇ, ನೀನು ಇವರಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತಿಯೋ?” ಎಂದು ಕೇಳಲು ಅವನು “ಹೌದು, ಕರ್ತನೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂದು ನೀನೇ ಬಲ್ಲೆ” ಎಂದನು. ಆತನು ಅವನಿಗೆ, “ನನ್ನ ಕುರಿಮರಿಗಳನ್ನು ಮೇಯಿಸು” ಎಂದು ಹೇಳಿದನು.16 ಆತನು ತಿರುಗಿ ಎರಡನೆಯ ಸಾರಿ ಅವನಿಗೆ, “ಯೋಹಾನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯೋ?” ಎಂದು ಕೇಳಲು, ಅವನು ಹೌದು ಕರ್ತನೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂದು ನೀನೇ ಬಲ್ಲೆ ಎಂದನು. ಆತನು ಅವನಿಗೆ “ನನ್ನ ಕುರಿಗಳನ್ನು ಪಾಲಿಸು” ಎಂದು ಹೇಳಿದನು.17 ಯೇಸು ಮೂರನೆಯ ಸಾರಿ, “ಯೋಹಾನನ ಮಗನಾದ ಸೀಮೋನನೇ ನೀನು ನನ್ನ ಮೇಲೆ ಮಮತೆ ಇಟ್ಟಿದ್ದಿಯೋ?” ಎಂದು ಕೇಳಿದನು, ಮೂರನೆಯ ಸಾರಿ ಆತನು, “ನನ್ನ ಮೇಲೆ ಮಮತೆ ಇಟ್ಟಿದ್ದೀಯೋ?” ಎಂದು ತನ್ನನ್ನು ಕೇಳಿದ್ದಕ್ಕೆ ಪೇತ್ರನು ದುಃಖಪಟ್ಟು, “ಕರ್ತನೇ, ನಿನಗೆ ಎಲ್ಲವೂ ತಿಳಿದಿದೆ. ನಾನು ನಿನ್ನ ಮೇಲೆ ಮಮತೆ ಇಟ್ಟೀದ್ದೇನೆಂದು ನಿನಗೆ ತಿಳಿದಿದೆ” ಎಂದನು. ಆಗ ಅವನಿಗೆ ಯೇಸು “ನನ್ನ ಕುರಿಗಳನ್ನು ಮೇಯಿಸು” ಎಂದನು.18 “ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ನೀನು ಯುವಕನಾಗಿದ್ದಾಗ ನೀನೇ ನಿನ್ನ ಉಡುಪನ್ನು ಧರಿಸಿಕೊಂಡು ಇಷ್ಟಬಂದ ಕಡೆಗೆ ತಿರುಗಾಡುತ್ತಿದ್ದೀ. ಆದರೆ ನೀನು ಮುದುಕನಾದಾಗ ನಿನ್ನ ಕೈಗಳನ್ನು ಚಾಚುವಿ, ಆಗ ಮತ್ತೊಬ್ಬನು ನಿನ್ನ ನಡುವನ್ನು ಕಟ್ಟಿ ನಿನಗೆ ಇಷ್ಟವಿಲ್ಲದ ಕಡೆಗೆ ನಿನ್ನನ್ನು ಹೊತ್ತುಕೊಂಡು ಹೋಗುವನು” ಎಂದು ಹೇಳಿದನು.19 ಅವನು ಎಂಥಾ ಮರಣದಿಂದ ದೇವರನ್ನು ಮಹಿಮೆಪಡಿಸುವನು ಎಂಬುದನ್ನು ಯೇಸು ಈ ಮಾತಿನಿಂದ ಸೂಚಿಸಿದನು. ಆತನು ಇದನ್ನು ಹೇಳಿ ಪೇತ್ರನಿಗೆ “ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.20 ಪೇತ್ರನು ಹಿಂತಿರುಗಿ ನೋಡಿದಾಗ, ಯೇಸುವಿಗೆ ಪ್ರಿಯನಾಗಿದ್ದ ಶಿಷ್ಯನು ಹಿಂದೆ ಬರುವುದನ್ನು ಕಂಡನು. ಆ ಶಿಷ್ಯನು ಊಟದ ಸಮಯದಲ್ಲಿ ಯೇಸುವಿನ ಎದೆಗೆ ಒರಗಿಕೊಂಡು, “ಕರ್ತನೇ, ನಿನ್ನನ್ನು ಹಿಡಿದುಕೊಡುವವನು ಯಾರು?” ಎಂದು ಕೇಳಿದವನೇ.21 ಇವನನ್ನು ಪೇತ್ರನು ನೋಡಿ ಯೇಸುವಿಗೆ, “ಕರ್ತನೇ, ಇವನ ಬಗ್ಗೆ ಏನು ಹೇಳುತ್ತೀಯಾ?” ಎಂದು ಕೇಳಲು,22 ಯೇಸು ಅವನಿಗೆ “ನಾನು ಬರುವ ತನಕ ಇವನು ಉಳಿದಿರಬೇಕೆಂಬುದು ನನಗೆ ಮನಸ್ಸಾಗಿದ್ದರೆ ಅದರಿಂದ ನಿನಗೇನು? ನೀನು ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.23 ಆದುದರಿಂದ ಆ ಶಿಷ್ಯನು ಸಾಯುವುದಿಲ್ಲವೆಂಬ ಮಾತು ಸಹೋದರರಲ್ಲಿ ಹಬ್ಬಿತು. ಆದರೆ ಅವನು ಸಾಯುವುದಿಲ್ಲವೆಂದು ಯೇಸು ಅವನಿಗೆ ಹೇಳಲಿಲ್ಲ. “ನಾನು ಬರುವ ತನಕ ಅವನು ಉಳಿದಿರಬೇಕೆಂದು ನನಗೆ ಮನಸ್ಸಿದ್ದರೆ ಅದು ನಿನಗೇನು?” ಎಂದು ಮಾತ್ರ ಹೇಳಿದನು.24 ಈ ವಿಷಯವಾಗಿ ಸಾಕ್ಷಿಕೊಟ್ಟು, ಇವುಗಳನ್ನು ಬರೆದ ಶಿಷ್ಯನು ಇವನೇ. ಇವನ ಸಾಕ್ಷಿಯು ಸತ್ಯವೆಂದು ನಾವು ಬಲ್ಲೆವು.25 ಇದಲ್ಲದೆ ಯೇಸುವು ಮಾಡಿದ ಇನ್ನೂ ಬೇರೆ ಅನೇಕ ಸಂಗತಿಗಳು ಸಹ ಇವೆ. ಅವುಗಳನ್ನೆಲ್ಲಾ ಒಂದೊಂದಾಗಿ ಬರೆಯುವುದಾದರೆ, ಆ ಪುಸ್ತಕಗಳು ಲೋಕವೇ ಹಿಡಿಸಲಾರದಷ್ಟಾಗುವುದು ಎಂದು ನಾನು ಭಾವಿಸುತ್ತೇನೆ.
ಯೋಹಾನ 21: 1-25
1 ಥೆಯೊಫಿಲನೇ, ನಾನು ಮೊದಲು ಬರೆದ ಪುಸ್ತಕದಲ್ಲಿ, ಯೇಸು ತಾನು ಆರಿಸಿಕೊಂಡಿದ್ದ ಅಪೊಸ್ತಲರಿಗೆ ಪವಿತ್ರಾತ್ಮನ ಮೂಲಕ ಅಪ್ಪಣೆಕೊಟ್ಟು,2 ಆತನು ಸ್ವರ್ಗಾರೋಹಣವಾದ ದಿನದವರೆಗೆ ಆತನು ಮಾಡಿದ ಎಲ್ಲಾ ಕಾರ್ಯಗಳನ್ನೂ, ಉಪದೇಶಿಸಿದ ಎಲ್ಲಾ ಬೋಧನೆಗಳನ್ನೂ ಬರೆದಿದ್ದೇನೆ.3 ಯೇಸುವು ಬಾಧೆಪಟ್ಟು ಸತ್ತ ನಂತರ ತಾನು ಜೀವಂತನಾಗಿ ಎದ್ದು ಬಂದಿದ್ದೇನೆ ಎಂದು ಅನೇಕ ಸಂಭವಗಳ ಮೂಲಕ ತಾನು ಆರಿಸಿಕೊಂಡಿದ್ದ ಅಪೊಸ್ತಲರಿಗೆ ಸ್ಪಷ್ಟಪಡಿಸಿದನು. ಸತತವಾಗಿ ನಲವತ್ತು ದಿನಗಳ ತನಕ ಅವರಿಗೆ ಕಾಣಿಸಿಕೊಳ್ಳುತ್ತಾ ದೇವರ ರಾಜ್ಯದ ವಿಷಯವನ್ನು ಕುರಿತು ಅವರಿಗೆ ಬೋಧಿಸಿದನು.4 ಒಮ್ಮೆ ಅವರೆಲ್ಲರೂ ಒಂದುಗೂಡಿದ್ದ ಸಂದರ್ಭದಲ್ಲಿ, “ನೀವು ಯೆರೂಸಲೇಮನ್ನು ಬಿಟ್ಟುಹೋಗದೆ, ನನ್ನಿಂದ ಕೇಳಿದಂಥ ಮತ್ತು ತಂದೆಯು ಮಾಡಿದ ವಾಗ್ದಾನಗಳಿಗಾಗಿ ಇಲ್ಲೇ ಕಾದುಕೊಂಡಿರಿ,5 ಏಕೆಂದರೆ, ಯೋಹಾನನಂತೂ ನೀರಿನಿಂದ ದೀಕ್ಷಾಸ್ನಾನ ಮಾಡಿಸುತ್ತಿದ್ದನು ಆದರೆ ಇನ್ನು ಕೆಲವೇ ದಿನಗಳಲ್ಲಿ ನಿಮಗೆ ಪವಿತ್ರಾತ್ಮನಿಂದ ದೀಕ್ಷಾಸ್ನಾನವಾಗುವುದು” ಎಂದು ಅಪ್ಪಣೆ ಕೊಟ್ಟನು.6 ಕೂಡಿಬಂದವರು ಆತನನ್ನು,, “ಕರ್ತನೇ, ನೀನು ಇದೇ ಕಾಲದಲ್ಲಿ ಇಸ್ರಾಯೇಲ್ ಜನರಿಗೆ ರಾಜ್ಯವನ್ನು ಪುನಃ ಸ್ಥಾಪಿಸಿಕೊಡುವಿಯೋ?” ಎಂದು ಕೇಳಲು7 ಆತನು ಅವರಿಗೆ, “ತಂದೆಯು ತನ್ನ ಅಧಿಕಾರದಲ್ಲಿಟ್ಟುಕೊಂಡಿರುವ ಕಾಲಗಳನ್ನೂ, ಸಮಯಗಳನ್ನೂ ತಿಳಿದುಕೊಳ್ಳುವುದು ನಿಮ್ಮ ಕಾರ್ಯವಲ್ಲ.8 ಆದರೆ ಪವಿತ್ರಾತ್ಮನು ನಿಮ್ಮ ಮೇಲೆ ಬರಲು ನೀವು ಶಕ್ತಿಯನ್ನು ಹೊಂದಿದವರಾಗಿ ಯೆರೂಸಲೇಮಿನಲ್ಲಿಯೂ, ಯೂದಾಯದ ಎಲ್ಲಾ ಸ್ಥಳದಲ್ಲಿಯು, ಸಮಾರ್ಯ ಸೀಮೆಗಳಲ್ಲಿಯೂ, ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರುವಿರಿ” ಅಂದನು.9 ಈ ಮಾತುಗಳನ್ನು ಅವನು ಹೇಳಿದ ಬಳಿಕ ಅವರು ನೋಡುತ್ತಿದ್ದ ಹಾಗೆಯೇ ಆತನು ಪರಲೋಕಕ್ಕೆ ಎತ್ತಲ್ಪಟ್ಟನು, ಮೋಡವೊಂದು ಆತನನ್ನು ಕವಿದುಕೊಂಡಿದ್ದರಿಂದ, ಯೇಸುವು ಅವರ ಕಣ್ಣಿಗೆ ಮರೆಯಾದನು.10 ಆತನು ಹೋಗುತ್ತಿರುವಾಗ ಅವರು ಆಕಾಶದ ಕಡೆಗೆ ದೃಷ್ಟಿಸಿ ನೋಡುತ್ತಾ ಇರಲಾಗಿ ಶುಭ್ರ ವಸ್ತ್ರಧಾರಿಗಳಾದ ಇಬ್ಬರು ಪುರುಷರು ಫಕ್ಕನೆ ಅವರ ಹತ್ತಿರ ನಿಂತುಕೊಂಡರು.11 “ಗಲಿಲಾಯದವರೇ, ನೀವು ಏಕೆ ಹೀಗೆ ಆಕಾಶದ ಕಡೆಗೆ ನೋಡುತ್ತಾ ನಿಂತಿದ್ದೀರಿ? ನಿಮ್ಮ ಬಳಿಯಿಂದ ಆಕಾಶದೊಳಗೆ ಸೇರಿಸಲ್ಪಟ್ಟಿರುವ ಈ ಯೇಸುವು ಯಾವ ರೀತಿಯಲ್ಲಿ ಆಕಾಶದೊಳಗೆ ಹೋಗಿರುವುದನ್ನು ನೀವು ಕಂಡಿರೋ ಹಾಗೆಯೇ ಆತನು ಹಿಂತಿರುಗಿ ಬರುವನು” ಎಂದು ಹೇಳಿದರು.
ಕೃತ್ಯಗಳು 1: 1-11